ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳು ನಾಡಿನ ಸುಧಾರಣೆಗೆ ದಾರಿದೀಪ: ಬಸವರಾಜ ಹೊರಟ್ಟಿ

ಎರಡು ದಿನಗಳ ಪತ್ರಕರ್ತರ ಸಮ್ಮೇಳನ ಯಶಸ್ವಿ
Published 5 ಫೆಬ್ರುವರಿ 2024, 7:14 IST
Last Updated 5 ಫೆಬ್ರುವರಿ 2024, 7:14 IST
ಅಕ್ಷರ ಗಾತ್ರ

ದಾವಣಗೆರೆ: ‘ಮಾಧ್ಯಮದವರಿಂದ ಪ್ರಜಾಪ್ರಭುತ್ವ ಸುಧಾರಣೆ ಸಾಧ್ಯವಾಗಿದ್ದು, ಜನರ ಕಷ್ಟಗಳನ್ನು ದೂರ ಮಾಡಲು ನಿಮ್ಮಿಂದ ಸಾಧ್ಯ’ ಎಂದು ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ‘ಇಂದು ಎಲ್ಲಾ ಪಕ್ಷಗಳು ಹಣ ಹಂಚಿ ಮತ ಖರೀಸುತ್ತಿವೆ. ಬೆಂಗಳೂರಿನಲ್ಲೇ ಕುಳಿತು ಮತ್ತೊಂದು ಬಾರಿಗೆ ಆಯ್ಕೆಯಾಗುತ್ತಾರೆ. ಪ್ರಜಾಪ್ರಭುತ್ವ ಹಣವಿರುವವರ ಕಡೆಯೇ ಇದೆ. ಆದ್ದರಿಂದ ಪ್ರಾಮಾಣಿಕರಿಗೆ ಬೆಂಬಲಿಸಬೇಕು’ ಎಂದು ತಿಳಿಸಿದರು.

‘ಮಾಧ್ಯಮಗಳಲ್ಲಿ ಮಾಡುವ ಪ್ರಮುಖ ಕೆಲಸಗಳು ನಾಡಿನ ಸುಧಾರಣೆಗೆ ದಾರಿದೀಪವಾಗುತ್ತವೆ. ಈ ಹಿಂದೆ ಪತ್ರಕರ್ತರು ತಪ್ಪು ಮಾಡಿದರೆ ನೇರವಾಗಿ ಹೇಳುವ ಎದೆಗಾರಿಕೆ ಹೊಂದಿದ್ದರು. ಪತ್ರಿಕೆಗಳಲ್ಲಿ ನೈಜತೆ ಪ್ರಕಟವಾಗುತ್ತಿತ್ತು. ಈಗ ಎಲ್ಲ ಪತ್ರಕರ್ತರು ಮಾಲೀಕರ ಕೈಯಲ್ಲಿ ಸಿಲುಕಿದ್ದಾರೆ. ಮಾಧ್ಯಮದವರು ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡಬಹುದು’ ಎಂದು ಹೇಳಿದರು.

‘ಈಗ ಸುದ್ದಿಗಳು ವೇಗವಾಗಿ ವಾಟ್ಸ್ ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಪತ್ರಿಕೆಗಳಲ್ಲಿರುವ ಸಂಪೂರ್ಣ ಮಾಹಿತಿ ವಾಟ್ಸ್‌ ಆ್ಯಪ್ ಹಾಗೂ ಜಾಲತಾಣದಲ್ಲಿ ಇರುವುದಿಲ್ಲ’  ಎಂದು ಹೇಳಿದರು.

‘ಈಗ ಎಲ್ಲಾ ಕಡೆಗಳಲ್ಲೂ ಸಂಘಟನೆಗಳು ಇದ್ದು, ಶಾಸಕರ ವೇದಿಕೆಯಂತಲೂ ನಾವು ಮಾಡಿದ್ದೇವೆ. ಸಂಘಟನೆಗಳ ಮೂಲಕ ನಾವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಮಾಧ್ಯಮಗಳು ಸುಧಾರಣೆಯಾದಷ್ಟು ಸಮಾಜಕ್ಕೆ ದಾರಿದೀಪವಾಗಲಿದೆ. ಇಂತಹ ಮಾಧ್ಯಮದವರಿಗೆ ಸರ್ಕಾರ ಭದ್ರತೆ ಒದಗಿಸಬೇಕು’ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ಜನರ ನಾಡಿಮಿಡಿತ ಅರಿತಿರುವ ಚಾನಲ್‌ಗಳು ಬ್ರೇಕಿಂಗ್ ನ್ಯೂಸ್ ಭರದಲ್ಲಿ ಸುದ್ದಿಗಳನ್ನು ವೈಭವೀಕರಿಸಲಾಗುತ್ತಿದ್ದು, ಇದರಿಂದ ಉಪಯೋಗವಿಲ್ಲ. ಸಮಾಜದ ಮತ್ತು ರಾಜಕಾರಣಿಗಳ ಅಂಕು –ಡೊಂಕು ಸರಿಪಡಿಸುವ ಅಧಿಕಾರ ಪತ್ರಕರ್ತರಿಗಲ್ಲದೇ ಬೇರೆಯಾರಿಗೂ ಇರುವುದಿಲ್ಲ. ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಆ ಪ್ರಾದೇಶಿಕವಾಗಿ ಇರುವ ಎಲ್ಲಾ ಸುದ್ದಿಗಳು ಸಿಗುವುದಿಲ್ಲ. ಹಾಗಾಗಿ ನಾವು ಟಿವಿ ಮಾಧ್ಯಮಗಳ ಮೊರೆ ಹೋಗಬೇಕಾಗುತ್ತದೆ. ಪತ್ರಿಕಾರಂಗ ತನ್ನದೇ ಆದ ಗೌರವ ಕಾಪಾಡಿಕೊಂಡಿದ್ದು, ನೈಜ ಸುದ್ದಿಗಳನ್ನು ಮಾತ್ರ ಪ್ರಕಟಿಸುವ ಮೂಲಕ ಅದನ್ನು ಉಳಿಸಿಕೊಳ್ಳಿ. ವಿಷಯವನ್ನ ಕೂಲಂಕಷವಾಗಿ ತಿಳಿದುಹಾಕಿದರೆ ಒಳ್ಳೆಯದು’ ಎಂದು ಸಲಹೆ ನೀಡಿದರು.‌

‘ಪತ್ರಿಕೋದ್ಯಮದ ದಿಕ್ಕು ಹಳ್ಳಹಿಡಿಯುತ್ತಿದೆ. ಪತ್ರಿಕೆ, ಟಿವಿ ನೋಡುವವರ ಸಂಖ್ಯೆ ಕಡಿಮೆಯಾಗಿದ್ದು, ಸಾಮಾಜಿಕ ಜಾಲತಾಣಗಳ ಅಬ್ಬರ ಹೆಚ್ಚಾಗಿದೆ. ಓದುಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ –ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದಿಗೆ ಒಂದು ಅವಧಿ ಮೀಸಲಿಡುವಂತೆ ಆಗಬೇಕು’ ಎಂದು ಪತ್ರಕರ್ತ ಕೆ.ಎನ್.ಚನ್ನೇಗೌಡ ದಿಕ್ಸೂಚಿ ಭಾಷಣದಲ್ಲಿ ತಿಳಿಸಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್  ಮಾತನಾಡಿ, ‘ಪತ್ರಕರ್ತರಿಗೆ ಬಸ್ ಪಾಸ್ ನೀಡಲು ಈ ಬಜೆಟ್‌ನಲ್ಲಿ ಕ್ರಮವಹಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.

‘ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ವಾಟ್ಸ್ ಆ್ಯಪ್‌, ಯೂಟ್ಯೂಬ್ ಚಾನೆಲ್‌ಗಳಿಗೆ ನಿರ್ಬಂಧ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ’ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ತಿಳಿಸಿದರು.

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ. ಒಡೆಯರ್, ರಾಜ್ಯ ಸಮಿತಿ ಸದಸ್ಯ ಕೆ.ಚಂದ್ರಣ್ಣ, ಗಿರೀಶ್ ಕೋಟೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ್, ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ್, ಕಾರ್ಯದರ್ಶಿ ಫಕೃದ್ದೀನ್ ಇದ್ದರು.

ಸರ್ಕಾರಗಳು ಪತ್ರಿಕೆ ಆರಂಭಿಸುವವರಿಗೆ ಮೂಲ ಸೌಲಭ್ಯ ಹಾಗೂ ಹಣಕಾಸಿನ ನೆರವು ನೀಡಿದರೆ ಪತ್ರಕರ್ತರು ಚೇತರಿಸಿಕೊಂಡು ಸ್ವಾವಲಂಬಿಗಳಾಗಲು ಸಾಧ್ಯ

-.ಎಸ್.ಬಸವಂತಪ್ಪ ಮಾಯಕೊಂಡ ಶಾಸಕ

ಯಾವುದೇ ಮಾಧ್ಯಮಗಳೂ ಬಂದರೂ ಪತ್ರಿಕೆಗಳನ್ನು ಓದಿದರೆ ಸಿಗುವ ತೃಪ್ತಿ ಮತ್ಯಾವುದರಲ್ಲೂ ಸಿಗುವುದಿಲ್ಲ. ಸುದ್ದಿಯಲ್ಲಿ ಸತ್ಯಾಂಶವಿದ್ದರೆ ಜನರು ಮತ್ತಷ್ಟು ವಿಶ್ವಾಸ ಇಡುತ್ತಾರೆ.

- ಬಿ.ಪಿ.ಹರೀಶ್ ಹರಿಹರ ಶಾಸಕ

ಸಮ್ಮೇಳನ ಯಶಸ್ವಿ

ಎರಡು ದಿನಗಳು ನಡೆದ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಯಿತು. ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಪತ್ರಕರ್ತರು ಆಗಮಿಸಿದ್ದು. ಎರಡು ದಿನಗಳೂ ಪತ್ರಕರ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT