ಬುಧವಾರ, ಜನವರಿ 22, 2020
28 °C
ಶೇ 30 ದಾಟದ ಇ–ಕೆವೈಸಿ * ಬೆರಳಚ್ಚು ನೀಡಲು ತಿಂಗಳ ಮೊದಲ 10 ದಿನಗಳು ಅವಕಾಶ

ಪಡಿತರಕ್ಕೆ ಬೆರಳಚ್ಚು ಕೊಡುವುದೇ ಸಮಸ್ಯೆ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಆನ್‌ಲೈನ್‌ನಲ್ಲಿ ಎಲ್ಲ ಪಡಿತರದಾರರ ಮಾಹಿತಿ ಸಿಗಲು, ರಾಜ್ಯದ ಯಾವುದೇ ಮೂಲೆಯಲ್ಲಿ ಪಡಿತರ ಪಡೆಯಲು ಅನುಕೂಲ ಆಗಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಇ–ಕೆವೈಸಿ ಜಾರಿಗೆ ತಂದಿದೆ. ಅದಕ್ಕಾಗಿ ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲ ಸದಸ್ಯರು ನ್ಯಾಯಬೆಲೆ ಅಂಗಡಿಯಲ್ಲಿ ಬೆರಳಚ್ಚು ನೀಡಬೇಕು. ಆದರೆ ಹಲವು ಸಮಸ್ಯೆಗಳ ಕಾರಣ ಬೆರಳಚ್ಚು ನೀಡಿದವರ ಪ್ರಮಾಣ ಶೇ 30ರಷ್ಟೂ ಆಗಿಲ್ಲ.

ಡಿಸೆಂಬರ್‌ 10ರ ಮಧ್ಯಾಹ್ನ 2.30ರ ವರೆಗೆ ದಾವಣಗೆರೆಯಲ್ಲಿ ಶೇ 29.22, ಶಿವಮೊಗ್ಗದಲ್ಲಿ ಶೇ 29.47 ಹಾಗೂ ಚಿತ್ರದುರ್ಗದಲ್ಲಿ ಶೇ 29.02ರಷ್ಟು ಪಡಿತರ ಚೀಟಿದಾರರು ಈವರೆಗೆ ಬೆರಳಚ್ಚು ನೀಡಿ ಬಂದಿದ್ದಾರೆ. 

ಆನ್‌ಲೈನ್‌ನಲ್ಲಿ ತಮ್ಮ ಖಾತೆಯ ಕಾರ್ಡ್‌ ತೆರೆಯಲು ಒಮ್ಮೆ, ಮಾಹಿತಿ ಅಪ್‌ಲೋಡ್‌ ಮಾಡಿದ ಮೇಲೆ ಒಮ್ಮೆ, ಒಟ್ಟು ಎರಡು ಬಾರಿ ಬೆರಳಚ್ಚು ನೀಡಬೇಕು. ಆದರೆ ಸರ್ವರ್‌ ನಿಧಾನವಾಗಿರುವುದರಿಂದ ಒಬ್ಬರಿಗೆ 10 ನಿಮಿಷ ಬೇಕು. ಒಂದು ಕುಟುಂಬದಲ್ಲಿ 6 ಮಂದಿ ಇದ್ದರೆ ಒಂದು ಗಂಟೆ ಹಿಡಿಯುತ್ತದೆ ಎಂದು ಪಡಿತರಚೀಟಿಗಾಗಿ ಕಾದು ಸುಸ್ತಾದ ಮಲ್ಲನಾಯಕನಹಳ್ಳಿಯ ಚಂದ್ರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಇವತ್ತು ಬೆರಳಚ್ಚು ನೀಡಲು ಕೊನೇ ದಿನ ಎಂದು ಹೇಳಿದ್ದರು. ಹಾಗಾಗಿ ಬೆರಳಚ್ಚು ನೀಡಲು ತುಂಬಾ ಮಂದಿ ಬಂದಿದ್ದರು. ಆದರೆ ಸಾಲಿನಲ್ಲಿ ಮುಂದೆ ಇದ್ದವರಿಗಷ್ಟೇ ಅವಕಾಶ ಸಿಕ್ಕಿತು. ಉಳಿದವರಿಗೆ ಸಿಗಲಿಲ್ಲ’ ಎಂದು ಮೃತ್ಯುಂಜಯ ಅಳಲು ತೋಡಿಕೊಂಡರು.

ಮನೆಯಲ್ಲಿ ಎದ್ದು ನಡೆಯಲಾರದ ಹಿರಿಯರು ಇರುತ್ತಾರೆ. ಅಂಗವಿಕಲರು ಇರುತ್ತಾರೆ. ಎಲ್ಲರೂ ಬೆರಳಚ್ಚು ನೀಡಬೇಕು. ಆದರೆ ಈ ರೀತಿ ನಿಧಾನಗತಿಯಲ್ಲಿ ಸಾಗಿದರೆ ಅವರು ಸಾಲಲ್ಲಿ ನಿಲ್ಲುವುದೇ ದೊಡ್ಡ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಅವರು.

‘ಹಳ್ಳಿಯಾಗಿರುವುದರಿಂದ ನೆಟ್‌ವರ್ಕ್‌ ಸಮಸ್ಯೆ ಇರುತ್ತದೆ. ಜತೆಗೆ ರಾಜ್ಯದ ಎಲ್ಲ ಕಡೆ ಒಂದೇ ಸಮಯಕ್ಕೆ ಬೆರಳಚ್ಚು ನೀಡುತ್ತಿರುವುದರಿಂದ ಸರ್ವರ್‌ ಕೂಡ ಆಗಾಗ ಕೈ ಕೊಡುತ್ತದೆ. ಜತೆಗೆ ಹಳೇ ಕಂಪ್ಯೂಟರ್‌ಗಳಲ್ಲೇ ಮಾಡಬೇಕಾಗುತ್ತದೆ’ ಎಂದು ಮಲ್ಲನಾಯಕನ ಹಳ್ಳಿಯ ನ್ಯಾಯಬೆಲೆ ಅಂಗಡಿ ನಿರ್ವಾಹಕ ಮಾರುತಿ ಸಮಸ್ಯೆಯ ಮೂಲ ವಿವರಿಸಿದರು.

ಡಿಸೆಂಬರ್‌ 10ಕ್ಕೆ ಬೆರಳಚ್ಚು ನೀಡಲು ಕೊನೇ ದಿನ ಅಂದರೆ ಅಲ್ಲಿಗೆ ಮುಗಿಯುವುದಿಲ್ಲ. ಈ ತಿಂಗಳಲ್ಲಿ ಬೆರಳಚ್ಚು ನೀಡುವುದು ಕೊನೆಗೊಂಡಿತು ಅಷ್ಟೇ. ಮುಂದಿನ ತಿಂಗಳು ಕೂಡ 10ರ ವರೆಗೆ ಮತ್ತೆ ಅವಕಾಶ ನೀಡಲಾಗುತ್ತದೆ. ಬೆರಳಚ್ಚು ನೀಡಿಲ್ಲ ಎಂಬ ಕಾರಣಕ್ಕೆ ಯಾರಿಗೂ ಪಡಿತರ ನಿಲ್ಲಿಸುವುದಿಲ್ಲ ಎಂದು ಆಹಾರ ಶಿರಸ್ತೇದಾರ್‌ ಬಿ.ಟಿ. ಪ್ರಕಾಶ್‌ ಮಾಹಿತಿ ನೀಡಿದ್ದಾರೆ.

ಪಡಿತರ ಚೀಟಿದಾರರು ಬೆರಳಚ್ಚು ನೀಡಲು ಇನ್ನೂ ಕೆಲವು ತಿಂಗಳು ಅವಕಾಶ ಸಿಗಲಿದೆ. ಹಾಗಾಗಿ ಬಾಕಿ ಇರುವವರು ಮುಂದಿನ ಬಾರಿ ಬೆರಳಚ್ಚು ನೀಡಬೇಕು ಎನ್ನುತ್ತಾರೆ ಆಹಾರ ಇಲಾಖೆಯ ಸಹಾಯಕ ಪ್ರೋಗ್ರಾಮರ್‌ ನಾಗರಾಜ್‌.

 ಅಂಕಿ ಅಂಶಗಳು

ಪಡಿತರ ವಿಭಾಗ-ದಾವಣಗೆರೆ-ಶಿವಮೊಗ್ಗ-ಚಿತ್ರದುರ್ಗ

ಅಂತ್ಯೋದಯ ಅನ್ನ ಯೋಜನೆ-ಒಟ್ಟು ಚೀಟಿಗಳು-98,556-60,823-98,058

ಬೆರಳಚ್ಚು ನೀಡಿದವರು-25,611-15,655-24,452

ಆದ್ಯತೇತರ ವಲಯ (ಹಿಂದೆ ಎಪಿಎಲ್‌)-ಒಟ್ಟು ಚೀಟಿಗಳು-1,05,292-3,20,368-85,279

ಬೆರಳಚ್ಚು ನೀಡಿದವರು-29,997-88,600-25,265

ಆದ್ಯತಾ ವಲಯ (ಹಿಂದೆ ಬಿಪಿಎಲ್‌)-ಒಟ್ಟು ಚೀಟಿಗಳು-12,03,944-12,43,032-12,97,555

ಬೆರಳಚ್ಚು ನೀಡಿದವರು-3,55,790-3,74,442-3,80,075

10ನೇ ತಾರಿಖಿನಿಂದ ತಿಂಗಳ ಕೊನೇ ವಾರದವರೆಗೆ ಪಡಿತರ ವಿತರಣೆ ಇರುವುದರಿಂದ ಬೆರಳಚ್ಚು ತೆಗೆದುಕೊಳ್ಳುವುದನ್ನು ಪ್ರತಿ ತಿಂಗಳ 10ಕ್ಕೆ ನಿಲ್ಲಿಸಲಾಗುತ್ತಿದೆ.
ಬಿ.ಟಿ. ಪ್ರಕಾಶ್‌
ಆಹಾರ ಶಿರಸ್ತೇದಾರರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು