ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಸಾರಿಗೆ ಸಂಸ್ಥೆಯ ‘ಕನ್ನಡ ಪಂಡಿತ’ರಿವರು

Last Updated 1 ನವೆಂಬರ್ 2021, 19:30 IST
ಅಕ್ಷರ ಗಾತ್ರ

ದಾವಣಗೆರೆ: ‘ಚೀಟಿ ತೊಗೊಳಿ.., ಚೀಟಿ ತೊಗೊಳಿ...’ ಇಂಥ ನುಡಿಗಳನ್ನು ಎರಡು ವರ್ಷಗಳ ಹಿಂದೆ ದಾವಣಗೆರೆ–ಬೆಂಗಳೂರು ಬಸ್‌ ಹತ್ತಿದ ಹಲವರು ಕೇಳಿರಬಹುದು. ಟಿಕೆಟ್‌.. ಟಿಕೆಟ್‌... ಎಂಬ ಆಂಗ್ಲ ಪದಗಳ ಬದಲು, ಇಂಥ ಅಪ್ಪಟ ಕನ್ನಡ ನುಡಿಗಳನ್ನಾಡುತ್ತ ಕೆಎಸ್‌ಆರ್‌ಟಿಸಿ ನೌಕರರ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ ದಾವಣಗೆರೆಯ ಎಂ.ಶಾಂತಪ್ಪ.

ಬಸ್‌ ನಿರ್ವಾಹಕರಾಗಿದ್ದ ಎಂ.ಶಾಂತಪ್ಪ ಅವರ ನಿಜನಾಮವೇ ಅವರ ಸಹೋದ್ಯೋಗಿಗಳಾದ ಹಲವರಿಗೆ ಗೊತ್ತಿಲ್ಲ. ‘ಕನ್ನಡ ಪಂಡಿತ’ ಎಂಬ ಅಡ್ಡ ಹೆಸರು ಇವರಿಗೆ ಸ್ನೇಹಿತ ವಲಯದಲ್ಲಿ ಹುಟ್ಟಿಕೊಂಡಿರುವುದರಿಂದ, ಹಾಗೆ ಹೇಳಿದರಷ್ಟೇ ಅವರ ಪರಿಚಯ ಆಗುತ್ತದೆ.

ಜಗಳೂರು ತಾಲ್ಲೂಕಿನ ಉರುಲಕಟ್ಟೆಯವರಾದ ಶಾಂತಪ್ಪ ಅವರು ಮಾತಿನಲ್ಲಿ, ಬರಹದಲ್ಲಿ ಎಲ್ಲಿಯೂ ಅಪ್ಪಿತಪ್ಪಿ ಬೇರೆ ಭಾಷೆ ಬಳಸುವುದಿಲ್ಲ. ಪ್ರತಿ ಅಕ್ಷರ, ಅಂಕಿಗಳನ್ನೂ ಕನ್ನಡದಲ್ಲೇ ಬರೆಯುತ್ತಾರೆ. ಬಸ್‌ನಲ್ಲಿ ಬರುವ ಪ್ರಯಾಣಿಕರಿಗೆ ಚಿಲ್ಲರೆ ಮರಳಿಸುವುದಿದ್ದರೂ, ಚೀಟಿಯ ಹಿಂದೆ ಕನ್ನಡದ ಅಂಕಿಗಳಲ್ಲೇ ಬರೆಯುತ್ತಿದ್ದರು. ಚೀಟಿಗಳ ಒಟ್ಟು ಲೆಕ್ಕಾಚಾರವನ್ನು ಮೇಲಧಿಕಾರಿಗಳಿಗೆ ಬರೆದು ಕೊಡುವುದೂ ಕನ್ನಡದ ಅಂಕಿಗಳಲ್ಲೇ!

ಕನ್ನಡ ಪ್ರೇಮ ಹುಟ್ಟಿದ್ದು ಹೇಗೆ?: ‘8ನೇ ತರಗತಿ ಓದುವಾಗ ತಮಿಳುನಾಡಿನ ಮದುರೈಗೆ ಪ್ರವಾಸ ಹೋಗಿದ್ದೆವು. ಆಗ ರಜನಿಕಾಂತ್‌ ಅವರ ಚಿತ್ರವೊಂದು ಬಿಡುಗಡೆಯಾಗಿತ್ತು. ಕೆಲ ತಮಿಳರು ರಜನಿಕಾಂತ್‌ ಕನ್ನಡಿಗರು ಎಂಬ ಕಾರಣಕ್ಕೆ ಅವರ ಕಟೌಟ್‌ ಕಿತ್ತು ಹಾಕಿ ರಂಪಾಟ ಮಾಡಿದ್ದರು. ಅಂದಿನಿಂದ ಕನ್ನಡ ಭಾಷೆಯ ಬಗ್ಗೆ ಕನ್ನಡಿಗರೂ ಅಭಿಮಾನ ಹೊಂದಿರಬೇಕು ಅನ್ನಿಸಿತು. ಅದೇ ಮನಸ್ಸಿನಲ್ಲಿ ಉಳಿಯಿತು. 1986ರಲ್ಲಿ ಬೆಂಗಳೂರು ನಗರ ಸಾರಿಗೆ ಸಂಸ್ಥೆಯಲ್ಲಿ ನೇಮಕವಾಯಿತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಕನ್ನಡದ ಸಾಹಿತಿಗಳಿಂದ ಶಿಬಿರಗಳು, ಕಾರ್ಯಾಗಾರಗಳು ನಡೆಯುತ್ತಿದ್ದವು. ಹೀಗಾಗಿ ಕನ್ನಡಾಭಿಮಾನ ಇನ್ನಷ್ಟು ಬಲಗೊಂಡಿತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಶೇ 95ರಷ್ಟು ವ್ಯವಹಾರ ಕನ್ನಡದಲ್ಲೇ ನಡೆಯುತ್ತದೆ. ಉಳಿದ ಇಲಾಖೆಗಳಲ್ಲಿ ಇಷ್ಟು ಬಳಕೆ ಕಾಣುತ್ತಿಲ್ಲ. ಬೆಂಗಳೂರಿನಿಂದ ಬಳ್ಳಾರಿಗೆ ವರ್ಗಾವಣೆಯಾದಾಗ ಅಲ್ಲಿಯ ಗುಳ್ಳೆಂ ಎಂಬಲ್ಲಿ ಶಿಕ್ಷಕರಾಗಿದ್ದ ಸಾಹಿತಿ ಕುಂ. ವೀರಭದ್ರಪ್ಪ ಅವರ ಭೇಟಿಯಾಯಿತು. ನನ್ನ ಕನ್ನಡ ಬಳಕೆ ಕಂಡು ಪ್ರಭಾವಿತರಾದ ಅವರು ಗುಳ್ಳೆಂಗೆ ಕರೆಸಿ ಗಡಿನಾಡ ಕನ್ನಡಿಗರ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿದರು’ ಎಂದು ಸ್ಮರಿಸಿದರು.

ಈಗಲೂ ಶಾಂತಪ್ಪ ಅವರು ಕನ್ನಡವನ್ನು ಬಿಟ್ಟು ಬೇರೆ ಭಾಷೆಯ ಒಂದು ಶಬ್ದವನ್ನೂ ಬಳಸುವುದಿಲ್ಲ. ಅಂಕಿ–ಸಂಖ್ಯೆಗಳನ್ನೂ ಕನ್ನಡದಲ್ಲೇ ಬರೆದುಕೊಡುತ್ತಾರೆ. ಅಂಚೆ ಕಚೇರಿ, ಬ್ಯಾಂಕ್‌ಗಳಲ್ಲಿ ಮೊದಮೊದಲು ಆಕ್ಷೇಪಿಸುತ್ತಿದ್ದರು. ಈಗ ಇವರ ಪರಿಚಯವಾಗಿರುವುದರಿಂದ ಅವರೇ ಇವರಿಗೆ ಹೊಂದಿಕೊಂಡಿದ್ದಾರೆ.

‘ನನ್ನ ಜೊತೆ ಬಸ್‌ನಲ್ಲಿ ಚಾಲಕರಾಗಿದ್ದ ಬಸವರಾಜ ಹಾಗೂ ಮಹೇಶ್‌ ಕುರುಬರ ಅವರು ನನ್ನ ಕನ್ನಡ ಚಟುವಟಿಕೆಗೆ ಸಂಪೂರ್ಣ ಸಾಥ್‌ ನೀಡಿದ್ದಾರೆ. ನಾವೆಲ್ಲ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದೆವು. ಬಸ್‌ನ್ನು ಅಲಂಕರಿಸುತ್ತಿದ್ದೆವು. ಕನ್ನಡದ ಸಾಹಿತಿಗಳು, ದಾವಣಗೆರೆಯ ಐತಿಹಾಸಿಕ ಸ್ಥಳಗಳ ಚಿತ್ರಗಳು, ನುಡಿಗಟ್ಟುಗಳನ್ನು ಬಸ್‌ಗೆ ಅಂಟಿಸಿ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದೆವು. ರಾಜ್ಯೋತ್ಸವದ ನಿಮಿತ್ತ ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸುತ್ತಿದ್ದೆವು. ಪ್ರತಿ ವರ್ಷ ದಾವಣಗೆರೆಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ಕಟ್ಟಿಟ್ಟ ಬುತ್ತಿಯಂತಾಗಿತ್ತು’ ಎಂದು ಶಾಂತಪ್ಪ ನೆನಪಿಸಿಕೊಂಡರು.

ಇವರ ಕನ್ನಡ ಅಂಕಿಗಳ ಬರವಣಿಗೆಗೆ ಇಲಾಖೆಯ ಮೇಲಿನ ಅಧಿಕಾರಿಗಳು ಕೆಲವರು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರೆ, ಮತ್ತೆ ಕೆಲವರು ಆಕ್ಷೇಪಿಸಿದ್ದೂ ಇದೆ. ಏನೇ ಅಡೆತಡೆ ಬಂದರೂ ಕನ್ನಡ ಬರಹ, ನಡೆ–ನುಡಿಗಳಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ದಾವಣಗೆರೆಯ ವಿಭಾಗದ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾಗಿ 10 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಶಾಂತಪ್ಪ ಅವರು ‘ವರ್ಷದ ಕನ್ನಡಿಗ’ ಎಂಬ ಪ್ರಶಸ್ತಿ ನೀಡುವ ಪರಂಪರೆಯನ್ನು ಆರಂಭಿಸಿದರು. 2019ರಲ್ಲಿ ನಿವೃತ್ತರಾದ ನಂತರ ದಾವಣಗೆರೆಯ ಚಿಕ್ಕನಹಳ್ಳಿ ಹೊಸಬಡಾವಣೆಯಲ್ಲಿ ನೆಲೆಸಿರುವ ಶಾಂತಪ್ಪ ಅವರು ಈಗ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದು ಅಲ್ಲಿಯೂ ಲೆಕ್ಕಾಚಾರವನ್ನು ಕನ್ನಡ ಅಂಕಿಗಳಲ್ಲೇ ಮುಂದುವರಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರುವ ಇವರು ಬಹುತೇಕ ಎಲ್ಲ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲೂ ಪಾಲ್ಗೊಂಡಿರುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT