ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಸೂಳೆಕೆರೆ ಜಲ ವಿದ್ಯುತ್ ಯೋಜನೆಗೆ ವಿರೋಧ

ರೈತರ, ಗ್ರಾಮಸ್ಥರ ನಿರ್ಧಾರಕ್ಕೆ ಬದ್ಧ;ಹೋರಾಟಕ್ಕೆ ಸಿದ್ಧ; ಮಾಡಾಳ್‌ ವಿರೂಪಾಕ್ಷಪ್ಪ
Last Updated 16 ಆಗಸ್ಟ್ 2020, 12:02 IST
ಅಕ್ಷರ ಗಾತ್ರ

ಚನ್ನಗಿರಿ: ‘ತಾಲ್ಲೂಕಿನ ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಸೂಳೆಕೆರೆಯಲ್ಲಿ ₹ 1347 ಕೋಟಿ ವೆಚ್ಚದಲ್ಲಿ ಜಲ ವಿದ್ಯುತ್ ತಯಾರಿಕಾ ಘಟಕವನ್ನು ಆರಂಭಿಸಲು ಖಾಸಗಿ ಕಂಪನಿಯೊಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿರುವ ಮಾಹಿತಿ ಇದ್ದು, ಯಾವುದೇ ಕಾರಣಕ್ಕೂ ರೈತರಿಗೆ ಮಾರಕವಾದ ಈ ಯೋಜನೆಯನ್ನು ಆರಂಭಿಸಲು ಬಿಡುವುದಿಲ್ಲ’ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿ‌ದರು.

ತಾಲ್ಲೂಕಿನ ಅರಿಶಿನಘಟ್ಟ ಗ್ರಾಮದಲ್ಲಿ ಭಾನುವಾರ ಜಲ ವಿದ್ಯುತ್ ಯೋಜನೆ ಆರಂಭದ ಬಗ್ಗೆ ನಡೆದ ರೈತರ, ಸಾರ್ವಜನಿಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಯೋಜನೆಗೆ 201 ಎಕರೆ ಜಮೀನು ಬೇಕು ಎಂದು ಕಂಪನಿ ತಿಳಿಸಿದೆ. 140 ಎಕರೆ ಅರಣ್ಯ ಭೂಮಿ ಹಾಗೂ 67 ಎಕರೆ ಖಾಸಗಿ ಜಮೀನು ಒಳಪಡುತ್ತದೆ. ಈ ಕೆರೆ ಕುಡಿಯುವ ನೀರು, ರೈತರ ಜಮೀನಿಗೆ ನೀರು ಒದಗಿಸುವ ಹಾಗೂ ಮೀನುಗಾರರ ಕೆರೆಯಾಗಿದೆ. ಈ ಯೋಜನೆ ಆರಂಭವಾದರೆ ಸೂಳೆಕೆರೆಯ ಅಂದವೇ ಹಾಳಾಗುವುದರ ಜತೆಗೆ ಪರಿಸರ ನಾಶ, ರೈತರಿಗೆ ಹಾಗೂ ಮೀನುಗಾರರಿಗೆ ಅನ್ಯಾಯವಾಗಲಿದೆ ಎಂದರು.

‘ಈ ಯೋಜನೆ ಆರಂಭಕ್ಕೆ ತಾಲ್ಲೂಕಿನ ರೈತರು, ಮೀನುಗಾರರು ಹಾಗೂ ಯೋಜನೆಗೆ ಒಳಪಡುವ ಗ್ರಾಮಗಳ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಸೂಳೆಕೆರೆಯ ಗುಡ್ಡಗಳಲ್ಲಿ ಪ್ಲಾಟಿನಂ ಹಾಗೂ ಯುರೇನಿಯಂ ಅದಿರು ಇರುವುದು ಗೊತ್ತಾಗಿ ಈ ಖಾಸಗಿ ಕಂಪನಿ ದುರುದ್ದೇಶದಿಂದ ಯೋಜನೆಗೆ ಪ್ರಸ್ತಾವ ಸಲ್ಲಿಸಿದೆ. ಈಗಾಗಲೇ ಮುಖ್ಯಮಂತ್ರಿ, ಕೈಗಾರಿಕೆ ಸಚಿವ, ಜಲ ಸಂಪನ್ಮೂಲ ಸಚಿವರಿಗೆ ಈ ಯೋಜನೆ ಆರಂಭಕ್ಕೆ ನನ್ನ ಒಪ್ಪಿಗೆ ಇಲ್ಲವೆಂದು ತಿಳಿಸಿದ್ದೇನೆ. ಇದಕ್ಕೂಮೀರಿ ಸರ್ಕಾರ ಈ ಯೋಜನೆ ಆರಂಭಕ್ಕೆ ಅನುಮತಿ ನೀಡಿದರೆ ರೈತರ ಪರ ಎಂತಹ ಹೋರಾಟಕ್ಕೂ ಸಿದ್ಧ’ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ದೇವರು ಕೊಟ್ಟ ಸುಂದರ ಕೆರೆ ಸೂಳೆಕೆರೆ. ಈ ಕೆರೆಯನ್ನು ನಂಬಿಕೊಂಡು 4ರಿಂದ 5 ಲಕ್ಷ ಜನರು ಇದ್ದಾರೆ. ಈ ಯೋಜನೆ ಆರಂಭಿಸಲು ಅನುಮತಿ ನೀಡಿದರೆ ಇವರೆಲ್ಲರಿಗೂ ಸಮಸ್ಯೆಯಾಗಲಿದೆ.ಪರಿಸರ ಹಾಗೂ ಅರಣ್ಯ ಇಲಾಖೆಗಳಿಂದ ಈ ಗುಡ್ಡಗಳ ಮಾಹಿತಿಯನ್ನು ಪಡೆದುಕೊಂಡು ಸರ್ಕಾರಕ್ಕೆ ನಾಲ್ಕೈದು ದಿನಗಳಲ್ಲಿ ಸಮಗ್ರ ವರದಿ ಸಲ್ಲಿಸುತ್ತೇನೆ. ಈ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಇರುವವರೆಗೆ ಜಲ ವಿದ್ಯುತ್ ಯೋಜನೆ ಆರಂಭಿಸಲು ಅನುಮತಿ ನೀಡುವುದಿಲ್ಲ’ ಎಂದು ಭರವಸೆ ನೀಡಿದರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪ್ರಭಾರ ಎಸ್‌ಪಿ ಮಲ್ಲಿಕಾರ್ಜುನ್, ಡಿವೈಎಸ್‌ಪಿ ಬಸವರಾಜ್, ಜಿಲ್ಲಾ ಪಂಚಾಯಿತಿ ಎಇಇ ಸತ್ಯನಾರಾಯಣ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್. ಪ್ರಕಾಶ್, ತಹಶೀಲ್ದಾರ್ ಪುಟ್ಟರಾಜಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಎನ್. ಲೋಕೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ವಿ. ರುದ್ರಪ್ಪ, ಎಸ್.ಎ. ರುದ್ರೇಗೌಡ್ರು ಇದ್ದರು.

ಇದೇ ವೇಳೆ ಯೋಜನೆಗೆ ವಿರೋಧ ವ್ಯಕ್ತಪಡಿಸಿ ತಾಲ್ಲೂಕು ಖಡ್ಗ ಸಂಘದ ಕಾರ್ಯದರ್ಶಿ ಬಿ.ಆರ್. ರಘು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT