ಶುಕ್ರವಾರ, ಮೇ 27, 2022
27 °C

ಸುಸಜ್ಜಿತ ಮಾರುಕಟ್ಟೆ: ಜಾನುವಾರು ಮಾರಾಟ ಅಷ್ಟಕ್ಕಷ್ಟೆ

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವಾಣಿಜ್ಯ ಚಟುವಟಿಕೆಗೆ ಮುಂಚೂಣಿಯಲ್ಲಿರುವ ದಾವಣಗೆರೆಯಲ್ಲಿ ಜಾನುವಾರು ಮಾರುಕಟ್ಟೆಯೂ ಪ್ರಬಲವಾಗಿದೆ. ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಆವರಣದಲ್ಲಿರುವ ಜಾನುವಾರು ಮಾರುಕಟ್ಟೆ ಏಷ್ಯಾದಲ್ಲೇ ಅತಿ ದೊಡ್ಡದು ಎಂಬ ಗರಿಮೆಯನ್ನೂ ಹೊಂದಿದೆ.

ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರು ಸಚಿವರಾಗಿದ್ದ ಸಂದರ್ಭದಲ್ಲಿ 2015–16ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅಡಿ (ಆರ್‌ಕೆವಿವೈ) ₹ 12.75 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಜಾನುವಾರು ಮಾರುಕಟ್ಟೆ ನಿರ್ಮಿಸಲಾಗಿದೆ. 2 ಎಕರೆ ವಿಸ್ತೀರ್ಣದ ಜಾಗದಲ್ಲಿ ಜರ್ಮನ್‌ ತಂತ್ರಜ್ಞಾನದ ಅಡಿಯಲ್ಲಿ ನಡುವೆ ಎಲ್ಲೂ ಕಂಬಗಳು ಬರದಂತೆ ವಿಶಾಲವಾದ ಕಟ್ಟಡ ನಿರ್ಮಿಸಲಾಗಿದೆ.  
ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಹಸುಗಳ ಮೈತೊಳೆಯಲು ನೀರಿನ ವ್ಯವಸ್ಥೆ, ಜಾನುವಾರು ಮಾರಾಟ ಮಾಡಲು ತಂದಾಗ ವಾಹನದಿಂದ ಇಳಿಸಲು ರ್‍ಯಾಂಪ್‌, ಬೀದಿದೀಪಗಳು, ಕಟ್ಟಡದ ಒಳಗೆ ದೀಪದ ವ್ಯವಸ್ಥೆ, ಸಮೀಪದಲ್ಲೇ ಪಶು ಚಿಕಿತ್ಸಾಲಯ... ಹೀಗೆ ಜಾನುವಾರುಗಳ ಮಾರಾಟ ಹಾಗೂ ಖರೀದಿಗೆ ಬರುವವರಿಗೆ ಬೇಕಾದ ಅನುಕೂಲಗಳೆಲ್ಲವೂ ಇಲ್ಲಿವೆ. ಆದರೂ ವರ್ಷ ಕಳೆದಂತೆ ಜಾನುವಾರು ಮಾರಾಟ ಕಡಿಮೆಯಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲೇ ಮಾರುಕಟ್ಟೆಗೆ ಬಂದ ಜಾನುವಾರು ಸಂಖ್ಯೆಯಲ್ಲಿ ಅರ್ಧದಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ. ದರದಲ್ಲಿ ಬಹಳ ವ್ಯತ್ಯಾಸವೇನೂ ಆಗಿಲ್ಲ.

ದಾವಣಗೆರೆ ಜಿಲ್ಲೆಯ ಎಲ್ಲ ತಾಲ್ಲೂಕುಗಳು, ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದಲೂ ಜಾನುವಾರು ಇಲ್ಲಿಗೆ ಬರುತ್ತವೆ. ಜರ್ಸಿ, ಎಚ್‌ಎಫ್‌, ಸಿಂಧಿ ಹಸುಗಳು, ಎಮ್ಮೆಗಳ ಖರೀದಿ ಇಲ್ಲಿ ಹೆಚ್ಚು. ಕುರಿ ಮಾರಾಟ ಸ್ವಲ್ಪ ಕಡಿಮೆ. ಕುರಿ ಮಾರಾಟಕ್ಕಾಗಿ ಜನ ಹರಿಹರ, ದುಗ್ಗತ್ತಿಗಳತ್ತ ತೆರಳುತ್ತಾರೆ. ಮುಂಗಾರಿನ ಸಂದರ್ಭದಲ್ಲಿ ಜಾನುವಾರು ಮಾರಾಟ ಹೆಚ್ಚಳವಾಗುತ್ತದೆ.

ಪರವಾನಗಿ ಪಡೆದ 12 ದಲ್ಲಾಲಿಗಳು ಇದ್ದು ಅವರ ಮೂಲಕವೇ ವ್ಯಾಪಾರಿಗಳು, ರೈತರು ವ್ಯವಹಾರ ನಡೆಸುತ್ತಾರೆ. ವಾರದ ಎಲ್ಲ ದಿನಗಳಲ್ಲೂ ಜಾನುವಾರು ಮಾರುಕಟ್ಟೆ ತೆರೆದಿರುತ್ತದೆಯಾದರೂ ಶುಕ್ರವಾರ, ಶನಿವಾರ, ಭಾನುವಾರ ಮಾರಾಟ ಹೆಚ್ಚು. ಜಾನುವಾರಿಗೆ ಸೊಳ್ಳೆಗಳಿಂದ ತೊಂದರೆಯಾಗದಂತೆ ಸೊಳ್ಳೆ ಪರದೆಯನ್ನೂ ದಲ್ಲಾಲಿಗಳು, ವ್ಯಾಪಾರಿಗಳು ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ಸಂಗ್ರಹವಾಗುವ ಗೊಬ್ಬರ ವಿಲೇವಾರಿಯೂ ಟೆಂಡರ್‌ ಮೂಲಕ ಹರಾಜಾಗುತ್ತದೆ. ಹೀಗಾಗಿ ಸಗಣಿ, ಗಂಜಲ ಎಲ್ಲವೂ ನಿಯಮಿತವಾಗಿ ವಿಲೇವಾರಿ ಆಗುತ್ತವೆ.

‘ಹಸು–ಎಮ್ಮೆಗಳನ್ನು ಇಲ್ಲಿ ಕಾಯಂ ಆಗಿ ಮಾರಾಟ ಮಾಡುತ್ತೇನೆ. ಬೆಳಿಗ್ಗೆ 10 ಲೀಟರ್‌, ಸಂಜೆ 6–7 ಲೀಟರ್‌ ಹಾಲು ಕರೆಯುವ ಹಸುಗಳಿದ್ದರೆ ಸರಾಸರಿ ₹ 70,000 ದರ ಲಭಿಸುತ್ತದೆ. ಬೆಳಿಗ್ಗೆ 4 ಲೀಟರ್‌, ಸಂಜೆ 3 ಲೀಟರ್‌ ಹಾಲು ಕರೆಯುವ ಎಮ್ಮೆ ಇದ್ದರೆ ₹ 60,000 ಬೆಲೆ ಸಿಗುತ್ತದೆ. ಇಲ್ಲಿ ದನ–ಕರುಗಳನ್ನು ಕಟ್ಟಲು ಎಲ್ಲ ಸೌಕರ್ಯಗಳಿವೆ’ ಎಂದು ಅರಳೆನಗರ ಚಿಕ್ಕನಹಳ್ಳಿಯ ಜಾನುವಾರು ವ್ಯಾಪಾರಿ ಸರ್ದಾರ್‌ ಸಾಹೇಬ್‌ ತಿಳಿಸಿದರು. 

‘25 ವರ್ಷಗಳಿಂದ ಇಲ್ಲಿ ಹಸು–ಎಮ್ಮೆಗಳನ್ನು ಮಾರಾಟ ಮಾಡುತ್ತಿದ್ದೇನೆ. ಇಲ್ಲಿಯ ಜಾನುವಾರು ಮಾರುಕಟ್ಟೆ ಎಂದರೆ ನಮಗೆ ಅರಮನೆ ಇದ್ದಂತೆ. 5 ವರ್ಷಗಳ ಹಿಂದೆ ವಾರಕ್ಕೆ 500ರಷ್ಟು ಹಸು–ಎತ್ತು–ಎಮ್ಮೆಗಳು ಮಾರಾಟಕ್ಕೆ ಬರುತ್ತಿದ್ದವು. ಈಗ ವಾರಕ್ಕೆ 250ರಷ್ಟು ಮಾತ್ರ ಬರುತ್ತವೆ. ಜಾನುವಾರು ಸಾಕಣೆ, ಮಾರಾಟ ಕುಸಿದಿದ್ದರೂ ನಮ್ಮ ಜೀವನಕ್ಕೆ ತೊಂದರೆ ಆಗದಷ್ಟು ವಹಿವಾಟಂತೂ ಇದ್ದೇ ಇರುತ್ತದೆ’ ಎಂದು ದಾವಣಗೆರೆಯ ಜಾನುವಾರು ವ್ಯಾಪಾರಿ ಷಣ್ಮುಖ ತಿಳಿಸಿದರು.

‘ಕೃಷಿ ಭೂಮಿಯನ್ನು ಸೈಟ್‌ ಮಾಡಿ ಮಾರುತ್ತಿರುವುದು, ಅಡಿಕೆ ಕೃಷಿ ಹೆಚ್ಚಳವಾಗುತ್ತಿರುವುದರಿಂದ ಜಾನುವಾರು ಮೇವಿನ ಕೊರತೆಯಾಗಿದೆ. ಇದು ಸಹ ಜಾನುವಾರು ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ’ ಎಂದು ಅವರು ಅಭಿಪ್ರಾಯಪಟ್ಟರು.

***

ಹೊಸ ಸಂತೆ ಮೈದಾನದ ನಿರೀಕ್ಷೆಯಲ್ಲಿ ಕುರಿ ಸಂತೆ 

ಎಚ್‌.ವಿ. ನಟರಾಜ್‌

ಚನ್ನಗಿರಿ: ಪ್ರತಿ ಶುಕ್ರವಾರ ಪಟ್ಟಣದ ಕುರಿ ಸಂತೆಯಲ್ಲಿ ಅಪಾರ ಪ್ರಮಾಣದ ಕುರಿಗಳ ವಹಿವಾಟು ನಡೆಯುತ್ತಿದೆ.

ಪುರಸಭೆಯ ಸಂತೆ ಮೈದಾನದ ಬಳಿ ಪ್ರತಿ ವಾರ ಕುರಿ ಸಂತೆ ನಡೆಯುತ್ತಿತ್ತು. ಆದರೆ ಈ ಮೈದಾನ ಸಂತೆ ನಡೆಸಲು ಕಿರಿದಾದ ಸ್ಥಳವಾಗಿದ್ದರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ₹ 2.94 ಕೋಟಿ ವೆಚ್ಚದಲ್ಲಿ ಹೊಸ ಸಂತೆ ಮೈದಾನವನ್ನು ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಭರದಿಂದ ಸಾಗಿದೆ. ಸದ್ಯಕ್ಕೆ ಪ್ರತಿ ಶುಕ್ರವಾರ ರಸ್ತೆ ಬದಿಯಲ್ಲಿಯೇ ಕುರಿ ಸಂತೆ ನಡೆಯುತ್ತಿದೆ.

‘ಕುರಿ ಸಂತೆ ಕಳೆದ ವರ್ಷ ₹ 6.50 ಲಕ್ಷಕ್ಕೆ ಹರಾಜು ಆಗಿತ್ತು. ಆದರೆ ಈ ಬಾರಿ ಹರಾಜು ಪ್ರಕ್ರಿಯೆ ನಡೆಯದೇ ಇರುವುದರಿಂದ ಪುರಸಭೆಯವರೇ ಪ್ರತಿ ವಾರ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಹೊಸ ಸಂತೆ ಮೈದಾನದಲ್ಲಿ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಇನ್ನು 6 ತಿಂಗಳಲ್ಲಿ ಸಂತೆ ಮೈದಾನ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಹಾಗಾಗಿ ಪ್ರಸ್ತುತ ರಸ್ತೆ ಬದಿಯಲ್ಲಿಯೇ ಕುರಿಗಳ ಸಂತೆ ನಡೆಯುತ್ತಿದೆ’ ಎಂದು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ರಮೇಶ್ ತಿಳಿಸಿದರು.

‘ಈ ಹಿಂದೆ ಇದ್ದ ಸಂತೆ ಮೈದಾನ ಅತ್ಯಂತ ಕಿರಿದಾಗಿತ್ತು. ಮಳೆಗಾಲದಲ್ಲಿ ಮೊಳಕಾಲುದ್ದ ಕೆಸರಿನಲ್ಲಿಯೇ ಸಂತೆ ಮಾಡಬೇಕಾಗಿತ್ತು. ಈ ಕಾರಣದಿಂದಾಗಿ ಕುರಿಗಳನ್ನು ಮಾರಾಟ ಮಾಡಲು ತುಂಬಾ ಪರದಾಡುವಂತಾಗಿತ್ತು. ಈಗ ಹೊಸ ಸಂತೆ ಮೈದಾನ ಅಭಿವೃದ್ಧಿಯಾಗುತ್ತಿದೆ. ಹೀಗಾಗಿ ನಮ್ಮ ಸಮಸ್ಯೆಗಳು ಪರಿಹಾರವಾಗಲಿವೆ ಎಂಬ ನಿರೀಕ್ಷೆಯಿದೆ. ಸಂತೆ ಮೈದಾನದ ಬಳಿ ಕುರಿ ಸಂತೆ ಮಾಡಲು ತೊಂದರೆಯಾಗುತ್ತದೆ. ಹೀಗಾಗಿ ಪಟ್ಟಣದ ಹೊರ ವಲಯದಲ್ಲಿ ಕುರಿ ಸಂತೆ ನಡೆಸಲು ಪುರಸಭೆಯವರು ಮುಂದಾದರೆ ತುಂಬಾ ಅನುಕೂಲವಾಗುತ್ತದೆ’ ಎಂದು ಕುರಿ ಸಾಕಣೆದಾರ ಹೊದಿಗೆರೆ ಗ್ರಾಮದ ಹನುಮಂತಪ್ಪ ತಿಳಿಸಿದರು.

***

ಹರಿಹರಕ್ಕೆ ಬೇಕು ದನ–ಕರು ಮಾರುಕಟ್ಟೆ

ಇನಾಯತ್‌ ಉಲ್ಲಾ ಟಿ.

ಹರಿಹರ: ಐದಾರು ದಶಕಗಳಿಂದ ಹರಿಹರವು ಕುರಿ, ಮೇಕೆ ಮಾರುಕಟ್ಟೆಗೆ ಪ್ರಸಿದ್ಧವಾಗಿದೆ. ರಾಜ್ಯದ ಪ್ರಮುಖ ಕುರಿ, ಮೇಕೆ ಮಾರುಕಟ್ಟೆಗಳ ಪೈಕಿ ಇದೂ ಒಂದು. ವಾರದ ಸಂತೆ ನಡೆಯುವ ಪ್ರತಿ ಮಂಗಳವಾರ ಈ ಮುಂಚೆ ಗಾಂಧಿ ಮೈದಾನದಲ್ಲಿ ಈ ಸಂತೆ ನಡೆಯುತ್ತಿತ್ತು. ಕೆಲವು ವರ್ಷಗಳಿಂದ ಎಪಿಎಂಸಿಯಲ್ಲಿ ಕುರಿ, ಮೇಕೆ ಮಾರುಕಟ್ಟೆಗೆ ಸ್ಥಳಾಂತರವಾಗಿದೆ.

ಜಾತ್ರೆಗಳ ಅವಧಿಯಾದ ಫೆಬ್ರುವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಮಾರುಕಟ್ಟೆಗೆ ಬರುವ ಬಹುತೇಕ ಕುರಿ, ಮೇಕೆ ಮಾರಾಟವಾಗುತ್ತವೆ. ಆ ಅವಧಿಯಲ್ಲಿ 1,500 ರಿಂದ 2,500 ಕುರಿ– ಮೇಕೆಗಳು ಬರುತ್ತವೆ. ಉಳಿದ ದಿನಗಳಲ್ಲಿ ಸಂಖ್ಯೆ ಕಡಿಮೆ ಇರುತ್ತದೆ. ದಾವಣಗೆರೆ, ಹರಿಹರ, ಹರಪನಹಳ್ಳಿ ಹಾಗೂ ಇತರ ತಾಲ್ಲೂಕುಗಳಿಂದ ಮಾರಾಟಗಾರರು ಹಾಗೂ ಖರೀದಿದಾರರು ಬರುತ್ತಾರೆ.

ಕುರಿ, ಮೇಕೆ ತೂಕವನ್ನಾಧರಿಸಿ ವಿಭಾಗವಾರು ಮಾರಾಟ ಮಾಡಲು ಸೌಲಭ್ಯ ಇಲ್ಲಿದೆ. ಆದರೆ ಒಟ್ಟು ಸೇರಿಯೇ (ಲಮ್‌ಸಮ್‌) ವ್ಯಾಪಾರ ನಡೆಯುತ್ತಿದೆ. ಎಪಿಎಂಸಿ ನಿಯಮಗಳ ಪ್ರಕಾರ ಪ್ರತಿ ಕುರಿ–ಮೇಕೆಯನ್ನು ತೂಕ ಮಾಡಿಸಿ ನೀಡುವ ಚೀಟಿಯನ್ನು ಕುರಿ–ಮೇಕೆಗೆ ಲಗತ್ತಿಸಬೇಕೆಂದಿದೆ. ಕುರಿ, ಮೇಕೆಯ ಜೊತೆಗೆ ದನ–ಕರುಗಳ ಮಾರುಕಟ್ಟೆಯನ್ನೂ ಅಭಿವೃದ್ಧಿಪಡಿಸಲು ಇಲ್ಲಿ ಅವಕಾಶವಿದೆ. ಎಪಿಎಂಸಿ ಮಾಜಿ ಅಧ್ಯಕ್ಷರಾದ ಗೌಡರ ಮಹದೇವಪ್ಪ, ಕುಸ್ತಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಎಂಎಚ್‌ಬಿ, ಚೂರಿ ಜಗದೀಶ್ ಸೇರಿದಂತೆ ಕೆಲವರು ದನಕರು ಮಾರುಕಟ್ಟೆ ಅಭಿವೃದ್ಧಿಗಾಗಿ ಅಧಿಕಾರಿಗಳ ಗಮನ ಸೆಳೆಯುತ್ತಿದ್ದಾರೆ.

‘ಕುರಿ, ಮೇಕೆ ಮಾರುಕಟ್ಟೆ ಚೆನ್ನಾಗಿ ನಡೆಯುತ್ತಿದೆ. ವ್ಯಾಪಾರಿಗಳಿಂದ ನಿಗದಿಗಿಂತ ಹೆಚ್ಚು ಜಕಾತಿ ವಸೂಲಾತಿ ನಿಲ್ಲಬೇಕು. ದಲ್ಲಾಳಿಗಳು ವ್ಯಾಪಾರಿಗಳ ಶೋಷಣೆ ಮಾಡದಂತೆ ಕಣ್ಗಾವಲು ಇಡಬೇಕು. ದನ,ಕರು ಮಾರುಕಟ್ಟೆ ರೂಪಿಸಲು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ, ಆದರೆ ಎಪಿಎಂಸಿಯವರು ನಿರ್ಲಕ್ಷಿಸುತ್ತಿದ್ದಾರೆ. ಸದ್ಯಕ್ಕೆ ಸಂತೆ ದಿನ 20-30 ದನ–ಕರುಗಳು ಬರುತ್ತಿವೆ’ ಎಂದು ಕುಸ್ತಿ ಜೀರ್ಣೋದ್ಧಾರ
ಸಮಿತಿ ಅಧ್ಯಕ್ಷ ಚಂದ್ರಶೇಖರ್ ಎಂಎಚ್‌ಬಿ ತಿಳಿಸಿದರು.

‘ಶಾಮನೂರು ಶಿವಶಂಕರಪ್ಪ ಅವರು ಮಾರುಕಟ್ಟೆ ಸಚಿವರಾಗಿದ್ದಾಗ ಬಿಡುಗಡೆ ಮಾಡಿದ್ದ ₹ 50 ಲಕ್ಷ  ಅನುದಾನದಲ್ಲಿ ಎಪಿಎಂಸಿಯಲ್ಲಿ ಸುಸಜ್ಜಿತ ಕುರಿ– ಮೇಕೆ ಮಾರುಕಟ್ಟೆ ನಿರ್ಮಿಸಲಾಗಿದೆ. ಪ್ರತಿ
ಸಂತೆಯ ದಿನ 1,500ರಿಂದ 2,500 ಕುರಿ, ಮೇಕೆ ಬರುತ್ತವೆ. ತೂಕದ ಪ್ರಕಾರ ಕುರಿ, ಮೇಕೆ ವಿಭಾಗಿಸಿ
ವ್ಯಾಪಾರ ನಡೆದರೆ ಖರೀದಿದಾರರಿಗೆ ಮೋಸವಾಗಲ್ಲ. ಆದರೆ ಇಲ್ಲಿ ವ್ಯಾಪಾರ ಲಮ್‌ಸಮ್ ಆಗಿ ನಡೆಯುತ್ತದೆ.
ಅನುದಾನ ಬಂದರೆ ದನ–ಕರು ಮಾರುಕಟ್ಟೆ ನಿರ್ಮಿಸುತ್ತೇವೆ’ ಎಂದು ಹರಿಹರ ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಟೇಲ್ ತಿಳಿಸಿದರು.

***

ಜೋಡೆತ್ತುಗಳ ಮಾರಾಟ ಕಡಿಮೆ

ರಾಜ್ಯದ 160 ಎಪಿಎಂಸಿಗಳಲ್ಲಿಯೇ ಇಷ್ಟು ಸುಸಜ್ಜಿತ ಮಾರುಕಟ್ಟೆ ಇಲ್ಲ. ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಿರುವ ಕಾರಣ ಜಾನುವಾರು ಸಾಕಣೆ ಕಡಿಮೆಯಾಗುತ್ತಿದೆ. ಜೋಡೆತ್ತುಗಳ ಮಾರಾಟ ಸ್ವಲ್ಪ ಕುಸಿತ ಕಂಡಿದ್ದರೂ, ಹಸುಗಳ ಮಾರಾಟ ಇನ್ನೂ ಉತ್ತಮವಾಗಿದೆ. ಪಶುವೊಂದರ ಮಾರಾಟಕ್ಕೆ ₹ 5 ಶುಲ್ಕ ಮಾತ್ರ ಎಪಿಎಂಸಿಯಿಂದ ಪಡೆಯಲಾಗುತ್ತದೆ.

–ಕೆ.ಸಿ. ದೊರೆಸ್ವಾಮಿ, ಕಾರ್ಯದರ್ಶಿ, ಎಪಿಎಂಸಿ, ದಾವಣಗೆರೆ

***

ಶೇ 50ರಷ್ಟು ಮಾರಾಟ ಕುಸಿತ

15 ವರ್ಷಗಳ ಅವಧಿಯಲ್ಲಿ ಶೇ 50ರಷ್ಟು ಜಾನುವಾರು ಮಾರಾಟ ಕಡಿಮೆಯಾಗಿದೆ. ರೈತರು ಈಗ ಮನೆ ಬಾಗಿಲಲ್ಲೇ ಬೆಳೆ, ಜಾನುವಾರು ಮಾರಾಟ ಮಾಡಲು ಅವಕಾಶ ಇರುವುದರಿಂದ, ಎಪಿಎಂಸಿಗೆ ಜಾನುವಾರು ತರುವುದು ಕಡಿಮೆಯಾಗಿದೆ.

–ಜೆ. ಪ್ರಭು, ಸಹಾಯಕ ನಿರ್ದೇಶಕ, ಎಪಿಎಂಸಿ, ದಾವಣಗೆರೆ

***

ಹಸು ಸಾಕಣೆ ಉತ್ತಮ

ಜಾನುವಾರನ್ನು ಬೇರೆ ಜಿಲ್ಲೆ, ಊರುಗಳಿಂದ ಇಲ್ಲಿಗೆ ತಂದಾಗ ವಾತಾವರಣ ಬದಲಾವಣೆಯಿಂದ ಅವುಗಳಿಗೆ ಜ್ವರ ಬರುವ ಸಾಧ್ಯತೆಗಳು ಇರುತ್ತವೆ. ಇಂಥ ಪ್ರಕರಣಗಳಲ್ಲಿ ರೈತರು, ಖರೀದಿದಾರರು ಹಸುಗಳನ್ನು ಆರೋಗ್ಯ ತಪಾಸಣೆಗೆ ಕರೆ ತರುತ್ತಾರೆ. ಹಸು ಗಬ್ಬ ಇದೆಯೋ ಇಲ್ಲವೋ ಎಂದು ಪರೀಕ್ಷಿಸಲು ಸಹ ಬರುತ್ತಾರೆ.

– ಡಾ. ಬಸವೇಶ್ವರ ಐನಳ್ಳಿ, ಪಶುವೈದ್ಯರು, ಎಪಿಎಂಸಿ, ದಾವಣಗೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು