ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯ ಹಂಬಲಕ್ಕೆ ತಡೆಗೋಡೆಯಾದ ಗಂಡಸೆಂಬ ಅಹಂಕಾರ

ವಾಲ್ಮೀಕಿ ಜಾತ್ರೆಯ ಶಬರಿ ಮಹಿಳಾ ಜಾಗೃತಿ ಸಮಾವೇಶದಲ್ಲಿ ಡಾ. ಮಲ್ಲಿಕಾ ಘಂಟಿ ಬೇಸರ
Last Updated 8 ಫೆಬ್ರುವರಿ 2021, 17:05 IST
ಅಕ್ಷರ ಗಾತ್ರ

ರಾಜನಹಳ್ಳಿ (ಹರಿಹರ): ‘ಗಂಡಸು ಎಂಬ ಅಹಂಕಾರ ಮಹಿಳೆಯ ವಿದ್ಯೆ, ನೌಕರಿ, ಸಂಬಳವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ವೈದಿಕಶಾಹಿಗಳು ಶೋಷಿತ ಸಮಾಜದವರ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡಿಕೊಂಡು ಬಂದಂತೆ, ಗಂಡಸರೂ ಹೆಣ್ಣುಮಕ್ಕಳು ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಎಸ್‌. ಘಂಟಿ ಬೇಸರ ವ್ಯಕ್ತಪಡಿಸಿದರು.

ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಸೋಮವಾರ ಆರಂಭಗೊಂಡ ಎರಡು ದಿನಗಳ ಮೂರನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ರಾಜ್ಯ ಮಟ್ಟದ ಮಾತೆ ಶಬರಿ ಮಹಿಳಾ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವೈದಿಕಶಾಹಿ ವಿರುದ್ಧ ಹೋರಾಡಿದ ಬುದ್ಧ, ಅಂಬೇಡ್ಕರ್‌ ವಿಚಾರಗಳನ್ನು ಅರಿತುಕೊಳ್ಳದೇ ಇರುವುದರಿಂದ ನಾವು ಮತ್ತೆ ಮತ್ತೆ ಶೋಷಣೆಗೆ ಒಳಗಾಗುತ್ತಿದ್ದೇವೆ. ಪುರುಷರು ನಮ್ಮ ಬಾಯಿಗೆ ಹಾಕಿರುವ ಬೀಗವನ್ನು ತೆಗೆದು ಹಾಕಬೇಕು. ವಾಲ್ಮೀಕಿ ಜಾತ್ರೆಯಲ್ಲಿ ಅಕ್ಷರವನ್ನು ಹಂಚುವ ಕೆಲಸವನ್ನು ಸ್ವಾಮೀಜಿ ಮಾಡಬೇಕು’ ಎಂದು ಸಲಹೆ ನೀಡಿದರು.

‘ಮುಂದೆ ಬರಬೇಕು ಎಂಬ ಮಹಿಳೆಯರ ಹಂಬಲಕ್ಕೆ ಪುರುಷ ಸಮಾಜ ನಿರ್ಮಿಸುತ್ತಿರುವ ತಡೆಗೋಡೆಗಳನ್ನು ಒಡೆಯಬೇಕಾಗಿದೆ. ಅಂದಿನ ರಾಮಾಯಣದ ಸೀತೆಗಿಂತಲೂ ಇಂದು ನಮ್ಮ ಪಾಡು ಭಿನ್ನವಾಗಿಲ್ಲ. ಮಹಿಳೆಯರು ಎಷ್ಟೇ ದೊಡ್ಡ ಅಧಿಕಾರಿಗಳಾದರೂ ಅವರನ್ನು ಇಂದಿಗೂ ದ್ವಿತೀಯ ದರ್ಜೆಯ ನಾಗರಿಕರಂತೆ ನೋಡುವಂತಹ ಸಾಂಸ್ಕೃತಿಕ ಮತ್ತು ಸಾಮಾಜಿಕ ವಾತಾವರಣ ಇದೆ. ಇದರಿಂದಾಗಿ ನಾವು ಕಳೆದುಹೋಗುವ ಅಪಾಯದಲ್ಲಿದ್ದೇವೆ. ಹೀಗಾಗಿ ಅವಕಾಶ ಸಿಕ್ಕಾಗಲೆಲ್ಲ ಮುಂದಕ್ಕೆ ಬರಬೇಕು’ ಎಂದರು.

‘ಜಾತಿ, ವೈಯಕ್ತಿಕವಾಗಿ ನಾವು ಬಲಿಷ್ಠರಾಗಿದ್ದೇವೆ. ಆದರೆ, ಸಾಂಸ್ಕೃತಿಕ, ಧಾರ್ಮಿಕವಾಗಿ ದುರ್ಬಲರಾಗಿದ್ದೇವೆ. ಮಹರ್ಷಿ ವಾಲ್ಮೀಕಿಯ ಸಿದ್ಧಾಂತವನ್ನು ಜೀವನದಲ್ಲಿ ಮುನ್ನಡೆಸುವ ಬೆಳಕಾಗಿಸಿಕೊಂಡಿಲ್ಲ. ಬಸವಣ್ಣನನ್ನು ಚೈತನ್ಯವಾಗಿಸಿಕೊಂಡಿಲ್ಲ. ಮಹಾನ್‌ ಧಾರ್ಮಿಕ ಗ್ರಂಥ ನೀಡಿದ ವ್ಯಾಸರನ್ನು ನಾವು ಬಿಟ್ಟೆವು. ಅಂಬೇಡ್ಕರ್‌ ವಿಚಾರಧಾರೆಯಲ್ಲಿ ಬದುಕು ಕಟ್ಟಿಕೊಳ್ಳದಷ್ಟು ವಿಚಾರವಂತರಾಗದೇ ಇರುವುದರಿಂದ ದುರ್ಬಲರಾಗಿಯೇ ಉಳಿದಿದ್ದೇವೆ. ಏಕಮುಖವಾಗಿ ಸಾಗುತ್ತಿರುವ ಸಮಾಜದಲ್ಲಿ ತಳಸಮುದಾಯದವರು ಹೇಗಿರಬೇಕು ಎಂಬುದನ್ನು ಇಂತಹ ಜಾತ್ರೆಯ ಮೂಲಕ ನಾವು ಕಂಡುಕೊಳ್ಳಬೇಕಾಗಿದೆ’ ಎಂದು ಹೇಳಿದರು.

ಸಿನಿಮಾ ನಟಿ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರುತಿ, ‘ಅಂದು ರಾಣಿ ಚನ್ನಮ್ಮನ, ಅಬ್ಬಕ್ಕಗೆ ಇದ್ದ ವೈರಿಗಳೇ ಬೇರೆ, ಇಂದು ಮಹಿಳೆಯರಿಗೆ ಇರುವ ವೈರಿಗಳೇ ಬೇರೆಯಾಗಿದ್ದಾರೆ. ಅಂದು ಅವರು ಖಡ್ಗ ಹಿಡಿದು ಯುದ್ಧ ಗೆದ್ದಿದ್ದರೆ, ಇಂದು ನಾವು ಅಕ್ಷರವೆಂಬ ಖಡ್ಗದಿಂದ ಯುದ್ಧ ಗೆಲ್ಲಬೇಕಾಗಿದೆ’ ಎಂದು ಹೇಳಿದರು.

‘ಪ್ರಪಂಚದಲ್ಲಿ ಬೇರೆ ದೇಶಗಳಲ್ಲಿ ಪುರುಷ ಪ್ರಧಾನ ದೇವರು ಇದ್ದಾರೆ. ಭಾರತದಲ್ಲಿ ಮಾತ್ರ ಹಲವು ದೇವತೆಗಳಿಗೆ ಅಗ್ರ ಸ್ಥಾನ ಕೊಟ್ಟಿದ್ದಾರೆ. ದೇವಲೋಕದಲ್ಲೂ ಲಕ್ಷ್ಮಿಗೆ ಹಣಕಾಸು ಖಾತೆ ನೀಡಲಾಗಿದೆ. ಅದೇ ರೀತಿ ಈಗ ಭಾರತದಲ್ಲೂ ಹಣಕಾಸು ಖಾತೆ ಮಹಿಳೆ ಕೈಯಲ್ಲಿದೆ. ಗಂಧ ತೇಯ್ದರೂ ಸುಗಂಧ ನೀಡುತ್ತಿದೆ. ಅದೇ ರೀತಿ ಶೋಷಣೆಗೊಳಗಾಗುತ್ತಿದ್ದರೂ ಮಹಿಳೆ ಸಾಧನೆ ಮಾಡುತ್ತಿದ್ದಾಳೆ’ ಎಂದು ಹೇಳಿದರು.

ಕೌಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಪುಷ್ಪಾ ಲಕ್ಷ್ಮಣಸ್ವಾಮಿ, ಗೋಕಾಕಿನ ಪ್ರಿಯಾಂಕ ಎಸ್‌. ಜಾರಕಿಹೊಳಿ ಸೇರಿ ಹಲವು ಸಾಧಕ ಮಹಿಳೆಯರು ಪಾಳ್ಗೊಂಡಿದ್ದರು. ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ತಮಿಳುನಾಡು ಹಾಗೂ ರಾಜಸ್ಥಾನದ ಕಲಾವಿದರು ಪ್ರದರ್ಶಿಸಿದ ಜನಪದ ನೃತ್ಯ ಗಮನ ಸೆಳೆಯಿತು. ಡಾ. ಶಾರದಾ ಹುಲಿನಾಯಕ ಸ್ವಾಗತಿಸಿದರು. ಅರ್ಚನಾ ನಾರಾಯಣಸ್ವಾಮಿ ನಿರೂಪಿಸಿದರು.

‘ವಾಲ್ಮೀಕಿ ಕುರಿತ ಮಿಥ್ಯೆ ತೊಡೆದುಹಾಕಿ’
‘ವಾಲ್ಮೀಕಿ ಬಗ್ಗೆ ಅವೈಜ್ಞಾನಿಕವಾಗಿ ಪಠ್ಯದಲ್ಲಿ ಬೋಧಿಸಲಾಗುತ್ತಿದೆ. ವೈದಿಕಶಾಹಿ ರಾಮಾಯಣದ ಬದಲು ವಾಲ್ಮೀಕಿ ರಾಮಾಯಣದ ಬಗ್ಗೆ ಜನರಿಗೆ ತಿಳಿಸಿಕೊಡಬೇಕಾಗಿದೆ. ವಾಲ್ಮೀಕಿಯದ್ದು ಕುಟುಂಬ–ಪರಿವಾರದ ರಾಮಾಯಣವಾಗಿದೆ. ಇದರಲ್ಲಿ ಗಂಡ, ಹೆಂಡತಿ, ಅಣ್ಣ, ತಮ್ಮ, ತಂದೆ, ಭಕ್ತರಿದ್ದಾರೆ. ಆದರೆ, ವೈದಿಕಶಾಹಿ ರಾಮಾಯಣದಿಂದಾಗಿ ಇಂದು ದೇಶದಲ್ಲಿ ಗಂಡನಿಗೆ ಹೆಂಡತಿ, ತಮ್ಮ, ಭಕ್ತ ಇಲ್ಲದ ಪರಿವಾರವನ್ನು ನೋಡುತ್ತಿದ್ದೇವೆ. ತಾಯಿ ಸ್ವರೂಪಿಯಾಗಿದ್ದ ಶಬರಿಯ ಚರಿತ್ರೆ ಮರೆಯಾಗುತ್ತಿದೆ. ಹೀಗಾಗಿ ಪಠ್ಯದೊಳಗಿನ ಇಂತಹ ಮಿಥ್ಯಗಳನ್ನು ತೆಗೆದುಹಾಕುವಂತೆ ಸ್ವಾಮೀಜಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದು ಡಾ.ಮಲ್ಲಿಕಾ ಘಂಟಿ ಹೇಳಿದರು.

‘ಶಾಸನಸಭೆಯಲ್ಲಿ ಮಹಿಳೆಗೆ ಮೀಸಲಾತಿ ಕಲ್ಪಿಸಲಿ’
‘12ನೇ ಶತಮಾನದಲ್ಲಿ ಶರಣರು ನಡೆಸಿದ್ದ ಚಳವಳಿಯಲ್ಲೂ ಮಹಿಳೆಯರು ಇದ್ದರು. ಇಂದಿಗೂ ಜನಸಂಖ್ಯೆಯಲ್ಲಿ ಅರ್ಧದಷ್ಟು ಹೆಣ್ಣುಮಕ್ಕಳಿದ್ದಾರೆ. ಹೀಗಾಗಿ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಡಾ. ಮಲ್ಲಿಕಾ ಘಂಟಿ ಒತ್ತಾಯಿಸಿದರು.

‘ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿಗಾಗಿ ದೊಡ್ಡ ಚಳವಳಿ ನಡೆದಿತ್ತು. ರಾಜಕೀಯ ಸ್ಥಿತ್ಯಂತರವು ಮಹಿಳೆಯರ ಧ್ವನಿಯನ್ನು ಹತ್ತಿಕ್ಕಿತು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಶಾಸನಸಭೆಗಳಲ್ಲಿ ಅರ್ಧದಷ್ಟು ಮಹಿಳೆಯರಿರಬೇಕು. ಮಹಿಳೆಯರಿಗೆ ಸಂಬಂಧಪಟ್ಟ ಶಾಸನಗಳನ್ನು ಮಹಿಳೆಯರ ಮೂಲಕವೇ ಮಾಡಿಸಬೇಕು. ಇಲ್ಲದಿದ್ದರೆ ಗಂಡಸರು ಮಾಡುವ ಶಾಸನಗಳಿಂದಾಗಿ ಮಹಿಳೆಯರು ಮುಂದೆಯೂ ಅತಂತ್ರವಾದ ಬದುಕನ್ನು ಕಾಣಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಮುಜುಗರಕ್ಕೊಳಗಾದ ಶ್ರುತಿ
ಸಿನಿಮಾ ನಟಿ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರುತಿ ಮಾತನಾಡಲು ಬಂದಾಗ ಅಭಿಮಾನಿಗಳು ಕೇಕೆ ಹಾಕಿ ಸ್ವಾಗತಿಸಿದರು. ಅವರು ಮಾತು ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಹೆಲಿಕಾಪ್ಟರ್‌ ಬಂದಾಗ, ನಟ ಕಿಚ್ಚ ಸುದೀಪ್‌ ಬಂದರು ಎಂದುಕೊಂಡು ಹಲವರು ಆ ಕಡೆಗೆ ಹೋಗಲು ಆರಂಭಿಸಿದರು. ‘ಹೆಲಿಕಾಪ್ಟರ್‌ನಲ್ಲಿ ಬಂದವರು ಸತೀಶ್‌ ಜಾರಕಿಹೊಳಿ. ಸುದೀಪ್‌ ನಾಳೆ ಬರಲಿದ್ದಾರೆ’ ಎಂದು ಆಯೋಜಕರು ಮೈಕ್‌ನಲ್ಲಿ ಹೇಳಿದಾಗ ಜನ ಸುಮ್ಮನಾದರು.

ಮುಜುಗರಕ್ಕೊಳಗಾದ ಶ್ರುತಿ, ‘ನಿಮ್ಮೆಲ್ಲರ ತಾಳ್ಮೆಯನ್ನು ನಾನು ಪರೀಕ್ಷೆ ಮಾಡಲು ಹೋಗುವುದಿಲ್ಲ’ ಎಂದು ಹೇಳಿ, ಒಂದೆರಡು ನಿಮಿಷದಲ್ಲೇ ಮಾತು ಮುಗಿಸಿದರು.

*

ಪರಿಶ್ರಮಕ್ಕೆ, ಸಾಧನೆಗೆ ಅಡ್ಡದಾರಿ ಇಲ್ಲ. ಮೀಸಲಾತಿ, ವಸತಿನಿಲಯಗಳ ಸೌಲಭ್ಯಗಳಿವೆ. ಹೆಣ್ಣುಮಕ್ಕಳು ಅವುಗಳನ್ನು ಬಳಸಿಕೊಂಡು ಸಾಧನೆ ಮಾಡಬೇಕು. ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ನೀಡಬೇಕು.
– ಡಾ. ಮಂಜುಳಾ, ವ್ಯವಸ್ಥಾಪಕ ನಿರ್ದೇಶಕಿ, ಕೆಪಿಟಿಸಿಎಲ್‌

*

ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಆರ್ಥಿಕ ಸ್ವಾವಲಂಬನೆಯೂ ಬೇಕು. ಆಗ ಮಾತ್ರ ಪಡೆದ ವಿದ್ಯೆಗೆ ಸಾರ್ಥಕತೆ ಬರುತ್ತದೆ. ಮನೆಯಲ್ಲಿ ತಾರತಮ್ಯ ಮಾಡದೇ ಮಕ್ಕಳನ್ನು ಬೆಳೆಸಿದಾಗ ಶೋಷಣೆ ಕಡಿಮೆಯಾಗುತ್ತದೆ.
– ಮಾಲಿನಿ ಕೃಷ್ಣಮೂರ್ತಿ, ಕಾರ್ಯದರ್ಶಿ, ಗೃಹ ಇಲಾಖೆ

*

ವಾಲ್ಮೀಕಿ ಪೀಠದ ಆವರಣದಲ್ಲಿ ಪರಿಶಿಷ್ಟ ಪಂಗಡದ ಮಹಿಳಾ ವಿಶ್ವವಿದ್ಯಾಲಯ ಆರಂಭಿಸಬೇಕು. ಕೇಂದ್ರೀಯ ವಿದ್ಯಾಲಯವನ್ನೂ ತೆರೆಯುವ ಮೂಲಕ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು.
– ಪ್ರೊ. ಗೋಮತಿದೇವಿ, ಕುಲಪತಿ, ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT