ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಲೇಬೆನ್ನೂರು | ಒಕ್ಕಲಿಗೆ ಅಡ್ಡಿಯಾದ ಅಕಾಲಿಕ ಮಳೆ: ರೈತರ ಆತಂಕ

Published 29 ನವೆಂಬರ್ 2023, 15:51 IST
Last Updated 29 ನವೆಂಬರ್ 2023, 15:51 IST
ಅಕ್ಷರ ಗಾತ್ರ

ಮಲೇಬೆನ್ನೂರು: ಸಮೀಪದ ಎರೆಬೂದಿಹಾಳು ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಸುರಿದ ಮಳೆಗೆ ಒಕ್ಕಲು ಮಾಡಿ ರಾಶಿ ಹಾಕಿದ್ದ ಭತ್ತ ತೊಯ್ದು ತೊಪ್ಪೆಯಾಗಿದ್ದು ರೈತರನ್ನು ಆತಂಕಕ್ಕೆ ತಳ್ಳಿದೆ. 

ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಈಗಾಗಲೇ ಮೊದಲ ನಾಟಿ ಮಾಡಿದ ಭತ್ತದ ಒಕ್ಕಲು ಕೆಲಸ ಭರದಿಂದ ಸಾಗಿದ್ದು, ಅಕಾಲಿಕ ಮಳೆಯಿಂದ ಇದಕ್ಕೆ ಅಡ್ಡಿಯಾಗಿದೆ.

ರಾತ್ರಿ ಸುರಿದ ಬಿರುಮಳೆ ನೆಮ್ಮದಿ ಕೆಡಿಸಿದ್ದು, ಕಟಾವು ಮಾಡಿ ರಾಶಿ ಹಾಕಿದ್ದ ಭತ್ತ ಮಳೆಗೆ ಸಿಲುಕಿದೆ. ಭತ್ತದ ಕಣಗಳು ಮಳೆ ನೀರು ನಿಂತು ಕೆಸರುಮಯವಾಗಿವೆ. ನೀರು ನಿಂತಿದ್ದು, ಪಾಟು ಹರಡುವುದು ಕಷ್ಟವಾಗಿದೆ. ಒಣಗಿಸಿದ್ದ ಭತ್ತದ ರಾಶಿ ಸುತ್ತಲೂ ನೀರು ನಿಂತು ಫಸಲು ಹಾಳಾಗುತ್ತಿದೆ. 

ಭತ್ತದ ಗದ್ದೆಯಲ್ಲಿ ನೀರು ನಿಂತಿರುವುದರಿಂದ ಬುಡ ಕೊಳೆಯವುದು ಬಹುತೇಕ ಖಚಿತ ಎಂದು ರೈತರಾದ ಹಾಲೇಶಪ್ಪ ಶಿವು ಪ್ರಕಾಶ್, ನಿಂಗಮ್ಮ ಆತಂಕ ವ್ಯಕ್ತಪಡಿಸಿದರು.

ಆರ್‌ಎನ್‌ಆರ್ ಭತ್ತ ಚೆನ್ನಾಗಿ ಬಂದಿದೆ. ರಾತ್ರೋರಾತ್ರಿ ಸುರಿದ ಮಳೆಗೆ ಭತ್ತ ಒದ್ದೆಯಾಗಿದೆ. ತುರ್ತಾಗಿ ಒಣಗಿಸಬೇಕಾಗಿದೆ. ಇಲ್ಲವಾದರೆ ತೇವಾಂಶ ಹೆಚ್ಚಾಗಿ ವ್ಯಾಪಾರಿಗಳು ಕೊಳ್ಳುವುದಿಲ್ಲ. ಭತ್ತ ಕಪ್ಪಾಗುತ್ತದೆ. ನಿರ್ಲಕ್ಷಿಸಿದರೆ ಮೊಳಕೆ ಬರುತ್ತದೆ ಎಂದು ರೈತರು ಹೇಳಿದ್ದಾರೆ. 

ಈಗಾಗಲೆ ಪ್ರತಿ ಎಕರೆಗೆ ₹30 ಸಾವಿರ ಖರ್ಚಾಗಿದೆ. ಈಗ ಹಸಿ ಭತ್ತವನ್ನು ಒಣಗಿಸುವ ಹಾಗೂ ರಾಶಿ ಮಾಡುವ ಖರ್ಚು ಹೆಚ್ಚುವರಿ ಹೊರೆಯಾಗಲಿದೆ. ಒಣಗಿದ ಹುಲ್ಲು ಕೊಳೆಯುತ್ತಿದ್ದು, ಜಾನುವಾರಗಳಿಗೆ ಹುಲ್ಲಿನ ಕೊರತೆ ಎದುರಾಗಲಿದೆ ರೈತ ಜಯದೇವಪ್ಪ ಹೇಳಿದರು.

ಮಳೆಗೆ ಸಿಲುಕಿ ತೊಯ್ದು ತೊಪ್ಪೆಯಾಗಿರುವ ಭತ್ತದ ಬೆಳೆ
ಮಳೆಗೆ ಸಿಲುಕಿ ತೊಯ್ದು ತೊಪ್ಪೆಯಾಗಿರುವ ಭತ್ತದ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT