ಶುಕ್ರವಾರ, ಅಕ್ಟೋಬರ್ 23, 2020
22 °C

ಮಳೆಗಾಲದಲ್ಲಿ ಬಂದ್ ಆಗುವ ಚಿರಡೋಣಿ-–ತ್ಯಾವಣಿಗೆ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಾಪಟ್ಟಣ: ಸಮೀಪದ ಚಿರಡೋಣಿ-ತ್ಯಾವಣಿಗೆ ರಸ್ತೆಯನ್ನು ಸೂಳೆಕೆರೆ ಹಳ್ಳ ಮಳೆಗಾಲದಲ್ಲಿ ಸಂಪೂರ್ಣ ಬಂದ್‌ ಮಾಡುತ್ತಿದೆ. ಇದರಿಂದ ಈ ಭಾಗದ ಜನರು ಪರದಾಡುವಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಜನರ ಬೇಡಿಕೆ.

‘ಜಿಲ್ಲೆಯ ಜೀವನಾಡಿಯಾಗಿರುವ ಸೂಳೆಕೆರೆ ಹಳ್ಳಕ್ಕೆ ಇಲ್ಲಿ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಿಸಿದರೆ, ಮಳೆಗಾಲದ ಪ್ರವಾಹಕ್ಕೆ ತಡೆಯಾಗುವುದರೊಂದಿಗೆ ನೀರು ಸಹ ಸಂಗ್ರಹವಾಗಿ ನೀರಾವರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಅನೇಕ ಬಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸರ್ಕಾರಕ್ಕೂ ಒತ್ತಾಯ ಮಾಡಿದ್ದೇನೆ. ಭದ್ರಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಹಳ್ಳದ ವ್ಯಾಪ್ತಿ ಒಳಪಟ್ಟಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳು ಸೂಕ್ತ ಯೋಜನೆ ರಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್‌ ಒತ್ತಾಯಿಸಿದ್ದಾರೆ.

ಚಿರಡೋಣಿ ಸಮೀಪದಲ್ಲಿ ಹಾಯ್ದು ಹೋಗುವ ತ್ಯಾವಣಿಗೆ ರಸ್ತೆಯ ಸೂಳೆಕೆರೆ ಹಳ್ಳದ ರಸ್ತೆಗೆ ಚಿರಡೋಣಿಯ ಒಡ್ಡು ಎಂದು ಜನ ಕರೆಯುತ್ತಾರೆ. ಪ್ರತಿ ಮಳೆಗಾಲದಲ್ಲಿ ಇಲ್ಲಿ ಹಳ್ಳದ ಪ್ರವಾಹ ಬಂದು ಜನ, ಜಾನುವಾರು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಹಳ್ಳದ ನೀರು ಕಡಿಮೆಯಾಗುವವರೆಗೂ ಜನರು ಕಾಯಬೇಕಾದ ಪರಿಸ್ಥಿತಿ ಇದೆ. ಜನರ ಹಿತದೃಷಿಯಿಂದ ಒಂದು ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಅರಣ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಬಿ. ಫಕೀರಪ್ಪ ಆಗ್ರಹಿಸಿದರು.

‘ಕೊರೊನಾ ಕಾರಣ ಆರು ತಿಂಗಳಿನಿಂದ ದಾವಣಗೆರೆ ಮತ್ತು ತಾಲ್ಲೂಕು ಕೇಂದ್ರ ಚನ್ನಗಿರಿಗೆ ಹೋಗಲು ಬಸ್‌ಗಳಿಲ್ಲ. ತ್ಯಾವಣಿಗೆ ಮತ್ತು ದೊಡ್ಡಘಟ್ಟಗಳ ಮೂಲಕ ಖಾಸಗಿ ವಾಹನಗಳಲ್ಲಿ ಹೋಗಲು ಈ ರಸ್ತೆ ಬಳಸುತ್ತಿದ್ದೆವು. ಆದರೆ ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುವುದರಿಂದ ಹತ್ತಾರು ಕಿ.ಮೀ. ದೂರದ ಹೆಚ್ಚಿನ ದಾರಿ ಬಳಸಬೇಕಾದ ಪರಿಸ್ಥಿತಿ ಇದೆ. ಹಳ್ಳಕ್ಕೆ ಎತ್ತರವಾದ ಸೇತುವೆ ನಿರ್ಮಾಣದಿಂದ ಮಾತ್ರ ಪರಿಹಾರ ಸಾಧ್ಯ’ ಎನ್ನುತ್ತಾರೆ ಚಿರಡೋಣಿಯ ವೀರಭದ್ರಪ್ಪ, ಬಸವಾಪಟ್ಟಣದ ಹಾಲೇಶಪ್ಪ.

ಹಳ್ಳ ತುಂಬಿ ಹರಿಯುವಾಗ ಹಳ್ಳದ ಆಚೆ ಇರುವ ನಮ್ಮ ಹೊಲ ಗದ್ದೆ ತೋಟಗಳಿಗೆ ಹೋಗಲು ಅಸಾಧ್ಯವಾಗಿದೆ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ಯಾರೂ ಪರಿಹಾರ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುತ್ತಾರೆ ಚಿರಡೋಣಿಯ ರೈತರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು