ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಹಣಕ್ಕೆ ಬಿಕರಿಯಾಗುತ್ತಿದೆಯೇ ವ್ಯಾಕ್ಸಿನ್‌?

ಆಜಾದ್‌ನಗರ, ಬಾಷಾನಗರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಟ್ವೀಟ್‌ ಹರಿದಾಡುತ್ತಿದೆ
Last Updated 9 ಜೂನ್ 2021, 19:00 IST
ಅಕ್ಷರ ಗಾತ್ರ

ದಾವಣಗೆರೆ: ಮನೆಗೆ ಬೆಂಕಿ ಬಿದ್ದರೆ ಚಳಿ ಕಾಯಿಸಿಕೊಳ್ಳುವವರು ಕೊರೊನಾ ಕಾಲದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕೊರೊನಾ ನಿರೋಧಕ ಲಸಿಕೆಗಾಗಿ ಜನ ಹಾತೊರೆಯುತ್ತಿದ್ದರೆ, ಪೂರೈಕೆ ಕಡಿಮೆ ಇರುವುದರಿಂದ ನಿತ್ಯ ಕಾಯಬೇಕಿದೆ. ಈ ನಡುವೆ ಆರೋಗ್ಯ ಕೇಂದ್ರಗಳಿಗೆ ಬರುವ ಲಸಿಕೆಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಹರಿದಾಡುತ್ತಿವೆ.

ಆರಂಭದಲ್ಲಿ ಲಸಿಕೆಗೆ ಬೇಡಿಕೆ ಕಡಿಮೆ ಇತ್ತು. ಕೊರೊನಾ ಸೋಂಕಿನ ಎರಡನೇ ಅಲೆ ಬಂದು ಸಾವುನೋವುಗಳು ಉಂಟಾದಾಗ ಒಮ್ಮೆಲೆ ಬೇಡಿಕೆ ಕಂಡು ಬಂದಿದೆ. ಇದನ್ನು ಆರೋಗ್ಯ ಕೇಂದ್ರಗಳ ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿರುವುದೇ ಈ ಆರೋಪಕ್ಕೆ ಕಾರಣವಾಗಿದೆ.

‘ಆಜಾದ್‌ನಗರ ಮತ್ತು ಬಾಷಾನಗರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಬರುವವರಿಗೆ ನೀಡದೇ ಹೊರಗೆ ₹ 500ರಿಂದ ₹ 1000ಕ್ಕೆ ಮಾರಿಕೊಳ್ಳುತ್ತಿದ್ದಾರೆ. ಆರೋಗ್ಯ ಸಚಿವರಿಗೆ ಇದು ಗೊತ್ತಿದೆಯೇ’ ಎಂದು ಶಂಕರ್‌ ಬಿ.ಎಚ್‌. ಎಂಬವರು ಟ್ವೀಟ್‌ ಮಾಡಿದ್ದಾರೆ.

‘ಉಚಿತವಾಗಿ ನೀಡುವಾಗಲೂ ಸರದಿಯಲ್ಲಿ ನಿಂತವರಿಗೆ ನೀಡುವ ಬದಲು ಲಾಬಿ ಮಾಡಿಕೊಂಡು ಬರುವವರಿಗೆ ನೀಡಲಾಗುತ್ತಿತ್ತು. ಈಗ ಹಣ ಕೊಟ್ಟವರಿಗೆ ಮನೆಗೇ ಬಂದು ಲಸಿಕೆ ಹಾಕಿ ಹೋಗುತ್ತಾರೆ’ ಎಂದು ಸಾರ್ವಜನಿಕರು ದೂರಿದ್ದಾರೆ.

ಈ ಟ್ವೀಟ್‌ ಬಗ್ಗೆ ಪರಿಶೀಲಿಸಿ ಸತ್ಯಾಂಶ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಆರೋಗ್ಯ ಇಲಾಖೆಯಿಂದ ಪೊಲೀಸ್ ಇಲಾಖೆಗೆ ಅಧಿಕೃತವಾಗಿ ದೂರು ನೀಡಲಾಗುವುದು. ಅದರ ತನಿಖೆಯನ್ನು ಪೊಲೀಸರು ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್‌ ಮಾಹಿತಿ ನೀಡಿದ್ದಾರೆ.

‘ಈ ಬಗ್ಗೆ ನಮಗೂ ಮಾಹಿತಿ ಬಂದಿದೆ. ಅದಕ್ಕೆ ಸಂಬಂಧಪಟ್ಟವರನ್ನು ವಿಚಾರಣೆ ಮಾಡಲಾಗುವುದು. ಮಾರಾಟ ಮಾಡುವುದು ನಿಜ ಆಗಿದ್ದರೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT