ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಲ ಸಂಘಟನೆಗಳಿಂದ ಕನ್ನಡಕ್ಕೆ ಧಕ್ಕೆ’

ಸಾ.ರಾ. ಗೋವಿಂದುಗೆ ‘ಕರ್ನಾಟಕ ಚೂಡಾಮಣಿ’ ಪ್ರಶಸ್ತಿ ಪ್ರದಾನ
Last Updated 23 ಡಿಸೆಂಬರ್ 2019, 10:34 IST
ಅಕ್ಷರ ಗಾತ್ರ

ದಾವಣಗೆರೆ: ಗಲ್ಲಿಗೊಂದು, ಬೀದಿಗೊಂಡು ಸಂಘಟನೆಗಳು ಹುಟ್ಟಿಕೊಂಡು ಕನ್ನಡವನ್ನು ಹಾಳು ಮಾಡುತ್ತಿವೆ ಎಂದು ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸಾ.ರಾ. ಗೋವಿಂದು ಆರೋಪಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿಯಿಂದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದದ ಕಾರ್ಯಕ್ರಮದಲ್ಲಿ ‘ಕರ್ನಾಟಕ ಚೂಡಾಮಣಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಎಷ್ಟಾದರೂ ಸಂಘಟನೆಗಳು ಜನ್ಮ ತಾಳಲಿ. ಕನ್ನಡವನ್ನು ಉಳಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕೆಲವು ಸಂಘಟನೆಗಳು ಕನ್ನಡದ ಹೆಸರನ್ನು ಹೇಳಿಕೊಂಡು ಭಾಷೆಯನ್ನು ಕೊಲ್ಲುವ ಕೆಲಸ ಮಾಡುತ್ತಿವೆ. ಕನ್ನಡದ ಹೆಸರೇಳಿ ಜೀವನ ಮಾಡುತ್ತಿವೆ. ಇದರಿಂದಾಗಿ ನಮಗೆ ಗೌರವ ಇಲ್ಲದಂತಾಗಿದೆ. ಸಂಘಗದಲ್ಲಿ ನಾಲ್ಕು ಜನ ಇಲ್ಲದಿದ್ದರೂ ಅದಕ್ಕೊಬ್ಬ ಅಧ್ಯಕ್ಷ. ಬೋರ್ಡ್‌ ಹಾಕಿಕೊಂಡು ಟೋಲ್‌ನಲ್ಲಿ ಹಣ ಕೇಳಿದರೆ ಗಲಾಟೆ ಮಾಡುತ್ತಿದ್ದಾರೆ. ಇಂತಹ ಸಂಘಟನೆಗಳಿಂದ ಕನ್ನಡ ದುಃಸ್ಥಿತಿಗೆ ಬಂದಿದೆ’ ಎಂದರು.

‘ರಾಜ್‌ ಕುಮಾರ್ ಅವರು ಬೆಳೆದ ಹಾದಿಯಲ್ಲೇ ಆ ನೆಲೆಗಟ್ಟಿನಲ್ಲೇ ಅವರಿಗೆ ಚುತಿ ಬಾರದಂತೆ ಅಭಿಮಾನಿಗಳ ಸಂಘ ಕಟ್ಟಿದೆ. ಎಲ್ಲೂ ಅವರ ಹೆಸರಿಗೆ ಕಳಂಕ ತಂದಿಲ್ಲ. ಕನ್ನಡವನ್ನು ಬೆಳೆಸುವ ಕೆಲಸ ಮಾಡಿದೆ ಕೊನೆಯ ಉಸಿರು ಇರುವವರೆಗೂ ಕನ್ನಡಕ್ಕೆ ಹೋರಾಡುತ್ತೇನೆ. ದಾವಣಗೆರೆಯಲ್ಲಿ ಮೂರನೇ ವಿಶ್ವಕನ್ನಡ ಸಮ್ಮೇಳನ ನಡೆಸಲು ಸರ್ಕಾರಕ್ಕೆ ಒತ್ತಡ ತರುತ್ತೇನೆ. ದಾವಣಗೆರೆ ಪರವಾಗಿ ನಿಲ್ಲುತ್ತೇನೆ’ ಎಂದು ಭರವಸೆ ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ರಾಜ್ಯದಲ್ಲಿ ಅಚ್ಚ ಕನ್ನಡ ಮಾತನಾಡುವವರು ಸಿಗುವುದು ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮಾತ್ರ. ಕನ್ನಡ, ನೆಲ, ಜಲಕ್ಕೆ ಧಕ್ಕೆ ಬಂದಾಗ ಪಕ್ಷಭೇದ ಮರೆತು ಹೋರಾಟ ಮಾಡಿದ್ದೇವೆ. ಮುಂದೆಯೂ ಹೋರಾಟ ಮಾಡುತ್ತೇವೆ. ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳನ್ನು ಕಲಿಯಬೇಕು. ಆದರೆ ಕನ್ನಡ ಮೊದಲ ಆದ್ಯತೆಯಾಗಬೇಕು. ಅದನ್ನು ಗೌರವಿಸಬೇಕು. ಡಾ. ರಾಜ್‌ಕುಮಾರ್ ಮೇರು ನಟ. ಗೋಕಾಕ್‌ ಚಳವಳಿಯ ವೇಳೆ ನಗರದ ಹೈಸ್ಕೂಲ್‌ ಮೈದಾನದಲ್ಲಿ ಭಾಷಣ ಮಾಡಿದ್ದರು’ ಎಂದು ಸ್ಮರಿಸಿಕೊಂಡರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಸ್‌. ಮಂಜುನಾಥ ಕುರ್ಕಿ ಅಭಿನಂದನಾ ನುಡಿಗಳನ್ನಾಡಿದರು. ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್‌.ಹೆಬ್ಬಾಳ್‌, ಚಿತ್ರ ನಿರ್ದೇಶಕ ಎಚ್. ವಾಸು ಇದ್ದರು. ಸಮಿತಿಯ ಅಧ್ಯಕ್ಷ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್‌.ಪ್ರಭುಸ್ವಾಮಿ ಸ್ವಾಗತಿಸಿದರು. ಖಜಾಂಚಿ ಕೆ.ಎಸ್.ಎಂ. ಹುಸೇನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT