ಗುರುವಾರ , ಸೆಪ್ಟೆಂಬರ್ 23, 2021
27 °C

ಪೊಲೀಸ್ ಪಬ್ಲಿಕ್ ವಸತಿ ಶಾಲೆಯ ಲೋಕಾರ್ಪಣೆಗೆ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ತಾಲೂಕಿನ ಕೊಂಡಜ್ಜಿ ಗ್ರಾಮದ ಹಸಿರು ಪರಿಸರದಲ್ಲಿ ಮಧ್ಯ ಕರ್ನಾಟಕದ ಬಹು ನಿರೀಕ್ಷಿತ ಪೊಲೀಸ್ ಪಬ್ಲಿಕ್ ವಸತಿ ಶಾಲೆ ಸೆ.2ರಂದು ಸಂಜೆ 4ಕ್ಕೆ ವಿದ್ಯುಕ್ತವಾಗಿ ಲೋಕಾರ್ಪಣೆಗೊಳ್ಳಲಿದೆ.

ಕೊಂಡಜ್ಜಿ ಕೆರೆಯಂಗಳದ 10 ಎಕರೆ ವಿಶಾಲ ಪ್ರದೇಶದಲ್ಲಿ ₹ 13.50 ಕೋಟಿ ವೆಚ್ಚದಲ್ಲಿ ವಸತಿ ಶಾಲೆ ಕಟ್ಟಡ ನಿರ್ಮಾಣಗೊಂಡಿದೆ. ಶಾಲೆಯ ಲೋಕಾರ್ಪಣೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಿವಿಧ ಸಚಿವರು ಬರಲಿದ್ದಾರೆ.

220 ವಿದ್ಯಾರ್ಥಿಗಳಿಗೆ ಅವಕಾಶ

ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗೆ ವಿದ್ಯಾಭ್ಯಾಸಕ್ಕೆ ಅವಕಾಶವಿದೆ. 60 ಬಾಲಕಿಯರು, 160 ಬಾಲಕರು ಸೇರಿ ಒಟ್ಟು 220 ವಿದ್ಯಾರ್ಥಿಗಳ ಶಿಕ್ಷಣ, ವಸತಿಗೆ ಇಲ್ಲಿ ಅವಕಾಶವಿದೆ.

ಸುಂದರ ಪರಿಸರ

ಕೊಂಡಜ್ಜಿ ಗ್ರಾಮ ಸ್ಕೌಟ್ಸ್ ಅಂಡ್ ಗೈಡ್ಸ್ ಕೇಂದ್ರದ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅರಣ್ಯ, ಪರಿಸರ, ಕೆರೆಯ ಮೂಲಕ ಪ್ರವಾಸಿ ಕ್ಷೇತ್ರವಾಗಿ ಹೆಸರಾಗಿರುವ ಇಲ್ಲಿನ ಪ್ರಾಕೃತಿಕ ವಾತಾವರಣ ವಿದ್ಯಾಭ್ಯಾಸಕ್ಕೆ ಪೂರಕವಾಗಲಿದೆ.

ಶೈಕ್ಷಣಿಕ ಹಬ್ ಕೊಂಡಜ್ಜಿ

ತಾಲ್ಲೂಕಿನ ಹಿರಿಯ ರಾಜಕಾರಣಿ ದಿವಂಗತ ಕೊಂಡಜ್ಜಿ ಬಸಪ್ಪರ ಶ್ರಮದಿಂದ ಈ ಗ್ರಾಮದ ಕೆರೆಯ ದಡದಲ್ಲಿ 70ರ ದಶಕದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಕೇಂದ್ರ ಆರಂಭಿಸಲಾಯಿತು. ನಂತರ ಈ ಪರಿಸರದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಇಂದಿರಾಗಾಂಧಿ ವಸತಿ ಶಾಲೆಗಳು ನಡೆಯುತ್ತಿವೆ. ಇದರ ಜೊತೆಗೆ ಪೊಲೀಸ್ ಪಬ್ಲಿಕ್ ವಸತಿ ಶಾಲೆಯೂ ಸೇರ್ಪಡೆಯಾದಂತಾಗಿದೆ. ಒಟ್ಟಿನಲ್ಲಿ ಕೊಂಡಜ್ಜಿ ಸರಕಾರಿ ವಸತಿ ಶಾಲೆಗಳ ಹಬ್ ಆಗಿ ರೂಪುಗೊಳ್ಳುತ್ತಿದೆ.

ಮಧ್ಯ ಕರ್ನಾಟಕದ ಮೊದಲ ಶಾಲೆ

ಪೊಲೀಸ್ ಇಲಾಖೆಯ ಪೂರ್ವ ವಲಯ ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಗಳ ಪೈಕಿ ಇದು ಮೊದಲ ಪೊಲೀಸ್ ಪಬ್ಲಿಕ್ ಶಾಲೆಯಾಗಿದೆ. ಇದರಿಂದಾಗಿ ಮಧ್ಯ ಕರ್ನಾಟಕಕ್ಕೆ ಇದು ಏಕೈಕ ಪೊಲೀಸ್ ವಸತಿ ಶಾಲೆಯಾಗುವ ಹೆಮ್ಮೆಯೂ ಇದೆ.

ದಿಢೀರ್ ರಸ್ತೆ ನಿರ್ಮಾಣ

ಅಮಿತ್ ಶಾ ಹಾಗೂ ಗಣ್ಯರು ಬಂದು ಹೋಗುವ ರಸ್ತೆ ನಿರ್ಮಾಣ ಕಾಮಗಾರಿ ಪಿಡಬ್ಲ್ಯುಡಿ ಹಾಗೂ ಪ್ರಧಾನ ಮಂತ್ರಿ ಗ್ರಾಮ ಸಡಕ್‌ನಿಂದ ಶಾಲೆಗೆ ಅಂದಾಜು 5 ಕಿ.ಮೀ. ರಸ್ತೆ ನಿರ್ಮಾಣ ಕಾಮಗಾರಿ ಹಗಲು ರಾತ್ರಿ ನಡೆಯುತ್ತಿದೆ.

‘ರಸ್ತೆ ಸರಿಪಡಿಸಿ ಎಂದು ಹಿಂದೆ ಪ್ರತಿಭಟನೆ ಮಾಡಿದರೂ ನಮ್ಮ ಮಾತು ಕೇಳುತ್ತಿರಲಿಲ್ಲ, ಈಗ ಆದರೀಗ ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಮಾಡುತ್ತಿರುವುದು ಸಂತಸ ಮೂಡಿಸಿದೆ’ ಎಂದು ಗ್ರಾಮದ ಜನರು ಖುಷಿ ಪಟ್ಟಿದ್ದಾರೆ.

ಮುಂದಿನ ವರ್ಷ ಶಾಲೆ ಆರಂಭ

ಈ ಪೊಲೀಸ್ ವಸತಿ ಶಾಲೆಯು 2022-23ರ ಶೈಕ್ಷಣಿಕ ಸಾಲಿನಲ್ಲಿ ಕಾರ್ಯಾರಂಭಿಸಲಿದೆ. ಪೊಲೀಸ್ ಸಿಬ್ಬಂದಿಯ ಜೊತೆಗೆ ಸಾರ್ವಜನಿಕರ ಮಕ್ಕಳ ವಿದ್ಯಾಭ್ಯಾಸಕ್ಕೂ ಅವಕಾಶವಿದೆ. ಪೊಲೀಸ್ ಸಿಬ್ಬಂದಿಗಳ ಮಕ್ಕಳ ನೇಮಕಾತಿಗೆ ಅನುಪಾತದ ಆಧಾರದ ಮೇಲೆ ನಿರ್ಧರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಇನ್ನೂ ಪ್ರವೇಶಾತಿಯ ನಿಯಮಗಳನ್ನು ಅಂತಿಮಗೊಳಿಸಿಲ್ಲ. ಇಲಾಖೆ ಹಿರಿಯ ಅಧಿಕಾರಿಗಳು ಈ ಕುರಿತು ಮುಂದೆ ಪ್ರಕಟಣೆ ನೀಡಲಿದ್ದಾರೆ ಎಂದು ಹರಿಹರ ಸಿಪಿಐ ಸತೀಶ್ ಕುಮಾರ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.