ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪರ ಚಳವಳಿ‌ ರಾಜಕೀಯ ಹೋರಾಟವಾಗಲಿ

ಪ್ರಗತಿಪರ ಚಿಂತಕರ ಸಮಾಲೋಚನಾ ಸಭೆಯಲ್ಲಿ ಕೃಷಿ ತಜ್ಞ ಡಾ. ಪ್ರಕಾಶ್‌ ಕಮ್ಮರಡಿ ಸಲಹೆ
Last Updated 4 ಸೆಪ್ಟೆಂಬರ್ 2021, 3:45 IST
ಅಕ್ಷರ ಗಾತ್ರ

ದಾವಣಗೆರೆ: ‘ಜನಪರ ಚಳವಳಿಗಳು ರಾಜಕೀಯ ಹೋರಾಟ ಆಗಬೇಕಿದೆ. ದೇಶದಲ್ಲಿ ರಾಜಕೀಯ ಬದಲಾವಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ’ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ, ಕೃಷಿ ತಜ್ಞ ಡಾ. ಪ್ರಕಾಶ್‌ ಕಮ್ಮರಡಿ ಹೇಳಿದರು.

ಇಲ್ಲಿನ ರೋಟರಿ ಬಾಲಭವನದ ಬಳಿಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ‘ಚಳವಳಿಗಳು ಚುನಾವಣೆ ಮೇಲೆ ಏಕೆ ಪರಿಣಾಮ ಬೀರುತ್ತಿಲ್ಲ’ ಎಂಬ ವಿಷಯದ ಕುರಿತು ನಡೆದ ಪ್ರಗತಿಪರ ಚಿಂತಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

‘ಚುನಾವಣೆಯಲ್ಲಿ ರೈತನಾದವನು ತಾನು ರೈತ ಎಂಬುದನ್ನು ಮರೆಯುತ್ತಾನೆ. ಜಾತಿ ಮುನ್ನೆಲೆಗೆ ಬರುತ್ತದೆ. ಚುನಾವಣೆ ಸಂದರ್ಭದಲ್ಲಿ ರೈತರೊಳಗಿನ ಜಾತಿ ಪ್ರಜ್ಞೆಯನ್ನು ಎತ್ತಿಕಟ್ಟಿ ರಾಜಕೀಯ ಪಕ್ಷಗಳು ಲಾಭ ಪಡೆಯುತ್ತಿವೆ. ಧರ್ಮದ ಪ್ರಜ್ಞೆ ಜಾಗೃತಗೊಳಿಸುತ್ತಿವೆ. ಇಲ್ಲಿಯವರೆಗಿನ ಎಲ್ಲ ಪಕ್ಷಗಳು ಇದನ್ನೇ ಮಾಡಿವೆ. ಇದು ಬದಲಾಗಬೇಕಿದೆ. ನಾವು ರೈತರಾಗಿಯೇ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.

‘ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿ ವಿಶ್ವದಲ್ಲೇ ದೊಡ್ಡ ಘಟನೆ. ರೈತರು ಹೋರಾಟವನ್ನು ಜಾತ್ರೆಯಂತೆ ಸಂಭ್ರಮಿಸುತ್ತಿರುವುದು ವಿಶೇಷ. ಆದರೆ ಆಳುವ ಸರ್ಕಾರ ಇದನ್ನು ಕಡೆಗಣಿಸಿ ರುವುದು ಖಂಡನೀಯ’ ಎಂದರು.

‘ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಜನರು ಹಸಿವಿನಿಂದ ಸಾಯುವ ಸ್ಥಿತಿ ಇದೆ. ಜನತಂತ್ರದಲ್ಲಿ ಎಲ್ಲದಕ್ಕೂ ಹೋರಾಟ ಮಾಡುವ ಪರಿಸ್ಥಿತಿ ಇದೆ. ಅಮೆರಿಕದಲ್ಲಿ 20 ಜನರಿಗೆ ಸಮಸ್ಯೆ ಆದರೂ ಅದಕ್ಕೆ ಎಲ್ಲೆಡೆ ಸ್ಪಂದನ ಸಿಗುತ್ತದೆ. ಸರ್ಕಾರ ತಕ್ಷಣ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡುತ್ತದೆ. ಆದರೆ ನಮ್ಮ ದೇಶದಲ್ಲಿ ಸಾವಿರಾರು ರೈತರು ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಸರ್ಕಾರ ಸುಮ್ಮನೆ ಕುಳಿತಿದೆ’ ಎಂದು ಆರೋಪಿಸಿದರು.

‘ಹಿಂದೆ ಹಣ, ಜಾತಿಯಡಿ ಚುನಾವಣೆ ನಡೆಯುತ್ತಿದ್ದರೂ ಅದು ಗೌಣವಾಗುತ್ತಿತ್ತು. ಆದರೆ ಇಂದು ಅದೇ ಮಾನದಂಡವಾಗಿದೆ’ ಎಂದು ವಿಷಾದಿಸಿದರು.

‘ಕೃಷಿ ಕಾಯ್ದೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಯಬೇಕಿದೆ. ಇದರ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕಿದೆ. ಹೊಸ ರಾಜಕೀಯ ಮನ್ವಂತರಕ್ಕೆ ನಾವೆಲ್ಲ ಅಣಿಯಾಗಬೇಕಿದೆ. ಇಂತಹ ಚರ್ಚೆ, ಚಿಂತನೆ ರಾಜ್ಯದೆಲ್ಲೆಡೆ ನಡೆಯಬೇಕಿದೆ’ ಎಂದು ಹೇಳಿದರು.

‘ಅಪ್ನಾ ಭಾರತ್‌ ಮೋರ್ಚಾ’ ಎಂಬ ಸಂಘಟನೆಯಡಿ ದೇಶದಲ್ಲಿ ಪರ್ಯಾಯ ರಾಜಕಾರಣದ ಚಿಂತನೆ ನಡೆಯುತ್ತಿದ್ದು, ಅದರ ಭಾಗವಾಗಿ ಈ ಸಭೆ ನಡೆಯುತ್ತಿದೆ’ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ, ‘ಇಂತಹ ಚರ್ಚೆ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಗ್ರಾಮ ಹಾಗೂ ತಾಲ್ಲೂಕು ಪಂಚಾಯಿತಿ, ಹಾಲು ಉತ್ಪಾದಕರ ಸಂಘದಂತಹ ಚುನಾವಣೆಗೆ ಸ್ಪರ್ಧಿಸಿ ಸೋತವರನ್ನು ಒಂದೆಡೆ ಸೇರಿಸಿ ‘ಸೋತವರ ಸಮಾವೇಶ’ ಮಾಡಬೇಕಿದೆ. ಅವರ ಸಲಹೆ ಪಡೆದು ಚರ್ಚೆ ಮಾಡಬೇಕಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರೈತ ಸಂಘ (ಹುಚ್ಚವ್ವನಹಳ್ಳಿ ಮಂಜುನಾಥ ಬಣ)ದ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ‘ಚಳವಳಿ ಹಾಗೂ ಚುನಾವಣೆ ನಿರಂತರವಾಗಿ ನಡೆಯಬೇಕಿದೆ. ಸಹಕಾರ ಸಂಘ ಸೇರಿ ಎಲ್ಲ ಚುನಾವಣೆಗಳು ಚಳವಳಿ ಮೂಲಕ ನಡೆಯಬೇಕಿದೆ’ ಎಂದರು.

ರೈತ ಮುಖಂಡ ತೇಜಸ್ವಿ ಪಟೇಲ್‌ ನೇತೃತ್ವ ವಹಿಸಿದ್ದರು. ಪ್ರಗತಿಪರ ಚಿಂತಕರಾದ ಎ.ಬಿ. ರಾಮಚಂದ್ರಪ್ಪ, ಮಲ್ಲಿಕಾರ್ಜುನ ಕಡಕೋಳ, ಕಲೀಂ ಪಾಷಾ, ಪೂಜಾರ್‌ ಅಂಜನಪ್ಪ, ಇಂತಿಯಾಜ್‌ ಹುಸೇನ್‌, ಅನಿಸ್‌ ಪಾಷಾ, ಎಚ್‌.ಕೆ. ಕೊಟ್ರಪ್ಪ, ರುದ್ರಮುನಿ, ರೂಪ್ಲಾ ನಾಯ್ಕ್‌, ಶ್ರೀನಿವಾಸ್‌, ತಿಪ್ಪೇಸ್ವಾಮಿ ಸೇರಿ ವಿವಿಧ ರೈತ, ಕಾರ್ಮಿಕ ಸಂಘಟನೆಗಳ ಮುಖಂಡರು ಇದ್ದರು.

ಕರೆನ್ಸಿ ಬೆಲೆ ಗೊತ್ತಿದೆ, ಸಂವಿಧಾನದ ಬೆಲೆ ಅರಿವಿಲ್ಲ:

ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ಮುಖಂಡ ತೇಜಸ್ವಿ ಪಟೇಲ್‌, ‘ಪ್ರಗತಿಪರ, ಜನಪರ ಚಳವಳಿಗಳು ಚುನಾವಣೆ ಸಂದರ್ಭದಲ್ಲಿ ಏಕೆ ಗೌಣವಾಗುತ್ತವೆ ಎಂಬು
ದರ ಬಗ್ಗೆ ಚಿಂತನೆ ಅಗತ್ಯ. ಅದರ ಭಾಗವಾಗಿ ಸಭೆ ಹಮ್ಮಿಕೊಳ್ಳಲಾಗಿದೆ. ಮತ ದಾನದ ವೇಳೆ ಕರೆನ್ಸಿ ಬೆಲೆ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಸಂವಿಧಾನದ ಬೆಲೆ ಏಕೆ ಗೊತ್ತಿರುವುದಿಲ್ಲ’ ಎಂದು ಪ್ರಶ್ನಿಸಿದರು.

‘ಚುನಾವಣೆಯಲ್ಲಿ ವೃತ್ತಿಯೂ ಪ್ರಮುಖವಾಗಬೇಕು. ಆದರೆ, ಜಾತಿ ಪ್ರಾಮುಖ್ಯತೆ ಪಡೆಯುತ್ತಿದೆ. ಮಠಾಧೀಶರೂ ಚುನಾವಣೆ ಮೇಲೆ ಪ್ರಭಾವ ಬೀರುತ್ತಾರೆ. ಆದರೆ, ಸಂಘಟನೆಗಳ ಮುಖಂಡರಿಗೆ ಪ್ರಭಾವ ಬೀರಲು ಸಾಧ್ಯ ವಾಗುತ್ತಿಲ್ಲ. ಚುನಾವಣೆ ಬಳಿಕ ಪಕ್ಷ, ಸರ್ಕಾರ ಬದಲಾಗುತ್ತದೆ. ಆದರೆ, ಆಡಳಿತದ ವೈಖರಿ ಬದಲಾಗದಿರುವುದು ವಿಪರ್ಯಾಸ. ಬದಲಾವಣೆ ಯಾವ ರೀತಿ ಆಗಬೇಕಿದೆ ಎಂಬುದರ ಚಿಂತನೆ ಅಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT