ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್ ಇನ್: 'ಮಕ್ಕಳನ್ನು ಅನುಮಾನದಿಂದ ನೋಡೋದು ಬಿಡಿ'

ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಮನಃಶಾಸ್ತ್ರಜ್ಞೆ ಡಾ.ಆಶಾ ಎಚ್‌.ಎನ್‌. ಸಲಹೆ
Last Updated 11 ಜನವರಿ 2022, 6:49 IST
ಅಕ್ಷರ ಗಾತ್ರ

ದಾವಣಗೆರೆ: ‘ಕೊರೊನಾ ಸೋಂಕು ಬರುವ ಮುಂಚೆ ಹೆತ್ತವರು ಕೆಲಸಕ್ಕೆ ಹೋಗುತ್ತಿದ್ದರು. ಮಕ್ಕಳು ಶಾಲಾ, ಕಾಲೇಜುಗಳಿಗೆ ಹೋಗುತ್ತಿದ್ದರು. ಹಾಗಾಗಿ ಮಕ್ಕಳ ಮೇಲೆ ಹೆತ್ತವರ ನಿಗಾ ಒಂದು ಮಿತಿಯಲ್ಲಿ ಇರುತ್ತಿತ್ತು. ಕೊರೊನಾ ಬಂದಿದ್ದರಿಂದ ಹೆತ್ತವರಿಗೆ ವರ್ಕ್‌ ಫ್ರಮ್‌ ಹೋಂ ಶುರುವಾಯಿತು. ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ ಅಂದರೆ ಸ್ಕೂಲ್‌ ಫ್ರಂ ಹೋಂ ಆರಂಭವಾಯಿತು. ಮನೆಯಲ್ಲೇ ಇರುವ ಹೆತ್ತವರು ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಪದೇ ಪದೇ ಅನುಮಾನದಿಂದ ನೋಡುವುದೇ ಮಕ್ಕಳಿಗೆ ಕಿರಿಕಿರಿ ಉಂಟು ಮಾಡಿದೆ. ಅನುಮಾನದಿಂದ ನೋಡುವುದನ್ನೇ ಹೆತ್ತವರು ಕಡಿಮೆ ಮಾಡಬೇಕು...’

‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಇಲ್ಲಿನ ಎಸ್‌.ಎಸ್‌. ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಮನಃಶಾಸ್ತ್ರಜ್ಞೆ ಡಾ.ಆಶಾ ಎಚ್‌.ಎನ್‌. ನೀಡಿದ ಸಲಹೆ ಇದು.

‘ಮಕ್ಕಳಿಗೆ ಜವಾಬ್ದಾರಿಯೇ ಇಲ್ಲ ಎಂದು ಹೆತ್ತವರು ತಿಳಿದುಕೊಂಡಿರುತ್ತಾರೆ. ಮಕ್ಕಳೂ ಜವಾಬ್ದಾರಿ ಹೊಂದಿರುತ್ತಾರೆ. ಅದನ್ನು ಅರ್ಥ ಮಾಡಿಕೊಂಡು ಪ್ರೋತ್ಸಾಹ ನೀಡಬೇಕು. ಪಾಠಕ್ಕೆ ಸಂಬಂಧಿಸಿದಂತೆ ಮಾತ್ರ ಆನ್‌ಲೈನ್‌ ಬಳಸುತ್ತಿದ್ದಾರಾ? ಓದುತ್ತಿದ್ದಾರಾ? ಎಂದು ಪದೇ ಪದೇ ಇಣುಕಿ ನೋಡಬೇಡಿ’ ಎಂದು ತಿಳಿಸಿದರು.

ಕೊರೊನಾ ಪರಿಣಾಮ: ಕೊರೊನಾ ಬಂದ ಬಳಿಕ ಮಕ್ಕಳ ನಡವಳಿಕೆಯ ಮೇಲೆ ಮತ್ತು ಕಲಿಕಾ ರೀತಿಯ ಮೇಲೆ ಬಹಳ ಪರಿಣಾಮ ಉಂಟು ಮಾಡಿದೆ. ನಿತ್ಯ ತರಗತಿಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳು ಮನೆಯಲ್ಲಿ ಕುಳಿತು ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌ಗಳಲ್ಲಿ ಆನ್‌ಲೈನ್‌ಗಳಲ್ಲಿ ಮುಳುಗುವಂತಾಯಿತು. ಅದು ಮಕ್ಕಳಿಗೆ ಅಡಿಕ್ಷನ್‌ ಆಗಿದೆ. ಮಕ್ಕಳ ಮೆದುಳಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ಕೂಡ ಬದಲಾಗಿದೆ. ಸಹಜವಾಗಿಯೇ ಮಕ್ಕಳಲ್ಲಿ ಸಿಟ್ಟು ಹೆಚ್ಚಾಗಿದೆ. ಆತಂಕ ಹೆಚ್ಚಾಗಿದೆ. ಆನ್‌ಲೈನ್‌ ತರಗತಿ ಮುಗಿದು ಆಫ್‌ಲೈನ್‌ ಅಂದರೆ ಶಾಲಾ, ಕಾಲೇಜುಗಳಿಗೆ ಬಂದು ಹಿಂದಿನಂತೆ ಪಾಠ ಕೇಳಲು ಆರಂಭಿಸಿದರೆ ಮತ್ತೆ ಹಿಂದಿನ ಸ್ಥಿತಿಗೆ ಹೊಂದಿಕೊಳ್ಳಲು 6 ತಿಂಗಳಾದರೂ ಬೇಕು. ಅಲ್ಲಿವರೆಗೆ ಹೆತ್ತವರು ಕೂಡ ತಾಳ್ಮೆ ವಹಿಸಬೇಕಾಗುತ್ತದೆ ಎಂದು ವಿವರಿಸಿದರು.

‘ತರಗತಿಯಲ್ಲಿ ಇರುವಾಗ ಗುಡ್‌, ವೆರಿಗುಡ್‌ ಮುಂತಾದ ರಿವಾರ್ಡ್‌ಗಳು ಶಿಕ್ಷಕರಿಂದ ಸಿಕ್ಕಿದಾಗ ಮಕ್ಕಳಲ್ಲಿ ಉತ್ಸಾಹ ಹೆಚ್ಚುತ್ತಿತ್ತು. ಹೆತ್ತವರು ಎಷ್ಟೇ ಪ್ರೀತಿ ನೀಡಿದರೂ ತನ್ನ ಸ್ನೇಹಿತರ ಜತೆಗೆ ಬೆರೆಯುವಾಗ, ವಿಚಾರಗಳನ್ನು ಹಂಚಿಕೊಳ್ಳುವಾಗ ಸಿಗುವ ಖುಷಿ ಮನೆಯಲ್ಲಿ ಸಿಗಲ್ಲ. ತರಗತಿಯ ತನ್ನ ಸಹಪಾಠಿಗಳು ಪರಸ್ಪರ ಸಹಕಾರ ನೀಡುವವರೂ, ಸ್ಪರ್ಧಿಗಳೂ ಆಗಿರುತ್ತಿದ್ದರು. ಇವೆಲ್ಲ ಆನ್‌ಲೈನ್‌ ತರಗತಿಗಳಿಂದ ತಪ್ಪಿ ಹೋಗಿವೆ’ ಎಂದರು.

‘ದೊಡ್ಡ ಮಕ್ಕಳು ಹೇಗೋ ಆನ್‌ಲೈನ್‌ಗೆ ಹೊಂದಿಕೊಳ್ಳುತ್ತವೆ. ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಯ ಸಣ್ಣ–ಸಣ್ಣ ಮಕ್ಕಳಿಗೆ ಹೇಗೆ ಆನ್‌ಲೈನ್‌ನಲ್ಲಿ ಕಲಿಸುವುದು ಎಂಬ ಒತ್ತಡ ಹೆತ್ತವರಿಗೂ ಉಂಟಾಗಿದೆ. ಇದಕ್ಕಿಂತಲೂ ಕೊರೊನಾ ಕಾಲದಲ್ಲಿ ಉಂಟಾದ ಆರ್ಥಿಕ ಪಲ್ಲಟಗಳು ದೊಡ್ಡ ಪರಿಣಾಮವನ್ನು ಉಂಟು ಮಾಡಿದೆ. ಐಟಿ ಬಿಟಿಯಲ್ಲಿದ್ದವರು, ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದವರು, ಕೂಲಿ ಕಾರ್ಮಿಕರು ಹೀಗೆ ಅನೇಕರು ಉದ್ಯೋಗ ಕಳೆದುಕೊಂಡರು. ಹೆತ್ತವರ ಆರ್ಥಿಕ ಸಮಸ್ಯೆ ಮಕ್ಕಳ ಮೇಲೂ ಉಂಟಾದವು. ಹಲವರು ಪೇಟೆ ಬಿಟ್ಟು ತಮ್ಮ ಮೂಲ ಹಳ್ಳಿಗಳಿಗೆ ಮರಳಿದರು. ಯಾವುದೋ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳನ್ನು ಅಲ್ಲಿಂದ ಬಿಡಿಸಿ, ಕಡಿಮೆ ಶುಲ್ಕ ಇರುವ ಶಾಲೆಗೆ ಸೇರಿಸಲಾಯಿತು. ಹೊಸ ಪರಿಸರ, ಹೊಸ ಶಿಕ್ಷಕರು, ಹೊಸ ಸಹಪಾಠಿಗಳಿಗೆ ಹೊಂದಿಕೊಳ್ಳುವುದು ಮಕ್ಕಳಿಗೆ ಸಮಸ್ಯೆಯಾಯಿತು ಎಂದು ವಿವರಿಸಿದರು.

ಯಾವುದೇ ಸಮಸ್ಯೆಯನ್ನು ಒಮ್ಮೆಲೆ ಸರಿಪಡಿಸಲು ಆಗುವುದಿಲ್ಲ. ಕೊರೊನಾ ಬಂದಿರುವುದರಿಂದ ಆನ್‌ಲೈನ್‌ ಕ್ಲಾಸ್‌ ವಾಸ್ತವ ಎಂಬುದನ್ನು ಮೊದಲು ಒಪ್ಪಿಕೊಳ್ಳಬೇಕು. ಸಮಸ್ಯೆ ಗುರುತಿಸಿ ಹಂತಹಂತವಾಗಿ ಪರಿಹಾರ ಕಂಡುಕೊಳ್ಳಬೇಕು. ಆನ್‌ಲೈನ್‌ ಜತೆಜತೆಗೆ ಮಕ್ಕಳಿಗೆ ಪಠ್ಯಪುಸ್ತಕ ಓದುವುದನ್ನು ಅಭ್ಯಾಸ ಮಾಡಿಸಬೇಕು. ಬರೆಯುವುದನ್ನು ಅಭ್ಯಾಸ ಮಾಡಿಸಬೇಕು. ಅದಕ್ಕಾಗಿಯೇ ಸಮಯ ನಿರ್ಧರಿಸಬೇಕು ಎಂದು ಸಲಹೆ ನೀಡಿದರು.

ಮಕ್ಕಳಿಗೆ ನಿದ್ದೆ ಬರಲ್ಲ. ಸರಿಯಾದ ಸಮಯಕ್ಕೆ ಮಲಗಲ್ಲ ಎಂದು ಹೆತ್ತವರು ದೂರುತ್ತಾರೆ. ಮಲಗುವ ಒಂದು ಗಂಟೆಯ ಮೊದಲೇ ಟಿ.ವಿ. ಆಫ್‌ ಮಾಡಿ, ಮೊಬೈಲ್‌ ಬಂದ್‌ ಮಾಡಿ. ಆಗ ಸರಿಯಾಗುತ್ತದೆ. ಇದಲ್ಲದೆಯೂ ಖಿನ್ನತೆ ಸಹಿತ ಗಂಭೀರ ಸಮಸ್ಯೆಗಳು ಕಂಡರೆ ಹತ್ತಿರದ ಮನೋವೈದ್ಯರನ್ನು ಕಾಣಬೇಕು ಎಂದರು.

ಪುಟ್ಟ ಮಕ್ಕಳಲ್ಲಿ ಹೈಪರ್‌ ಆ್ಯಕ್ಟಿವ್‌ ಸಹಜ

ಗಂಡುಮಕ್ಕಳಲ್ಲಿ ಅತಿ ಚಟುವಟಿಕೆ ಕಾಣಿಸುತ್ತದೆ. ಹೆಣ್ಣು ಮಕ್ಕಳಲ್ಲಿ ಅಷ್ಟಾಗಿ ಇರುವುದಿಲ್ಲ. ಬಹುತೇಕ ಮಕ್ಕಳು ಬೆಳೆದಂತೆ ಅತಿ ಚಟುವಟಿಕೆ ಕಡಿಮೆಯಾಗುತ್ತಾ ಹೋಗುತ್ತದೆ. ಒಂದು ಕಡೆ ಕೂತಲ್ಲಿ ಕೂರದೇ ಇರುವ ಮಕ್ಕಳನ್ನು ಕೂರುವಂತೆ ಮಾಡಬೇಕು. ಅದಕ್ಕೆ ಸರಿಯಾದ ಚಟುವಟಿಕೆಗಳನ್ನು ನೀಡಬೇಕು. ಬಣ್ಣ–ಬಣ್ಣದ ಮಣಿ ಆರಿಸುವುದು, ಶೇಂಗಾ, ಕಡಲೆ ಮಿಶ್ರಣ ಮಾಡಿ ನೀಡಿ ಅದನ್ನು ಪ್ರತ್ಯೇಕ ಮಾಡಲು ಹೇಳುವುದು ಮುಂತಾದ ಕೆಲಸಗಳನ್ನು ಮಾಡಬೇಕು.

ಪುಟ್ಟ ಮಕ್ಕಳು ಹೊಸತನ್ನು ಕಲಿಯಲು ತೆರೆದುಕೊಂಡಿರುತ್ತಾರೆ. ಅದನ್ನು ನಿರ್ಬಂಧಿಸಬಾರದು. ನಕಾರಾತ್ಮಕವಾಗಿ ತೆಗೆದುಕೊಳ್ಳುವ ಬದಲು ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು. ತೀರಾ ಕಲಿಕೆಗೆ ಸಮಸ್ಯೆ ಆಗುತ್ತಿದೆ ಎಂದಾದರೆ ಮಾತ್ರ ಮನೋತಜ್ಞರನ್ನು ಕಾಣಬೇಕು ಎಂದು ಡಾ. ಆಶಾ ಎಚ್‌.ಎನ್‌. ಸಲಹೆ ನೀಡಿದರು.

‘ಒಂದು ಹೊತ್ತು ಊಟ ಬಿಟ್ರೂ ಪರವಾಗಿಲ್ಲ; ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ’
ದಾವಣಗೆರೆ: ‘ಮಕ್ಕಳು ಒಂದು ಹೊತ್ತು ಊಟ ಬಿಟ್ಟರೂ ಪರ್ವಾಗಿಲ್ಲ. ಆದರೆ, ಒತ್ತಾಯಪೂರ್ವಕವಾಗಿ ಊಟ ಮಾಡಿಸಲು ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ...’

–ಎಸ್‌.ಎಸ್‌.ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಮನಃಶಾಸ್ತ್ರಜ್ಞೆ ಡಾ.ಆಶಾ ಎಚ್.ಎನ್. ಸೋಮವಾರ ನಡೆದ ‘ಪ್ರಜಾವಾಣಿ ಫೋನ್ ಇನ್’ ಕಾರ್ಯಕ್ರಮದಲ್ಲಿ ಪೋಷಕರಿಗೆ ನೀಡಿದ ಸಲಹೆ ಇದು.

ಕೋವಿಡ್ ಕಾರಣದಿಂದ ಮಕ್ಕಳ ದೈನಂದಿನ ಚಟುವಟಿಕೆಯಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಮಕ್ಕಳು ಹಾಗೂ ಪೋಷಕರ ಪ್ರಶ್ನೆಗಳಿಗೆ ಆಶಾ ಅವರು ಸಾವಧಾನವಾಗಿ ಉತ್ತರಿಸಿ ಅವರ ಅನುಮಾನಗಳನ್ನು ಬಗೆಹರಿಸಿದರು.

* ಮಕ್ಕಳು ಮೊಬೈಲ್ ಕೊಟ್ಟರೆ ಮಾತ್ರ ಊಟ ಮಾಡುತ್ತಾರೆ. ಇಲ್ಲದಿದ್ದರೆ ಊಟ ಮಾಡುವುದಿಲ್ಲ ಎಂದು ಹಠ ಹಿಡಿಯುತ್ತಾರೆ. ಏನು ಮಾಡುವುದು? ಪರಿಹಾರ ಸೂಚಿಸಿ.
– ಗೀತಾ, ಗೃಹಿಣಿ, ಶಿವಮೊಗ್ಗ

ಡಾ.ಆಶಾ ಎಚ್.ಎನ್.: ‘ಮಕ್ಕಳು ಊಟ ಮಾಡದಿದ್ದಾಗ ಅವರ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸಿ ಮೊದಲಿನಿಂದಲೂ ಅಭ್ಯಾಸ ಮಾಡಿಸಿದ್ದರಿಂದ ಮೊಬೈಲ್‌ ಬೇಕೆಂದು ಹಠ ಮಾಡುತ್ತಾರೆ. ಮೊಬೈಲ್ ಕೊಡದೇ ಊಟ ತಿನ್ನಿಸಲು ಪ್ರಯತ್ನಿಸಿ. ಕ್ರಮೇಣ ಸರಿ ಹೋಗುತ್ತಾರೆ. ಒಂದು ಹೊತ್ತು ಊಟ ತಿನ್ನದಿದ್ದರೂ ಪರ್ವಾಗಿಲ್ಲ. ಮೊಬೈಲ್ ಕೊಡಬೇಡಿ. ಹಸಿವಾದಾಗ ತಾವಾಗಿಯೇ ಊಟವನ್ನು ಕೇಳಿ ಮಾಡುತ್ತಾರೆ. ಹಸಿವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ತಿನ್ನಿಸುವ ಉದ್ದೇಶದಿಂದ ಮೊಬೈಲ್ ಅನ್ನು ಕೈಗೆ ಕೊಡಬೇಡಿ.

ಮಕ್ಕಳು ತಂದೆ–ತಾಯಿಗಳಿಗಿಂತ ಬುದ್ಧಿವಂತರು. ನಿಮ್ಮ ದೌರ್ಬಲ್ಯವನ್ನು ಬಳಸಿಕೊಂಡು ಅವರು ನಿಮಗೆ ಬ್ಲಾಕ್‌ಮೇಲ್ ತಂತ್ರ ಅನುಸರಿಸುತ್ತಾರೆ. ಮಕ್ಕಳನ್ನು ನೀವು ಅರ್ಥ ಮಾಡಿಕೊಳ್ಳುವುದಕ್ಕಿಂತಲೂ ಮಕ್ಕಳು ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಒಂದೇ ದಿವಸಕ್ಕೆ ಮಕ್ಕಳು ಬದಲಾಗುವುದಿಲ್ಲ. ತಾಳ್ಮೆಯಿಂದ ಕಾಯಿರಿ.

* ಪಾಠ ಓದಿದ್ದು ಅರ್ಥವಾಗುವುದಿಲ್ಲ. ಬೇಗನೆ ಮರೆತು ಹೋಗುತ್ತದೆ. ಇದರಿಂದ ಭಯ ಶುರುವಾಗುತ್ತದೆ. ನಿದ್ರೆ ಬರುತ್ತದೆ ಏನು ಮಾಡಬೇಕು? ಸಲಹೆ ನೀಡಿ.
– ವೇದಾ, ನಿಶ್ಚಿತಾ, ವಿದ್ಯಾರ್ಥಿನಿಯರು, ಭಾರತಿ ವಿದ್ಯಾಸಂಸ್ಥೆ, ಹೊನ್ನಾಳಿ

ಡಾ.ಆಶಾ ಎಚ್.ಎನ್.: ಬೇರೆ ಬೇರೆ ವಿಷಯಗಳಿಗೆ ಹೆಚ್ಚಿನ ಗಮನಹರಿಸಿದಂತೆ ಓದಿನ ಕಡೆ ಹೆಚ್ಚಿನ ಗಮನಹರಿಸಿ. ಓದಿದ ವಿಷಯಗಳು ನೆನಪಿನಲ್ಲಿ ಉಳಿಯಬೇಕಾದರೆ ಹೆಚ್ಚಿನ ಆಸಕ್ತಿ ಬೇಕು. ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಕೊಂಡು ಓದಬೇಕು. ವಿಷಯಗಳನ್ನು ಪುನರ್‌ಮನನ ಮಾಡಬೇಕು. ಹೆಚ್ಚಿನ ಸ್ಕೋರ್ ಪಡೆಯುವುದು ನಿಮ್ಮ ಐಕ್ಯು ಮಟ್ಟದ ಮೇಲೆ ಅವಲಂಬಿಸಿರುತ್ತದೆ. ಕಲಿಕೆಯ ವಾತಾವರಣ, ತರಬೇತಿ, ಸಂಬಂಧಿಸಿದ ಪಠ್ಯಗಳು ಓದಿನ ಮೇಲೆ ಪರಿಣಾಮ ಬೀರುತ್ತವೆ. ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ನೆನಪಿನಲ್ಲಿ ಉಳಿಯುತ್ತವೆ.

* ಪರೀಕ್ಷಾ ವೇಳಾಪಟ್ಟಿ ಇನ್ನೂ ಬಂದಿಲ್ಲ. ಕೆಲಸವನ್ನೂ ಮಾಡಿಕೊಂಡು ಓದುತ್ತಿದ್ದೇನೆ. ಸಮಯ ಸಿಗುತ್ತಿಲ್ಲ. ಸಮಯ ಹೊಂದಾಣಿಕೆ ಮಾಡಿಕೊಳ್ಳುವುದು ಹೇಗೆ?
– ಅಜಯ್‌, ದ್ವಿತೀಯ ಬಿ.ಎ. ವಿದ್ಯಾರ್ಥಿ, ಎ.ಆರ್‌.ಜಿ. ಕಾಲೇಜು

ಡಾ.ಆಶಾ ಎಚ್.ಎನ್.: ಕೆಲಸ ನಿರ್ವಹಿಸಿಕೊಂಡು ಓದುತ್ತಿರುವ ನಿಮ್ಮ ಆಲೋಚನೆ ಒಳ್ಳೆಯದು. ಆದರೆ, ಸಮಯ ಹೊಂದಾಣಿಕೆ ಮಾಡಿಕೊಳ್ಳುವುದು ನಿಮ್ಮ ಬಳಿಯೇ ಇದೆ. ಕೆಲಸದಿಂದ ಬಂದ ನಂತರ ಉಳಿಯುವ ಸಮಯವನ್ನು ಪರಿಣಾಮಕಾರಿ ಬಳಸುವ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಯಾವುದಕ್ಕೆ ಎಷ್ಟು ಮಹತ್ವ ನೀಡಬೇಕು ನಿಮಗೆ ಬಿಟ್ಟ ವಿಷಯ. ವೇಳಾಪಟ್ಟಿಯನ್ನು ತಯಾರಿಸಿಕೊಂಡು ಅದರಂತೆ ಮುಂದುವರಿಯಿರಿ.

* ಕೋವಿಡ್ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗುವ ಸುದ್ದಿಗಳಿಂದ ಭಯವಾಗುತ್ತಿದೆ. ಈ ಭಯದಿಂದ ಹೊರಬರಲು ಶಿಕ್ಷಕರು ಹಾಗೂ ಮಕ್ಕಳು ಏನು ಮಾಡಬೇಕು?
– ಕರಿಬಸಯ್ಯ ಕೆ.ಎಂ, ಚಿಕ್ಕೇರಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರು, ಹೊನ್ನಾಳಿ

ಡಾ.ಆಶಾ ಎಚ್.ಎನ್.: ಕೊರೊನಾ ಸಮಯದಲ್ಲಿ ಮಕ್ಕಳು ಮನೆಯಲ್ಲಿ ಇರುವುದರಿಂದ ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು. ಅವರನ್ನು ಹೊರಗಿನ ಪ್ರಪಂಚಕ್ಕೆ ಬಿಡಬೇಕು. ಇದರಿಂದಾಗಿ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸ್ನೇಹಿತರ ಜೊತೆ ಹೊಂದಾಣಿಕೆ ಇರುವುದರಿಂದ ಗುಂಪು ಅಧ್ಯಯನದಿಂದ ಅನುಕೂಲವಾಗುತ್ತದೆ. ಹೆಚ್ಚಿನ ಸಮಸ್ಯೆ ಇದ್ದರೆ ಮಾನಸಿಕ ತಜ್ಞರನ್ನು ಸಂಪರ್ಕಿಸಿ.

* ಮಗನನ್ನು ಬೇರೆ ಶಾಲೆಗೆ ಸೇರಿಸಿದ್ದೇನೆ. ಶಾಲೆ ಬದಲಾವಣೆ ಮಾಡಿದ್ದರಿಂದ ಮಗನಿಗೆ ತೊಂದರೆಯಾಗಿದೆ. ಪರಿಹಾರ ಸೂಚಿಸಿ.
– ವೆಂಕಟೇಶ್, ವ್ಯಾಪಾರಿ, ಜಗಳೂರು

ಡಾ.ಆಶಾ ಎಚ್.ಎನ್.: ಕಿರಾಣಿ ಅಂಗಡಿ ನಡೆಸುವ ನಿಮಗೆ ಲಾಕ್‌ಡೌನ್‌ನಲ್ಲಿ ಹಲವು ಸಮಸ್ಯೆಗಳು ಬರುವಂತೆ, ನಿಮ್ಮ ಮಗನಿಗೂ ಹಲವು ಸಮಸ್ಯೆಗಳು ಬರುತ್ತವೆ. ಎರಡು ವರ್ಷಗಳಿಂದ ಶಾಲೆ ತಪ್ಪಿಹೋಗಿದೆ. ಶಾಲೆಯನ್ನು ಬದಲಾವಣೆ ಮಾಡಿದ್ದರಿಂದ ಹೊಸ ಶಾಲೆಯ ಪರಿಸರಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಶಾಲೆ ಬದಲಾವಣೆ ಮಾಡಿದ್ದರಿಂದ ಕಲಿಕೆಯಲ್ಲಿ ಹಿಂದುಳಿಯುತ್ತಾರೆ ಎಂಬುದು ತಪ್ಪು. ಮಕ್ಕಳ ಬುದ್ಧಿಶಕ್ತಿಯ ಮೇಲೆ ಇದು ಅವಲಂಬಿಸಿರುತ್ತದೆ.

* ಸಣ್ಣ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಅವರು ಖುಷಿಯಾಗಿಲ್ಲ. ಅವರಿಗೆ ಉತ್ಸಾಹ ತುಂಬುವ ಬಗೆಯಾದರೂ ಹೇಗೆ?
– ಬಸವರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ, ಜಗಳೂರು

ಡಾ.ಆಶಾ ಎಚ್.ಎನ್.: ಕೊರೊನಾ ಕಾರಣದಿಂದ 2 ವರ್ಷಗಳಿಂದ ಮಕ್ಕಳು ಸರಿಯಾಗಿ ಶಾಲೆಗೆ ಹೋಗಲು ಆಗಿಲ್ಲ. ಮನೆಯಲ್ಲಿಯೇ ಹೆಚ್ಚು ಅಭ್ಯಾಸ ಮಾಡಿದ್ದರಿಂದ ಶಾಲೆಯ ಅನುಭವ ಇಲ್ಲದಂತಾಗಿದೆ. ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಪ್ರತ್ಯೇಕತೆಯ ಆತಂಕ ಶುರುವಾಗುತ್ತದೆ. ಮನೆ, ತಾಯಿ ಹಾಗೂ ಪೋಷಕರಿಂದ ದೂರವಾಗುವುದು ಹೊಸ ಅನುಭವ ಇದರಿಂದ ಆತಂಕ ಶುರುವಾಗಿ ಕಿರಿಕಿರಿ ಉಂಟು ಮಾಡುತ್ತವೆ. ಸಣ್ಣ ಮಕ್ಕಳಲ್ಲಿ ಇದು ಸಾಮಾನ್ಯ. ಅವರನ್ನು ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ.

* ನನ್ನ ಮೊಮ್ಮಗಳು ಕೊರೊನಾ ಬಂದಾಗಿನಿಂದ ಪದೇ ಪದೇ ಕೈತೊಳೆದುಕೊಳ್ಳುತ್ತಾಳೆ. ನನ್ನ ಎರಡನೇ ಪುತ್ರಿಗೂ ಇದೇ ರೀತಿ ಸಮಸ್ಯೆಯಾಗಿತ್ತು. ಇದರಿಂದ ಮಾನಸಿಕ ತೊಂದರೆ ಏನಾದರೂ ಇದೆಯಾ?
– ಷಹಜಾದ್ ಬೇಗಂ, ದಾವಣಗೆರೆ

ಡಾ.ಆಶಾ ಎಚ್.ಎನ್.: ಕೊರೊನಾ ಬಂದಾಗಿನಿಂದ ಈ ಸಮಸ್ಯೆ ಇರುವುದರಿಂದ ಆತಂಕಪಡುವ ಅಗತ್ಯವಿಲ್ಲ. ಎರಡನೇ ಮಗಳಿಗೆ ಈ ರೀತಿ ಸಮಸ್ಯೆ ಇರುವುದರಿಂದ ಇದೊಂದು ಜೆನೆಟಿಕ್ ಸಮಸ್ಯೆ ಇರಬಹುದು. ಅವರು ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ ಎಂದು ಹೇಳಿದ್ದೀರಿ. ಇವರನ್ನು ಗುಣಪಡಿಸಬಹುದು. ಈ ಸಮಸ್ಯೆಯ ವಿವರಗಳನ್ನು ಮೌಲ್ಯಮಾಪನ ಮಾಡಿ ಚಿಕಿತ್ಸೆ ನೀಡಬೇಕಾಗುತ್ತದೆ. ಇದು ಸರಿಯಾದ ಸಮಯ ಶೀಘ್ರ ಮಾನಸಿಕ ತಜ್ಞರನ್ನು ಸಂಪರ್ಕಿಸಿ.

*ನಾನು 9ನೇ ತರಗತಿ ಓದುತ್ತಿದ್ದೇನೆ. ಹತ್ತನೇ ತರಗತಿಗೆ ಗಂಭೀರವಾಗಿ ಅಧ್ಯಯನ ಮಾಡಬೇಕು ಎಂದು ಎಲ್ಲರೂ ಹೆದರಿಸುತ್ತಿದ್ದಾರೆ, ಇದಕ್ಕೆ ಏನು ಮಾಡಬೇಕು ಪರಿಹಾರ ಸೂಚಿಸಿ.
– ಬಿ.ಟಿ.ಗೌರಿ, ವಿದ್ಯಾರ್ಥಿನಿ, ದಾವಣಗೆರೆ

ಡಾ.ಆಶಾ ಎಚ್.ಎನ್.: ಯಾವುದೇ ಭಯಪಡುವ ಅವಶ್ಯಕತೆ ಇಲ್ಲ. ಪೇಂಟಿಂಗ್, ಡ್ರಾಯಿಂಗ್, ಸಂಗೀತದಲ್ಲಿ ಆಸಕ್ತಿ ಇದೆ ಎಂದು ಹೇಳಿದ್ದೀರಿ. ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದ ಸಹಜವಾಗಿ ಪಾಠದಲ್ಲೂ ಆಸಕ್ತಿ ಬರುತ್ತದೆ. ಚೆನ್ನಾಗಿ ಓದಿ ಹೆಚ್ಚಿನ ಅಂಕ ಪಡೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT