ಭಾನುವಾರ, ಏಪ್ರಿಲ್ 5, 2020
19 °C
ಅಧಿಕಾರಿಗಳ ಕಣ್ಗಾವಲು ತಪ್ಪಿಸಿ ನಡೆಯಿತೇ ಕೋಣಬಲಿ, ಬೆತ್ತಲೆ ಬೇವಿನುಡುಗೆ?

ನಿಯಮ ಮೀರಿದವರ ವಿರುದ್ಧ ಕಾನೂನು ಕ್ರಮ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

ದಾವಣಗೆರೆ: ಕೋಣ ಬಲಿ ದೇವಸ್ಥಾನದಿಂದ ದೂರ ನಡೆದಿರಬಹುದು, ಆದರೆ ಬೆತ್ತಲೆ ಬೇವಿನುಡುಗೆ ದೇವಸ್ಥಾನದ ಒಳಗೇ ನಡೆದಿದೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸರ ಕಣ್ಗಾವಲು ತಪ್ಪಿಸಿ ಮೌಢ್ಯದ ಆಚರಣೆ ನಡೆದಿರುವುದು ಕಪ್ಪುಚುಕ್ಕೆಯಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಬರುವ 15ಕ್ಕೂ ಅಧಿಕ ಮಹಿಳಾ ಸಿಬ್ಬಂದಿ ಮೇಲ್ವಿಚಾರಣೆ ನಡೆಸುತ್ತಿದ್ದರು. ಅಲ್ಲಲ್ಲಿ ತಪಾಸಣೆಗಳೂ ಇದ್ದವು. ಜತೆಗೆ ಧ್ವನಿವರ್ಧಕದ ಮೂಲಕವೂ ಮೌಢ್ಯಾಚರಣೆ ಮಾಡದಂತೆ ಮಾಹಿತಿ ನೀಡಲಾಗುತ್ತಿತ್ತು. ಈ ಎಲ್ಲದ ನಡುವೆ ಮಹಿಳೆಯೊಬ್ಬರು ಬಟ್ಟೆ ಇಲ್ಲದೇ ಬೇವಿನುಡುಗೆ ತೊಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

‘ಎಷ್ಟು ಹೊತ್ತು ಬಡಿಗೆ ಹಿಡಿಕೊಂಡು ಕೂರಲು ಸಾಧ್ಯ? ಜನರಿಗೆ ಬುದ್ಧಿ ಬರುವುದು ಯಾವಾಗ?’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ದೇವಸ್ಥಾನದ ಆವರಣದಲ್ಲಿ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕೋಣಬಲಿ ನಡೆದಿಲ್ಲ. ಹೊರಗೆ ನಡೆದಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪೊಲೀಸ್‌ ವರಿಷ್ಠಾಧಿಕಾರಿ ಜತೆಗೆ ಮಾತನಾಡುತ್ತೇನೆ. ಒಂದು ವೇಳೆ ನಡೆದಿದ್ದರೆ ಕೋಣಬಲಿ ನೀಡಿದವರ ವಿರುದ್ಧ ಕ್ರಮಕೈಗೊಳ್ಳಲು ತಿಳಿಸುತ್ತೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಬೆತ್ತಲೆ, ಅರೆಬೆತ್ತಲೆಯಾಗಿ ಸೇವೆ ನಿಷೇಧಿಸಲಾಗಿದೆ. ಹಾಗಾಗಿ ಬೇವಿನುಡುಗೆಯ ಹರಕೆ ಹೊತ್ತವರು ಬಟ್ಟೆಯ ಮೇಲೆಯೇ ಬೇವಿನುಡುಗೆ ತೊಡಬೇಕು. ಕೈಯಲ್ಲಿ ಮೂರ್ನಾಲ್ಕು ಬೇವು ಹಿಡಿದುಕೊಂಡು ಸಾಂಕೇತಿಕವಾಗಿಯೂ ಹರಕೆ ಸಂದಾಯ ಮಾಡಬಹುದು ಎಂದು ನಾವು ಜಾಗೃತಿ ಮೂಡಿಸುತ್ತಲೇ ಬಂದಿದ್ದೇವೆ. ಜನ ಜಾಗೃತರಾಗಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ರಾತ್ರಿಯಿಂದ ಬೆಳಿಗ್ಗೆ ವರೆಗೆ ದೇವಸ್ಥಾನದಲ್ಲಿಯೇ ಇದ್ದು ಕಣ್ಣಿಡಲಾಗಿತ್ತು. ಆ ಹೊತ್ತಿಗೆ ಇದು ನಡೆದಿಲ್ಲ. ಬೆತ್ತಲೆ ಸೇವೆ ನಡೆದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸುತ್ತೇನೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ನಿನ್ನೆ ಸ್ವತಃ ನಾನೇ ತಪಾಸಣೆಗೆ ನಿಂತಿದ್ದೆ. ಎಎಸ್‌ಪಿ, ಡಿವೈಎಸ್‌ಪಿ ಕೂಡ ಇದ್ದರು. ನಮ್ಮ ಇಲಾಖೆಯ ಮಹಿಳಾ ಸಿಬ್ಬಂದಿ ಎಲ್ಲ ಕಡೆ ಕಾರ್ಯಾಚರಣೆ ಮಾಡುತ್ತಿದ್ದರು. ಬಹಳಷ್ಟು ಮಂದಿಯನ್ನು ಚೆಕ್‌ಪೋಸ್ಟ್‌ನ ಹೊರಗೆಯೇ ನಿಲ್ಲಿಸಿ ಅಲ್ಲಿಯೇ ಹರಕೆ ಮುಗಿಸಿ ವಾಪಸ್ಸಾಗುವಂತೆ ಮಾಡಲಾಗಿತ್ತು. ಇಂದು ಕೂಡ ಅದೇ ರೀತಿಯ ಕಣ್ಗಾವಲು ಇಡಲಾಗಿತ್ತು. ಆದರೂ ಲಕ್ಷಾಂತರ ಜನ ಬರುತ್ತಿರುವಾಗ ಒಂದೇನೋ ಕಣ್ಣು ತಪ್ಪಿ ಆಗಿರಬೇಕು. ಆಗಿರುವುದು ಹೌದಾ ಎಂದು ಪರಿಶೀಲನೆ ನಡೆಸಲಾಗುವುದು. ಆಗಿದ್ದರೆ ಈ ಬಗ್ಗೆ ಏನು ಕ್ರಮ ಕೈಗೊಳ್ಳುವುದು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜತೆ ಚರ್ಚೆ ಮಾಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ತಿಳಿಸಿದ್ದಾರೆ.

‘ನಾವು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ ಜನರು ಬದಲಾಗದೇ ಇದ್ದರೆ ಮೌಢ್ಯ ನಿಲ್ಲಿಸಲು ಸಾಧ್ಯವಿಲ್ಲ. ಅಧಿಕಾರಿಗಳ ಜತೆಗೆ ಜನರೇ ವಾದಕ್ಕೆ ನಿಂತು ಬಿಡುತ್ತಾರೆ. ಹಾಗಾದರೆ ಜಾತ್ರೆಯೂ ಮೌಢ್ಯವೇ ಎಂದು ಪ್ರಶ್ನಿಸುತ್ತಾರೆ. ಅವರ ಹರಕೆ ಸಂದಾಯ ಮಾಡಲಿ. ಆದರೆ ಬೆತ್ತಲೆ, ಅರೆಬೆತ್ತಲೆಯಾಗಿ ಹರಕೆ ಸಂದಾಯ ಮಾಡಬಾರದು’ ಎನ್ನುತ್ತಾರೆ ಅವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು