ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿಕೆಟ್‌ ಹಂಚಿಕೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ: ವಚನಾನಂದ ಸ್ವಾಮೀಜಿ

ಪ್ರಮುಖರ ಸಭೆ ನಡೆಸಿ ತಕ್ಕ ಉತ್ತರ ನೀಡುವೆವು
Published 26 ಮಾರ್ಚ್ 2024, 5:42 IST
Last Updated 26 ಮಾರ್ಚ್ 2024, 5:42 IST
ಅಕ್ಷರ ಗಾತ್ರ

ಹರಿಹರ: ‘ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

‘ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಇನ್ನೂ ಅವಕಾಶ ಇದೆ. ಈ ನಿಟ್ಟಿನಲ್ಲಿ ಉಭಯ ಪಕ್ಷಗಳೂ ಮುಂದಾಗಬೇಕು. ಇಲ್ಲದೇ ಹೋದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ. ಈ ಸಂಬಂಧ ಏಪ್ರಿಲ್ ಮೊದಲ ವಾರದಲ್ಲಿ ಪ್ರಮುಖರ ಸಭೆ ನಡೆಸಿ ಚರ್ಚಿಸುತ್ತೇವೆ’  ಹೇಳಿದರು.

‘ಕಾಂಗ್ರೆಸ್‌ ಹಾಗೂ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ರಾಜ್ಯದಲ್ಲಿರುವ ಸಮುದಾಯದ ಜನಸಂಖ್ಯೆ ಹಾಗೂ ಮತದಾರರ ಸಂಖ್ಯೆಯ ಕುರಿತು ಮಾಹಿತಿ ನೀಡಿದ್ದೆವು. ಟಿಕೆಟ್ ಹಂಚಿಕೆಯಲ್ಲಿ ಅನ್ಯಾಯ ಮಾಡದಂತೆ ವಿನಂತಿಸಿದ್ದೆವು. ಆದರೂ ನಮ್ಮ ಕೋರಿಕೆಗೆ ಮನ್ನಣೆ ನೀಡಿಲ್ಲ. ರಾಜಕೀಯವಾಗಿ ಸಮುದಾಯವನ್ನು ತುಳಿಯುವ ಹುನ್ನಾರ ನಡೆಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ನಾವು ಬಿಜೆಪಿಗೆ ಮತ ಹಾಕುತ್ತೇವೆ ಎಂಬ ಭ್ರಮೆ ಬೇಡ. ಸಮುದಾಯವನ್ನು ವ್ಯವಸ್ಥಿತವಾಗಿ ಹತ್ತಿಕ್ಕುತ್ತಿರುವುದನ್ನು ನೋಡಿಯೂ  ಸುಮ್ಮನಿರುವುದಿಲ್ಲ. ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಈ ಕುರಿತು ಮುಖಂಡರೊಂದಿಗೆ ಚರ್ಚಿಸುತ್ತೇವೆ. ದಾವಣಗೆರೆ, ಹಾವೇರಿ, ಧಾರವಾಡ, ಕೊಪ್ಪಳ, ವಿಜಯಪುರ, ಕಲಬುರಗಿ, ಉತ್ತರ ಕನ್ನಡ, ಚಿಕ್ಕೋಡಿ ಸೇರಿ 15 ಕ್ಷೇತ್ರಗಳಲ್ಲಿ ಪಂಚಮಸಾಲಿ ಸಮುದಾಯದ ಮತದಾರ‌ರೇ ನಿರ್ಣಾಯಕರಾಗಿದ್ದಾರೆ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಸಮುದಾಯದ ಇಬ್ಬರಿಗೆ ಟಿಕೆಟ್‌ ನೀಡಿದೆ. ಬಿಜೆಪಿ ಒಬ್ಬರನ್ನಷ್ಟೇ ಕಣಕ್ಕಿಳಿಸಿದೆ. ಬೆಳಗಾವಿಯಲ್ಲಿ ಬಹುಸಂಖ್ಯಾತರಿರುವ ನಮ್ಮ ಸಮುದಾಯವನ್ನು ಬಿಟ್ಟು ಬೇರೆ ಸಮುದಾಯದವರಿಗೆ ಬಿಜೆಪಿ ಮನ್ನಣೆ ನೀಡಿದೆ. ಟಿಕೆಟ್ ಕೊಡದಿದ್ದರೂ ಸಮುದಾಯದವರು ನಮಗೇ ಮತ ನೀಡುತ್ತಾರೆಂಬ ಭ್ರಮೆ ಬೇಡ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ್ ಕಿಡಿಕಾರಿದರು.

‘ಬಿ.ಫಾರಂ ಹಂಚಿಕೆಗೆ ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಎರಡೂ ಪಕ್ಷದವರೂ  ಸರಿದೂಗಿಸಬೇಕು. ಮುಂಚಿನ ಹಾಗೆ ನಾವು ಸುಮ್ಮನಿರುವುದಿಲ್ಲ’ ಎಂದು ಗುರುಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT