ಭಾನುವಾರ, ಜೂನ್ 26, 2022
22 °C
2021ರ ಜೂನ್‌ಗೆ ಮುಗಿಯಬೇಕಿದ್ದ ಕಾಮಗಾರಿ 2022ರ ಜೂನ್‌ಗೆ ಮುಗಿಯುವುದೇ?

ದಾವಣಗೆರೆ: ವೇಗ ಪಡೆಯುವುದೇ ಕುಂದವಾಡ ಕೆರೆ ಕಾಮಗಾರಿ?

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವಿವಾದದ ಒಂದು ಸುತ್ತು ಮುಗಿದಿದೆ. ಒಮ್ಮೆ ಬ್ರೇಕ್‌ ಬಿದ್ದ ಕಾಮಗಾರಿ ಮತ್ತೆ ವೇಗ ಪಡೆದಿಲ್ಲ. ನಿಧಾನಗತಿಯಲ್ಲಿ ಸಾಗುತ್ತಿರುವ ಕೆಲಸ ವೇಗ ಪಡೆಯುವುದೇ, ಕುಂದವಾಡ ಕೆರೆ ಮತ್ತೆ ಜಲರಾಶಿ ತುಂಬಿಕೊಂಡು ನಳನಳಿಸುವುದೇ ಎಂಬ ಕುತೂಹಲದ ಪ್ರಶ್ನೆಗಳು ಎದುರಾಗಿವೆ.

₹ 15 ಕೋಟಿ ಅಂದಾಜು ವೆಚ್ಚದ ಈ ಕಾಮಗಾರಿ 2021ರ ಜೂನ್‌ ಒಳಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಬಫರ್‌ಜೋನ್‌ ಬಿಡಬೇಕು. ಸೈಕಲ್‌ಟ್ರ್ಯಾಕ್‌ ಮಾಡಬಾರದು ಎಂದು ಪರಿಸರಪ್ರೇಮಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಕಾಮಗಾರಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಸೈಕಲ್ ಟ್ರ್ಯಾಕ್‌ ಮಾಡಲ್ಲ. ಬಫರ್‌ಜೋನ್‌ ಸಂರಕ್ಷಿಸಲಾಗುವುದು ಎಂದು ಸ್ಮಾರ್ಟ್‌ ಸಿಟಿ ತಿಳಿಸಿದ ಕಾರಣ ತಡೆಯಾಜ್ಞೆಯನ್ನು ತೆರವುಗೊಳಿಸಿದರು. ಇಷ್ಟಾಗುವಾಗ ಬೇಸಿಗೆ ಕಾಲ ಮುಗಿದು ಮಳೆಗಾಲ ಆರಂಭವಾಯಿತು. ಬಹುತೇಕ ವರ್ಷದ ಕೊನೇ ತನಕ ಮಳೆ ಬರುತ್ತಲೇ ಇದ್ದಿದ್ದರಿಂದ ನಿರೀಕ್ಷಿತ ವೇಗ ಪಡೆದುಕೊಳ್ಳಲೇ ಇಲ್ಲ. ಇದೀಗ ಮೂರು ತಿಂಗಳಿನಿಂದ ಕಾಮಗಾರಿಗಳು ನಡೆಯುತ್ತಿವೆ. 2022ರ ಜೂನ್‌ ಅಂತ್ಯದೊಳಗೆ ಕಾಮಗಾರಿ ಮುಗಿಸುವ ಗಡುವು ಇಟ್ಟುಕೊಂಡಿದ್ದಾರೆ. ಈ ಅವಧಿಯಲ್ಲಾದರೂ ಮುಗಿಯುತ್ತಾ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ.

ಟಿ.ವಿ. ಸ್ಟೇಷನ್‌ ಕೆರೆ ಅಭಿವೃದ್ಧಿಯನ್ನು ಕಂಡಿಲ್ಲ. ವಾಯುವಿಹಾರಿಗಳಿಗೆ ಸರಿಯಾದ ಪಾತ್‌ ಇಲ್ಲ. ಕೆರೆ ಅಭಿವೃದ್ಧಿ ಮಾಡಬೇಕು ಎಂಬ ನಿಜವಾದ ಕಳಕಳಿ ಇದ್ದಿದ್ದರೆ ಅದನ್ನು ಮಾಡಬಹುದಿತ್ತು. ಇನ್ನೊಂದು ಕಡೆ ಬಾತಿಕೆರೆ ಇತ್ತು. ಅಲ್ಲಿನ ನೀರು ಕಲುಷಿತವಾಗಿಯೇ ಇದೆ. ಅದನ್ನು ಸ್ವಚ್ಛಗೊಳಿಸಬಹುದಿತ್ತು. ಅಭಿವೃದ್ಧಿಯನ್ನೇ ಕಾಣದ ಕೆರೆಗಳನ್ನು ಅಭಿವೃದ್ಧಿ ಪಡಿಸುವುದನ್ನು ಬಿಟ್ಟು ಅಭಿವೃದ್ಧಿ ಹೊಂದಿದ್ದ, ಕಳೆದ 17 ವರ್ಷಗಳಿಂದ ತನ್ನದೇ ಆದ ಬಯಾಲಾಜಿಕಲ್‌ ಕಲ್ಚರ್‌ ಬೆಳೆಸಿಕೊಂಡಿದ್ದ ಕುಂದವಾಡ ಕೆರೆಯನ್ನು ಮತ್ತೆ ಹಾಳುಗೆಡಹಿದ್ದೇ ತಪ್ಪು. ಇದೀಗ ಕಾಮಗಾರಿ ಕೂಡ ವೇಗವಾಗಿ ನಡೆಯುತ್ತಿಲ್ಲ ಎಂಬುದು ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ, ಪರಿಸರ ಪ್ರೇಮಿ, ಪಕ್ಷಿಪ್ರೇಮಿ ಡಾ.ಎಸ್. ಶಿಶುಪಾಲ ಅವರ ಅಸಮಾಧಾನವಾಗಿದೆ.

4.9 ಕಿಲೋಮೀಟರ್‌ ಸುತ್ತಳತೆಯ ಈ ಕೆರೆಯು 265 ಎಕರೆ ಭೂ ಪ್ರದೇಶವನ್ನು ಹೊಂದಿದೆ. ಕೆರೆ ಏರಿ ಎತ್ತರಿಸುವುದು, ವಿಸ್ತರಿಸುವುದು, ಒಳಮುಖದ ಇಳಿಜಾರಿನ ರಕ್ಷಣಕಾರ್ಯ (ರಿವಿಟ್‌ಮೆಂಟ್‌), ವಾಕಿಂಗ್‌ ಪಾಥ್‌ ರಚನೆ, ಸುಧಾರಣೆ, ಆರ್ಕಿಟೆಕ್ಚರಲ್‌ ಫೆನ್ಸಿಂಗ್‌, ಹೂವಿನ ಹಾಸಿಗೆಗಳ ನಿರ್ಮಾಣ, ಕಲ್ಲಿನ ಆಸನಗಳು, ಇತರ ಆಲಂಕಾರಿಕ  ಅಭಿವೃದ್ಧಿಗಳು, ಯು.ವಿ. ಸ್ಥಿರವಾದ ಪಾಲಿಥಿಲಿನ್‌, ಡಸ್ಟ್‌ಬಿನ್‌ ಅಳವಡಿಕೆ, ವಿದ್ಯುತ್‌ ಕಂಬ, ದೀಪ ಅಳವಡಿಕೆ, ಬೋರ್‌ವೆಲ್‌ ಅಳವಡಿಕೆ, ದ್ವೀಪದ ಅಭಿವೃದ್ಧಿ, ಗಿಡ ನೆಡುವುದು ಮುಂತಾದ ಕಾರ್ಯಗಳು ಇಲ್ಲಿ ಆಗಬೇಕು. ಅದರಲ್ಲಿ ಕೆರೆಯ ಹೂಳೆತ್ತುವ ಕೆಲಸ ಶೇ 90ರಷ್ಟು ಮುಗಿದಿದೆ. ರಿವಿಟ್‌ಮೆಂಟ್‌ ಬಹುತೇಕ ಪೂರ್ಣಗೊಂಡಿದೆ. ಎಲ್ಲ ಕೆಲಸಗಳು ಇನ್ನು ನಾಲ್ಕು ತಿಂಗಳಲ್ಲಿ ಮುಗಿಯಲಿದೆ ಎಂದು ಸ್ಮಾರ್ಟ್‌ ಸಿಟಿ ಅಸಿಸ್ಟೆಂಟ್‌ ಎಂಜಿನಿಯರ್‌ ಸಿದ್ದೇಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸೈಕಲ್‌ ಟ್ರ್ಯಾಕ್‌ ಬೋರ್ಡ್‌ ಅಷ್ಟೇ ಇಲ್ಲ

ಕುಂದವಾಡ ಕೆರೆ ಅಭಿವೃದ್ಧಿಯ ನೀಲನಕ್ಷೆಯಲ್ಲಿ ಸೈಕಲ್‌ ಟ್ರ್ಯಾಕ್‌ ಮಾಡುವ ಯೋಜನೆ ಇದ್ದಿದ್ದರಿಂದ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಸೈಕಲ್‌ ಟ್ರ್ಯಾಕ್‌ ಮಾಡುವುದಿಲ್ಲ ಎಂದು ಸ್ಮಾರ್ಟ್‌ ಸಿಟಿ  ತಿಳಿಸಿದ್ದರಿಂದ ತಡೆಯಾಜ್ಞೆ ತೆರವಾಗಿದೆ. ಆದರೆ ಈಗ ಕುಂದವಾಡ ಕೆರೆಯ ಏರಿಯಲ್ಲಿ ಸೈಕಲ್‌ ಟ್ರ್ಯಾಕ್‌ ಎಂಬ ಬೋರ್ಡ್‌ ಮಾತ್ರ ಇಲ್ಲ. ಉಳಿದಂತೆ ಎಲ್ಲವೂ ಇದೆ ಎಂದು ಪರಿಸರ ಪ್ರೇಮಿ
ಡಾ. ಎಸ್‌. ಶಿಶುಪಾಲ ತಿಳಿಸಿದ್ದಾರೆ.

ಕೆರೆಯ ಸುತ್ತ 30 ಅಡಿ ವಿಸ್ತಾರ ಮಾಡಲಾಗಿದೆ. ಅಂದರೆ ನೀರು ನಿಲ್ಲುವ ಜಾಗ 30 ಅಡಿಯಷ್ಟು ಕೆರೆಯ ಸುತ್ತಲೂ ಕಡಿಮೆಯಾಗಿದೆ. ಕೆರೆಯನ್ನು ಆಳ ಮಾಡಲಾಗುತ್ತಿದೆ ಎಂದು ಸಿದ್ಧ ಉತ್ತರ ನೀಡುತ್ತಾರೆ. ಹಿಂದೆ ಕುಂದವಾಡ ಕೆರೆ ಅಭಿವೃದ್ಧಿ ಎಂದು ಸಿಮೆಂಟ್‌ನ ಪ್ರಾಣಿಗಳನ್ನು ಸ್ಥಾಪಿಸಿದ್ದರು. ಈಗ ಅವೆಲ್ಲವನ್ನು ತೆಗೆದಿದ್ದಾರೆ. ಕೆಲವೇ ವರ್ಷಗಳ ಹಿಂದೆ ಜನರ ದುಡ್ಡಲ್ಲಿ ಇವೆಲ್ಲವನ್ನು ಮಾಡಲಾಗಿತ್ತು. ಇದೀಗ ಸಾರ್ವಜನಿಕರ ಹಣ ವ್ಯರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಾನಿಗಳು ಸಿಮೆಂಟ್‌ ಬೆಂಚ್‌ಗಳನ್ನು ನೀಡಿದ್ದರು. ಈಗ ಅದೆಲ್ಲವನ್ನು ಎತ್ತಿ ಸೈಡಿಗೆ ಹಾಕಲಾಗಿದೆ. ಅದನ್ನೇ ಸರಿಯಾಗಿ ಎತ್ತಿಟ್ಟು ಕಾಮಗಾರಿ ಮುಗಿದ ಬಳಿಕ ಮತ್ತೆ ಇಡುವ ಮೂಲಕ ವೆಚ್ಚ ಕಡಿಮೆ ಮಾಡಬಹುದಿತ್ತು. ದ್ವೀಪದಲ್ಲಿ ಜಾಲಿ ಬೆಳೆದಿದೆ. ಜೆಸಿಬಿಯಲ್ಲಿ ಕೆಲಸ ಮಾಡುವವರು ಹೇಗೆ ಬೇಕೋ ಹಾಗೆ ದ್ವೀಪದ ಸುತ್ತ ಮಣ್ಣೆತ್ತಿದ್ದಾರೆ. ಈ ದ್ವೀಪವೇ ಹಕ್ಕಿಗಳ ಮೊಟ್ಟೆ ಇಡುವ ಜಾಗವಾಗಿತ್ತು. ಇನ್ನು ಹಣ್ಣಿನ ಮರಗಳನ್ನು ಯಾವಾಗ ನೆಡುತ್ತಾರೋ? ಅವು ಬೆಳೆದು ಹಕ್ಕಿಗಳು ಕೂರುವಂತೆ ಆಗುವಾಗ ಇನ್ನೆಷ್ಟು ವರ್ಷಗಳು ಬೇಕೋ ಗೊತ್ತಿಲ್ಲ. ಅಭಿವೃದ್ಧಿಯ ಹೆಸರಲ್ಲಿ ಸಮೃದ್ಧ ಪರಿಸರವನ್ನು ಕೊಲೆ ಮಾಡಿದ್ದಂತು ಸತ್ಯ ಎಂಬುದು ಅವರ ಅಭಿಪ್ರಾಯ.

ಕಾಮಗಾರಿ ಅಸಮರ್ಪಕ

ಕುಂದವಾಡ ಕೆರೆಯಲ್ಲಿನ ಹೂಳು ಸಮರ್ಪಕವಾಗಿ ತೆಗೆಯುತ್ತಿಲ್ಲ. ಅಲ್ಲಲ್ಲಿ ಮಣ್ಣು ತೆಗೆದು ಹಾಗೆಯೇ ಬಿಡಲಾಗಿದೆ ಎಂದು ಸ್ಥಳೀಯರು, ವಾಯುವಿಹಾರಿಗಳು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಅವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಣ್ಣು ತೆಗೆದು ಹೊರ ಹಾಕುತ್ತಿಲ್ಲ. ಹೆಸರಿಗಷ್ಟೇ ಹೂಳೆತ್ತುವ ಕೆಲಸ ಮಾಡುತ್ತಿದೆ. ಚೆನ್ನಾಗಿ ಇದ್ದ ಕೆರೆ ಹಾಳು ಮಾಡಲಾಗುತ್ತಿದೆ. ಹೊಸ ಪರಿಕರ ಬಳಕೆ ಮಾಡಿಲ್ಲ. ಹಳೆಯ ಪರಿಕರಗಳನ್ನು ಬಳಕೆ ಮಾಡಲಾಗುತ್ತಿದೆ. ವಾಕಿಂಗ್ ಮಾಡಲು ಆಗದ ರೀತಿ‌ ಇದೆ. ಕಲ್ಲುಗಳನ್ನು ಅಳವಡಿಕೆ ಮಾಡಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ ಎಂಬುದು ಅವರ ಆರೋಪವಾಗಿದೆ.

ನಮ್ಮನ್ನು ದೂಷಿಸುವುದು ಬಿಟ್ಟು ಕೆಲಸ ಮಾಡಿ

ಬಫರ್‌ಜೋನ್‌ನಲ್ಲಿ ಕೆಲಸ ಮಾಡಬಾರದು, ಸೈಕಲ್‌ ಪಾತ್‌ ಬೇರೆ ಕಡೆ ಮಾಡಿ. ಅಲ್ಲಿ ಬೇಡ ಎಂದು ನ್ಯಾಯಾಲಯಕ್ಕೆ ನಮ್ಮ ತಂಡ ಹೋಗಿರುವುದು ಹೌದು ಅದಕ್ಕೆ ಸ್ಮಾರ್ಟ್‌ ಸಿಟಿಯವರು ಒಪ್ಪಿದ್ದರಿಂದ ಉಳಿದ ಕಾಮಗಾರಿ ನಡೆಸಲು ಅವಕಾಶ ಸಿಕ್ಕಿದೆ. ಮೂರು ತಿಂಗಳ ಸ್ಥಗಿತವನ್ನೇ ನೆಪವಾಗಿಟ್ಟುಕೊಂಡು, ದೂಷಿಸಿಕೊಂಡು ವರ್ಷಗಟ್ಟಲೆ ತಡಮಾಡುವುದು ಸರಿಯಲ್ಲ. ಕೂಡಲೇ ಕಾಮಗಾರಿ ನಡೆಸಬೇಕು. ಕಾರ್ಮಿಕರನ್ನು ಹೆಚ್ಚು ಮಾಡಿ, ರಾತ್ರಿ ಹಗಲು ಕೆಲಸ ಮಾಡಿ ಮುಗಿಸಬೇಕು. ನಾವು ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದೇವೆ.

-ಗಿರೀಶ್ ಎಸ್‌. ದೇವರಮನೆ, ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ

***

ಜೂನ್‌ ಅಂತ್ಯಕ್ಕೆ ಕಾಮಗಾರಿ ಮುಕ್ತಾಯ

ಕೆರೆಯ ಒಳಗಿನ ಕೆಲಸಗಳನ್ನು ಏಪ್ರಿಲ್‌ನಲ್ಲಿ ಮುಗಿಸಿ ಮೇಯಲ್ಲಿ ನೀರು ತುಂಬಿಸಲು ಅವಕಾಶ ನೀಡಬೇಕು ಎಂಬ ಗುರಿ ಇಟ್ಟುಕೊಂಡಿದ್ದೇವೆ. ಬಂಡ್‌ ಮೇಲಿನ ಕೆಲಸಗಳಷ್ಟೇ ಬಳಿಕ ನಡೆಯಲಿವೆ. ಫೆನ್ಸಿಂಗ್‌, ಹೂವಿನ ಹಾಸಿಗೆಗಳ ನಿರ್ಮಾಣ, ಕಲ್ಲಿನ ಆಸನಗಳು, ಇತರ ಅಲಂಕಾರಿಕ ಅಭಿವೃದ್ಧಿಗಳು, ಗಿಡ ನೆಡುವ ಕಾರ್ಯಗಳು ಇನ್ನಾಗಬೇಕು. ಅವೆಲ್ಲ ಮತ್ತೆರಡು ತಿಂಗಳಲ್ಲಿ ಮುಗಿಯಲಿವೆ.

ಕಳೆದ ವರ್ಷ ಕೆಲಸ ಮಾಡುವ ಬೇಸಿಗೆ ಕಾಲದಲ್ಲಿ ತಡೆಯಾಜ್ಞೆಯಿಂದ ಕೆಲಸ ಮಾಡಲು ಆಗಲಿಲ್ಲ. ತಡೆಯಾಜ್ಞೆ ತೆರವಾಗುವಾಗ ಮಳೆಗಾಲ ಆರಂಭವಾಯಿತು. ಕಳೆದ ವರ್ಷ ಮಳೆಗಾಲದ ಅವಧಿಯೂ ಹೆಚ್ಚಿದ್ದುದು ನಿಮಗೆಲ್ಲ ಗೊತ್ತಿದೆ. ಈ ಬಾರಿ ಮಳೆಗಾಲದ ಹೊತ್ತಿಗೆ ಉತ್ತಮ ಕೆರೆ ಸಾರ್ವಜನಿಕರ ಮುಂದೆ ಇರಲಿದೆ.

-ರವೀಂದ್ರ ಮಲ್ಲಾಪುರ, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು