ಮಂಗಳವಾರ, ಏಪ್ರಿಲ್ 20, 2021
26 °C
ಗ್ರಾಮ ಪಂಚಾಯಿತಿ ಕಾರ್ಯವೈಖರಿಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಸಮಾಧಾನ

ದಾವಣಗೆರೆ: ಕುಡಿಯುವ ನೀರಿನ ಹೆಸರಲ್ಲಿ ಅವ್ಯವಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಗ್ರಾಮ ಪಂಚಾಯಿತಿಗಳಿಗೆ ಬರುತ್ತಿರುವ 15ನೇ ಹಣಕಾಸು ಆಯೋಗದ ಅನುದಾನವು ಕುಡಿಯುವ ನೀರಿನ ನಿರ್ವಹಣೆ ಹಸರಿನಲ್ಲಿ ದುರುಪಯೋಗವಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ 15ನೇ ಹಣಕಾಸು ಆಯೋಗದ ಅನುದಾನ ಬಳಕೆ ಮಾಡುವಾಗ ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯಿತು.

ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಎನ್‌.ಜಿ. ನಟರಾಜ್‌, ‘ಗ್ರಾಮ ಪಂಚಾಯಿತಿಗಳಿಗೆ 15ನೇ ಹಣಕಾಸು ಆಯೋಗದಡಿ ಲಕ್ಷಾಂತರ ರೂಪಾಯಿ ಅನುದಾನ ಬರುತ್ತಿದೆ. ಇದರಲ್ಲಿ ಬಹುಪಾಲು ಹಣವನ್ನು ಕುಡಿಯುವ ನೀರಿನ ನಿರ್ವಹಣೆಗೇ ಖರ್ಚು ಹಾಕಲಾಗುತ್ತಿದೆ. ಅಭಿವೃದ್ಧಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಿಲ್ಲ. ಕುಡಿಯುವ ನೀರಿನ ನಿರ್ವಹಣೆಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಕೊಡುವ ವ್ಯವಸ್ಥೆಯನ್ನು ತರುವ ಮೂಲಕ ಸರ್ಕಾರಿ ಹಣ ಪೋಲಾಗುವುದನ್ನು ತಡೆಯಬೇಕು’ ಎಂದು ಒತ್ತಾಯಿಸಿದರು.

ಸದಸ್ಯ ಬಿ.ಎಂ. ವಾಗೀಶಸ್ವಾಮಿ, ‘ಭೂಮಿಯೊಳಗೆ ಹಾಕುವ ಪೈಪ್‌ಗಳಿಗೆ ಖರ್ಚು ತೋರಿಸುವುದರಿಂದ ಅವ್ಯವಹಾರ ಮಾಡುತ್ತಿರುವುದೂ ಗೊತ್ತಾಗುತ್ತಿಲ್ಲ. ತಪ್ಪಿತಸ್ಥರನ್ನು ಪತ್ತೆ ಮಾಡಿ ಶಿಕ್ಷಿಸುವ ಮೂಲಕ ಬಿಸಿ ಮುಟ್ಟಿಸಬೇಕು’ ಎಂದು ಧ್ವನಿಗೂಡಿಸಿದರು.

ಸದಸ್ಯೆ ಮಂಜುಳಾ ಟಿ.ವಿ. ರಾಜು, ‘ಅನುದಾನ ಬಂದ ಕೂಡಲೇ ಸದಸ್ಯರು ತಮ್ಮ ವಾರ್ಡ್‌ಗಳಿಗೆ ಇಂತಿಷ್ಟು ಹಣವೆಂದು ಹಂಚಿಕೊಂಡು, ಕುಡಿಯುವ ನೀರಿನ ಕಾಮಗಾರಿ ಹೆಸರಿನಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಬೇಕು’ ಎಂದು ಆಗ್ರಹಿಸಿದರು.

ಸದಸ್ಯ ತೇಜಸ್ವಿ ಪಟೇಲ್‌, ‘ನೀರಿನ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಯೇ ನೇರವಾಗಿ ಮಾಡಬೇಕೋ ಅಥವಾ ಗುತ್ತಿಗೆ ನೀಡಬೇಕೋ ಎಂಬುದಕ್ಕಿಂತ ಕೆಲಸ ಕಳಪೆಯಾಗದೇ ಇರುವುದು ಮುಖ್ಯ’ ಎಂದು ಅಭಿಪ್ರಾಯಪ್ಟರು.

ಸದಸ್ಯೆ ಜೆ.ಸವಿತಾ, ‘ಅಣಬೂರು ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಆರು ತಿಂಗಳಲ್ಲಿ ₹ 56 ಲಕ್ಷ ದುರುಪಯೋಗವಾಗಿದೆ. ಮುಸ್ಟೂರು, ಹನುಮಂತಾಪುರ, ಕೆಂಚೇನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರ ನಡೆದಿದೆ. ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್‌, ‘ನಾನು ಅಧಿಕಾರ ಸ್ವೀಕರಿಸಿದ ಒಂದು ವಾರದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿ ಹಲವರಿಗೆ ಈಗಾಗಲೇ ನೋಟಿಸ್‌ ನೀಡಿದ್ದೇನೆ. ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ನಿರ್ವಹಣೆ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಹೆಚ್ಚಿನ ಅನುದಾನ ಖರ್ಚು ಮಾಡಲಾಗಿದೆಯೇ ಎಂದು ಪರಿಶೀಲಿಸಲಾಗುವುದು. ಸಾಮಾಜಿಕ ಲೆಕ್ಕಪರಿಶೋಧನೆ ಸಂದರ್ಭದಲ್ಲೂ ಈ ಬಗ್ಗೆ ನಿಗಾ ವಹಿಸಲಾಗುವುದು. ಬೇರೆ ಜಿಲ್ಲೆಗಳಲ್ಲಿ ಹೇಗೆ ನಿರ್ವಹಣೆ ಮಾಡಲಾಗುತ್ತಿದೆ ಎಂದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಸದಸ್ಯ ಸುರೇಂದ್ರ ನಾಯ್ಕ, ‘ಮೆಕ್ಕೆಜೋಳ ಬೆಳೆ ಬೆಂಕಿಗೆ ಆಹುತಿಯಾದಾಗ ಬಹಳ ಕಡಿಮೆ ಪರಿಹಾರ ನೀಡಲಾಗುತ್ತಿದೆ. ಒಂದು ಎಕರೆಗೆ 30 ಚೀಲ ಫಸಲು ಬರುತ್ತದೆ. ಹೀಗಾಗಿ ಕನಿಷ್ಠ ₹ 30 ಸಾವಿರ ಪರಿಹಾರವನ್ನಾದರೂ ನೀಡಬೇಕು’ ಎಂದು ಒತ್ತಾಯಿಸಿದರು.

ಡಿ.ಜಿ.ವಿಶ್ವನಾಥ್‌, ‘ಅಕಾಲಿಕ ಮಳೆಯಿಂದಾಗಿ ನ್ಯಾಮತಿ ತಾಲ್ಲೂಕಿನಲ್ಲಿ ಬಿಳಿಜೋಳ ಬೆಳೆ ಹಾಳಾಗಿದೆ. ಕೂಡಲೇ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಕೊಡಿಸಬೇಕು’ ಎಂದು ಒತ್ತಾಯಿಸಿದರು. 

ಉಪಾಧ್ಯಕ್ಷೆ ಸಾಕಮ್ಮ ಬಿ.ಎಸ್‌., ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ  ಬಿ.ಫಕೀರಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೋಕೇಶ್ವರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ವೀರಶೇಖರಪ್ಪ, ಉಪ ಕಾರ್ಯದರ್ಶಿ ಆನಂದ್‌ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಗದ್ದಲ ಎಬ್ಬಿಸಿದ ಮೆಕ್ಕೆಜೋಳ ಖರೀದಿ

‘ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯದೇ ಇರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಖರೀದಿಸಲಾಗಿತ್ತು. ಈಗಿನ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇಲ್ಲ. ಹರಿಯಾಣ, ಪಂಜಾಬ್‌ನಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಸದಸ್ಯ ಡಿ.ಜಿ. ವಿಶ್ವನಾಥ್‌ ಆರೋಪಿಸಿದಾಗ ಬಿಜೆಪಿಯ ಎಂ.ಆರ್‌. ಮಹೇಶ್‌ ಆಕ್ಷೇಪಿಸಿದರು.

‘ರೈತರ ಹಿತಕ್ಕಾಗಿಯೇ ಕೇಂದ್ರ ಸರ್ಕಾರ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದರೂ ನೀವು ವಿರೋಧಿಸುತ್ತಿದ್ದೀರಿ’ ಎಂದು ಮಹೇಶ್‌ ಏರು ಧ್ವನಿಯಲ್ಲಿ ಹೇಳಿದಾಗ, ಕಾಂಗ್ರೆಸ್‌ನ ಸದಸ್ಯರಾದ ಬಸವರಾಜ ಕೆ.ಎಸ್‌, ಕೆ.ಎಚ್‌. ಓಬಳಪ್ಪ, ವಿಶ್ವನಾಥ್‌, ಜಿ.ಸಿ. ನಿಂಗಪ್ಪ ಹಾಗೂ ತೇಜಸ್ವಿ ಪಟೇಲ್‌ ಅವರು ವಾಗ್ದಾಳಿ ನಡೆಸಿದರು. ಆಡಳಿತ ಪಕ್ಷದ ಇತರ ಸದಸ್ಯರು ತಮ್ಮ ಬೆಂಬಲಕ್ಕೆ ಬಾರದಿದ್ದರೂ ಮಹೇಶ್‌ ವಾದಿಸುತ್ತಲೇ ಇದ್ದರು. ಕೆಲ ಕಾಲ ವಾಗ್ವಾದ ನಡೆದಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು