ಗುರುವಾರ , ಫೆಬ್ರವರಿ 2, 2023
26 °C
ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚಿ ಸಂಭ್ರಮ

ಕೊರೆಗಾಂವ್‌ ವಿಜಯೋತ್ಸವ: ಮೂರು ಸಂಘಟನೆಗಳಿಂದ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: 205 ವರ್ಷಗಳ ಹಿಂದೆ ಪೇಶ್ವೆಯ ಸೈನ್ಯದ ವಿರುದ್ಧ ಅಸ್ಪೃಶ್ಯರ ಸೈನ್ಯವು ಜಯಗಳಿಸಿದ ನೆನಪಿಗಾಗಿ ಭೀಮ ಕೊರೆಗಾಂವ್‌ ವಿಜಯೋತ್ಸವವನ್ನು ವಿವಿಧ ಸಂಘಟನೆಗಳು ಭಾನುವಾರ ಅಂಬೇಡ್ಕರ್‌ ಸರ್ಕಲ್‌ನಲ್ಲಿ ಆಚರಿಸಿದವು. ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ. ಅಂಬೇಡ್ಕರ್‌ ವಾದ) ಮಾವಳ್ಳಿ ಶಂಕರ್‌ ಬಣದಿಂದ ಆರಂಭದಲ್ಲಿ ವಿಜಯೋತ್ಸವ ನಡೆಯಿತು. ಮಹಾನಗರ ಪಾಲಿಕೆ ಸದಸ್ಯ ಎಸ್‌.ಟಿ. ವೀರೇಶ್‌ ಮಾತನಾಡಿ, ‘ದೇಶದಾದ್ಯಂತ ಇಂದು ಕೊರೆಗಾಂವ್‌ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ. ಸ್ವಾಭಿಮಾನಕ್ಕಾಗಿ, ಗೌರವವಕ್ಕಾಗಿ ಈ ಹೋರಾಟ ನಡೆದಿತ್ತು. ಸಂವಿಧಾನ ರಚನೆಯ ಪೂರ್ವದಲ್ಲಿ ನಡೆದಿರುವ ಇಂಥ ಹೋರಾಟಗಳೇ ಉತ್ತಮ ಸಂವಿಧಾನ ನಿರ್ಮಾಣವಾಗಲು, ಜನರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ’ ಎಂದರು.

ಮೇಯರ್‌ ಜಯಮ್ಮ ಗೋಪಿನಾಯ್ಕ್‌, ಸಮಿತಿಯ ಜಿಲ್ಲಾಧ್ಯಕ್ಷ ಬಿ. ದುಗ್ಗಪ್ಪ, ಉಪಾಧ್ಯಕ್ಷ ನಾಗಪ್ಳರ ಮಂಜುನಾಥ್‌, ಬಿ. ಹನುಮಂತಪ್ಪ, ಹಾಲೇಶ್‌, ಬಸವರಾಜ ಮಾನೆ, ಆರ್‌. ಹನುಮಂತರಾಜ್‌, ಗೂಳಿ, ತಿಪ್ಪೇಶ್‌, ಪಂಜು, ಲಕ್ಷ್ಮಣ ಮತ್ತಿತರರು ಇದ್ದರು.

ಸಾಮಾಜಿಕ ಸಂಘರ್ಷ ಸಮಿತಿ: ಭೀಮಾ ನದಿಯ ದಡದಲ್ಲಿ ಕೋರೆಗಾಂವ್‌ ಎಂಬ ಸ್ಥಳದಲ್ಲಿ 2ನೇ ಬಾಜಿರಾಯನ ಕಾಲದಲ್ಲಿ ಆತನ ಸೈನ್ಯದ ವಿರುದ್ಧ ಸಿದ್ಧನಾಯ್ಕ ನೇತೃತ್ವದಲ್ಲಿ ಯುದ್ಧ ನಡೆದಿತ್ತು. ಪೇಶ್ವೆಯ ಸೈನ್ಯದಲ್ಲಿದ್ದ ಆಯುದ್ಧ ಇಲ್ಲದೇ ಇದ್ದರೂ ಸಿದ್ಧನಾಯ್ಕನ ಸೈನ್ಯವು ವೀರಾವೇಶದಿಂದ ಹೋರಾಡಿ ಜಯಗಳಿಸಿತ್ತು. 22 ಜನ ಭೀಮ ಸೈನಿಕರು ವೀರಮರಣ ಹೊಂದಿದ್ದರು. ಮೂಲ ಸೌಕರ್ಯಕ್ಕಾಗಿ ಪೇಶ್ವೆಗಳ ಮತ್ತು ಅಸ್ಪೃಶ್ಯರ ನಡುವೆ ನಡೆದ ಯುದ್ಧ ಎಂದು ಸಾಮಾಜಿಕ ಸಂಘರ್ಷ ಸಮಿತಿಯ ಮುಖಂಡರು ನೆನಪು ಮಾಡಿಕೊಂಡರು.

ಜಿಲ್ಲಾ ಅಧ್ಯಕ್ಷ ಪಿ. ತಿಪ್ಪೇರುದ್ರಪ್ಪ ಗಾಂಧಿನಗರ, ಗೌರವಾಧ್ಯಕ್ಷ ಬಿ.ಎನ್‌. ನಾಗೇಶ್‌, ಉಪಾಧ್ಯಕ್ಷ ಕೆ. ಕಾಳಪ್ಪ, ಮಂಜುನಾಥ ಪಿ.ಸಿ., ಪರಶುರಾಮ್‌, ಬಸವರಾಜ ಜಿ.ಸಿ. ಮತ್ತಿತರರಿದ್ದರು.

ಡಿಎಸ್‌ಎಸ್‌ನಿಂದ ಸನ್ಮಾನ: ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ (ಅಂಬೇಡ್ಕರ್‌ ವಾದ) ಭೀಮ ಕೋರೆಗಾಂವ್‌ ವಿಜಯೋತ್ಸವದ ಪ್ರಯುಕ್ತ ಸಫಾಯಿ ಕರ್ಮಚಾರಿಗಳನ್ನು ಸನ್ಮಾನಿಸಲಾಯಿತು.

ಗುಲಾಮರಾಗಿ ಬದುಕಲು ಹುಟ್ಟಿದವರು ಎಂದು ನಂಬಿಸಿ ಶತಮಾನಗಳಿಂದ ಶೋಷಣೆಗೆ ಈಡಾಗಿದ್ದ ಅಸ್ಪೃಶ್ಯರು ಬ್ರಿಟಿಷ್‌ ಸೈನ್ಯ ಸೇರಿ ಕೇವಲ 500 ಸೈನಿಕರು ಪೇಶ್ವೆಯ 30,000 ಸೈನಿಕರೊಡನೆ 1818ರ ಜನವರಿ 1ರಂದು ಯುದ್ಧ ಮಾಡಿ ವಿಜಯಿಗಳಾಗಿದ್ದರು. ಆದರೆ, ಇತಿಹಾಸದ ಪುಟಗಳಲ್ಲಿ ಇದು ಮರೆಯಾಗಿತ್ತು. ಅಂಬೇಡ್ಕರ್‌ ಅವರು ಬ್ರಿಟನ್‌ನಲ್ಲಿ ಓದುತ್ತಿದ್ದಾಗ ಅಲ್ಲಿನ ಮ್ಯೂಸಿಯಂನಲ್ಲಿ ಈ ದಾಖಲೆ ಇರುವುದನ್ನು ಕಂಡರು. ಹುತಾತ್ಮರಾಗಿದ್ದ ಸೈನಿಕರ ನೆನಪಿಗಾಗಿ ಬ್ರಿಟಿಷರು ಕೋರೆಗಾಂವ್‌ನಲ್ಲಿ ಸ್ಮಾರಕ ನಿರ್ಮಿಸಿದ್ದರು. 1927ರಿಂದ ಪ್ರತಿವರ್ಷ ಅಂಬೇಡ್ಕರ್‌ ಜ.1ರಂದು ಅಲ್ಲಿಗೆ ಹೋಗಿ ನಮನ ಸಲ್ಲಿಸುತ್ತಿದ್ದರು ಎಂದು ಸಮಿತಿಯ ರಾಜ್ಯ ಸಂಚಾಲಕ ಎಚ್‌. ಮಲ್ಲೇಶ್‌ ಹೇಳಿದರು.

ಜಿಲ್ಲಾ ಸಂಚಾಲಕರಾದ ಎಚ್‌.ಸಿ. ಮಲ್ಲಪ್ಪ, ಅಣ್ಣಪ್ಪ ತಣಿಗೆರೆ, ವೆಂಕಟೇಶ್‌ ಬಾಬು, ಅಣ್ಣಪ್ಪ ಕಸ್ತೂರಿ, ಲೋಕೇಶ್‌ ಜಿ.ಎಸ್‌., ಮಂಜುನಾಥ, ಮಾರಣ್ಣ, ಚನ್ನಬಸಪ, ಶಿವು, ಸಮಾದೆಪ್ಪ ಶಾಮನೂರು, ಟಿ. ಪ್ರಭು ಚೆನ್ನಪ್ಪ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.