ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಈ ‘ವಿಶೇಷ’ ಮಕ್ಕಳಿಗೆ ಬೇಕಿದೆ ನೆರವು

Published 23 ಮಾರ್ಚ್ 2024, 6:26 IST
Last Updated 23 ಮಾರ್ಚ್ 2024, 6:26 IST
ಅಕ್ಷರ ಗಾತ್ರ

ದಾವಣಗೆರೆ: ತಂದೆ– ತಾಯಿಯನ್ನು ಕಳೆದುಕೊಂಡಿರುವ ಈ ಮಕ್ಕಳನ್ನು ಕಂಡರೆ ರಕ್ತ ಸಂಬಂಧಿಗಳೇ ಮೂಗು ಮುರಿಯುತ್ತ, ಹತ್ತಿರಕ್ಕೂ ಬಿಟ್ಟುಕೊಳ್ಳದೆ ತಿರಸ್ಕರಿಸುತ್ತಾರೆ. ಸಮಾಜವೂ ಇವರನ್ನು ನಿಕೃಷ್ಟವಾಗಿ ಕಾಣುತ್ತ ಅಸಹಕಾರ ತೋರುತ್ತದೆ.

‘ಎಲ್ಲರಂತೆ ಅವರಿಗೂ ಬದುಕುವ ಹಕ್ಕಿದೆ’ ಎಂಬುದನ್ನು ಅರಿತು, ಅಂಥ ಮಕ್ಕಳ ಕಣ್ಣೀರು ಒರೆಸಲು ಮುಂದಾಗಿರುವ ವ್ಯಕ್ತಿಯೊಬ್ಬರು ಆ ಮಕ್ಕಳ ಪಾಲಿಗೆ ವರದಾನವಾಗಿದ್ದಾರೆ.

ಆದರೆ, ನಿತ್ಯವೂ ಹಾಲು–ಹಣ್ಣು, ಮೊಟ್ಟೆ– ಮಾಂಸ, ತರಕಾರಿಯಂತಹ ಪೌಷ್ಟಿಕ ಆಹಾರ, ಶುಶ್ರೂಷೆ, ಔಷಧ, ಶುದ್ಧ ಗಾಳಿ, ಬೆಳಕು, ಆಟೋಟಕ್ಕೆ ನಿಸರ್ಗದತ್ತ ವಾತಾವರಣ ಬಯಸುವ ಆ ಮಕ್ಕಳ ಪಾಲನೆ ಅಷ್ಟು ಸುಲಭವಲ್ಲ. ಅದಕ್ಕೆ ತಗುಲುವ ಖರ್ಚು–ವೆಚ್ಚ ಅಧಿಕ. ಅಂತೆಯೇ ದಾನಿಗಳ ನೆರವಿನೊಂದಿಗೆ ಅಂಥ ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಂಡ ಆ ವ್ಯಕ್ತಿ, ಮಕ್ಕಳಿಗೆ ಶಾಶ್ವತ ಸೂರೊಂದನ್ನು ಹೊಂದಬೇಕೆಂಬ ಕನಸು ಹೊಂದಿದ್ದಾರೆ. ಅಂಥ ಮಕ್ಕಳಿಗೆ ಸಮಾಜದ ನೆರವು ಆಶಿಸಿದ್ದಾರೆ.

ಇದು ಎಚ್ಐವಿ ಸೋಂಕಿತ ಪಾಲಕರ ತಪ್ಪಿನಿಂದಾಗಿ ಸೋಂಕಿನೊಂದಿಗೇ ಜನಿಸಿದ ಮಕ್ಕಳ ಕರುಣಾಜನಕ ಕಥೆ. ಕೆಲವು ವರ್ಷಗಳ ಹಿಂದೆ ಅಂಥ ಮಕ್ಕಳ ಸಮಸ್ಯೆಯನ್ನು ಮನಗಂಡ ದಾವಣಗೆರೆ ಜಿಲ್ಲೆ ಬೆಳ್ಳೂಡಿ ಗ್ರಾಮದ ಶಿವಕುಮಾರ್‌ ಮೇಗಳಮನೆ ವಿ.ಬಿ.ಪಿ ಫೌಂಡೇಷನ್‌ ಸ್ಥಾಪಿಸಿ, ಸೋಂಕಿತ ಮಕ್ಕಳಿಗೆ ಆಸರೆಯಾಗಿದ್ದಾರೆ. ತಮ್ಮ ಮಾನವೀಯ ಕಾರ್ಯಕ್ಕಾಗಿ 2022ನೇ ಸಾಲಿನ ‘ಪ್ರಜಾವಾಣಿ’ ನೀಡುವ ‘ಸಾಧಕರು’ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ.

ಸೋಂಕಿತ ತಂದೆ, ತಾಯಿ ಕಾಯಿಲೆಯಿಂದಾಗಿ ಪ್ರಾಣ ತೆತ್ತರೆಂದರೆ ಸಂಬಂಧಿಕರು ಅಂಥ ಮಕ್ಕಳ ಲಾಲನೆ, ಪಾಲನೆಗೆ ಮುಂದಾಗುವುದು ವಿರಳ. ಅಕ್ಷರಶಃ ‘ಅನಾಥ’ರಾಗಿಬಿಡುವ ಸೋಂಕಿತ ಮಕ್ಕಳು ಎದುರಿಸುವ ಬವಣೆಯನ್ನು ಶಿವಕುಮಾರ್‌ ದೂರ ಮಾಡುತ್ತಿದ್ದಾರೆ.

‘ಎಚ್‌ಐವಿ ಮಾರಣಾಂತಿಕ ಕಾಯಿಲೆ’ ಎಂಬ ಸ್ಥಿತಿ ಹಿಂದೆ ಇತ್ತು. ಈಗ ಕಾಯಿಲೆಗೆ ತಕ್ಕಮಟ್ಟಿನ ಔಷಧ ಇದ್ದು, ಸೋಂಕಿತರ ಮರಣ ಪ್ರಮಾಣ ತಗ್ಗಿದೆ. ಸೋಂಕಿತ ಮಹಿಳೆ ಗರ್ಭಿಣಿಯಾಗಿದ್ದಾಗಲೇ ‘ಮುನ್ನೆಚ್ಚರಿಕೆ’ ವಹಿಸಿದರೆ ಹುಟ್ಟುವ ಮಗು ಸುರಕ್ಷಿತವಾಗಿ ಇರಬಹುದಾಗಿದೆ. ಆದರೆ, ಗರ್ಭಿಣಿಯು ‘ಮುನ್ನೆಚ್ಚರಿಕೆ’ಗೆ ಗಮನ ಹರಿಸದಿದ್ದರೆ ಹುಟ್ಟುವ ಮಗು ‘ಅಸುರಕ್ಷಿತ’.

ಆದರೆ, ಸಾಮಾಜಿಕ ಸ್ಥಿತಿಗತಿ ಮಾತ್ರ ಬದಲಾಗಿಲ್ಲ. ಮೊದಲು ಸೋಂಕಿತರನ್ನು ಸಮಾಜ ಎಷ್ಟು ನಿಕೃಷ್ಟವಾಗಿ ಕಾಣುತ್ತಿತ್ತೋ ಈಗಲೂ ಹಾಗೇ ಕಾಣುತ್ತದೆ. ಯಾರದೋ ತಪ್ಪಿಗೆ ಸಂಬಂಧಿಗಳು, ಸಮಾಜದ ಅವಗಣನೆಗೆ ಗುರಿಯಾಗುವ ಅಂಥ ಪರಿತ್ಯಕ್ತ ಮಕ್ಕಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು, ಜತನದಿಂದ ನೋಡಿಕೊಳ್ಳುತ್ತಿರುವ ಶಿವಕುಮಾರ್‌ಗೆ ಸ್ವಂತ ಸೂರಿನದ್ದೇ ಚಿಂತೆಯಾಗಿದೆ.

2018ರಲ್ಲಿ ದೊಡ್ಡಬಾತಿಯಲ್ಲಿ ತೋಟವೊಂದನ್ನು ಬಾಡಿಗೆಗೆ ಪಡೆದು, ಅಲ್ಲೇ ಶೆಡ್‌ ಒಂದನ್ನು ನಿರ್ಮಿಸಿ ಆಶ್ರಮದಂಥ ಮನೆಯಲ್ಲಿ ಮಕ್ಕಳಿಗೆ ಆಶ್ರಯ ನೀಡಿದ್ದ ಇವರು, ಇಂಥ ಮಕ್ಕಳ ಪಾಲನೆಗೆ ಕಾನೂನು ಮತ್ತು ಕೆಲವು ನಿಯಮ– ನಿಬಂಧನೆಗಳ ಕಾರಣದಿಂದಾಗಿ ಅನಿವಾರ್ಯವಾಗಿ ತೋಟ ಖಾಲಿ ಮಾಡಿ ನಗರ ಸೇರಿದ್ದಾರೆ.

ಮೂರು ವರ್ಷಗಳಿಂದ ದಾವಣಗೆರೆಯ ಎಂಸಿಸಿ ‘ಬಿ’ ಬ್ಲಾಕ್‌ನ 11ನೇ ಮುಖ್ಯರಸ್ತೆಯಲ್ಲಿ ಈ ಮಕ್ಕಳಿಗೆಂದೇ ಬಾಡಿಗೆ ಮನೆ ಹಿಡಿದಿದ್ದು, ಬಾಡಿಗೆ ಸೇರಿ ಮಾಸಿಕ ಕನಿಷ್ಠ ₹ 1 ಲಕ್ಷದವರೆಗೆ ಖರ್ಚಿದೆ. ‘ಎಚ್‌ಐವಿ ಸೋಂಕಿತ ಮಕ್ಕಳು ಗಲಾಟೆ ಮಾಡುತ್ತ ಕಿರಿಕಿರಿ ನೀಡುತ್ತಾರೆ’ ಎಂದು ಅಕ್ಕಪಕ್ಕದವರು ದೂರುತ್ತಾರೆ. ಈ ಕಾರಣಕ್ಕೇ ಸ್ವಂತದ್ದೊಂದು ಸೂರು ಅಗತ್ಯವೆನ್ನಿಸಿದೆ.

ಪ್ರತಿ ಮಗುವಿಗೆ ಮೂರು ಹೊತ್ತೂ ಪೌಷ್ಟಿಕ ಆಹಾರ ನೀಡಬೇಕು. ಆರೋಗ್ಯ ಹದಗೆಟ್ಟರೆ ತಕ್ಷಣಕ್ಕೇ ಆಸ್ಪತ್ರೆಗೆ ದಾಖಲಿಸಬೇಕು. ಮೇಲಾಗಿ ಅನಾಥರೆಂಬ ಭಾವ ಕಾಡದಂತೆ ಅವರನ್ನು ಪ್ರೀತಿಯಿಂದ ಕಾಣಬೇಕು. ಬಿಟ್ಟರೆ ಮಕ್ಕಳ ಜೀವಕ್ಕೇ ಅಪಾಯ. ಅದಕ್ಕೆಂದೇ ಇವರು ತಮ್ಮ ಸ್ವಂತ ಊರಲ್ಲಿ ತಾಯಿ ನೀಡಿರುವ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಪಕ್ಕದ ಖಾಲಿ ನಿವೇಶನವನ್ನೂ ಖರೀದಿಸಿದಲ್ಲಿ ಈಗಿರುವ ಪುಟ್ಟ ನಿವೇಶನದಲ್ಲಿ ನಿರ್ಮಿಸಲು ಹೊರಟಿರುವ ಮನೆ ಮತ್ತಷ್ಟು ದೊಡ್ಡದಾಗುತ್ತದೆ. ಹಾಗಾದಲ್ಲಿ ಹತ್ತಾರು ಸಂಖ್ಯೆಯಲ್ಲಿರುವ ಮಕ್ಕಳಿಗೂ ಅನುಕೂಲ. ಸೋಂಕಿತ ಹೆಣ್ಣುಮಕ್ಕಳು ವಯಸ್ಸಿಗೆ ಬಂದಾಗ ಪ್ರತ್ಯೇಕ ವಸತಿನಿಲಯ ಕಲ್ಪಿಸುವ ಅಗತ್ಯವೂ ಇದೆ. ಪ್ರತ್ಯೇಕ ವಸತಿಗೃಹದ ಅನುಕೂಲ ಮಕ್ಕಳದ್ದಾಗಬೇಕೆಂದರೆ ಸಹೃದಯರು ಆರ್ಥಿಕ ನೆರವು ನೀಡಬೇಕಿದೆ ಎಂದು ಅವರು ಕೋರುತ್ತಾರೆ.

ಸರ್ಕಾರದ ನೆರವೇ ಇಲ್ಲ

ಹುಟ್ಟುತ್ತಲೇ ಎಚ್‌ಐವಿ ಏಡ್ಸ್‌ ಸೋಂಕಿಗೆ ಒಳಗಾದ ಮಕ್ಕಳು ಸಮಾಜದ ಅವಗಣನೆಗೆ ಒಳಗಾದರೂ ಸರ್ಕಾರ ಅಂಥವರ ನೆರವಿಗೆ ನಿಲ್ಲಲು ಹಾಸ್ಟೆಲ್‌ ಅಥವಾ ಪುನರ್ವಸತಿ ಸೌಲಭ್ಯ ಕಲ್ಪಿಸುತ್ತಿಲ್ಲ. ಪ್ರತಿ ಮಗುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ತಿಂಗಳೂ ಅಗತ್ಯವಿರುವ ಮಾತ್ರೆ ಉಚಿತವಾಗಿ ನೀಡುವುದನ್ನು ಬಿಟ್ಟರೆ ಬೇರಾವ ನೆರವೂ ಸಿಗುತ್ತಿಲ್ಲ. ‌ಅಂಥ ಮಕ್ಕಳಿಗೆ ಪೌಷ್ಟಿಕ ಆಹಾರದ ಅಗತ್ಯವಿದೆ. ಆಗಾಗ ಆರೋಗ್ಯ ಹದಗೆಡುವುದರಿಂದ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಆಟವಾಡಲು ಓದಲು ಸ್ವಚ್ಛ ಪರಿಸರದ ಅಗತ್ಯವಿದೆ. ಈ ಎಲ್ಲ ವ್ಯವಸ್ಥೆಗೆ ಸರ್ಕಾರ ಯಾವುದೇ ರೀತಿಯ ನೆರವನ್ನು ನೀಡುವುದಿಲ್ಲ ಎಂದು ಶಿವಕುಮಾರ್‌ ಬೇಸರ ವ್ಯಕ್ತಪಡಿಸುತ್ತಾರೆ. ಅಲ್ಲದೆ ಅಂಥ ಪ್ರತಿ ಮಗುವಿಗೆ ಮಾಸಿಕ ₹ 1000 ಮಾಸಾಶನ ಸೌಲಭ್ಯ ನೀಡಲು ಅವಕಾಶವಿದೆಯಾದರೂ ಹತ್ತಾರು ನಿಬಂಧನೆಗಳು ಇವೆ. ಎಲ್ಲ ದಾಖಲೆಗಳು ಸರಿ ಇದ್ದರೂ ಪ್ರತಿ ತಿಂಗಳು ಸರಿಯಾಗಿ ಹಣ ಬರುತ್ತಿಲ್ಲ ಎಂದೂ ಅವರು ಹೇಳುತ್ತಾರೆ.

ಆರ್ಥಿಕ ನೆರವು ನೀಡಲು ಬಯಸುವ ಉದಾರಿಗಳು ವಿಬಿಪಿ ಫೌಡೇಷನ್‌ ಇಕ್ವಿಟಾಸ್‌ ಬ್ಯಾಂಕ್‌ ಐಎಫ್‌ಎಸ್‌ಸಿ ಕೋಡ್‌: ESFB0003019 ಈ ಬ್ಯಾಂಕ್‌ ಖಾತೆಗೆ ದೇಣಿಗೆ ನೀಡಬಹುದು. ಶಿವಕುಮಾರ್‌ ಮೇಗಳಮನಿ ಅವರ ಮೊಬೈಲ್ ದೂರವಾಣಿ ಸಂಖ್ಯೆ:8050299920/ 7353882930

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT