ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮದು ಪ್ರಾಯೋಜಕತ್ವ ಹೋರಾಟವಲ್ಲ: ಪ್ರಸನ್ನಾನಂದ ಸ್ವಾಮೀಜಿ

Last Updated 25 ಮಾರ್ಚ್ 2021, 5:09 IST
ಅಕ್ಷರ ಗಾತ್ರ

ಹರಿಹರ: ಮೀಸಲಾತಿ ಎನ್ನುವುದು ಆರ್ಥಿಕ ಮಾನದಂಡವಲ್ಲ ಅದೊಂದು ಸಾಮಾಜಿಕ ನ್ಯಾಯ ಎನ್ನುವುದನ್ನು ಎಲ್ಲ ಸಮಾಜಗಳು ಅರಿತುಕೊಳ್ಳಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜನಹಳ್ಳಿ ಮಠದಲ್ಲಿ ಹಮ್ಮಿಕೊಂಡಿದ್ದ 3ನೇ ವರ್ಷದ ವಾಲ್ಮೀಕಿ ಜಾತ್ರೆಯ ನಿಮಿತ್ತ ಹೊರತಂದಿದ್ದ ವಾಲ್ಮೀಕಿ ವಿಜಯ ಸಂಪುಟ 3ರ ಸಂಪಾದಕ ಮಂಡಳಿಯವರೊಂದಿಗೆ ವಿಚಾರ ಸಂಕಿರಣ ಮತ್ತು ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ ವರ್ಗಗಳ ಮೀಸಲಾತಿ ಹೆಚ್ಚಳ ವಿಚಾರವಾಗಿ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಬೇಕು. ಮೀಸಲಾತಿ ಸಾಮಾಜಿಕ ನ್ಯಾಯ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ನಮ್ಮ ಹೋರಾಟವು ಯಾವುದೇ ಪ್ರಾಯೋಜಕತ್ವದಿಂದ ಕೂಡಿಲ್ಲ. ನ್ಯಾಯಸಮ್ಮತವಾಗಿ, ಸಾಮಾಜಿಕವಾಗಿದೆ’ ಎಂದು ಹೇಳಿದರು.

‘ಸಮಾಜವನ್ನು ಸಾಂಸ್ಕೃತಿಕವಾಗಿ ಇನ್ನಷ್ಟು ಬಲಗೊಳಿಸುವ ಉದ್ದೇಶದಿಂದ ಗುರುಪೀಠವು ವಾಲ್ಮೀಕಿ ಪ್ರಕಾಶನ, ಲಾಂಛನ, ಧ್ವಜ ಮತ್ತು ವೀರಗೀತೆ ರಚನೆಗೆ ಚಾಲನೆ ನೀಡಿದೆ. 2022ರ ಫೆಬ್ರುವರಿ 8 ಮತ್ತು 9ರಂದು ನಡೆಯುವ ನಾಲ್ಕನೇ ವಾಲ್ಮೀಕಿ ಜಾತ್ರೆ ವೇಳೆಗೆ ಸಿದ್ಧಗೊಳಿಸಲಾಗುತ್ತದೆ’ ಎಂದರು.

‘ಮಠದ ಮಹತ್ತರ ಯೋಜನೆಗಳಾದ ಸಂಶೋಧನಾ ಕೇಂದ್ರ, ಮ್ಯೂಸಿಯಂ ನಿರ್ಮಾಣಕ್ಕೆ ಹಿರಿಯ ಸಂಶೋಧಕರ ಅಭಿಪ್ರಾಯ ಸಂಗ್ರಹಿಸಿ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಜೊತೆಗೆ ಗುರುಪೀಠದ ಸಾಂಸ್ಕೃತಿಕ ರಾಯಭಾರಿಯನ್ನು ನೇಮಕ ಮಾಡಿ ವಾಲ್ಮೀಕಿ ಪ್ರಕಾಶನಕ್ಕೆ ಬೇಕಾದ ಸಂಪನ್ಮೂಲವನ್ನು ರಾಜ್ಯದ ನಾನಾ ವಿಶ್ವವಿದ್ಯಾಲಯಗಳಲ್ಲಿರುವ ಸಮಾಜದ ಬರಹಗಾರರು, ಅಧ್ಯಾಪಕರ ಜೊತೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ಮರಣ ಸಂಪುಟ 3ರ ಪ್ರಧಾನ ಸಂಪಾದಕ ಡಾ.ಎ.ಬಿ. ರಾಮಚಂದ್ರಪ್ಪ, ‘ಪ್ರೊ.ಬರಗೂರು ರಾಮಚಂದ್ರಪ್ಪ ಅವರು ವಾಲ್ಮೀಕಿ ಪ್ರಶಸ್ತಿಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬುಡಕಟ್ಟು ಸಮುದಾಯಗಳ ರಾಷ್ಟ್ರೀಯ ಮ್ಯೂಸಿಯಂ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಅವರ ಮನವಿಯನ್ನು ಸರ್ಕಾರ ಪುರಸ್ಕರಿಸಿತ್ತು. ಅದು ರಾಜನಹಳ್ಳಿಯಲ್ಲಿ ಆಗಬೇಕು ಎಂಬುದು ಬರಗೂರರ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಶ್ರೀಗಳು ನಿರ್ಧಾರ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹಗರಿಬೊಮ್ಮನಹಳ್ಳಿಯ ಪ್ರಾಚಾರ್ಯ ಡಾ ಎಂ.ಕೆ. ದುರುಗಪ್ಪ, ಕುವೆಂಪು ವಿಶ್ವವಿದ್ಯಾಲಯ ಅಧ್ಯಾಪಕ ಡಾ. ಪ್ರಶಾಂತ್ ನಾಯಕ್, ಮುಂತಾದವರು ಗುರು ಪೀಠದಲ್ಲಿ ಪ್ರಾರಂಭವಾಗಲಿರುವ ಮ್ಯೂಸಿಯಂ ಮತ್ತು ಸಂಶೋಧನಾ ಕೇಂದ್ರದ ಬಗ್ಗೆ ಮಾತನಾಡಿದರು.

ಹರ್ತಿಕೋಟೆ ವೀರೇಂದ್ರ ಸಿಂಹ, ಹೋದಿಗೆರೆ ರಮೇಶ್, ಕೆಪಿಟಿಸಿಎಲ್ ಎಇಇ ಕೆ.ಎಸ್. ಜಯಪ್ಪ, ಹರಿಹರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್. ಚಂದ್ರಪ್ಪ, ಅಧ್ಯಾಪಕರಾದ ಡಾ. ವಿನಯ್, ಡಾ.ಎಂ. ಮಂಜಣ್ಣ, ಡಾ.ಎಂ.ಎಚ್. ಪ್ರಹ್ಲಾದಪ್ಪ, ಡಾ.ಎಚ್.ವಿ. ಮಂಜಪ್ಪ, ಡಾ.ಎಚ್.ತಿಪ್ಪೇಸ್ವಾಮಿ, ಡಾ.ನಂಜುಂಡಸ್ವಾಮಿ, ಡಾ. ಎಚ್.ಆರ್. ತಿಪ್ಪೇಸ್ವಾಮಿ, ನಾಗರಾಜನಾಯಕ್ ಡೊಳ್ಳಿನ, ಟಿ.ಜೆ. ರಾಘವೇಂದ್ರ, ಪ್ರೊ.ರಂಗಪ್ಪ, ಡಾ. ಮೋಹನ್ ಚಂದ್ರಗುತ್ತಿ, ಡಾ.ಓ. ದೇವರಾಜ್, ಡಾ. ಆಂಜನೇಯ, ಡಾ.ಹರಾಳು ಗುಳ್ಳಪ್ಪ, ಮೈಸೂರು ವಿಶ್ವವಿದ್ಯಾಲಯ ಸಂಶೋಧಕ ಆರ್. ಕುಮಾರ್, ಅನುಷ್, ಜಿಗಳಿ ಪ್ರಕಾಶ್, ಬಸವರಾಜ್ ದೊಡ್ಡಮನಿ, ಯಳನಾಡು ಮಂಜು, ರಘು ದೊಡ್ಡಮನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT