ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಪ್ರಚಾರಕ್ಕೆ ದಾವಣಗೆರೆ ಜಿಲ್ಲೆಗೆ ದೇವೇಗೌಡ ಆಗಮನ: ಸಂಸದ ಸಿದ್ದೇಶ್ವರ

ಬಿಜೆಪಿ–ಜೆಡಿಎಸ್ ಮುಖಂಡರ ಸಭೆಯ ಬಳಿಕ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿಕೆ
Published 1 ಏಪ್ರಿಲ್ 2024, 7:24 IST
Last Updated 1 ಏಪ್ರಿಲ್ 2024, 7:24 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯಮಟ್ಟದಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಒಟ್ಟಾಗಿ ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಮತಯಾಚಿಸಲು ಮುಂದಾಗಿದ್ದಾರೆ.

ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಅವರ ನಿವಾಸದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ. ಬಿಜೆಪಿ ಮುಖಂಡರು ಜೆಡಿಎಸ್ ಮುಖಂಡರನ್ನು ಕಡೆಗಣಿಸಿದ್ದಾರೆ ಎನ್ನುವ ನಿಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡರು ಮುನಿಸಿಕೊಂಡಿದ್ದರು.

ಈ ನಿಟ್ಟಿನಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಮುರುಗೇಶ ನಿರಾಣಿ, ಹರಿಹರ ಶಾಸಕ ಬಿ.ಪಿ.ಹರೀಶ್ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ನಾಗಪ್ಪ ಭೇಟಿ ನೀಡಿ ಮುಖಂಡರ ಜೊತೆ ಸಭೆ ನಡೆಸಿದರು.

ಪ್ರಚಾರಕ್ಕೆ ದೇವೇಗೌಡ ಆಗಮನ

‘ದೇಶದ ಹಿತದೃಷ್ಟಿಯಿಂದ ಬಿಜೆಪಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಮೈತ್ರಿಕೂಟದ ಅಭ್ಯರ್ಥಿ ಗೆಲ್ಲಿಸಲು ಜೆಡಿಎಸ್ ಕಾರ್ಯಕರ್ತರು ಹುಮ್ಮಸ್ಸಿನಲ್ಲಿ ಇದ್ದಾರೆ. ತುಮಕೂರು, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಾರ ಮಾಡಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಗಮಿಸಲಿದ್ದಾರೆ’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು. 

‘ಬೆಂಗಳೂರಿನಲ್ಲಿ ಈಚೆಗೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಬಿ.ಪಿ.ಹರೀಶ್ ಹಾಗೂ ಎಚ್.ಎಸ್.ಶಿವಶಂಕರ್ ಪಾಲ್ಗೊಂಡಿದ್ದಾರೆ. 8 ಕ್ಷೇತ್ರಗಳ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಸೇರಿ ಗಾಯಿತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸುವ ಭರವಸೆ ನೀಡಿದ್ದು, ಇದರಿಂದ ನಮಗೆ ಆನೆಬಲ ಬಂದಂತಾಗಿದೆ. ಜನಸೇವೆ ಮಾಡುವ ಅವಕಾಶವನ್ನು ನೀಡುತ್ತಾರೆ ಎಂಬ ಭರವಸೆ ಇದೆ’ ಎಂದು ಹೇಳಿದರು. 

‘ದಿವಂಗತ ಮಲ್ಲಿಕಾರ್ಜುನಪ್ಪ ಕುಟುಂಬದವರು ಈ ಕ್ಷೇತ್ರವನ್ನು 6 ಬಾರಿ ಪ್ರತಿನಿಧಿಸಿ ಅಭಿವೃದ್ಧಿ ಮಾಡುವುದರ ಜೊತೆಗೆ ಜನರ ಜೊತೆ ಬೆರೆತಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಹಾಗೂ ವೈಯಕ್ತಿಯವಾಗಿ ಸಾಕಷ್ಟು ತೊಂದರೆಗಳು ಆಗಿದ್ದು, ಎಲ್ಲವನ್ನೂ ಎದುರಿಸಲು ಸಿದ್ಧರಿದ್ದೇವೆ’ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು.

‘ಕುಟುಂಬ ರಾಜಕಾರಣದ ಬಗ್ಗೆ ಅನೇಕರು ಮಾತನಾಡಿದ್ದಾರೆ. ಜಿಲ್ಲೆಯಲ್ಲೂ ನೋಡುತ್ತಿದ್ದೇವೆ. ಆದರೆ ಕುಟುಂಬ ರಾಜಕಾರಣ ಪ್ರಶ್ನೆಯಲ್ಲ. ಪ್ರಾಮಾಣಿಕವಾಗಿ ಜನಸೇವೆ ಮಾಡುವವರನ್ನು ಗೆಲ್ಲಿಸುವ ಸನ್ನಿವೇಶ ನಮ್ಮ ಮುಂದಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳು ಹುಸಿಯಾಗಿವೆ. ಜಿಲ್ಲೆಯಲ್ಲಿ ಎಲ್ಲರೊಟ್ಟಿಗೆ ಬೆರೆಯುವ ಜಿ.ಮಲ್ಲಿಕಾರ್ಜುನಪ್ಪ ಕುಟುಂಬ ಬೇಕೆ, ಮತ್ತೊಂದು ಕುಟುಂಬ ಬೇಕೆ? ಎಂದು ಪ್ರಶ್ನಿಸಿದರು.

‘ರಿಪಬ್ಲಿಕ್ ಬಳ್ಳಾರಿ ರೀತಿಯಲ್ಲಿ ದಾವಣಗೆರೆ ರಿಪಬ್ಲಿಕ್ ಆಫ್ ಬಳ್ಳಾರಿ ಆಗುತ್ತಿದೆ. ಇದನ್ನು ತಡೆಯಬೇಕಿದೆ’ ಎಂದರು.

‘ಕ್ಷೇತ್ರದಲ್ಲಿ ಹಿರಿಯರು ಬಾಯಿತಪ್ಪಿ ಮಾತನಾಡಿರಬಹುದು. ಈ ಮಾತನ್ನು ಅನಿಸಿಕೊಂಡವರು ದೊಡ್ಡವರಾಗುತ್ತಾರೆ. ನಮ್ಮ ಪಕ್ಷದ ಮುಖಂಡರು ಸುಮಲತಾ ಅವರನ್ನು ಟೀಕಿಸಿದಾಗ ಸೆರಗೊಡ್ಡಿ ಬೇಡಿದರು. ಇದು ಸುಮಲತಾ ಅವರಿಗೆ ವರದಾನವಾಯಿತು. ಅದೇ ರೀತಿ ದಾವಣಗೆರೆಯಲ್ಲೂ ಆಗುತ್ತದೆ’ ಎಂದು ಶಿವಶಂಕರ್ ಹೇಳಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಚಿದಾನಂದಪ್ಪ, ಕಾರ್ಯದರ್ಶಿ ಅಮಾನುಲ್ಲಾ ಖಾನ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್, ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಮುಖಂಡ ಶ್ರೀನಿವಾಸ ದಾಸಕರಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT