ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜೆಜೆಎಂಎಂಸಿ ವೈದ್ಯ ವಿದ್ಯಾರ್ಥಿಗಳ ಮುಷ್ಕರ

ಐದು ತಿಂಗಳಿನಿಂದ ಬಿಡುಗಡೆಯಾಗದ ಶಿಷ್ಯವೇತನ
Last Updated 1 ಅಕ್ಟೋಬರ್ 2021, 11:31 IST
ಅಕ್ಷರ ಗಾತ್ರ

ದಾವಣಗೆರೆ: ಐದು ತಿಂಗಳಿನಿಂದ ಬಾಕಿ ಇರುವ ಶಿಷ್ಯ ವೇತನವನ್ನು ಪಾವತಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನಗರದ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಮುಷ್ಕರವನ್ನು ಆರಂಭಿಸಿದ್ದಾರೆ.

ಸಿಇಟಿ ಮೂಲಕ ಸರ್ಕಾರಿ ಕೋಟಾದಡಿ ಆಯ್ಕೆಯಾಗಿರುವ ಜೆಜೆಎಂಎಂಸಿ ವಿದ್ಯಾರ್ಥಿಗಳು ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸರ್ಕಾರವೇ ಶಿಷ್ಯವೇತನವನ್ನು ಪಾವತಿಸುತ್ತಿತ್ತು. ಆದರೆ, ಐದು ತಿಂಗಳಿನಿಂದ ಶಿಷ್ಯವೇತನವನ್ನು ಬಿಡುಗಡೆ ಮಾಡಿಲ್ಲ. ಸರ್ಕಾರದ ಸಂಬಂಧಿಸಿದ ಇಲಾಖೆಗೆ ಹಾಗೂ ಕಾಲೇಜಿನ ಆಡಳಿತ ಮಂಡಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ನಗರದ ಜಯದೇವ ವೃತ್ತದಲ್ಲಿ ಶುಕ್ರವಾರ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

‘ಸುಧಾರಿಸಿತು ಕೋವಿಡ್‌ ಅಲೆ; ಆದರೆ, ವೈದ್ಯಗಿಲ್ಲ ಏಕೆ ಇನ್ನೂ ಬೆಲೆ’, ‘ಸರ್ಕಾರದ ಸಹವಾಸ ವೇತನ ಇಲ್ಲದೇ ಉಪವಾಸ’, ‘ಕಾಲ್ಡ್‌ ಎ ಹಿರೋ ಬಟ್‌ ಪೇಯ್ಡ್‌ ಝೀರೊ’ ಎಂಬಿತ್ಯಾದಿ ಬಹರಗಳಿರುವ ನಾಮಫಲಕಗಳನ್ನು ಹಿಡಿದು ಧರಣಿ ಕುಳಿತಿದ್ದವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಶಿಷ್ಯವೇತನ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಆಸ್ಪತ್ರೆಯನ್ನು ಬಳಸಿಕೊಳ್ಳುತ್ತಿರುವುದಕ್ಕೆ ‘ಕ್ಲಿನಿಕಲ್‌ ಫೀ’ಯನ್ನು ಸರ್ಕಾರಕ್ಕೆ ಪಾವತಿಸುತ್ತಿರುವುದರಿಂದ ಶಿಷ್ಯವೇತನವನ್ನು ಸರ್ಕಾರವೇ ಪಾವತಿಸಬೇಕು ಎಂದು ಆಡಳಿತ ಮಂಡಳಿಯವರು ಸ್ಪಷ್ಟವಾಗಿ ನಮ್ಮ ಮನವಿಯನ್ನು ತಿರಸ್ಕರಿಸುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲೂ ನಾವಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಹೀಗಿದ್ದರೂ ಶಿಷ್ಯವೇತನ ಪಾವತಿಸದೇ ಅನ್ಯಾಯ ಮಾಡಲಾಗುತ್ತಿದೆ’ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್‌ ಕಾರ್ಯದಲ್ಲಿ ತೊಡಗಿಕೊಂಡಿರುವ ವೈದ್ಯರಿಗೆ ಸಕಾಲಕ್ಕೆ ವೇತನ ಪಾವತಿಸುವಂತೆ ಸುಪ್ರೀಂ ಕೋರ್ಟ್‌ ಎಲ್ಲಾ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಹೀಗಿದ್ದರೂ ಐದು ತಿಂಗಳಿನಿಂದ ಸರ್ಕಾರ ನಮಗೆ ಒಂದು ರೂಪಾಯಿಯನ್ನೂ ಪಾವತಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೆಜೆಎಂ ವೈದ್ಯಕೀಯ ಕಾಲೇಜಿನ ಜೂನಿಯರ್‌ ಡಾಕ್ಟರ್ಸ್‌ ಅಸೋಸಿಯೇಷನ್‌ನ (2021–22) ಅಧ್ಯಕ್ಷ ಡಾ. ಆರ್‌.ಹೇಮಂತ್‌ ಹಾಗೂ ವೈದ್ಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT