ಮಂಗಳವಾರ, ಜೂನ್ 15, 2021
24 °C
ಅನಗತ್ಯವಾಗಿ ರಸ್ತೆಗಿಳಿದ ವಾಹನಗಳ ಜಪ್ತಿ, ಪ್ರಮುಖ ವೃತ್ತಗಳಲ್ಲಿ ಪೊಲೀಸರಿಂದ ನಾಕಾಬಂದಿ

ದಾವಣಗೆರೆ: ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ 14 ದಿನಗಳ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಜನರು ಉತ್ತಮವಾಗಿ ಸ್ಪಂದಿಸಿದರು.

ಬೆಳಿಗ್ಗೆ 6ರಿಂದ 10 ಗಂಟೆ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಜನರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ದಿನಸಿ ಖರೀದಿಸಿದರು. ಕೆಲವರು ಮಾಸ್ಕ್ ಧರಿಸಿದ್ದು ಬಿಟ್ಟರೆ ಅಂತರ ಮಾಯವಾಗಿತ್ತು. ಬೆಳಿಗ್ಗೆ 10 ಗಂಟೆಯ ಬಳಿಕ ಅಂಗಡಿ ಮಾಲೀಕರು ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿದರು.

ನಗರದ ಜಯದೇವ ಸರ್ಕಲ್, ಗುಂಡಿ ಸರ್ಕಲ್, ಅಂಬೇಡ್ಕರ್ ವೃತ್ತ, ಗಾಂಧಿ ಸರ್ಕಲ್‌ಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಅನಗತ್ಯವಾಗಿ ಸಂಚರಿಸುವವರಿಗೆ ಪೊಲೀಸರು ತಡೆಯೊಡ್ಡಿದರು. ಪ್ರಮುಖ ವೃತ್ತಗಳಲ್ಲಿ ಪೊಲೀಸರು ನಾಕಾಬಂದಿ ಹಾಕಿದ್ದರು. 

ತರಕಾರಿ, ದಿನಸಿ, ಹೂವು-ಹಣ್ಣು ತರಲು ಬಂದವರು, ಕಟ್ಟಡ ಕೆಲಸಗಾರರು, ಬೆಸ್ಕಾಂ, ನಗರಪಾಲಿಕೆ, ಹಾಲಿನ ವರ್ತಕರು, ಕೈಗಾರಿಕಾ ಉದ್ಯೋಗಿಗಳು ಹೀಗೆ ಯಾವ ವರ್ಗಗಳನ್ನು ಬಿಡದೆ ದಾಖಲೆಗಳನ್ನು ಕೇಳುತ್ತಿದ್ದರು. ಸ್ಪಷ್ಟ ಉತ್ತರ ಬಾರದಿದ್ದಾಗ ಬೈಕ್ ಪಕ್ಕಕ್ಕಿರಿಸಿ ಕೀಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿದರು.

ಗಡಿಯಾರ ಕಂಬ, ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ನೆಲದ ಮೇಲೆ ಕೂತು ತರಕಾರಿ ವ್ಯಾಪಾರ ಮಾಡುತ್ತಿದ್ದವರನ್ನು ಪೊಲೀಸರು ತೆರವುಗೊಳಿಸಿದರು. ತಳ್ಳುಗಾಡಿಯಲ್ಲೇ ವ್ಯಾಪಾರ ಮಾಡುವಂತೆ ಧ್ವನಿವರ್ಧಕಗಳಲ್ಲಿ ತಿಳಿ ಹೇಳಿದರು.

ಜಿಲ್ಲಾ ಗಡಿಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಆಂಬುಲೆನ್ಸ್, ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ರಸ್ತೆಗಿಳಿದ ತಹಶೀಲ್ದಾರ್: ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರು ರಸ್ತೆಗೆ ಇಳಿದು, ಅನವಶ್ಯಕವಾಗಿ ಓಡಾಡುತ್ತಿದ್ದವರಿಗೆ ದಂಡ ವಿಧಿಸಿದರು. ನಗರದ ಜಯದೇವ ಸರ್ಕಲ್‌ನಲ್ಲಿ ದಾಖಲೆ ನೀಡದ 15 ವಾಹನಗಳ ಜಪ್ತಿ ಮಾಡಿದರು.
ಮೇಯರ್ ಎಸ್.ಟಿ. ವೀರೇಶ್ ಅವರೂ ಸಾಥ್ ನೀಡಿದರು.

ತಹಶೀಲ್ದಾರ್ ಬಿ.ಎನ್. ಗಿರೀಶ್ ಮಾತನಾಡಿ, ‘ರಾಜ್ಯ ಸರ್ಕಾರದ ಅದೇಶವನ್ನು ಪಾಲನೆ ಮಾಡಬೇಕು ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಕೋವಿಡ್ ಎಷ್ಟು ಗಂಭೀರವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಕೆಲವರು ಹಳೆಯ ಮೆಡಿಕಲ್ ಚೀಟಿಗಳನ್ನು ತಂದು ತೋರಿಸಿ ಹೋಗುತ್ತಿದ್ದಾರೆ. ಮನೆಯಲ್ಲಿ ನಿಮ್ಮನ್ನೇ ನಂಬಿಕೊಂಡು ನಿಮ್ಮ ಕುಟುಂಬ ಇರುತ್ತದೆ. ಅದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು. 

‘ಕೋವಿಡ್ ಲಸಿಕೆ ಪಡೆಯಲು ಹೋಗುತ್ತೇವೆ ಎಂದು ಕೆಲವರು ಹೊರಗಡೆ ಬರುತ್ತಿದ್ದು, ಬಹಳಷ್ಟು ಜನರಿಗೆ ಕೋವಿಡ್ ಗಂಭೀರತೆ ಅರ್ಥ
ವಾಗುತ್ತಿಲ್ಲ. ನಾಳೆಯಿಂದಲೇ ಪಾಲಿಕೆಯಿಂದ ಜಾಗೃತಿ ಮೂಡಿಸಲಾಗುವುದು‘ ಎಂದು ಮೇಯರ್ ಎಸ್‌.ಟಿ. ವೀರೇಶ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು