ಬುಧವಾರ, ಫೆಬ್ರವರಿ 19, 2020
30 °C
ಮಹದಾಯಿ ವಿವಾದ, ಅಧಿವೇಶನದಲ್ಲಿ ಪ್ರಸ್ತಾಪ: ಹೊರಟ್ಟಿ

‘ದೆಹಲಿ ಭೇಟಿ ಬಳಿಕ ಮುಂದಿನ ನಡೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮಹದಾಯಿ ನದಿ ನೀರನ್ನು ಮಲಪ್ರಭೆಗೆ ಹರಿಸುವ ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆ ಜಾರಿಗೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲು ದೆಹಲಿಗೆ ಹೋಗುತ್ತೇವೆ. ಅಲ್ಲಿಂದ ಬಂದ ಬಳಿಕ ಮುಂದಿನ ನಡೆಯ ಬಗ್ಗೆ ರೈತರೊಂದಿಗೆ ಸಮಾಲೋಚಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಹೊರಟ್ಟಿ ‘ಭಾನುವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್‌ ಜೊತೆ ಈ ವಿಷಯ ಕುರಿತು ಚರ್ಚಿಸಿದ್ದೇನೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಸಚಿವರನ್ನು ಭೇಟಿಯಾಗಲು ಸಮಯ ತೆಗೆದುಕೊಳ್ಳುತ್ತೇನೆ ಎಂದು ಜೋಶಿ ತಿಳಿಸಿದ್ದಾರೆ. ದಿನಾಂಕ ಅಂತಿಮವಾದ ಬಳಿಕ ದೆಹಲಿಗೆ ತೆರಳಲಾಗುವುದು. ಮಹದಾಯಿ ವಿವಾದ ಬಗ್ಗೆ ಅಧಿವೇಶದಲ್ಲಿಯೂ ಪ್ರಸ್ತಾಪಿಸಲಾಗುವುದು’ ಎಂದರು.

ಯಾರು ದುರ್ಬಲ, ನೀವೇ ತೀರ್ಮಾನಿಸಿ

ಯಡಿಯೂರಪ್ಪ ಅವರನ್ನು ದುರ್ಬಲ ಮುಖ್ಯಮಂತ್ರಿ ಎಂದಿದ್ದ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶೆಟ್ಟರ್‌ ‘ಸಿದ್ದರಾಮಯ್ಯನವರ ಎಲ್ಲ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಎಷ್ಟೊಂದು ದುರ್ಬಲರಾಗಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ’ ಎಂದರು.

‘ರಾಜ್ಯ ಬಜೆಟ್‌ ಬಗ್ಗೆ ಚರ್ಚಿಸಿದ್ದೇನೆ. ನನ್ನ ಇಲಾಖೆಗೆ ಮತ್ತು ನಮ್ಮ ಭಾಗಕ್ಕೆ ಬರಬೇಕಾದ ಯೋಜನೆಗಳ ಬಗ್ಗೆಯೂ ಚರ್ಚಿಸಲಾಗಿದೆ. ಫೆ. 14ರಂದು ಹುಬ್ಬಳ್ಳಿಯಲ್ಲಿ ನಡೆಯುವ ಹುಬ್ಬಳ್ಳಿ ಇನ್ವೆಸ್ಟ್‌ ಕರ್ನಾಟಕ ಸಮಾವೇಶಕ್ಕೆ ಒಂದು ಸಾವಿರಕ್ಕೂ ಹೆಚ್ಚು ಉದ್ಯಮಿಗಳನ್ನು ಆಹ್ವಾನಿಸಲಾಗಿದೆ. 400ರಿಂದ 500 ಜನ ಬರುವ ನಿರೀಕ್ಷೆಯಿದೆ. ಸಮಾವೇಶಕ್ಕೆ ಒಂದೆರೆಡು ದಿನ ಬಾಕಿ ಉಳಿದಾಗ ಇದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದರು.

ಶೆಟ್ಟರ್‌–ಹೊರಟ್ಟಿ ಮಾತಿನ ಜುಗಲ್‌ಬಂದಿ

ಯಡಿಯೂರಪ್ಪ ಅವರ ಕೌಟುಂಬಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜಗದೀಶ ಶೆಟ್ಟರ್‌ ಹಾಗೂ ಬಸವರಾಜ ಹೊರಟ್ಟಿ ಹುಬ್ಬಳ್ಳಿಯ ಡೆನಿಸನ್‌ ಹೋಟೆಲ್‌ಗೆ ಬಂದಿದ್ದರು. ಈ ವೇಳೆ ಅವರು ಅಕ್ಕಪಕ್ಕದಲ್ಲಿದ್ದುಕೊಂಡೇ ಮಾಧ್ಯಮಗಳಿಗೆ ನೀಡಿದ ಹೇಳಿಕೆ, ಪ್ರತಿ ಹೇಳಿಕೆಗಳ ಝಲಕ್‌ ಇಲ್ಲಿದೆ.

* ಹೊರಟ್ಟಿ: ಕುಮಾರಸ್ವಾಮಿ ಕಿಂಗ್‌ ಮೇಕರ್ ಆಗುತ್ತಾರೆ ಎಂದು ಯಾವ ಸಂದರ್ಭದಲ್ಲಿ ಹೇಳಿದ್ದೇನೆ ಎಂಬುದನ್ನು ಶೆಟ್ಟರ್‌ ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಮೂಲ ಬಿಜೆಪಿಗರು ಅಸಮಾಧಾನಗೊಂಡು ಪವಾಡ ನಡೆದರೆ ಮಾತ್ರ ಕಿಂಗ್‌ ಮೇಕರ್‌ ಆಗುವ ಅವಕಾಶ ಇದೆ ಎಂದಿದ್ದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಶೆಟ್ಟರ್, ಹೊರಟ್ಟಿಗೆ ತಲೆಕೆಟ್ಟಿದೆ ಎಂದರು. ಅವರ ಪಕದಲ್ಲಿದ್ದುಕೊಂಡೇ ಒಂದು ವಿಷಯ ಸ್ಪಷ್ಟಪಡಿಸುತ್ತಿದ್ದೇನೆ. ನನಗಿನ್ನು ತಲೆ ಕೆಟ್ಟಿಲ್ಲ.

* ಶೆಟ್ಟರ್: ಹೊರಟ್ಟಿ ಏನು ಹೇಳಿದ್ದಾರೆ ಎಂದು ಸಂಪೂರ್ಣವಾಗಿ ನನಗೆ ತಿಳಿಯದ ಕಾರಣ ಈ ಗೊಂದಲ ಉಂಟಾಗಿದೆ.

* ಹೊರಟ್ಟಿ: ನಾನು ಬಿಜೆಪಿಗೆ ಹೋಗುತ್ತೇನೆ ಎಂದು ನೀವೇ (ಮಾಧ್ಯಮದವರು) ಎರಡು ವರ್ಷಗಳಿಂದ ಹೇಳುತ್ತಿದ್ದೀರಿ. ಯಡಿಯೂರಪ್ಪ, ಸಿದ್ದರಾಮಯ್ಯ ಅವರೆಲ್ಲರೂ ಪಕ್ಷಾತೀತವಾಗಿ ನನಗೆ ಆತ್ಮೀಯರಾದ ಕಾರಣ ಅವರೊಂದಿಗೆ ಬೆರೆಯುತ್ತೇನೆ ಅಷ್ಟೇ. ಅಷ್ಟಕ್ಕೂ ಬಿಜೆಪಿಗೆ ಬರುವಂತೆ ಶೆಟ್ಟರ್‌ ಆಗಲಿ; ಪ್ರಲ್ಹಾದ ಜೋಶಿ ಆಗಲಿ ಆಹ್ವಾನ ನೀಡಿಲ್ಲ.

* ಶೆಟ್ಟರ್‌: (ನಗುತ್ತಾ) ವಿಧಾನಪರಿಷತ್‌ನಲ್ಲಿ ದಾಖಲೆ ಮಾಡಿದ ಹೊರಟ್ಟಿಯವರು ಬಿಜೆಪಿಗೆ ಬರುವುದಾದರೆ ಸ್ವಾಗತ ಮಾಡುತ್ತೇನೆ.

* ಹೊರಟ್ಟಿ: ಪಕ್ಷಕ್ಕೆ ಆಹ್ವಾನಿಸಿದ್ದಕ್ಕೆ ‌ಧನ್ಯವಾದ. ಅವರ ಪ್ರೀತಿ, ವಿಶ್ವಾಸಕ್ಕೆ ಬದ್ಧನಾಗಿರುತ್ತೇನೆ. ಆದರೆ ಇಂಥ ವಿಷಯದಲ್ಲಿ ಬಹಳ ಸೂಕ್ಷ್ಮನಾಗಿರುತ್ತೇನೆ. ಸಿದ್ದಾಂತಗಳನ್ನು ನಂಬಿಕೊಂಡು ರಾಜಕಾರಣಕ್ಕೆ ಬಂದವನು ನಾನು. ನನ್ನ ಪಕ್ಷದ ನಾಯಕರ ಬಗ್ಗೆ ಅಸಮಾಧಾನವಾದರೆ ಬಹಿರಂಗವಾಗಿ ನೋವು ತೋಡಿಕೊಳ್ಳುತ್ತೇನೆ. ಆದರೆ ಜೆಡಿಎಸ್‌ ಬಿಟ್ಟು ಹೋಗುವ ಪ‍್ರಶ್ನೆಯೇ ಇಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು