ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯರಿಂದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ: ರೇಣುಕಾಚಾರ್ಯ

ಮಾಜಿ ಸಚಿವ ಎಂ.‍ಪಿ. ರೇಣುಕಾಚಾರ್ಯ ಆರೋಪ
Published 8 ಡಿಸೆಂಬರ್ 2023, 14:20 IST
Last Updated 8 ಡಿಸೆಂಬರ್ 2023, 14:20 IST
ಅಕ್ಷರ ಗಾತ್ರ

ದಾವಣಗೆರೆ: ‘ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಇಂತಹ ಸ್ಥಿತಿಯಲ್ಲಿ ₹ 35,000 ಕೋಟಿಗೂ ಹೆಚ್ಚು ಅನುದಾನ ಬೇಕು. ಬರ ಪರಿಹಾರ ಕಾಮಗಾರಿ ಕೈಗೊಳ್ಳದ, ರೈತರ ಖಾತೆಗೆ ಹಣ ಜಮಾ ಮಾಡದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹10,000 ಕೋಟಿ ಕೊಡುತ್ತೇವೆ ಎನ್ನುವ ಮೂಲಕ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಮಾಜಿ ಸಚಿವ ಎಂ.‍ಪಿ. ರೇಣುಕಾಚಾರ್ಯ ಆರೋಪಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೈತರಿಗೆ ಕೊಡಲು ಅನುದಾನ ಇಲ್ಲ, ಗ್ಯಾರಂಟಿ ಯೋಜನೆಗಳಿಗೆ ಹಣ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರಿಗೆ ಅಷ್ಟೊಂದು ಹಣ ಹೇಗೆ ಕೊಡುತ್ತಾರೆ. ಈ ಮೂಲಕ ಸಿದ್ದರಾಮಯ್ಯ  ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ’ ಎಂದು ದೂರಿದರು.

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಅಲ್ಲ. ಆದರೆ ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲ ವರ್ಗ, ಧರ್ಮದ ಹಿತ ಕಾಯುವುದು ಬಿಟ್ಟು, ಒಂದು ಸಮುದಾಯದ ಓಲೈಕೆ ಮಾಡುತ್ತಿರುವುದು ಖಂಡನೀಯ ಎಂದರು.

ರಾಜ್ಯದ ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕೊಟ್ಟ ಭರವಸೆ ಈಡೇರಿಸಲು ಆಗುತ್ತಿಲ್ಲ.  ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಮೀಷನ್‌ ಆರೋಪ ಮಾಡುತ್ತಿದ್ದಾರೆ. ತೆಲಂಗಾಣದ ಚುನಾವಣೆಯಲ್ಲಿ ರಾಜ್ಯದ ಸಂಪತ್ತು ಹರಿದಿದೆ. ಈ ಸರ್ಕಾರ ಬಹಳ ದಿನ ಇರುವುದಿಲ್ಲ. ದಿವಾಳಿಯಿಂದ ಪತನವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

‘ರೈತರ ಖಾತೆಗೆ ಹಣ ಹಾಕಲು ಅನುದಾನ ಇಲ್ಲ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಇಲ್ಲ. ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡುತ್ತಿರುವ ಸಿದ್ದರಾಮಯ್ಯಗೆ ಅಲ್ಪಸಂಖ್ಯಾತರಿಗೆ ಕೊಡಲು ಹಣ ಎಲ್ಲಿಂದ ಬಂತು’ ಎಂದು ಅವರು ಪ್ರಶ್ನಿಸಿದರು.

‘ದೇವಾಲಯದ ಹುಂಡಿ ಹಣವನ್ನು ವಕ್ಫ್‌ ಮಂಡಳಿಗೆ ಬಿಡುಗಡೆ ಮಾಡುತ್ತೀರಿ. ದೇಶದ ಸಂಪತ್ತನ್ನು ಅಲ್ಪಸಂಖ್ಯಾತರಿಗೆ ಹಂಚುತ್ತೇನೆ ಎನ್ನಲು ನೀವು ಪ್ರಧಾನಿಯೇ ಎಂದು ಪ್ರಶ್ನಿಸಿದ ಅವರು, ‘ಸಿದ್ದರಾಮಯ್ಯ ಹೇಳಿಕೆಯಿಂದ ಹಿಂದೂಗಳಿಗೆ ನೋವಾಗಿದ್ದು, ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

ಯತ್ನಾಳಗೆ ನೈತಿಕತೆ ಇಲ್ಲ:

‘ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಮಾತನಾಡುವ ನೈತಿಕತೆ ಬಸವನಗೌಡ ಯತ್ನಾಳಗೆ ಇಲ್ಲ. ಅವರನ್ನು ಬಿಜೆಪಿಗೆ ಕರೆತಂದಿದ್ದು, ಕೇಂದ್ರ ಸಚಿವರನ್ನಾಗಿಸಿದ್ದು ಯಡಿಯೂರಪ್ಪ. ಪ್ರಚಾರಕ್ಕೆ ಯಡಿಯೂರಪ್ಪ ವಿರುದ್ಧ ಮಾತನಾಡುವುದನ್ನು ಯತ್ನಾಳ ಬಿಡಲಿ. ಯಡಿಯೂರಪ್ಪ ಪ್ರಶ್ನಾತೀತ ನಾಯಕರು. ಅವರ ವಿರುದ್ಧ ಹೇಳಿಕೆ ನೀಡಿದರೆ ನೀವು ವಿಲನ್‌ ಆಗುತ್ತೀರಿ’ ಎಂದು ರೇಣುಕಾಚಾರ್ಯ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT