ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಕೊಂಡಜ್ಜಿ, ಕೊಮಾರನಹಳ್ಳಿ ಕೆರೆ ಒಡಲು ಖಾಲಿ

ಹರಿಹರ: ಅನಾವೃಷ್ಟಿ, ಬಿರು ಬಿಸಿಲು; ರೈತರ ಜೊತೆ ಕಾಡು ಪ್ರಾಣಿ, ಪಕ್ಷಿಗಳಿಗೂ ಜಲ ಸಂಕಟ
Published 27 ಮಾರ್ಚ್ 2024, 6:24 IST
Last Updated 27 ಮಾರ್ಚ್ 2024, 6:24 IST
ಅಕ್ಷರ ಗಾತ್ರ

ಹರಿಹರ: ಕಳೆದ ವರ್ಷದ ಅನಾವೃಷ್ಟಿ, ಈಗಿನ ಬಿರು ಬಿಸಿಲಿನ ಪರಿಣಾಮ ನಗರ ಹಾಗೂ ಪಟ್ಟಣದ ವಾಸಿಗಳಿಗೆ ಕುಡಿಯುವ ನೀರಿಗೆ ತಾತ್ವಾರ ಉಂಟಾಗಿದೆ. ರೈತರು ಬೆಳೆ ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ. ಕಾಡು ಪ್ರಾಣಿಗಳು, ಪಕ್ಷಿಗಳ ಜೊತೆಗೆ ಅಸಂಖ್ಯಾತ ಜೀವಸಂಕುಲಕ್ಕೂ ಕುತ್ತು ಎದುರಾಗಿದೆ. 

ತಾಲ್ಲೂಕಿನ ಕಸಬಾ ಹೋಬಳಿಯ ಕೊಂಡಜ್ಜಿಯ ವಿಶಾಲ ಕೆರೆ ಮತ್ತು ಮಲೇಬೆನ್ನೂರು ಹೋಬಳಿಯ ಕೊಮಾರನಹಳ್ಳಿ ಕೆರೆಗಳು ಸುತ್ತಲಿನ ನಿವಾಸಿಗಳು, ರೈತರಷ್ಟೇ ಅಲ್ಲದೇ ಸುತ್ತಮುತ್ತಲ ಸಾವಿರಾರು ಎಕರೆ ಪ್ರದೇಶದಲ್ಲಿ ಹರಡಿರುವ ಅರಣ್ಯ ಪ್ರದೇಶದ ಸಹಸ್ರಾರು ಪ್ರಾಣಿ, ಪಕ್ಷಿಗಳ ಪಾಲಿಗೂ ಜೀವನಾಡಿಗಳಾಗಿವೆ. 

ಕೊಮಾರನಹಳ್ಳಿಯ ಕೆರೆ ಈಗಾಗಲೇ ಸಂಪೂರ್ಣವಾಗಿ ಒಣಗಿದೆ. ಕೊಂಡಜ್ಜಿ ಕೆರೆಯ ಒಡಲು ಬಹುತೇಕ ಬರಿದಾಗಿದೆ. ಉಳಿದಿರುವ ಅಲ್ಪ ಪ್ರಮಾಣದ ನೀರನ್ನೂ ಸಂಕಷ್ಟದಲ್ಲಿರುವ ರೈತರು ಟ್ಯಾಂಕರ್‌ಗಳ ಮೂಲಕ ಸಾಗಣೆ ಮಾಡುತ್ತಿದ್ದು, ಎಂಟತ್ತು ದಿನಗಳಲ್ಲಿ ಅದೂ ಖಾಲಿಯಾಗುವ ಸಾಧ್ಯತೆ ಇದೆ.

ಮಳೆಗಾಲ, ಚಳಿಗಾಲ, ಬೇಸಿಗೆ ಎನ್ನದೆ ವರ್ಷಪೂರ್ತಿ ತನ್ನೊಡಲೊಳಗೆ ಜೀವಜಲವನ್ನು ತುಂಬಿಕೊಂಡಿರುತ್ತಿದ್ದ ಈ ಎರಡೂ ಕೆರೆಗಳು ಈಗ ಖಾಲಿಯಾಗಿರುವುದು ಅಪಾಯಕ್ಕೆ ಮುನ್ಸೂಚನೆ ನೀಡಿದಂತಿದೆ. 

ಈ ಎರಡೂ ಕೆರೆಗಳ ಸುತ್ತಲಿನ ಅರಣ್ಯ ಭಾಗದಲ್ಲಿ, ಪ್ರಾದೇಶಿಕ ಅರಣ್ಯ ಇಲಾಖೆಯಿಂದ ನಾಲ್ಕು ಕೃತಕ ತೊಟ್ಟಿಗಳನ್ನು ನಿರ್ಮಿಸಿ ಅವುಗಳಲ್ಲಿ ಟ್ಯಾಂಕರ್ ನೀರು ತುಂಬಿಸಲಾಗುತ್ತಿದೆ.  

ಕೊಂಡಜ್ಜಿ ಕೆರೆಯ ಸುತ್ತಲೂ ದಟ್ಟ ಅರಣ್ಯವಿದೆ. ಈ ಕಾನನದಲ್ಲಿ ಜಿಂಕೆ, ನವಿಲು, ಮೊಲ, ಮುಂಗುಸಿ, ಕೆಂಪು ಮೂತಿಯ ಮುಸಿಯಾಗಳು, ಅಪಾರ ಪ್ರಬೇಧದ ಪಕ್ಷಿಗಳು, ವಿಶೇಷವಾಗಿ ಅಳಿವಿನಂಚಿನಲ್ಲಿರುವ ಚಿಟ್ಟೆಗಳು ಇವೆ.

ಕೊಮಾರನಹಳ್ಳಿ ಕೆರೆ ಸುತ್ತಲೂ ಸಹ್ಯಾದ್ರಿ ಅಂಚಿನ ಬೆಟ್ಟ, ಗುಡ್ಡಗಳಿದ್ದು, ಸಹಸ್ರಾರು ಎಕರೆ ಅರಣ್ಯ ಪ್ರದೇಶವಿದೆ. ಅಲ್ಲಿಯೂ  ವಿವಿಧ ಬಗೆಯ ಪ್ರಾಣಿ, ಪಕ್ಷಿಗಳ ಪ್ರಬೇಧಗಳು ನೆಲೆ ಕೊಂಡುಕೊಂಡಿವೆ.

ಜೀವ ಜಲವಿಲ್ಲದೆ ಬರಿದಾಗಿರುವ ಹರಿಹರ ತಾಲ್ಲೂಕಿನ ಕೊಂಡಜ್ಜಿ ಕೆರೆ
ಜೀವ ಜಲವಿಲ್ಲದೆ ಬರಿದಾಗಿರುವ ಹರಿಹರ ತಾಲ್ಲೂಕಿನ ಕೊಂಡಜ್ಜಿ ಕೆರೆ
ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಮೈದುಂಬಿದ್ದ ಕೊಂಡಜ್ಜಿ ಕೆರೆ
ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಮೈದುಂಬಿದ್ದ ಕೊಂಡಜ್ಜಿ ಕೆರೆ

ಈಚೆಗೆ ಕೊಂಡಜ್ಜಿ ಭಾಗದ ಅರಣ್ಯ ಪ್ರದೇಶದಲ್ಲಿ ಎರಡು ತೊಟ್ಟಿಗಳನ್ನು ನಿರ್ಮಿಸಿ ನೀರು ಹರಿಸಲಾಗಿದ್ದು ಕಾಡು ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಿದೆ

–ಮೊಹ್ಮದ್ ಖಾಲಿದ್ ಮುಸ್ತಫಾ ಡಿವೈಆರ್‌ಎಫ್‌ಒ ಹರಿಹರ

ಇನ್ನಷ್ಟು ಕೃತಕ ತೊಟ್ಟಿಗಳ ನಿರ್ಮಿಸಿ

ತಾಲ್ಲೂಕಿನ ಎರಡು ಬೃಹತ್ ಕೆರೆಗಳು ಒಣಗಿರುವುದು ರೈತರಿಗಷ್ಟೇ ಅಲ್ಲ ಅಪಾರ ಸಂಖ್ಯೆಯ ಕಾಡು ಪ್ರಾಣಿಗಳನ್ನೂ ಸಂಕಷ್ಟಕ್ಕೆ ದೂಡಿದೆ. ಅರಣ್ಯ ಇಲಾಖೆ ಹಾಗೂ ಆರ್ಥಿಕ ಶಕ್ತಿ ಇರುವ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಯವರು ಅರಣ್ಯ ಪ್ರದೇಶದಲ್ಲಿ ಇನ್ನಷ್ಟು ಕೃತಕ ತೊಟ್ಟಿಗಳನ್ನು ನಿರ್ಮಿಸಿದರೆ ಕಾಡು ಪ್ರಾಣಿ ಪಕ್ಷಿಗಳಿಗೆ ಜೀವ ದಾನ ಮಾಡಿದಂತಾಗುತ್ತದೆ. ಜಬಿಉಲ್ಲಾ ಚುಟ್ಗಿ ಜಿಲ್ಲಾ ಸಂಚಾಲಕ ಪರಿಸರಕ್ಕಾಗಿ ನಾವು ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT