ಗುರುವಾರ , ಡಿಸೆಂಬರ್ 1, 2022
20 °C
ಚೇತರಿಕೆಯತ್ತ ಸೋಂಕು ಪೀಡಿತ ಜಾನುವಾರು l 30 ಸಾವಿರ ಲಸಿಕೆ

ವ್ಯಾಪಿಸುತ್ತಿದೆ ‘ಚರ್ಮಗಂಟು’ ರೋಗ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗವು ಜಿಲ್ಲೆಯಾದ್ಯಂತ ನಿಧಾನಗತಿಯಲ್ಲಿ ಹೆಚ್ಚುತ್ತಿದೆ. ವಾರದ ಹಿಂದೆ ಜಿಲ್ಲೆಯಲ್ಲಿ 90 ಜಾನುವಾರುಗಳಲ್ಲಿ ಈ ರೋಗ ಕಂಡುಬಂದಿತ್ತು. ಇದೀಗ ಆ ಸಂಖ್ಯೆ 216ಕ್ಕೆ ಏರಿದೆ. ಲಸಿಕೆ ನೀಡುವ ಪ್ರಕ್ರಿಯೆ ವೇಗ ಪಡೆದುಕೊಂಡಿದೆ.

ವಿಪರೀತ ಜ್ವರ ಬಂದು ಚರ್ಮ ಗಂಟುಕಟ್ಟುವ ಈ ರೋಗವು (ಲಂಪಿ ಸ್ಕಿನ್‌ ಡಿಸೀಸ್‌) ಎರಡು ವರ್ಷಗಳ ಈಚೆಗೆ ಭಾರತದಲ್ಲಿ ಕಾಣಿಸಿಕೊಂಡಿತ್ತು. ಕೆಲವು ವಾರಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಹರಡುವ ಮೂಲಕ ರೈತರಲ್ಲಿ ಆತಂಕ ಸೃಷ್ಟಿಸಿದೆ.

ಲಸಿಕೆ ನೀಡಿ 21 ದಿನ ಬೇಕು: ‘ಕ್ಯಾಪ್ರಿಫಾಕ್ಸ್‌’ ಎಂಬ ಹೆಸರಿನ ವೈರಾಣುವಿನಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಈಗ ಇದೇ ವೈರಾಣುವಿನ ಜೀವಂತ ಲಸಿಕೆಯನ್ನೇ ಪ್ರತಿರೋಧಕ ಔಷಧವಾಗಿ ನೀಡಲಾಗುತ್ತಿದೆ. ಜಾನುವಾರಿಗೆ ಈ ಲಸಿಕೆ ನೀಡಿದ ಮೇಲೆ ಈ ರೋಗದ ನಿರೋಧಕ ಶಕ್ತಿಯು ಜಾನುವಾರುಗಳ ದೇಹದಲ್ಲಿ ಅಭಿವೃದ್ಧಿಯಾಗಲು ಕನಿಷ್ಠ 21 ದಿನಗಳಾದರೂ ಬೇಕು. ಹಾಗಾಗಿ ಲಸಿಕೆ ನೀಡಿದ ಕೂಡಲೇ ಈ ಸಾಂಕ್ರಮಿಕ ರೋಗ ಬರುವುದಿಲ್ಲ ಎಂದು ರೈತರು ಭಾವಿಸಬಾರದು ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಚಂದ್ರಶೇಖರ್‌ ಸುಂಕದ ‘ಪ್ರಜಾವಾಣಿ’ಗೆ ತಿಳಿಸಿದರು.

ಸೊಳ್ಳೆ, ಉಣ್ಣೆ, ನೊಣ, ಕುದುರೆ ನೊಣ ಹಾಗೂ ವಿವಿಧ ಕೀಟಗಳ ಮೂಲಕ ಈ ಕಾಯಿಲೆ ಹರಡುತ್ತದೆ. ಆದರೆ ಆರೋಗ್ಯವಂತ ಜಾನುವಾರುಗಳಿಗೆ ಇದರಿಂದ ಏನೂ ಸಮಸ್ಯೆ ಉಂಟಾಗುವುದಿಲ್ಲ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜಾನುವಾರುಗಳಿಗೆ ತೀವ್ರ ಸಮಸ್ಯೆಯಾಗುತ್ತದೆ. ಜಿಲ್ಲೆಯಲ್ಲಿ ಈವರೆಗೆ ಈ ಕಾಯಿಲೆ ಬಂದ ಎಲ್ಲ ಜಾನುವಾರುಗಳು ಚೇತರಿಸಿಕೊಳ್ಳುತ್ತಿವೆ. ಯಾವುದೇ ಜಾನುವಾರು ಸಾವಿಗೀಡಾಗಿಲ್ಲ ಎಂದು ಅವರು ಮಾಹಿತಿ ನೀಡಿದರು.

ದನಕರುಗಳಿಗೆ ಚರ್ಮಗಂಟು ರೋಗ ಬಂದ ಕೂಡಲೇ ಲಸಿಕೆ ಹಾಕಿಸಲು ರೈತರು ಪಶುವೈದ್ಯರನ್ನು ಕರೆದೊಯ್ಯುತ್ತಿದ್ದಾರೆ. ರೋಗ ಕಾಣಿಸಿಕೊಂಡ ಜಾನುವಾರುಗಳಿಗೆ ಈ ಲಸಿಕೆ ನೀಡಿದರೂ ಪ್ರಯೋಜನವಿಲ್ಲ. ಅವುಗಳಿಗೆ ಔಷಧ ಕೊಡಬೇಕು. ರೋಗ ಕಾಣಿಸದ ಜಾನುವಾರುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಿಸಬೇಕು. ರೋಗ ಕಾಣಿಸಿರುವ ಸ್ಥಳದಿಂದ 3 ಕಿಲೋಮೀಟರ್‌ ವ್ಯಾಪ್ತಿಯ ಹಳ್ಳಿಗಳ ಜಾನುವಾರುಗಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

30 ಸಾವಿರ ಡೋಸ್‌: ಜಿಲ್ಲೆಯಲ್ಲಿ ಸದ್ಯ 30 ಸಾವಿರ ಡೋಸ್‌ ಲಸಿಕೆ ಲಭ್ಯವಿದ್ದು, ಅಗತ್ಯವಿರುವ  ಜಾನುವಾರುಗಳಿಗೆ ನೀಡಲಾಗುತ್ತಿದೆ. ಅ.15ಕ್ಕೆ ಇನ್ನಷ್ಟು ಲಸಿಕೆ ಬರಲಿದೆ. ಈ ರೋಗವು ಮನುಷ್ಯರಿಗೆ ಹರಡುವುದಿಲ್ಲ. ಕುರಿ, ಮೇಕೆಗಳಿಗೂ ಹರಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಅಂಕಿ ಅಂಶ

3.28 ಲಕ್ಷ

ದಾವಣಗೆರೆ ಜಿಲ್ಲೆಯಲ್ಲಿ ಇರುವ ಜಾನುವಾರುಗಳ ಸಂಖ್ಯೆ

4,053

ವಿಮೆ ಹೊಂದಿರುವ ಜಾನುವಾರುಗಳು

216

ಚರ್ಮಗಂಟು ರೊಗ ಕಾಣಿಸಿಕೊಂಡ ಜಾನುವಾರುಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು