ಶುಕ್ರವಾರ, ಮೇ 27, 2022
21 °C
ನೂರು ವರ್ಷಗಳ ಇತಿಹಾಸ ಇರುವ ಝಂಡಾ ನಿರ್ನಾಮ ಸರಿಯಲ್ಲ: ಜೆಡಿಎಸ್‌

ಝಂಡಾ ತೆರವು ವಿರೋಧಿಸಿ ಪಾಲಿಕೆ ಎದುರು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವಸಂತ ಚಿತ್ರಮಂದಿರ ರಸ್ತೆಯಲ್ಲಿನ ಎಂ.ಬಿ. ಕೇರಿಯಲ್ಲಿ ಝಂಡಾಕಟ್ಟೆಯನ್ನು ಸೋಮವಾರ ಮಹಾನಗರ ಪಾಲಿಕೆ ವತಿಯಿಂದ ತೆರವುಗೊಳಿಸಿರುವುದನ್ನು ಆಕ್ಷೇಪಿಸಿ ಜೆಡಿಎಸ್‌ ಅಲ್ಪಸಂಖ್ಯಾತರ ಘಟಕದ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಯಿತು. 100ಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಈ ಝಂಡಾ ಕಟ್ಟೆಯನ್ನು ಪುನರ್‌ ನಿರ್ಮಾಣ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಕಾನೂನು ನೆಪವೊಡ್ಡಿ ಸೂಫಿಗಳ ವಿಚಾರಧಾರೆಯ ಸೌಹಾರ್ದ ಕೇಂದ್ರವಾಗಿದ್ದ ಝಂಡಾಕಟ್ಟೆಯನ್ನು ಧ್ವಂಸ ಮಾಡಲಾಗಿದೆ. ಪಾಲಿಕೆಯ ಈ ನಡವಳಿಕೆಯಿಂದ ಸೌಹಾರ್ದ ಪ್ರೇಮಿಗಳ ನಂಬಿಕೆಗೆ ಧಕ್ಕೆ ಉಂಟಾಗಿದೆ. ಕಾನೂನು ಕೇವಲ ಝಂಡಾಕಟ್ಟೆಗೆ ಸೀಮಿತವೇ ಎಂದು ಜೆಡಿಎಸ್‌ ಮುಖಂಡ ಜೆ. ಅಮಾನುಲ್ಲಾ ಖಾನ್ ಪ್ರಶ್ನಿಸಿದರು.

ಪಾಲಿಕೆ ಕಾನೂನು ಚಲಾಯಿಸುವುದು ನಿಜವಾದರೆ ಎಲ್ಲ ಧರ್ಮಗಳ ಅನಧಿಕೃತ ಪ್ರಾರ್ಥನ ಸ್ಥಳಗಳ ಮೇಲೆ ಕ್ರಮ ಜರುಗಿಸಲಿ. ಯಾರನ್ನೋ ಒಬ್ಬರನ್ನು ತೃಪ್ತಿ ಪಡಿಸಲು ಝಂಡಾಕಟ್ಟೆಯನ್ನು ಒಡೆಯುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ ಎಂದು
ಆರೋಪಿಸಿದರು.

ಕಾಂಗ್ರೆಸ್‌ ಶಾಮೀಲು: ‘ಝಂಡಾಕಟ್ಟೆ ತೆರವು ಮಾಡುವ ಕಾರ್ಯದಲ್ಲಿ ಬಿಜೆಪಿ ಮಾತ್ರವಲ್ಲ, ಅಲ್ಪಸಂಖ್ಯಾತರ ರಕ್ಷಣೆಗೆ ಇದ್ದೇವೆ ಎಂದು ಹೇಳುವ ಕಾಂಗ್ರೆಸ್‌ ಕೂಡ ಶಾಮೀಲಾಗಿರುವ ಅನುಮಾನಗಳಿವೆ. ಝಂಡಾಕಟ್ಟೆ ತೆರವು ಆದ ಬಳಿಕ ಇಲ್ಲಿವರೆಗೆ ಕಾಂಗ್ರೆಸ್‌ನವರು ಒಂದು ಮಾತೂ ಆಡದೇ ಇರುವುದು ಈ ಅನುಮಾನ ಹುಟ್ಟಿಸಿದೆ’ ಎಂದು ಟಿ. ಅಸ್ಗರ್‌ ಟೀಕಿಸಿದರು.

ಅಧಿಕಾರ ಇದೆ: ‘ಅನಧಿಕೃತವಾಗಿ ಕಟ್ಟಡ ಕಟ್ಟಿದರೆ ಅದನ್ನು ತೆರವುಗೊಳಿಸುವ ಅಧಿಕಾರ ಪಾಲಿಕೆ ಆಯುಕ್ತರಿಗೆ ಇದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿಯೇ ತೆರವುಗೊಳಿಸಬೇಕು ಎಂದು ಇಲ್ಲ. ಮೂಲ ಝಂಡಾದ ರೂಪದಲ್ಲಿ ಇರುವುದಕ್ಕೆ ಆಕ್ಷೇಪವಿಲ್ಲ. ವಿಸ್ತರಿಸಿದಾಗ ತೆರವು ಅನಿವಾರ್ಯ’ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಸಮರ್ಥಿಸಿಕೊಂಡರು.

ಝಂಡಾ ಮರುನಿರ್ಮಾಣ ಮಾಡಲು ಪ್ರತಿಭಟನಕಾರರು ಪಟ್ಟು ಹಿಡಿದಾಗ ಸ್ವಲ್ಪ ಹೊತ್ತು ಗೊಂದಲದ ವಾತಾವರಣ ನಿರ್ಮಾಣಗೊಂಡಿತು. ಜೆ. ಅಮಾನುಲ್ಲಾ ಖಾನ್, ಜಮೀರ್ ಅಹಮ್ಮದ್ ಖಾನ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಸದಸ್ಯ ಚಮನ್ ಸಾಬ್ ಮುಂತಾದವರು ಪ್ರತಿಭಟನಕಾರರನ್ನು ಸಮಾಧಾನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು