ಬುಧವಾರ, ಮೇ 25, 2022
30 °C

ಗಾಳಿ ಸಹಿತ ಭಾರಿ ಮಳೆ: ₹17.85 ಲಕ್ಷ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಗುಡುಗು, ಮಿಂಚು, ಗಾಳಿಯೊಂದಿಗೆ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ ಬಾಳೆ ಸಹಿತ ವಿವಿಧ ಬೆಳೆಗಳು ನಷ್ಟವಾಗಿವೆ. ಒಂದು ಬೈಕ್‌ ಮೇಲೆ ಮರ ಬಿದ್ದು ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ₹ 17.85 ಲಕ್ಷ ನಷ್ಟವಾಗಿದೆ.

ನಗರದ ತೊಗಟವೀರ ಕಲ್ಯಾಣ ಮಂಟಪದ ಬಳಿ ದೊಡ್ಡ ಮರದ ಕೊಂಬೆ ಕಾರುಗಳ ಮೇಲೆ ಉರುಳಿ ಬಿದ್ದ ಪರಿಣಾಮ ಕಾರುಗಳು ಹಾನಿಗೊಂಡಿವೆ. ಜೀವಾಪಾಯ ಉಂಟಾಗಿಲ್ಲ. ಹಗೆದಿಬ್ಬ ಸರ್ಕಲ್‌ನಲ್ಲಿ ಮರ ಬಿದ್ದು ಮೂರು ಬೈಕ್‌ಗಳು ಜಖಂ ಆಗಿವೆ. ತಾಲ್ಲೂಕಿನ ಬೋರಗೊಂಡನಹಳ್ಳಿ ಬಳಿ ಸೋಮವಾರ ರಾತ್ರಿ ಮರದಡಿ ಬೈಕ್‌ ನಿಲ್ಲಿಸಿದಾಗ ಮರ ಮುರಿದು ಬೈಕ್‌ ಮೇಲೆ ಬಿದ್ದಿದ್ದರಿಂದ ಕೂಡ್ಲಿಗಿ ತಾಲ್ಲೂಕು ಹಿರೇಕುಂಬಳಗುಂಟೆ ಗ್ರಾಮದ ನಿವಾಸಿ ಸಿದ್ದಪ್ಪ (57) ಮೃತಪಟ್ಟಿದ್ದಾರೆ.

ಜಗಳೂರು ತಾಲ್ಲೂಕಿನ ಭರಮಸಮುದ್ರದ ಬಳಿ 3 ಎಕರೆ ಬಾಳೆ ತೋಟ ಮಳೆಗಾಳಿಯಿಂದಾಗಿ ನೆಲ ಕಚ್ಚಿದೆ. ಗೊಲ್ಲರಹಟ್ಟಿ ಗ್ರಾಮದ ರೈತ ಶ್ರೀನಿವಾಸ ರೆಡ್ಡಿ 3 ಎಕರೆಯಲ್ಲಿ ಬೆಳೆದಿದ್ದ ಏಲಕ್ಕಿ ಬಾಳೆ ಮಳೆಗೆ ಹಾನಿಯಾಗಿದೆ. ತಾಲ್ಲೂಕಿನಲ್ಲಿ ಒಟ್ಟು ಏಳು ಎಕರೆ ಬಾಳೆ, 15 ಕಚ್ಚಾ ಮನೆಗಳಿಗೆ ಹಾನಿಯಾಗಿದೆ. 2 ಎಕರೆ ಈರುಳ್ಳಿ ಹಾಳಾಗಿದೆ. ₹ 9.50 ಲಕ್ಷ ಅಂದಾಜು ನಷ್ಟವಾಗಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 3 ಕಚ್ಚಾ ಮನೆಗಳಿಗೆ ಹಾನಿಯಾಗಿದೆ. 5 ಎಕರೆ ಬಾಳೆ ಬೆಳೆ, 1 ಎಕರೆ ಮೆಕ್ಕೆಜೋಳದ ಬೆಳೆ ನಷ್ಟವಾಗಿದೆ. ಸುಮಾರು ₹ 5.75 ಲಕ್ಷ ನಷ್ಟವಾಗಿದೆ. ಹರಿಹರ ತಾಲೂಕಿನಲ್ಲಿ 2 ಕಚ್ಚಾ ಮನೆಗಳಿಗೆ ಹಾನಿಯಾಗಿದ್ದು, ₹ 60 ಸಾವಿರ ನಷ್ಟವಾಗಿದೆ. ನ್ಯಾಮತಿಯಲ್ಲಿ 2 ಎಕರೆ ಬಾಳೆ, 3 ಎಕರೆ 20 ಗುಂಟೆ ಮೆಕ್ಕೆಜೋಳ ಹಾನಿಯಾಗಿ, ₹ 1.30 ಲಕ್ಷ ನಷ್ಟವಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 1 ಕಚ್ಚಾ ಮನೆಗೆ ಹಾನಿಯಾಗಿದ್ದು, 70 ಸಾವಿರ ನಷ್ಟವಾಗಿದೆ.

ಮಳೆ ವಿವರ: ಚನ್ನಗಿರಿ ತಾಲ್ಲೂಕಿನಲ್ಲಿ 9 ಮಿ.ಮೀ., ದಾವಣಗೆರೆಯಲ್ಲಿ 4 ಮಿ.ಮೀ., ಹರಿಹರದಲ್ಲಿ 4 ಮಿ.ಮೀ., ಹೊನ್ನಾಳಿಯಲ್ಲಿ 12, ಮಿ.ಮೀ. ವಾಸ್ತವ, ಜಗಳೂರಿನಲ್ಲಿ 5.04 ಮಿ.ಮೀ., ನ್ಯಾಮತಿಯಲ್ಲಿ 29 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 10 ಮಿ.ಮೀ. ಮಳೆ ಬಿದ್ದಿದೆ.

ಸಂತ್ರಸ್ತರಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು