ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ: ಈಗ ಬಾಳೆ ಹಣ್ಣಿನ ಸರದಿ!

ಸಾಲು ಸಾಲು ಹಬ್ಬಗಳು; ಪ್ರತಿ ಕೆ.ಜಿ. ಏಲಕ್ಕಿ ಬಾಳೆಗೆ ₹ 120
Published 23 ಆಗಸ್ಟ್ 2023, 7:29 IST
Last Updated 23 ಆಗಸ್ಟ್ 2023, 7:29 IST
ಅಕ್ಷರ ಗಾತ್ರ

ದಾವಣಗೆರೆ: ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳ ಸಾಲು ದರ ಏರಿಕೆಯನ್ನೂ ಹೊತ್ತು ತಂದಿದೆ. ಹಣ್ಣು, ಹೂವಿನ ದರ ಹೆಚ್ಚುತ್ತ ಸಾಗಿದ್ದು, ಬಾಳೆಹಣ್ಣಿನ ದರ ಗಗನಕ್ಕೇರಿದೆ.

ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಯ ಸಗಟು ದರ ಪ್ರತಿ ಕೆ.ಜಿ.ಗೆ ₹ 100 ದಾಟಿದೆ. ದಾವಣಗೆರೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಏಲಕ್ಕಿ ಬಾಳೆಯ ದರ ಚಿಲ್ಲರೆ ಮಾರುಕಟ್ಟೆಯಲ್ಲಿ ₹ 120ರಿಂದ ₹ 130ಕ್ಕೆ ತಲುಪಿದೆ. ಪಚ್ಚ ಬಾಳೆ ಬೆಲೆಯೂ ಹೆಚ್ಚಿದ್ದು, ಪ್ರತಿ ಕೆ.ಜಿ.ಗೆ ₹ 50ರಿಂದ ₹ 60ರಷ್ಟಾಗಿದೆ.

‘ಸಗಟು ಮಾರುಕಟ್ಟೆಯಲ್ಲಿ ಬಾಳೆಹಣ್ಣಿನ ದರ ಇದೇ ಮೊದಲ ಬಾರಿಗೆ ₹ 100 ದಾಟಿ ದಾಖಲೆ ಸೃಷ್ಟಿಸಿದೆ. ರೈತರಿಗೂ ಇದರಿಂದ ಉತ್ತಮ ದರ ಸಿಗುತ್ತಿದೆಯಾದರೂ, ಗ್ರಾಹಕರಿಗೆ ಸಂಕಷ್ಟ ತಂದಿದೆ’ ಎಂದು ನಗರದ ಬಾಳೆಹಣ್ಣಿನ ಮಂಡಿಯಲ್ಲಿ ವ್ಯಾಪಾರ ಮಾಡುವ ಬಸವರಾಜ್‌ ’ಪ್ರಜಾವಾಣಿ’ಗೆ ತಿಳಿಸಿದರು.

ಶ್ರಾವಣ ಮಾಸ ಬಂತೆಂದರೆ ಸಹಜವಾಗಿಯೇ ಹಣ್ಣುಗಳಿಗೆ ಬೇಡಿಕೆ ಹೆಚ್ಚುತ್ತದೆ. ಮಳೆಗಾಲವಾದ್ದರಿಂದ ಪೂರೈಕೆಯು ಬೇಡಿಕೆಗೆ ಅನುಗುಣವಾಗಿ ಇರುವುದಿಲ್ಲ. ಅಂತೆಯೇ ದರವೂ ಹೆಚ್ಚುತ್ತದೆ. ಆದರೆ, ಬಾಳೆಹಣ್ಣಿನ ದರ ಪ್ರತಿ ವರ್ಷಕ್ಕಿಂತ ಈ ವರ್ಷ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಚನ್ನಗಿರಿ, ಹರಿಹರ, ಸಂತೇಬೆನ್ನೂರು, ಹೊನ್ನಾಳಿ, ಮಲೇಬೆನ್ನೂರು, ಮಾಯಕೊಂಡ, ವಿಜಯನಗರ ಜಿಲ್ಲೆಯ ಹರಪನಹಳ್ಳಿ ಹಾಗೂ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಯ ರೈತರು ಅಡಿಕೆ ನಡುವೆ ಅಂತರ ಬೆಳೆಯಾಗಿ ಏಲಕ್ಕಿ ಬಾಳೆ ಬೆಳೆಯುತ್ತಾರೆ. ಕಳೆದ ನಾಲ್ಕೈದು ವರ್ಷಗಳಿಂದ ಬಾಳೆಯನ್ನು ಅಂತರಬೆಳೆಯಾಗಿ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. 2020ರಲ್ಲಿ 2,441 ಹೆಕ್ಟೇರ್‌ ಪ್ರದೇಶದಷ್ಟಿದ್ದ ಬಾಳೆ ಕ್ಷೇತ್ರ ಈ ವರ್ಷ 1,130 ಹೆಕ್ಟೇರ್‌ ಕುಸಿದಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್‌ ಹೇಳಿದರು.

ನಿರ್ವಹಣಾ ವೆಚ್ಚ, ನೀರಿನ ಕೊರತೆಯೇ ರೈತರು ಬಾಳೆ ಬೆಳೆಯಿಂದ ವಿಮುಖವಾಗುವುದಕ್ಕೆ ಕಾರಣ. ಉತ್ಪನ್ನ ಕಡಿಮೆ ಆಗಿದ್ದರಿಂದ ಸಹಜವಾಗಿ ದರವೂ ಹೆಚ್ಚಿದೆ. ದೀಪಾವಳಿ ವೇಳೆಗೆ ಹೊಸ ಉತ್ಪನ್ನ ಬರುವವರೆಗೆ ಈ ದರ ಮುಂದುವರಿಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಇತ್ತೀಚೆಗಷ್ಟೇ ಟೊಮೆಟೊ, ಹಸಿ ಮೆಣಸಿನಕಾಯಿ ದರ ಪ್ರತಿ ಕೆ.ಜಿ.ಗೆ ₹ 100ರಿಂದ ₹ 150 ದಾಟಿ ಗ್ರಾಹಕರಿಗೆ ಬಿಸಿ ಮುಟ್ಟಿಸಿತ್ತು. ಇದೀಗ ಬಾಳೆ ಹಣ್ಣಿನ ಬೆಲೆ ಗ್ರಾಹಕರ ಕಣ್ಣು ಕುಕ್ಕುವಂತೆ ಮಾಡಿದೆ ಎಂದು ಕೆ.ಆರ್‌. ಮಾರುಕಟ್ಟೆ ಬಾಳೆಕಾಯಿ ಮಂಡಿ ಅಧ್ಯಕ್ಷ ಎಸ್‌.ಚಂದ್ರಶೇಖರ್‌ ವಿವರಿಸಿದರು.

ದಾವಣಗೆರೆಯ ಕೆ.ಆರ್ ಮಾರುಕಟ್ಟೆ ಬಾಳೇಕಾಯಿ ಮಂಡಿ ಅಧ್ಯಕ್ಷ ಎಸ್.ಚಂದ್ರಶೇಖರ್
ದಾವಣಗೆರೆಯ ಕೆ.ಆರ್ ಮಾರುಕಟ್ಟೆ ಬಾಳೇಕಾಯಿ ಮಂಡಿ ಅಧ್ಯಕ್ಷ ಎಸ್.ಚಂದ್ರಶೇಖರ್
ಜಗದೀಶ್
ಜಗದೀಶ್
ಕಳೆದ ವಾರ ಪ್ರತಿ ಕೆ.ಜಿ. ಏಲಕ್ಕಿ ಬಾಳೆಗೆ ₹ 60ರಿಂದ ₹ 70ರಷ್ಟಿದ್ದ ದರ ಇದ್ದಕ್ಕಿದ್ದಂತೆಯೇ ₹ 100 ದಾಟಿದೆ. ಅಡಿಕೆ ಬೆಳೆಯತ್ತ ವಾಲಿರುವ ಜಿಲ್ಲೆಯ ರೈತರು ಬಾಳೆ ಮತ್ತಿತರ ಬೆಳೆಯನ್ನು ನಿರ್ಲಕ್ಷಿಸಿದ್ದಾರೆ. ಉತ್ಪಾದನೆ ಕುಂಠಿತವಾಗಿದ್ದರಿಂದ ದರ ಹೆಚ್ಚಿದೆ
ಎಸ್‌.ಚಂದ್ರಶೇಖರ್‌ ಕೆ.ಆರ್‌. ಮಾರುಕಟ್ಟೆ ಬಾಳೆಕಾಯಿ ಮಂಡಿ ಅಧ್ಯಕ್ಷ
ಒಂದು ತಿಂಗಳಿನಿಂದ ಏಲಕ್ಕಿ ಬಾಳೆ ದರ ಏರುಮುಖದಲ್ಲಿದೆ. ಪ್ರತೀ ಟನ್‌ಗೆ ₹30000 ದಿಂದ ₹40000 ಇದ್ದ ಬಾಳೆಕಾಯಿ ದರ ಇದೀಗ ₹60000 ಆಗಿದೆ. ಖರೀದಿದಾರರು ತೋಟಕ್ಕೇ ಬಂದು ಖರೀದಿಸುತ್ತಾರೆ. ಹಣ್ಣಾದ ನಂತರ ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಇನ್ನಷ್ಟು ಹೆಚ್ಚುತ್ತದೆ
–ಜಗದೀಶ್ ಏಲಕ್ಕಿ ಬಾಳೆ ಬೆಳೆಗಾರ ಎಚ್‌.ಬಸಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT