ಮಂಗಳವಾರ, ಜೂನ್ 22, 2021
22 °C

ರಂಜಾನ್‌ ಉಪವಾಸ ಬಿಡದೇ ಕೆಲಸ: ಆಸೀಫ್‌

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಇದು ರಂಜಾನ್‌ ತಿಂಗಳು. ಹಾಗಾಗಿ ಉಪವಾಸ ಇದ್ದುಕೊಂಡೇ ಕೊರೊನಾ ಸೋಂಕಿತರ ಆರೈಕೆ ಮಾಡುತ್ತಿದ್ದೇನೆ. ಅತ್ತ ದೇವನ ಸೇವೆ, ಇತ್ತ ಜನರ ಸೇವೆ ಎರಡನ್ನೂ ಮನ:ಸ್ಫೂರ್ತಿಯಾಗಿ ಮಾಡುತ್ತಿದ್ದೇನೆ’.

ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ವಾರ್ಡ್‌ನಲ್ಲಿ ಮೊದಲ ಸೋಂಕಿನಿಂದ ಇಲ್ಲಿವರೆಗೆ ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್‌ ಆಸೀಫ್‌ ಅವರ ಮಾತುಗಳು ಇವು.

ನೇರ ನೇಮಕಾತಿ ಮೂಲಕ 10 ವರ್ಷಗಳ ಹಿಂದೆ ಜಿಲ್ಲಾ ಆಸ್ಪತ್ರೆಗೆ ಬಂದಿದ್ದ ಆಸೀಫ್‌ ವೆಂಟಿಲೇಟರ್‌ ಮಾನಿಟರ್‌ ಮಾಡುವುದರಲ್ಲಿ ಎತ್ತಿದ ಕೈ. ಅದಕ್ಕಾಗಿ ಅವರು ಒಂದು ವರ್ಷದಿಂದ ಐಸಿಯು, ಎಂಐಸಿಯುನಲ್ಲಿಯೇ ಕೆಲಸ ಮಾಡುತ್ತಿದ್ದಾರೆ.

‘ಕೊರೊನಾ ಮೊದಲ ಅಲೆ ಬಂದಾಗ ಹೆದರಿಕೊಂಡು ಮೃತಪಟ್ಟವರ ಸಂಖ್ಯೆ ಹೆಚ್ಚಿದ್ದರೂ ಒಟ್ಟು ಸಾವಿನ ಪ್ರಮಾಣ ಕಡಿಮೆ ಇತ್ತು. ಎರಡನೇ ಅಲೆಯು ಅದಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ಕಾಣಿಸುತ್ತಿದೆ. ನನಗೆ ಕೊರೊನಾ ಬಂದಿದೆಯೇ ಇಲ್ವ ಎಂಬುದು ಗೊತ್ತಿಲ್ಲ. ಕೊರೊನಾ ಸೋಂಕಿತರ ಆರೈಕೆ ಮಾಡುವುದರಿಂದ ನಾನು ತಪ್ಪಿಸಿಕೊಂಡಿಲ್ಲ. ಕಳೆದ ವರ್ಷದ ರಜೆಗಳನ್ನು ಸರಂಡರ್‌ ಮಾಡಿ ಕಾರ್ಯ ನಿರ್ವಹಿಸುತ್ತಿದ್ದೇನೆ’ ಎಂದು ಅನುಭವ ಹೇಳಿಕೊಂಡರು.

‘ವೆಂಟಿಲೇಟರ್‌ಗೆ ರೋಗಿಗಳು ಬರುವುದು ಅಂದರೆ ಅದು ಕೊನೇ ಪ್ರಯತ್ನ ಆಗಿರುತ್ತದೆ. ಅಲ್ಲಿ ನಾವು ಎಚ್ಚರ ತಪ್ಪದೇ ಕೆಲಸ ಮಾಡಬೇಕಾಗುತ್ತದೆ’ ಎಂದು ತಿಳಿಸಿದರು.

‘ಕಳೆದ ವರ್ಷ ಕೊರೊನಾ ಬಂದಾಗ ನಮಗೆ ಲಾಡ್ಜ್‌ ವ್ಯವಸ್ಥೆ ಮಾಡಿದ್ದರು. ಹಾಗಾಗಿ ಮನೆಗೆ ಹೋಗುತ್ತಿರಲಿಲ್ಲ. ಈ ಬಾರಿ ಅಂಥ ವ್ಯವಸ್ಥೆ ಮಾಡಿಲ್ಲ. ಲಾಡ್ಜ್‌ನಲ್ಲಿ ಇದ್ದಾಗ ಊಟ ಮಾಡಲು ಆಗುತ್ತಿರಲಿಲ್ಲ. ಮನೆಯಲ್ಲಿ ಊಟ ಸೇರುತ್ತದೆ. ಮನೆಗೆ ಹೋದ ಕೂಡಲೇ ಸ್ನಾನ ಮಾಡಿ ಸ್ವಚ್ಛವಾಗಿ ಪ್ರತ್ಯೇಕವಾಗಿ ಇರುತ್ತೇನೆ. ಮನೆಯಲ್ಲಿ ತಂದೆ ತಾಯಿ, ಪತ್ನಿ ಮತ್ತು ಮೂರು ವರ್ಷದ ಅವಳಿ ಹೆಣ್ಣುಮಕ್ಕಳಿದ್ದಾರೆ. ಯಾರಿಗೂ ತೊಂದರೆಯಾಗದಂತೆ ನಿರ್ವಹಿಸುತ್ತಿದ್ದೇನೆ’ ಎಂದು ವೈಯಕ್ತಿಕ ಬದುಕನ್ನು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು