ಸದಾಶಿವ ವರದಿ ಜಾರಿಯಾಗುವವರೆಗೆ ಹೋರಾಟ ನಿಲ್ಲದು: ಷಡಕ್ಷರಮುನಿ ಸ್ವಾಮೀಜಿ

ದಾವಣಗೆರೆ: ‘ಸದಾಶಿವ ಆಯೋಗ ವರದಿ ಜಾರಿಗಾಗಿ ಆಗ್ರಹಿಸಿ ಉದ್ದೇಶಿತ ಪಾದಯಾತ್ರೆಯನ್ನು ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡಲಾಗುವುದು. ಆದರೆ, ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ’ ಎಂದು ಆದಿಜಾಂಬವ ಪೀಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಪಾದಯಾತ್ರೆ ಸಂಬಂಧ ಚರ್ಚಿಸಲು ಇಲ್ಲಿನ ಎಸ್.ಜೆ.ಎಂ. ನಗರದ ಬಾಬೂ ಜಗಜೀವನರಾಂ ಸಮುದಾಯ ಭವನ
ದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮುಖಂಡರು ‘ಸಿದ್ಧತೆಗೆ ಕಾಲಾವಕಾಶ ಕಡಿಮೆ ಇದೆ. ಹಿರಿಯ ರಾಜಕಾರಣಿಗಳನ್ನು ಒಗ್ಗೂಡಿಸಿಕೊಳ್ಳಬೇಕಿದೆ’ ಎಂಬ ಅಭಿಪ್ರಾಯ ಹೇಳಿದಾಗ ಸ್ವಾಮೀಜಿ ಸಹಮತಿಸಿದರು.
‘ರಾಜ್ಯದಲ್ಲಿ ಮತ್ತೊಂದು ಸುತ್ತು ಪ್ರವಾಸ ಕೈಗೊಂಡು ಹಿರಿಯ ರಾಜಕಾರಣಿಗಳು, ಜನಪ್ರತಿನಿಧಿಗಳು, ನೌಕರರು, ದಲಿತ ಸಂಘಟನೆಗಳೊಂದಿಗೆ ಸಭೆ ನಡೆಸಿ ಅಂತಿಮ ದಿನಾಂಕ ನಿರ್ಧರಿಸಲಾಗುವುದು’ ಎಂದರು.
‘ಪಾದಯಾತ್ರೆಗೆ ಸಮುದಾಯದ ಎಲ್ಲ ಮಠಾಧೀಶರ ಬೆಂಬಲವಿದೆ. ಮಾದಾರ ಚನ್ನಯ್ಯ ಸ್ವಾಮೀಜಿಗಳೇ ಹೋರಾಟಕ್ಕೆ ಪ್ರೇರಣೆ. ಈ ಬಗ್ಗೆ ಭಕ್ತರಲ್ಲಿ ಗೊಂದಲ ಬೇಡ. ಮುಖಂಡರು ಜಿಲ್ಲಾವಾರು ಸಮಿತಿ ರಚಿಸಿ ಹೋರಾಟದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು.
ಶಾಸಕ ಪ್ರೊ.ಎನ್.ಲಿಂಗಣ್ಣ, ‘ನಾನು ಮಾದಿಗ ಸಮಾಜದವನಾಗಿದ್ದು, ಪಾದಯಾತ್ರೆಯಲ್ಲಿ ಭಾಗಿಯಾಗುತ್ತೇನೆ. ಅಗತ್ಯ ಧನಸಹಾಯ ನೀಡುತ್ತೇನೆ’ ಎಂದು ಹೇಳಿದರು.
ಹಾವೇರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪರಮೇಶ್ವರಪ್ಪ ಮೇಲ್ಮನೆ, ಎಂ. ಹಾಲೇಶ್ ಆಕ್ಷೇಪಿಸಿದರು.ಆಲೂರು ನಿಂಗರಾಜ್, ಎಚ್.ಸಿ. ಗುಡ್ಡಪ್ಪ, ಡಿ. ದುರುಗೇಶ್, ಎಸ್.ಮಲ್ಲಿಕಾರ್ಜುನ್, ಕುಂದವಾಡ ಮಂಜುನಾಥ್, ಕೆಟಿಜೆ ನಗರ ರವಿ, ಸೋಮ್ಲಾಪುರ ಹನುಮಂತಪ್ಪ, ಡಿ. ದುಗ್ಗಪ್ಪ, ನಾಗರಾಜ್, ಈಶ್ವರ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.