ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಸಿಗೆ ಭತ್ತದ ದರ ತೀವ್ರ ಕುಸಿತ

ಬೇಸಿಗೆ ಬೆಳೆ ಬೆಳೆದ ರೈತರಲ್ಲಿ ಆತಂಕ
Published 22 ಮೇ 2024, 6:22 IST
Last Updated 22 ಮೇ 2024, 6:22 IST
ಅಕ್ಷರ ಗಾತ್ರ

ದಾವಣಗೆರೆ: ಮಧ್ಯ ಕರ್ನಾಟಕದ ವಿವಿಧೆಡೆ ರೈತರು ಬೇಸಿಗೆ ಅವಧಿಯಲ್ಲಿ ಬೆಳೆದ ಭತ್ತದ ದರ ಮುಂಗಾರುಪೂರ್ವ ಮಳೆ ಶುರುವಾದ ಬೆನ್ನಲ್ಲೇ ತೀವ್ರ ಕುಸಿತ ಕಂಡಿದೆ.

ಮಳೆ ಸುರಿಯುವ ಮುನ್ನ (ಮೇ 16ರವರೆಗೆ) ಪ‍್ರತಿ ಕ್ವಿಂಟಲ್‌ಗೆ ₹ 3,300ರವರೆಗೆ ಇದ್ದ ಭತ್ತದ ಬೆಲೆ, ನಂತರ ಇಳಿಮುಖವಾಗುತ್ತ ಸಾಗಿದೆ. ಇದರಿಂದಾಗಿ ಬರಗಾಲದಲ್ಲೂ ಭತ್ತ ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹ 3,600ರವರೆಗೆ ದರ ಇತ್ತು.

ಮಂಗಳವಾರ (ಮೇ 21) ದಾವಣಗೆರೆ ಎಪಿಎಂಸಿಯಲ್ಲಿ ಕ್ವಿಂಟಲ್‌ ಭತ್ತದ ದರ ಕನಿಷ್ಠ ₹ 2,240 ರಿಂದ ಗರಿಷ್ಠ ₹ 2,750ರ ವರೆಗೆ ಇತ್ತು. ₹ 2,623 ರ ಸರಾಸರಿ ದರದಲ್ಲಿ ಖರೀದಿ ನಡೆಯಿತು.

ದಾವಣಗೆರೆ, ಶಿವಮೊಗ್ಗ ಮತ್ತು ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆ ಅವಧಿಯಲ್ಲಿ ಆರ್‌ಎನ್‌ಆರ್‌ ತಳಿಯ ಭತ್ತವನ್ನೇ ಜಾಸ್ತಿ ಬೆಳೆಯಲಾಗುತ್ತಿದೆ. ಈ ಭತ್ತವನ್ನು ಮಂಡಕ್ಕಿ ತಯಾರಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಆರ್‌ಎನ್‌ಆರ್‌ ತಳಿಯ ಭತ್ತಕ್ಕಿಂತ ಶ್ರೀರಾಮ್ ಸೋನಾ ಭತ್ತ ಪ್ರತಿ ಕ್ವಿಂಟಲ್‌ಗೆ ₹ 300ರಿಂದ ₹ 400ರಷ್ಟು ಹೆಚ್ಚು ದರ ಸಿಗುತ್ತಿದೆ.

ಕಳೆದ ವಾರದವರೆಗೆ ಕ್ವಿಂಟಲ್‌ ಭತ್ತದ ದರ ₹ 3,300ರಷ್ಟಿತ್ತು. ಮುಂಗಾರುಪೂರ್ವ ಮಳೆ ಸುರಿಯುತ್ತಿದ್ದಂತೆಯೇ ದರ ಕುಸಿಯತೊಡಗಿದೆ ಎಂದು ರೈತರು ತಿಳಿಸಿದ್ದಾರೆ.

‘ಭತ್ತವು ಮಳೆಗೆ ಸಿಲುಕುವ ಭೀತಿಯಲ್ಲಿರುವ ರೈತರು, ಸ್ವಲ್ಪ ಹಸಿ ಇರುವ ಭತ್ತವನ್ನೇ ಮಾರುಕಟ್ಟೆಗೆ ತರುತ್ತಿದ್ದಾರೆ. ಭತ್ತ ಒಣಗಿಸಲು ಕಣಗಳ ಕೊರತೆ, ಬಿಸಿಲಿನ ಅಭಾವ ಮಾತ್ರವಲ್ಲದೇ ಮತ್ತಷ್ಟು ಮಳೆ ಸುರಿಯುವ ಆತಂಕದಿಂದಾಗಿ ರೈತರು ಭತ್ತ ಒಣಗುವವರೆಗೂ ಕಾಯುವ ಸ್ಥಿತಿಯಲ್ಲಿಲ್ಲ’ ಎಂದು ದಾವಣಗೆರೆ ಎಪಿಎಂಸಿ ಸಹಾಯಕ ನಿರ್ದೇಶಕ ಜೆ.ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬರದಿಂದಾಗಿ ಪ್ರಸಕ್ತ ಬೇಸಿಗೆ ಹಂಗಾಮಿನ ಭತ್ತಕ್ಕೆ ಭದ್ರಾ ಜಲಾಶಯದ ನೀರು ಸಮರ್ಪಕವಾಗಿ ದೊರೆಯಲಿಲ್ಲ. ಬಹುತೇಕ ರೈತರು ಭತ್ತವನ್ನೇ ಬೆಳೆದಿಲ್ಲ. ಕೊಳವೆಬಾವಿ ಆಶ್ರಯಿಸಿರುವ ರೈತರಷ್ಟೇ ಭತ್ತ ಬೆಳೆದಿದ್ದರು. ತೀವ್ರ ಬಿಸಿಲು ಹಾಗೂ ನೀರಿನ ಕೊರತೆಯ ನಡುವೆಯೂ ಬೆಳೆದ ಭತ್ತಕ್ಕೆ ದರ ಕಡಿಮೆಯಾಗಿದೆ’ ಎಂದು ಎಪಿಎಂಸಿ ವರ್ತಕ ದೊಗ್ಗಳ್ಳಿ ಬಸವರಾಜ್ ತಿಳಿಸಿದರು.

ತಗ್ಗಿದ ಆವಕ: ದರ ಕುಸಿತ ಕಂಡ ಬೆನ್ನಲ್ಲೇ ಇಲ್ಲಿನ ಎಪಿಎಂಸಿಗೆ ಆವಕವಾಗುತ್ತಿರುವ ಭತ್ತದ ಪ್ರಮಾಣವೂ ತಗ್ಗಿದೆ. ಮೇ 21ರಂದು ಎಪಿಎಂಸಿಗೆ 3,273 ಕ್ವಿಂಟಲ್ ಭತ್ತ ಆವಕವಾಗಿದೆ. ಮೇ 20ರಂದು 3,462 ಕ್ವಿಂಟಲ್‌ ಭತ್ತ ಆವಕವಾಗಿತ್ತು. ಇಲ್ಲಿನ ಎಪಿಎಂಸಿಗೆ ದಿನವೊಂದಕ್ಕೆ ಸರಾಸರಿ 3,500 ಕ್ವಿಂಟಲ್ ಭತ್ತ ಆವಕವಾಗುತ್ತಿದೆ. ಮೇ 15ರಂದು ಗರಿಷ್ಠ 9,664 ಕ್ವಿಂಟಲ್ ಭತ್ತ ಆವಕವಾಗಿತ್ತು.

8 ಎಕರೆಯಲ್ಲಿ ಬೆಳೆದ 200 ಚೀಲ ಭತ್ತವನ್ನು 5 ದಿನದ ಹಿಂದೆಯೇ ಎಪಿಎಂಸಿಗೆ ತಂದಿದ್ದೆ. ದರ ಏರಿಕೆಯಾಗದ್ದರಿಂದ ಕೊನೆಗೆ ಕ್ವಿಂಟಲ್‌ಗೆ ₹ 2480 ರಂತೆ ಮಾರಾಟ ಮಾಡಿದೆ. ಕನಿಷ್ಠ ₹ 3200 ದರ ಸಿಗಬೇಕಿತ್ತು.
–ಜಗದೀಶ, ರೈತ ಕಕ್ಕರಗೊಳ್ಳ ದಾವಣಗೆರೆ ಜಿಲ್ಲೆ
ಎಪಿಎಂಸಿಗೆ ಬರುತ್ತಿರುವ ಹೊಸ ಭತ್ತ ಸಂಪೂರ್ಣ ಒಣಗಿಲ್ಲ. ಬಿಸಿಲು ಹೆಚ್ಚಾದರೆ 8–10 ದಿನಗಳಲ್ಲಿ ಭತ್ತದ ದರ ಹೆಚ್ಚಳ ಆಗುವ ನಿರೀಕ್ಷೆ ಇದೆ.
–ಜೆ.ಪ್ರಭು, ಸಹಾಯಕ ನಿರ್ದೇಶಕ ದಾವಣಗೆರೆ ಎಪಿಎಂಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT