ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಶಿಲೀಂಧ್ರಕ್ಕೆ ಇರುವ ಔಷಧದ ಕೊರತೆ ನೀಗಿಸಲು ಮನವಿ

ಔಷಧ ಪೂರೈಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಉಸ್ತುವಾರಿ ಸಚಿವ ಬೈರತಿ ಬಸವರಾಜ
Last Updated 29 ಜೂನ್ 2021, 16:23 IST
ಅಕ್ಷರ ಗಾತ್ರ

ದಾವಣಗೆರೆ: ಕಪ್ಪು ಶಿಲೀಂಧ್ರಕ್ಕೆ ನೀಡುವ ಔಷಧ ಅಗತ್ಯ ಇರುವುದಕ್ಕಿಂತ ಕಡಿಮೆ ಇದೆ. ಅದನ್ನು ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕುರಿತಂತೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸಚಿವ ಬೈರತಿ ಬಸವರಾಜ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಪರಿಶೀಲನಾ ಸಭೆಯಲ್ಲಿ ಈ ಬೇಡಿಕೆ ಇಡಲಾಗಿದೆ.

ಕಪ್ಪು ಶಿಲೀಂಧ್ರಕ್ಕೆ ಸಂಬಂಧಿಸಿದಂತೆ ಸದ್ಯ 35 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಲಿಸೊಸೊಮಲ್‌ ಆ್ಯಂಫೋತೆರಿಸಿನ್‌–ಬಿ ಮತ್ತು ಕೊಸಕೊನೆಜೋಲ್‌ ಔಷಧಿಗಳನ್ನು ನೀಡಲಾಗುತ್ತದೆ. ಅದು ನಿರಂತರ ಕೋರ್ಸ್‌ ಆಗಿದ್ದು, ಮುಂದುವರಿಸಲು ಬೇಕಾದಷ್ಟು ಔಷಧ ಇಲ್ಲ ಎಂದು ಹೇಳಿದರು.

ಕಪ್ಪು ಶಿಲೀಂಧ್ರ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲೆಗೆ 2,856 ಶೀಷೆ ಔಷಧ ಅಗತ್ಯವಿದೆ. ಆದರೆ ಜಿಲ್ಲೆಗೆ ಕೇವಲ 396 ಶೀಷೆ ಪೂರೈಕೆಯಾಗಿದೆ ಎಂದು ತಜ್ಞ ವೈದ್ಯ ಡಾ. ಮಂಜುನಾಥ್ ಅಂಕಿ ಅಂಶ ನೀಡಿದರು.

ಜಿಲ್ಲೆಗೆ ಅಗತ್ಯವಿರುವ ಔಷಧದ ಪಟ್ಟಿಯನ್ನು ನೀಡಿ. ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಮಾತನಾಡಿ ಔಷಧ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಜಿಲ್ಲೆಯಲ್ಲಿ 7 ಮಿಸ್‌–ಸಿ ಪ್ರಕರಣಗಳು ಪತ್ತೆಯಾಗಿವೆ. ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ ಕಂಡು ಬಂದಿರುವ ಎರಡನೇ ಪ್ರಕರಣವಾಗಿರುವ ಎನೆಕ್‌ನಲ್ಲಿ ಬಾಲಕ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಮೂರನೇ ಅಲೆ ಎದುರಿಸಲು ಬೇಕಾದ ವೈದ್ಯಕೀಯ ಉಪಕರಣ, ಔಷಧಗಳ ಬಗ್ಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಅವೆಲ್ಲ ಪೂರೈಕೆ ಆಗಬೇಕಿದೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ 60 ಆಮ್ಲಜನಕ ಬೆಡ್‍ನಂತೆ 3 ಪ್ರತ್ಯೇಕ ವಾರ್ಡ್ ಮಕ್ಕಳಿಗಾಗಿಯೇ ನಿಗದಿಪಡಿಸಲು ಯೋಜಿಸಲಾಗಿದೆ. ಮಕ್ಕಳ ಐಸಿಯುನ 36 ಬೆಡ್, ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 4ರಂತೆ ಒಟ್ಟು 24 ಬೆಡ್ ಸಿದ್ಧಪಡಿಸಲು ಕ್ರಮ ವಹಿಸಲಾಗಿದೆ. ಇಸಿಜಿ, ಎಕೋ, ಯಂತ್ರೋಪಕರಣಗಳು, ಕೆಲವು ಸಾಧನ ಸಲಕರಣೆಗಳು, ಔಷಧ ಪೂರೈಸಲು ಬೇಡಿಕೆ ಸಲ್ಲಿಸಲಾಗಿದೆ. ಖನಿಜ ನಿಧಿಯಡಿ ಆರೋಗ್ಯ ಪರಿಕರ ಖರೀದಿಗಾಗಿ ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಪಟ್ಟಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್‌ ವಿವರ ನೀಡಿದರು.

ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ 3.59ಕ್ಕೆ ಇಳಿದಿದೆ. ಈ ವಾರದ ಕೊನೆಗೆ ಶೇ 2ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಪಾಸಿಟಿವಿಟಿ ದರ ಶೇ. 2 ಕ್ಕೆ ಇಳಿಯುವ ನಿರೀಕ್ಷೆ ಇದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ತಿಳಿಸಿದರು.

ದಾವಣಗೆರೆ ತಾಲ್ಲೂಕಿನಲ್ಲಿ 2.35 ಲಕ್ಷ, ಹರಿಹರ ತಾಲ್ಲೂಕಿನಲ್ಲಿ 66,200, ಹೊನ್ನಾಳಿ ತಾಲ್ಲೂಕಿನಲ್ಲಿ 73,600, ಜಗಳೂರು ತಾಲ್ಲೂಕಿನಲ್ಲಿ 37,800, ಚನ್ನಗಿರಿ ತಾಲ್ಲೂಕಿನಲ್ಲಿ 97,500 ಡೋಸ್ ಸೇರೊ ಒಟ್ಟು 4.71 ಲಕ್ಷ ಡೋಸ್ ಕೊರೊನಾ ನಿರೋಧಕ ಲಸಿಕೆ ಹಾಕಲಾಗಿದೆ ಎಂದು ಆರ್‌ಸಿಎಚ್‌ಒ ಡಾ. ಮೀನಾಕ್ಷಿ ಮಾಹಿತಿ ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್‌ ಎಸ್.ಟಿ. ವೀರೇಶ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ್‌ ದಾನಮ್ಮನವರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಇದ್ದರು.

‘ಕೊರೊನಾದಿಂದ ಮೃತಪಟ್ಟ ಎಲ್ಲರಿಗೂ ಪರಿಹಾರ’
ಕೋವಿಡ್‍ನಿಂದ ಮೃತಪಟ್ಟವರ ಎಲ್ಲ ಕುಟುಂಬಗಳಿಗೆ ತಲಾ ₹ 1 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಚಿವ ಬೈರತಿ ಬಸವರಾಜ ತಿಳಿಸಿದರು.

ಎಪಿಎಲ್‌, ಬಿಪಿಎಲ್‌ ಎಂದು ನೋಡದೇ ಎಲ್ಲರಿಗೂ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಹಾಗಾಗಿ ಮೃತಪಟ್ಟವರ ವಿವರವನ್ನು ತಾಲ್ಲೂಕುವಾರು ಪಟ್ಟಿ ಮಾಡಿ ನೀಡಬೇಕು. ಪರಿಹಾರವನ್ನು ಜಿಲ್ಲಾಧಿಕಾರಿಯ ಖಾತೆಗೆ ಜಮಾ ಮಾಡಿಸಿ ಅಲ್ಲಿಂದ ಆ ಕುಟುಂಬಗಳಿಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT