ಭಾನುವಾರ, ನವೆಂಬರ್ 29, 2020
25 °C
ಶಿಕ್ಷಕ ಬಿ.ಆಂಜನೇಯ ಪರಿಶ್ರಮದಿಂದ ಶಾಲೆಗೆ ಹೊಸ ಸ್ಪರ್ಶ

ಶಾಲಾ ಕಾಂಪೌಂಡ್‍ನಲ್ಲಿ ಚಿತ್ರ ಚಿತ್ತಾರ ಅರಳಿಸಿದ ಶಿಕ್ಷಕ

ವಿಶ್ವನಾಥ ಡಿ. Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಕೊರೊನಾ ವೈರಸ್ ಭೀತಿಯಿಂದ ಶಾಲೆಗಳನ್ನು ಬಂದ್ ಮಾಡಲಾಗಿದೆ. ಆದರೂ ಶಿಕ್ಷಕರು ವಿದ್ಯಾಗಮ, ವಠಾರ ತರಗತಿಗಳನ್ನು ನಡೆಸಿ ವಿದ್ಯಾರ್ಥಿ, ಸಮಾಜದ ಕೊಂಡಿ ಬೆಸೆಯುತ್ತಿದ್ದಾರೆ. ಇದರ ನಡುವೆ ಇಲ್ಲೊಬ್ಬರು ಶಿಕ್ಷಕರು ಸರ್ಕಾರಿ ಶಾಲಾ ಕಾಂಪೌಂಡ್‌ ಮೇಲೆ ಜಾನಪದ ಶೈಲಿಯ ಕಲೆ, ಇತಿಹಾಸದ ಚಿತ್ರಗಳನ್ನು ಚಿತ್ರಿಸಿ ಗಮನ ಸೆಳೆದಿದ್ದಾರೆ.

ಪಟ್ಟಣದ ಕೊಟ್ಟೂರು ರಸ್ತೆಯ ಆಶ್ರಯ ಕ್ಯಾಂಪ್‍ನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಡೆಯುತ್ತಿದೆ. 1ರಿಂದ 5ನೇ ತರಗತಿಯವರೆಗೂ ನಡೆಯುವ ಶಾಲೆಯ ಕೊಠಡಿ, ಕಾಂಪೌಂಡ್‍ಗಳಿಗೆ ಲಾಕ್‍ಡೌನ್‍ ಸಂದರ್ಭದಲ್ಲಿ ಶಿಕ್ಷಕ ಬಿ. ಆಂಜನೇಯ ಸಾವಿರಾರು ರೂಪಾಯಿ ಖರ್ಚು ಮಾಡಿ ಚಿತ್ರಗಳನ್ನು ರಚಿಸಿ ಶಾಲೆ ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಶಾಲೆಯ ಕಾಂಪೌಂಡ್ ಮೇಲೆ ಜಾನಪದ ಶೈಲಿಯ ಮೆರವಣಿಗೆ, ಆನೆ, ಯೋಗ ವೃಕ್ಷ, ಕುಂಬಾರಿಕೆ, ಕಮ್ಮಾರಿಕೆ, ಬೇಟೆಯಾಡುವುದು, ಬಾಜಾ ಭಜಂತ್ರಿ, ಢೋಲಕ್‍, ಪ್ರವೇಶದ್ವಾರದಲ್ಲಿ ಆನೆಗಳು ಸ್ವಾಗತಿಸುವ ರೀತಿಯ ಚಿತ್ರಗಳು ಗಮನ ಸೆಳೆಯುತ್ತಿವೆ. ಮರಿಯಮ್ಮನಹಳ್ಳಿ ಸರ್ಕಾರಿ ಶಾಲೆಯ ಚಿತ್ರಕಲಾ ಶಿಕ್ಷಕ ಶಿವಕುಮಾರ ಅವರು ರೇಖಾಚಿತ್ರಗಳನ್ನು ಬಿಡಿಸಿದ್ದು, ಶಿಕ್ಷಕ ಆಂಜನೇಯ ಬಣ್ಣ ತುಂಬಿದ್ದಾರೆ.

2020-21ನೇ ಶೈಕ್ಷಣಿಕ ಸಾಲಿನಲ್ಲಿ 21 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಇಬ್ಬರು ಶಿಕ್ಷಕರಿದ್ದ ಶಾಲೆಯಲ್ಲಿ ಒಬ್ಬ ಶಿಕ್ಷಕರು
ವರ್ಗಾವಣೆ ಆಗಿದ್ದು, ಒಬ್ಬ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಬ್ಬ ಶಿಕ್ಷಕರನ್ನು ಇಲಾಖೆ ನಿಯೋಜಿಸಿದೆ.

ಶಾಲೆಯ ಒಳಗೆ ಮಕ್ಕಳಿಗೆ ಸಂಪೂರ್ಣ ಕಲಿಕೆಯ ವಾತಾವರಣ ನಿರ್ಮಿಸಲಾಗಿದೆ. ಪುರಾತನ ಮತ್ತು ವಿದೇಶಿ ನಾಣ್ಯಗಳು, ಮೆಕ್ಸಿಕೊ, ಪೋಲೆಂಡ್, ಕೊರಿಯಾ, ಕೆನಡಾ, ಕುವೈತ್, ಯು.ಎ.ಇ. ಕೀನ್ಯಾ, ಶ್ರೀಲಂಕಾ, ಮಲೇಷ್ಯಾ, ಇಂಗ್ಲೆಂಡ್‍, ಚೀನಾ ಮತ್ತು ಭಾರತದ ವಿವಿಧ ನಾಣ್ಯಗಳನ್ನು ಸಂಗ್ರಹಿಸಿ, ಮಕ್ಕಳಲ್ಲಿ ಆಸಕ್ತಿ ಮೂಡಿಸುತ್ತಿದ್ದಾರೆ. ಶಾಲೆ ಸುಂದರವಾಗಿ ಕಾಣಿಸುತ್ತಿದ್ದು, ಶಾಲೆಯ ಅಭಿವೃದ್ಧಿಗೆ ಶಿಕ್ಷಕರು ಶ್ರಮಿಸುತ್ತಿದ್ದಾರೆ ಎಂದು ಶಿಕ್ಷಕರ ಶ್ರಮವನ್ನು ನಿವಾಸಿ ರಾಜೇಂದ್ರ ಪ್ರಸಾದ್ ಶ್ಲಾಘಿಸಿದರು.

‘ಶಾಲೆಗೆ ₹ 30 ಸಾವಿರ ವೆಚ್ಚದ ಲ್ಯಾಪ್‍ಟಾಪ್‍ ಅನ್ನು ಅಮೆರಿಕದಲ್ಲಿರುವ ರಂಗನಾಥ್‍ ಅವರು ದೇಣಿಗೆ ನೀಡಿದ್ದಾರೆ. ಪುರಸಭೆ ಸದಸ್ಯ ಕೊಟ್ರೇಶ್ ₹ 8,500 ಹಣದಲ್ಲಿ ಗೇಟ್‍ ನಿರ್ಮಿಸಿದ್ದಾರೆ. ಕ್ಯಾಂಪ್‍ನಲ್ಲಿ ಕೂಲಿ ಕೆಲಸ ಮಾಡುವ ನಿವಾಸಿಗಳಿಂದ
₹ 1,700 ದೇಣಿಗೆ ಪಡೆದದ್ದಲ್ಲದೆ, ಸ್ವಂತ ಹಣ ಖರ್ಚು ಮಾಡಿದ್ದೇನೆ’ ಎಂದು ಶಿಕ್ಷಕ ಬಿ.ಆಂಜನೇಯ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು