ಗುರುವಾರ , ಅಕ್ಟೋಬರ್ 21, 2021
21 °C
ಚನ್ನಗಿರಿ ತಾಲ್ಲೂಕಿನ ಅಜ್ಜಿಹಳ್ಳಿಯ ಅಡಿಕೆ ಬೆಳೆಗಾರನಿಂದ ಕುರಿ ಸಾಕಾಣಿಕೆ

ದೇಶಿ, ವಿದೇಶಿ ತಳಿಗಳಿಂದ ಕೈತುಂಬಾ ಲಾಭ

ಎಚ್.ವಿ. ನಟರಾಜ್ Updated:

ಅಕ್ಷರ ಗಾತ್ರ : | |

Prajavani

ಅಜ್ಜಿಹಳ್ಳಿ (ಚನ್ನಗಿರಿ): ತಾಲ್ಲೂಕಿನ ಅಜ್ಜಿಹಳ್ಳಿಯ ಅಡಿಕೆ ಬೆಳೆಗಾರ ಮಹಾದೇವಪ್ಪ ಅವರು ದೇಶಿ ಹಾಗೂ ವಿದೇಶಿ ತಳಿಯ ಕುರಿಗಳನ್ನು ಸಾಕುವ ಮೂಲಕ ಕೈತುಂಬಾ ಲಾಭ ಗಳಿಸುತ್ತಿದ್ದಾರೆ.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಲ್ಟನ್ ತಾಲ್ಲೂಕು ಕೇಂದ್ರ ‘ನಾರಿ’ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಿದ ‘ನಾರಿ ಸುವರ್ಣ’ ತಳಿಯ 1 ಗಂಡು ಹಾಗೂ 1 ಹೆಣ್ಣು ಕುರಿಯನ್ನು ತಲಾ
₹ 50 ಸಾವಿರಕ್ಕೆ ಖರೀದಿಸಿ ತಂದಿದ್ದರು. ಈ ಕುರಿಯ ವಿಶೇಷವೆಂದರೆ ಹೆಣ್ಣು ಕುರಿಯು 2ರಿಂದ 5 ಮರಿಗಳಿಗೆ ಒಮ್ಮೆಗೆ ಜನ್ಮ ನೀಡುತ್ತದೆ. ಇಂತಹ ತಳಿಯ 10 ಹೆಣ್ಣು ಹಾಗೂ 3 ಗಂಡುಕುರಿಗಳನ್ನು ತಂದು ಸಾಕಿ, ಕೇವಲ 6 ತಿಂಗಳುಗಳಲ್ಲಿ 12 ಮರಿಗಳನ್ನು ಒಂದಕ್ಕೆ ₹ 30 ಸಾವಿರದಂತೆ ಮಾರಾಟ ಮಾಡಿ, ₹ 3.60 ಲಕ್ಷ ಗಳಿಸಿದ್ದಾರೆ. ಈ ಕುರಿಮರಿಗಳಿಗೆ ಮಹಾರಾಷ್ಟ್ರದ ಸಂಶೋಧನಾ ಕೇಂದ್ರದಿಂದ ಹೆಚ್ಚು ಬೇಡಿಕೆ ಇದೆ.

ಇಷ್ಟು ಮಾತ್ರವಲ್ಲದೇ ದಕ್ಷಿಣ ಆಫ್ರಿಕಾದಲ್ಲಿ ಅಭಿವೃದ್ಧಿಪಡಿಸಿದ ‘ಡಾರ್ಪರ್’ ಕುರಿಯನ್ನೂ ತಂದಿದ್ದಾರೆ. ಬೆಂಗಳೂರಿನ ‘ಇಂಚರ’ ಎಂಬ ಕುರಿ ನರ್ಸರಿಯಲ್ಲಿ ಈ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ. ದಕ್ಷಿಣ ಆಫ್ರಿಕಾದ ‘ಡಾರ್ಪರ್’ ತಳಿಯನ್ನು ದೇಶದಲ್ಲಿ ಈ ಕೇಂದ್ರದಲ್ಲಿ ಮಾತ್ರ ಅಭಿವೃದ್ಧಿಪಡಿಸಲಾಗುತ್ತಿದೆ. ತಲಾ ಒಂದು ಗಂಡು ಹಾಗೂ ಹೆಣ್ಣು ಕುರಿಗಳನ್ನು ತರಲಾಗಿದ್ದು, ಗಂಡು ಕುರಿಗೆ
₹ 2 ಲಕ್ಷ ಹಾಗೂ ಹೆಣ್ಣು ಕುರಿಗೆ ₹ 1.5 ಲಕ್ಷ ಕೊಟ್ಟು ಖರೀದಿಸಿದ್ದಾರೆ. ಈ ತಳಿಯ ಹೆಣ್ಣು ಕುರಿ ವರ್ಷಕ್ಕೆ ಒಂದು ಮರಿ ಹಾಕುತ್ತದೆ. ಈ ಕುರಿ ಮರಿಯು 100 ಕೆ.ಜಿ.ವರೆಗೂ ಬೆಳೆಯುತ್ತದೆ.

‘ಡಾರ್ಪರ್’ ತಳಿಯ ಕುರಿಗಳ ಮಾಂಸಕ್ಕೆ ನಗರ ಪ್ರದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಈ ಕುರಿಯ ಮಾಂಸ ಒಂದು ಕೆ.ಜಿ.ಗೆ ₹ 4 ಸಾವಿರವಿದ್ದು, ₹ 4 ಲಕ್ಷದವರೆಗೂ ಲಾಭ ಗಳಿಸಬಹುದಾಗಿದೆ. ಸ್ಟಾರ್ ಹೋಟೆಲ್‌ನವರು ಹೆಚ್ಚು ಖರೀದಿ ಮಾಡುತ್ತಾರೆ. 5 ಜೀನ್ಸ್‌ಗಳನ್ನು ಬಳಸಿ ಈ ಕುರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇಸ್ರೇಲ್ ದೇಶದ ‘ಅವಾಸಿ’, ಪಶ್ಚಿಮ ಬಂಗಾಳದ ‘ಗೆರೋಲ್’, ಮಹಾರಾಷ್ಟ್ರದ ‘ಡೆಕನಿ’ ಪ್ರದೇಶದಲ್ಲಿ ಇರುವ ಮಡಗ ಗ್ರಾಮದ ‘ಮಡಗ’ ಹಾಗೂ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮದಲ್ಲಿ ಇರುವ ‘ಬಂಡೂರು’ ಕುರಿಗಳ ಜೀನ್ಸ್‌ಗಳನ್ನು ಈ ಕುರಿಗಳ ಅಭಿವೃದ್ಧಿಗೆ ಬಳಸಲಾಗಿದೆ.

ರಾಗಿ ಹುಲ್ಲು, ಹಸಿರು ಹುಲ್ಲನ್ನು ಸಣ್ಣದಾಗಿ ಕತ್ತರಿಸಿ ಈ ಕುರಿಗಳಿಗೆ ನೀಡಲಾಗುತ್ತಿದೆ. ಕುರಿಗಳ ಸಾಕಾಣಿಕೆಗಾಗಿ ₹ 6 ಲಕ್ಷ ವೆಚ್ಚದಲ್ಲಿ ಶೆಡ್ ಅನ್ನು ನಿರ್ಮಿಸಲಾಗಿದೆ. ಸಿಒಎಫ್ಎಸ್ ಎಂಬ ಜಾತಿಯ ಹುಲ್ಲನ್ನು ಅರ್ಧ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದೆ. ಜತೆಗೆ ಮೆಕ್ಕೆಜೋಳ, ರಾಗಿ, ಗೋಧಿ ಹಾಗೂ ಅಕ್ಕಿಯನ್ನು ನುಚ್ಚು ಮಾಡಿ ಪ್ರತಿ ಕುರಿಗೆ 200 ಗ್ರಾಂನಂತೆ ಪ್ರತಿ ದಿನವೂ ನೀಡಲಾಗುತ್ತಿದೆ.

‘ನಾನು ಮಾಂಸ ತಿನ್ನುವವನಲ್ಲ. ಆದರೂ ಕುರಿಗಳನ್ನು ಸಾಕಿದ್ದೇನೆ. ತಾಲ್ಲೂಕಿನ ರೈತರೂ ನಮ್ಮಂತೆ ಕುರಿಗಳನ್ನು ಸಾಕಿ, ಹೆಚ್ಚು ಆದಾಯವನ್ನು ಪಡೆಯಲಿ ಎಂಬುದು ನನ್ನ ಆಶಯ’ ಎಂದು ರೈತ  ಮಹಾದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು