ಶನಿವಾರ, ಆಗಸ್ಟ್ 13, 2022
27 °C
ಪೊಲೀಸರ ದಂಡದಿಂದ ತಪ್ಪಿಸಲಷ್ಟೇ ಉಪಯೋಗ, ಜೀವಹಾನಿ ತಪ್ಪಿಸದ ಪ್ಲಾಸ್ಟಿಕ್‌ ಹೆಲ್ಮೆಟ್‌

ಪೊಲೀಸರಿಗೆ ‘ಟೋಪಿ’ ಹಾಕಲು ಅರ್ಧ ಹೆಲ್ಮೆಟ್‌

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹಲವು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸುವುದು ತಮ್ಮ ತಲೆಯ ರಕ್ಷಣೆಗೆ ಎಂಬುದನ್ನು ಮರೆತುಬಿಟ್ಟಿದ್ದಾರೆ. ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಎಂದು ತಿಳಿದುಕೊಂಡಿದ್ದಾರೆ. ಹೀಗಾಗಿ ಬಹುತೇಕರು ತಲೆ ಮೇಲೆ ಅರ್ಧ ಹೆಲ್ಮೆಟ್‌ ಹಾಕಿಕೊಂಡು ದಂಡದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ತಾವು ‘ಟೋಪಿ’ ಹಾಕಿಕೊಂಡು ಪೊಲೀಸರಿಗೆ ‘ಟೋಪಿ’ ಹಾಕಿದ್ದೇವೆ ಅಂದುಕೊಂಡಿದ್ದಾರೆ.

ಸ್ಕಿಡ್‌, ಬೇರೆ ವಾಹನಗಳಿಗೆ ಡಿಕ್ಕಿ ಹೊಡೆಯುವುದು, ಬೇರೆ ವಾಹನಗಳು ಬೈಕ್‌ಗೆ ಡಿಕ್ಕಿಯಾಗುವುದು ಸೇರಿದಂತೆ ಪ್ರತಿ ಮೂರು ಅಪಘಾತಗಳಲ್ಲಿ ಎರಡು ದ್ವಿಚಕ್ರವಾಹನಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಬೈಕ್ ಅಪಘಾತದಲ್ಲಿ 2019ರಲ್ಲಿ 61 ಮಂದಿ ಮೃತಪಟ್ಟಿದ್ದು, 128 ಮಂದಿಗೆ ಗಂಭೀರ ಗಾಯಗಳಾಗಿದ್ದವು. 105 ಮಂದಿ ಸಣ್ಣ ಗಾಯಗಳೊಂದಿಗೆ ಪಾರಾಗಿದ್ದರು. 2020ರಲ್ಲಿ 61 ಮಂದಿ ಸಾವನ್ನಪ್ಪಿದ್ದು, 71 ಮಂದಿಗೆ ಗಂಭೀರ ಗಾಯ, 105 ಮಂದಿಗೆ ಸಾಧಾರಣ ಗಾಯಗಳಾಗಿದ್ದವು. 2021ರಲ್ಲಿ 55 ಮಂದಿ ಪ್ರಾಣ ಕಳೆದುಕೊಂಡಿದ್ದು, 43 ಮಂದಿಗೆ ಗಂಭೀರ, 65 ಮಂದಿಗೆ ಸಾಮಾನ್ಯ ಗಾಯಗಳಾಗಿದ್ದವು. ಈ ವರ್ಷ ಈಗಾಗಲೇ 35 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯ ಮಾಡಬೇಕು ಎಂದು 2019ರಲ್ಲಿ ಪೊಲೀಸ್‌ ಇಲಾಖೆ ಕಠಿಣ ಕ್ರಮ ಕೈಗೊಂಡಿತ್ತು. ಹೆಲ್ಮೆಟ್‌ ಧರಿಸದೇ ಹೊರಗೆ ಬಂದರೆ ಸಾಕು ಕೇಸ್‌ ದಾಖಲಿಸಲಾಗುತ್ತಿತ್ತು. ಹಾಗಾಗಿ ಆ ವರ್ಷ ಹೆಲ್ಮೆಟ್‌ ಧರಿಸದ ಕಾರಣಕ್ಕೆ 1,18,523 ಪ್ರಕರಣಗಳು ದಾಖಲಾಗಿದ್ದವು.

ಇದೇ ನಿಯಮ ಮುಂದುವರಿದಿದ್ದರೆ ಇಷ್ಟು ಹೊತ್ತಿಗೆ ಎಲ್ಲ ದ್ವಿಚಕ್ರವಾಹನ ಸವಾರರು ಹೆಲ್ಮೆಟ್‌ ಧರಿಸುತ್ತಿದ್ದರು. ಆದರೆ, 2020ರಲ್ಲಿಬಂದ ಕೊರೊನಾ ಸೋಂಕು ಜನರನ್ನು ಆರ್ಥಿಕವಾಗಿ ಬಸವಳಿಯುವಂತೆ ಮಾಡಿದ್ದರಿಂದ ಪೊಲೀಸರು ದಾಖಲಿಸುವ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಯಿತು. 2020ರಲ್ಲಿ 17,925 ಪ್ರಕರಣ, 2021ರಲ್ಲಿ 19,463 ಪ್ರಕರಣ ದಾಖಲಾಗಿದ್ದವು. 2022ರಲ್ಲಿ ಇಲ್ಲಿವರೆಗೆ 9,895 ಪ್ರಕರಣ ದಾಖಲಾಗಿವೆ.

ಎಲ್ಲರೂ ಹೆಲ್ಮೆಟ್‌ ಧರಿಸಲಿ: ‘ದ್ವಿಚಕ್ರ ವಾಹನ ಸವಾರರು ಎಲ್ಲರೂ ಮೊದಲು ಹೆಲ್ಮೆಟ್‌ ಧರಿಸುವಂತೆ ಆಗಬೇಕು. ಅದಕ್ಕಾಗಿ ತಲೆಯಲ್ಲಿ ಹೆಲ್ಮೆಟ್‌ ಇದ್ದರೆ ಸಾಕು ಎಂದು ಫುಲ್‌ ಹೆಲ್ಮೆಟ್‌ ಬದಲು ಹಾಫ್ ಹೆಲ್ಮೆಟ್‌ ಇದ್ದರೂ ದಂಡ ವಿಧಿಸದೇ ಬಿಡುತ್ತಿದ್ದೇವೆ. ಹಾಫ್‌ ಹೆಲ್ಮೆಟ್‌ ಧರಿಸಿದವರಿಗೆ ಬದಲಾಯಿಸಿ ಎಂದು ಸೂಚನೆ ಮಾತ್ರ ನೀಡುತ್ತಿದ್ದೇವೆ. ಒಮ್ಮೆ ಎಲ್ಲರೂ ಹೆಲ್ಮೆಟ್‌ ಧರಿಸುವಂತೆ ಮಾಡಲು ಯಶಸ್ವಿಯಾದರೆ ಆಗ ಮುಂದಿನ ಹಂತಕ್ಕೆ ಹೋಗಲು ಸುಲಭವಾಗುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸಿ.ಬಿ. ರಿಷ್ಯಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದೇ ಸುರಕ್ಷತೆ ನೀಡದ ಅರ್ಧ ಹೆಲ್ಮೆಟ್‌ (ಪ್ಲಾಸ್ಟಿಕ್‌ ಹೆಲ್ಮೆಟ್‌) ಬಗ್ಗೆ ಬೇರೆ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ. ಅರ್ಧ ಹೆಲ್ಮೆಟ್‌ ಮಾರಾಟ ಮಾಡದಂತೆ ನೋಡಿಕೊಳ್ಳುವ ಕ್ರಮ ಅದು. ಎಲ್ಲಿಯೂ ಅರ್ಧ ಹೆಲ್ಮೆಟ್‌ ಸಿಗದೇ ಹೋದಾಗ ಗ್ರಾಹಕರು ಖಂಡಿತವಾಗಿಯೂ ಫುಲ್‌ ಹೆಲ್ಮೆಟ್‌ ಖರೀದಿಸುತ್ತಾರೆ. ಎಲ್ಲ ಹೆಲ್ಮೆಟ್‌ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ರಸ್ತೆ ಬದಿಯಲ್ಲಿ ಮಾರಾಟ ಮಾಡುವುದನ್ನು ಕಂಡಾಗ ವಶಪಡಿಸಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಎಲ್ಲ ಸವಾರರು ಐಎಸ್‌ಐ ಮಾರ್ಕ್‌ ಇರುವ ಗುಣಮಟ್ಟದ ಹೆಲ್ಮೆಟ್‌ ಧರಿಸುವ ಹಂತಕ್ಕೆ ಬಂದಾಗ ಹಿಂಬದಿ ಸವಾರರಿಗೆ ಹೆಲ್ಮೆಟ್‌ ಕಡ್ಡಾಯ ಮಾಡುತ್ತೇವೆ. ಸುರಕ್ಷತೆಯ ದೃಷ್ಟಿಯಿಂದ ಹಿಂಬದಿ ಸವಾರರಿಗೂ ಹೆಲ್ಮೆಟ್‌ ಇರಬೇಕು’ ಎನ್ನುವುದು ಅವರ ಅಭಿಪ್ರಾಯ.

‘ಅರ್ಧ ಹೆಲ್ಮೆಟ್‌ ಧರಿಸಿ ಪೊಲೀಸರನ್ನು ಯಾಮಾರಿಸಿದ್ದೇವೆ ಎಂದು ಯಾರೂ ಅಂದುಕೊಳ್ಳಬೇಕಾಗಿಲ್ಲ. ಅಪಘಾತವಾದಾಗ ಯಾರು ಯಾಮಾರಿದ್ದು ಎಂಬುದಕ್ಕೆ ನಮ್ಮಲ್ಲಿ ಉಂಟಾದ ಸಾವು–ನೋವುಗಳೇ ಸಾಕ್ಷಿ. ಹಾಗಾಗಿ ಎಲ್ಲರೂ ಉತ್ತಮ ಗುಣಮಟ್ಟದ, ತಲೆ ಪೂರ್ತಿ ಕವರ್‌ ಆಗುವ ಹೆಲ್ಮೆಟ್‌ ಧರಿಸಬೇಕು’ ಎಂದು ಅವರು ಸಲಹೆ ನೀಡಿದರು.

ಸಾಗುತ್ತಿರುವ ವಾಹನಗಳನ್ನು ತಡೆದು ನಿಲ್ಲಿಸಿ ಸುಮ್ಮನೆ ತಪಾಸಣೆ ಮಾಡಬೇಡಿ ಎಂದು ಡಿ.ಜಿ. ಅವರು ಸೂಚನೆ ನೀಡಿದ್ದಾರೆ. ಅದರರ್ಥ ಹೆಲ್ಮೆಟ್‌ ಹಾಕದವರನ್ನು ನಿಲ್ಲಿಸಬಾರದು ಎಂದಲ್ಲ ಎಂದು ರಿಷ್ಯಂತ್‌ ಸ್ಪಷ್ಟಪಡಿಸಿದರು.

ಬೈಕ್‌ ಅಪಘಾತದಲ್ಲಿ ಅಸುನೀಗುವವರಲ್ಲಿ ಯುವಕರ ಸಂಖ್ಯೆಯೇ ಹೆಚ್ಚಿದೆ. ಹಾಗಾಗಿ ಹೆಲ್ಮೆಟ್‌ ಹಾಕು ಎಂದು ಹೆತ್ತವರು ಒತ್ತಾಯಪೂರ್ವಕವಾಗಿ ಹಾಕಿಸಿ ಕಳುಹಿಸಬೇಕು ಎಂಬುದು ದ್ವಿಚಕ್ರ ವಾಹನ ಸವಾರ ಚಿದಾನಂದ ಅವರ ಸಲಹೆಯಾಗಿದೆ.

ತಲೆಗೆ ಏಟು ಬಿದ್ದು ಗಾಯಗೊಂಡವರು

ಬೈಕ್‌ ಅಪಘಾತದಲ್ಲಿ ಬಹುತೇಕ ಸಂದರ್ಭದಲ್ಲಿ ರಸ್ತೆಗೆ ಅಥವಾ ಇನ್ನೆಲ್ಲಿಗಾದರೂ ತಲೆ ತಾಗಿ ಜೀವ ಕಳೆದುಕೊಳ್ಳುವುದೇ ಹೆಚ್ಚು. ತಲೆಯಲ್ಲಿ ಹೆಲ್ಮೆಟ್‌ ಇದ್ದರೆ ಭೀಕರ ಅಪಘಾತಗಳನ್ನು ಹೊರತುಪಡಿಸಿ ಉಳಿದ ಸಮಯಗಳಲ್ಲಿ ಜೀವಗಳು ಉಳಿಯುತ್ತವೆ. ಬೈಕ್‌ ಅಪಘಾತದಲ್ಲಿ 100 ಜೀವಗಳು ಹಾನಿಯಾಗಿದ್ದರೆ, ಹೆಲ್ಮೆಟ್‌ ಇದ್ದಿದ್ದರೆ ಅದರಲ್ಲಿ ಕನಿಷ್ಠ 80 ಜೀವ ಉಳಿಯುತ್ತಿದ್ದವು ಎನ್ನುತ್ತಾರೆ ಸಂಚಾರ ಠಾಣೆಯ ಪೊಲೀಸರು.

ಆನಗೋಡು ಬಳಿ ಬೈಕ್‌ ಸ್ಕಿಡ್‌ ಆಗಿ ಪಲ್ಟಿಯಾಗಿತ್ತು. ಬೈಕ್‌ ಸವಾರ ಕುಂದವಾಡದ 30 ವರ್ಷದ ಯುವಕ ರಸ್ತೆಗೆ ಬಿದ್ದು, ತಲೆಗೆ ಏಟಾಗಿ ಮೃತಪಟ್ಟಿದ್ದರು.

ಜಗಳೂರು ತಾಲ್ಲೂಕಿನ ಚಿಕ್ಕಮ್ಮನಹಟ್ಟಿ ಗೊಲ್ಲರಹಟ್ಟಿ ಗ್ರಾಮದ ದರ್ಶನ ಎನ್ನುವ 18 ವರ್ಷದ ಯುವಕನ ಬೈಕ್‌ ಜಗಳೂರು ಬಿದರಕೆರೆ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ಬಿದ್ದು ತಲೆಗೆ ಗಂಭೀರ ಗಾಯಗಳಾಗಿದ್ದವು. ಆಸ್ಪತ್ರೆಗೆ ಸಾಗಿಸುವಾಗ ಅಸುನೀಗಿದ್ದರು.

ಸಂತೇಬೆನ್ನೂರು ಸಮೀಪದ ಕಾಕನೂರಿನ ಬೈರೇಶ್‌ (29) ಪತ್ನಿಯ ಮನೆಗೆ ಬೈಕ್‌ನಲ್ಲಿ ಹೊರಟಿದ್ದರು. ಕಾಕನೂರು ಕ್ರಷರ್ ಬಳಿ ಕಾರು ಡಿಕ್ಕಿಯಾಗಿದ್ದರಿಂದ ತಲೆಗೆ ಪೆಟ್ಟುಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅವರಿಗೆ ಮದುವೆಯಾಗಿ ಐದು ತಿಂಗಳಷ್ಟೇ ಆಗಿದ್ದವು. ಸಾಸ್ವೆಹಳ್ಳಿ ಸಮೀಪದ ಉಜನೀಪರ ಕ್ಯಾಂಪ್ ಬಳಿ ಬೈಕ್ ಮತ್ತು ಸ್ಕೂಟಿ ಮುಖಾಮುಖಿಯಾಗಿ ಡಿಕ್ಕಿಯಾಗಿದ್ದರಿಂದ ಬೈಕ್‌ ಸವಾರ ಬೆನಕನಹಳ್ಳಿಯ ರವಿಕಿರಣ್ (21) ರಸ್ತೆಗೆ ಬಿದ್ದು ತಲೆಗೆ ಗಾಯವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.

ಬಸವಾಪಟ್ಟಣ ಸಮೀಪದ ಹರಲೀಪುರದ ಭದ್ರಾನಾಲೆಯ ಸಮೀಪ ಟ್ರ್ಯಾಕ್ಟರ್‌ ಡಿಕ್ಕಿಯಾಗಿ ಬೈಕ್‌ ಸವಾರ ಚಿರಡೋಣಿಯ ಪ್ರದೀಪ್‌ (21) ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಶಿವಮೊಗ್ಗಕ್ಕೆ ಗಾರೆ ಕೆಲಸಕ್ಕೆ ಹೋಗಿದ್ದ ಸಾಸ್ವೆಹಳ್ಳಿ ಹೋಬಳಿಯ ಹೊಟ್ಯಾಪುರದ ಅನಿಲ್ (23) ತನ್ನ ಬೈಕಿನಲ್ಲಿ ವಾಪಸ್ಸಾಗುತ್ತಿದ್ದರು. ಸಾಸ್ವೆಹಳ್ಳಿ ಲಿಂಗಾಪುರ ಬಳಿ ಲಾರಿ ಡಿಕ್ಕಿಯಾಗಿತ್ತು. ತಲೆಗೆ ಏಟು ಬಿದ್ದು ಅನಿಲ್‌ ಜೀವ ಕಳೆದುಕೊಂಡಿದ್ದರು.

ನ್ಯಾಮತಿ ಬಳಿ ಎರಡು ಬೈಕ್‌ಗಳ ನಡುವೆ ಉಂಟಾಗಿದ್ದ ಅಪಘಾತದಲ್ಲಿ ಶಿಕಾರಿಪುರದ ಪ್ರಶಾಂತ್‌ (35), ಶಿವಮೊಗ್ಗ ಹುಣಸೋಡಿನ ದರ್ಶನ (20) ಸಾವನ್ನಪ್ಪಿದ್ದರು. ಜಗಳೂರು ತಾಲ್ಲೂಕಿನ ಉಜ್ಜಪ್ಪ ವಡೇರಹಳ್ಳಿ–ಬಸವರನಕೋಟೆ ರಸ್ತೆಯಲ್ಲಿ ಬೈಕ್‌ಗಳ ನಡುವೆ ಅ‍ಪಘಾತವಾಗಿ ಉಜ್ಜಪ್ಪ ವಡೇರಹಳ್ಳಯ ಪರಶುರಾಮ ಎಂ.ಜಿ. (26) ಮೃತಪಟ್ಟಿದ್ದರು. ಕಿರಣ್‌ (22) ಗಾಯಗೊಂಡಿದ್ದರು. ಅಣಜಿ ಕೆರೆ ಏರಿ ಮೇಲೆ ಕಾರು ಡಿಕ್ಕಿಯಾಗಿ ಜಗಳೂರು ತಾಲ್ಲೂಕು ಬಿಳಿಚೋಡು ಗ್ರಾಮದ ಅಂಜಿನಪ್ಪ ಅವರ ಮಗ ಜಯ್ಯಪ್ಪ (25) ಮೃತಪಟ್ಟಿದ್ದರು. ಮಲೇಬೆನ್ನೂರು ಸಮೀಪದ ಭಾಸ್ಕರ್ ರಾವ್ ಕ್ಯಾಂಪ್–ಕುಂಬಳೂರು ಗ್ರಾಮದ ಮಧ್ಯೆ ಬೈಕ್‌ ಸ್ಕಿಡ್‌ ಆಗಿ ಚನ್ನಗಿರಿ ತಾಲ್ಲೂಕಿನ ಚಿಕ್ಕಕುರುಬರಹಳ್ಳಿ ನಿವಾಸಿ ಅಭಿಷೇಕ್ (19) ಮೃತಪಟ್ಟಿದ್ದರು.

ಕಳೆದ ನಾಲ್ಕು ತಿಂಗಳಲ್ಲಿ ಬೈಕ್‌ ಅಪಘಾತದಲ್ಲಿ ಜೀವ ಕಳೆದುಕೊಂಡವರಲ್ಲಿ ಕೆಲವರು ಇವರು. ಇದರಲ್ಲಿ ಬಹುತೇಕ ಎಳೆಜೀವಗಳಾಗಿದ್ದವು. ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡು ತೆರಳುತ್ತಿದ್ದರು. ಈ ಅಪಘಾತಗಳನ್ನು ನೋಡಿದಾಗ ಗುಣಮಟ್ಟದ ಹೆಲ್ಮೆಟ್‌ ಹಾಕಿದ್ದರೆ ಇಷ್ಟೂ ಜೀವಗಳು ಉಳಿಯುವ ಸಾಧ್ಯತೆಗಳಿದ್ದವು.

ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನಗಳಲ್ಲಿರುವವರೇ ಹೆಚ್ಚು ಸಾಯುತ್ತಿರುವುದನ್ನು ಗಮನಿಸಿ ಹೆಲ್ಮೆಟ್‌ ಧರಿಸುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್‌ ಅದೇಶ ನೀಡಿದೆ. ಪೊಲೀಸ್‌ ಇಲಾಖೆ ಒತ್ತಾಯಪೂರ್ವಕವಾಗಿ ಹಾಕಿಸುವ ಮೊದಲು ಜನರು ಪಾಲನೆ ಮಾಡಬೇಕು.

–ಸಿ.ಬಿ. ರಿಷ್ಯಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಮ್ಮಲ್ಲಿರುವ ಮೊಬೈಲ್‌ಗೆ ಸಣ್ಣ ಗೀರು ಕೂಡ ಬೀಳದಂತೆ ಕವರ್‌ ಹಾಕಿ ಎಚ್ಚರ ವಹಿಸುತ್ತಾರೆ. ಆದರೆ ತಮ್ಮ ತಲೆಯನ್ನು ಮರೆಯುತ್ತಾರೆ. ಮೊಬೈಲ್ ಹೋದರೆ ಹೊಸತು ತಗೋಬಹುದು. ಜೀವ ಹೋದರೆ ಮತ್ತೆ ಬಾರದು. ದ್ವಿಚಕ್ರವಾಹನ ಸವಾರರು ತಮ್ಮ ರಕ್ಷಣೆಗಾಗಿ ಹೆಲ್ಮೆಟ್‌ ಧರಿಸಬೇಕು.

–ಚಿದಾನಂದ, ದ್ವಿಚಕ್ರವಾಹನ ಸವಾರರು

ಅಪಘಾತದಲ್ಲಿ ದ್ವಿಚಕ್ರವಾಹನ ಸವಾರರು, ಸಹ ಸವಾರರಿಗೆ ಬಹುತೇಕ ಸಂದರ್ಭದಲ್ಲಿ ತಲೆಗೇ ಏಟು ಬಿದ್ದಿರುತ್ತದೆ. ಹೆಲ್ಮೆಟ್‌ ಧರಿಸಿದ್ದರೆ ಅವರನ್ನು ಬದುಕಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಗುಣಮಟ್ಟದ ಹೆಲ್ಮೆಟ್‌ ಧರಿಸುವ ಮೂಲಕ ಮುಂದೆ ಆಗುವ ಅನಾಹುತವನ್ನು ತಪ್ಪಿಸಬಹುದು.

–ಡಾ. ರವೀಂದ್ರ, ಸರ್ಜನ್‌, ಸಿ.ಜಿ. ಆಸ್ಪತ್ರೆ, ದಾವಣಗೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು