ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಕೊರೊನಾ ತಡೆ ಕಾರ್ಯಾಚರಣೆ ವಿವರಿಸಿದ ಎಸ್‌ಪಿ ಹನುಮಂತರಾಯ

ಮೂಲ ಪತ್ತೆ ಹಚ್ಚುವುದೇ ಸವಾಲಾಗಿತ್ತು
Last Updated 6 ಜೂನ್ 2020, 3:31 IST
ಅಕ್ಷರ ಗಾತ್ರ
ADVERTISEMENT
""

ದಾವಣಗೆರೆ: ಲಾಕ್‌ಡೌನ್‌ ಆದಲ್ಲಿಂದ ಜನರನ್ನು ನಿಯಂತ್ರಿಸುವುದು, ಅದಕ್ಕೆ ಒಗ್ಗಿಸುವುದು ಮೊದಲ ಸವಾಲಾಗಿತ್ತು. ಹಸಿರು ವಲಯಕ್ಕೆ ಹೋಗಿ ಮತ್ತೆ ಕೊರೊನಾ ಸೋಂಕು ಪತ್ತೆಯಾದಾಗ ಅದರ ಮೂಲ ಹುಡುಕುವುದು ಬಹುದೊಡ್ಡ ಸವಾಲಾಯಿತು. ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದ ಸಂತೃಪ್ತಿ ಇದೆ.

ಜಿಲ್ಲೆಯ ರಕ್ಷಣೆಯ ಹೊಣೆ ಹೊತ್ತಿರುವ ಕೊರೊನಾ ವಾರಿಯರ್‌ ಜಿಲ್ಲಾ ‍ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ವ್ಯಕ್ತಪಡಿಸಿದ ಅಭಿಪ್ರಾಯ ಇದು. ಎರಡು ತಿಂಗಳಲ್ಲಿ ಪೊಲೀಸ್‌ ಇಲಾಖೆ ನಿರ್ವಹಿಸಿದ ಕೆಲಸವನ್ನು ಮೆಚ್ಚುಗೆಯಿಂದಲೇ ಸಂಕ್ಷಿಪ್ತವಾಗಿ ‘ಪ್ರಜಾವಾಣಿ’ಗೆ ವಿವರಿಸಿದರು.

‘ಲಾಕ್‌ಡೌನ್‌ ಆದರೂ ಜನ ಮನೆಯೊಳಗೆ ಇರಲು ತಯಾರಿರಲಿಲ್ಲ. ವಾಹನ ಓಡಾಟ ತಡೆಯಲು ಹಲವು ಕಡೆ ಬ್ಯಾರಿಕೇಡ್‌ ಅಳವಡಿಸಬೇಕಾಯಿತು. ಕೆಲವು ಕಡೆ ಬಿಸಿ ಮುಟ್ಟಿಸಬೇಕಾಯಿತು. ಅನಗತ್ಯವಾಗಿ ಓಡಾಟ ನಡೆಸಿದ್ದಕ್ಕಾಗಿ 5000ಕ್ಕೂ ಅಧಿಕ ವಾಹನಗಳ ಮೇಲೆ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಬೇಕಾಯಿತು. ಸ್ವತಃ ನಾನೇ ಸುತ್ತಾಡಿ ಜಾಗೃತಿ ಮೂಡಿಸಿದೆ. ನಮ್ಮ ಸಿಬ್ಬಂದಿ ಬಹಳ ಸಹಕಾರ ನೀಡಿದರು’ ಎಂದು ನೆನಪಿಸಿಕೊಂಡರು.

‘ಏಪ್ರಿಲ್‌ ಕೊನೆಗೆ ಇಬ್ಬರಲ್ಲಿ ಕೊರೊನಾ ಪತ್ತೆಯಾಯಿತು. ಅದರ ಮೂಲ ಬೇಗನೆ ಸಿಗಲಿಲ್ಲ. ಮೂಲ ಎಲ್ಲಿ ಎಂಬುದೇ ನಿತ್ಯದ ಪ್ರಶ್ನೆಯಾಯಿತು. ಪೊಲೀಸ್‌ ಇಲಾಖೆ ಮತ್ತು ಸರ್ವೇಕ್ಷಣ ಇಲಾಖೆಯ ಪ್ರಯತ್ನದಿಂದ ಎರಡೂ ಪ್ರಕರಣಗಳ ಮೂಲ ಒಂದೇ ಎಂಬುದನ್ನು ಪತ್ತೆಹಚ್ಚಿದೆವು’ ಎಂದು ಬಿಡಿಸಿಟ್ಟರು.

ಕಂಟೈನ್‌ಮೆಂಟ್‌ ವಲಯಗಳಾದಾಗ ಆರಂಭದಲ್ಲಿ ಸೀಲ್‌ಡೌನ್‌ ಮಾಡುವುದು ಅಷ್ಟು ಕಷ್ಟವಾಗಲಿಲ್ಲ. ಆದರೆ 28 ದಿನಗಳು ಅನ್ನುವುದು ಸುದೀರ್ಘ ಅವಧಿ. ಅಲ್ಲದೇ ಅದೇ ಕಂಟೈನ್‌ಮೆಂಟ್‌ ವಲಯದಲ್ಲಿ ಮತ್ತೆ ಹೊಸ ಪ್ರಕರಣ ಪತ್ತೆಯಾದರೆ ಅಲ್ಲಿಂದ 28 ದಿನಗಳ ಲೆಕ್ಕ ಆಗಿದ್ದರಿಂದ ಜನ ಸೀಲ್‌ಡೌನ್‌ ಮಾಡಲು ಒಪ್ಪಲಿಲ್ಲ. ಕೆಲವು ಕಡೆ ಗಲಾಟೆ ಮಾಡಿದರು. ಎಲ್ಲರನ್ನೂ ಮನವೊಲಿಸಿ ಸೀಲ್‌ಡೌನ್‌ ಮಾಡಬೇಕಾಯಿತು ಎಂದು ತಿಳಿಸಿದರು.

‘ಚೆಕ್‌ಪೋಸ್ಟ್‌ಗಳನ್ನು ಮಾಡೋದು, ರಸ್ತೆಗಳನ್ನು ಬಂದ್‌ ಮಾಡೋದೆಲ್ಲ ಬೆಳಗಾಗುವ ಮುನ್ನವೇ ಮಾಡಬೇಕಿತ್ತು. ಅವೆಲ್ಲವನ್ನೂ ನಮ್ಮ ಪೊಲೀಸರು ಸಮರ್ಥವಾಗಿ ನಿರ್ವಹಿಸಿದರು. ಸರ್ವೇಕ್ಷಣಾ ತಂಡದವರು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳುತ್ತಿದ್ದಾಗ ಕೆಲವು ಕಡೆ ತೊಂದರೆಗಳಾಗಿದ್ದವು. ತೊಂದರೆ ಕೊಡೋದನ್ನು ತಡೆಗಟ್ಟಬೇಕಾಯಿತು. ಕಂಟೈನ್‌ಮೆಂಟ್‌ ವಲಯಗಳಲ್ಲಿ ಜನ ಹೊರಗೆ ಬರುವುದನ್ನು ನಿಲ್ಲಿಸಿರಲಿಲ್ಲ. ಸರಿಯಾಗಿ ಮಾಹಿತಿ ನೀಡುತ್ತಿರಲಿಲ್ಲ. ಡ್ರೋನ್‌ ಬಳಸಿ ಸರ್ವೆ ಮಾಡಿದೆವು. ಜತೆಗೆ ಡ್ರೋನ್‌ ನೋಡಿದ್ದರಿಂದ ಜನರೂ ಒಳಗೆ ಕುಳಿತರು’ ಎಂದು ವಿವರಿಸಿದರು.

‘ಕೊರೊನಾ ಬರುವ ಮೊದಲು ಪೊಲೀಸರು ನಿರ್ವಹಿಸುತ್ತಿದ್ದ ಕೆಲಸಗಳು ಬೇರೆ, ಆನಂತರದ ಕೆಲಸಗಳು ಬೇರೆ. ಕಳೆದ ಎರಡು ತಿಂಗಳಲ್ಲಿ ಸಂಪೂರ್ಣ ಭಿನ್ನ ಕಾರ್ಯಕ್ಕೆ ನಮ್ಮ ಪೊಲೀಸರು ಹೊಂದಿಕೊಂಡಿದ್ದಾರೆ. ಅಪರಾಧ, ಅಪಘಾತ ಕಡಿಮೆಯಾಗಿದೆ. ಆದರೆ ಕೊರೊನಾ ಜಾಸ್ತಿಯಾಗಿದೆ. ಎಲ್ಲ ಬದಲಾವಣೆಗಳನ್ನು, ಎಲ್ಲ ಸವಾಲುಗಳನ್ನು ಎದುರಿಸಲು ನಾವಂತೂ ಸಿದ್ಧರಾಗಿದ್ದೇವೆ’ ಎಂದು ಮಾತು ಮುಗಿಸಿದರು.

ಮಾಸ್ಕ್‌, ಅಂತರ ಇನ್ನೂ ಇಲ್ಲ: ಜನರು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಹಾಕಿಕೊಳ್ಳುವುದು, ಅಂತರ ಕಾಯ್ದುಕೊಳ್ಳುವುದನ್ನು ಇನ್ನೂ ಪಾಲಿಸುತ್ತಿಲ್ಲ. ಜನರ ಸಹಕಾರ ಇಲ್ಲದೇ ಕೊರೊನಾ ನಿಯಂತ್ರಣ ಮಾಡಲು ಸಾಧ್ಯವೇ ಇಲ್ಲ ಎಂಬುದು ಅವರ ನೋವಿನ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT