ಮಂಗಳವಾರ, ಜೂನ್ 28, 2022
25 °C
ಹರಪನಹಳ್ಳಿ: ತೆಗ್ಗಿನಮಠದಲ್ಲಿ ಸರಳ ಆಚರಣೆಗೆ ಸಿದ್ಧತೆ

ಲಿಂ.ಚಂದ್ರಶೇಖರ ಶಿವಾಚಾರ್ಯರ ಪುಣ್ಯಾರಾಧನೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ಸ್ವಾತಂತ್ರ್ಯ ಪೂರ್ವದಲ್ಲಿಯೇ ಹಿಂದೂ ಪಂಚಾಂಗ ಮುದ್ರಿಸಿ ಮಧ್ಯ ಕರ್ನಾಟಕದ ಗಮನ ಸೆಳೆದಿದ್ದ ತೆಗ್ಗಿನಮಠದ ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯರ 74ನೇ ಪುಣ್ಯಾರಾಧನೆ ಜೂನ್ 1ರಂದು ನಡೆಯಲಿದೆ.

ಕೋವಿಡ್ ಕಾರಣ ಸರಳವಾಗಿ ಕಾರ್ಯಕ್ರಮ ನಡೆಯಲಿದ್ದು, ಮಠದಲ್ಲಿ ಕರ್ತೃ ಗದ್ದುಗೆಗೆ ವಿಶೇಷ ಅಭಿಷೇಕ, ಪೂಜೆ ನೆರವೇರಿಸಲು ಶ್ರೀಮಠ ಸಿದ್ಧತೆ ಮಾಡಿಕೊಳ್ಳುತ್ತಿದೆ.

1920ರ ದಶಕದಲ್ಲಿ ವೈದಿಕ ಪರಿಣತಿ ಪಡೆದಿದ್ದ ಮುಸ್ಲಿಂ ಧರ್ಮದ ಹಯಾತ್ ಸಾಹೇಬರಿಗೆ ತೆಗ್ಗಿನಮಠದಲ್ಲಿ ಆಶ್ರಯ ಕಲ್ಪಿಸಿ, ಭಾರತ ವೈದಿಕ ಧರ್ಮಾರ್ಥ ಪಾಠ ಶಾಲೆಯನ್ನು ಆರಂಭಿಸಿದ್ದ ಲಿಂಗೈಕ್ಯ ಚಂದ್ರಶೇಖರ ಶ್ರೀಗಳು, ಸರ್ವಧರ್ಮ ಸಮನ್ವಯಕ್ಕೆ ನಾಂದಿ ಹಾಡಿದ್ದರು.

ರಂಭಾಪುರಿ ಪಂಚಪೀಠದ ಶಾಖಾ ಮಠವಾಗಿರುವ ತೆಗ್ಗಿನಮಠ ಅಂದಿನಿಂದ ಇಲ್ಲಿಯವರೆಗೂ ಧರ್ಮ ಪ್ರಚಾರ, ಅನ್ನ ಮತ್ತು ಜ್ಞಾನ ದಾಸೋಹಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಇದರ ಜೊತೆಗೆ ಕರ್ನಾಟಕದ 12 ಜಿಲ್ಲೆಗಳಲ್ಲಿ, 70 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಗ್ರಾಮಾಂತರ ಪ್ರದೇಶದ ಮಕ್ಕಳ ಕಲಿಕೆಗೆ ನೆರವಾಗಿದೆ. ಬಯಲು ಸೀಮೆ ಹರಪನಹಳ್ಳಿ ಶಿಕ್ಷಣ ಕೇಂದ್ರವೆನಿಸುವಲ್ಲಿ ತೆಗ್ಗಿನಮಠದ ಲಿಂಗೈಕ್ಯ ಇಬ್ಬರು ಶ್ರೀಗಳ ಪಾತ್ರವೇ ಹೆಚ್ಚು.

ಮಠದ ಇತಿಹಾಸ: ವಿಜಯನಗರ ಅರಸರ ಮಾಂಡಲೀಕರಾಗಿದ್ದ ನಾಯಕ ವಂಶದ ಅರಸರು ಹರಪನಹಳ್ಳಿಯನ್ನು ಆಳುತ್ತಿದ್ದರು. ರಾಜ ಸೋಮಶೇಖರ ನಾಯಕನು ಧರ್ಮಕ್ಕೆ ಒತ್ತುಕೊಟ್ಟು ಈ ನಾಡನ್ನು ಬೆಳೆಸಿದ. ಅದಕ್ಕೆ ಸಾಕ್ಷಿ ಎನ್ನುವಂತೆ ಈತನು ಕಟ್ಟಿಸಿಕೊಟ್ಟ ಮಠಗಳು, ದೇವಾಲಯಗಳು ಇಂದಿಗೂ ತಮ್ಮ ಪರಂಪರೆ ಉಳಿಸಿಕೊಂಡಿವೆ.

ರಾಜ ಸೋಮಶೇಖರ ನಾಯಕನ ಕಾಲದಲ್ಲಿ ತೆಗ್ಗಿನಮಠ ಮೊದಲು ಕೋಟೆಯಲ್ಲಿರುವ ಈಗಿನ ಕಾಳಮ್ಮ ದೇವಸ್ಥಾನದ ಬಲಭಾಗದಲ್ಲಿತ್ತು. ರಾಜರಿಗೆ ಧರ್ಮೋಪದೇಶ ಮಾಡುತ್ತಿದ್ದ ಅಂದಿನ ಗುರುಗಳಾಗಿದ್ದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸೋಮಶೇಖರ ನಾಯಕ ಶ್ರೀಮಠಕ್ಕಾಗಿ ಭೂಮಿಯನ್ನು ಕೊಡುಗೆಯಾಗಿ ನೀಡಿದ್ದರು ಎಂಬುದು ಕಥೆ, ಐತಿಹ್ಯಗಳಿಂದ ತಿಳಿಯುತ್ತದೆ.

ಲಿಂ.ಚಂದ್ರಶೇಖರ ಶಿವಾಚಾರ್ಯರು: ವೇದಮೂರ್ತಿ ಬಸವಲಿಂಗ ಶಾಸ್ತ್ರಿ, ಶ್ರೀಮತಿ ಬಸವಲಿಂಗಮ್ಮ ದಂಪತಿಯ ಪುತ್ರನಾಗಿ ಕ್ರಿ.ಶ.1892ರ ನಂದನನಾಮ ಸಂವತ್ಸರ ಕಾರ್ತಿಕ ಶುದ್ಧ ನವಮಿಯಂದು ಚಂದ್ರಶೇಖರ ಶಿವಾಚಾರ್ಯರು ಜನಿಸಿದರು. ಅವರನ್ನು ಅಂದಿನ ಪೀಠಾಧಿಪತಿಯಾಗಿದ್ದ ಗುರುಬಸವ ಶಿವಾಚಾರ್ಯ ಸ್ವಾಮೀಜಿ ಅವರು ಮಠದ ಉತ್ತರಾಧಿಕಾರಿಯನ್ನಾಗಿ ಮಾಡಿದರು.

1915ರಲ್ಲಿ ಉಜ್ಜಿಯಿನಿ ಪೀಠದ ಮರುಳಸಿದ್ದ ರಾಜೇಂದ್ರ ಶಿವಾಚಾರ್ಯರು, ಸಿದ್ದಲಿಂಗ ರಾಜೇಂದ್ರ ಶಿವಾಚಾರ್ಯರು ಹಾಗೂ ರಂಭಾಪುರಿ ಜಗದ್ಗುರುಗಳ ಆಶೀರ್ವಾದದಿಂದ ವೀರಶೈವ ಶಿಷ್ಟಾಚಾರಗಳಿಗೆ ಅನುಸಾರವಾಗಿ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.

ಧರ್ಮ ಪ್ರಚಾರವನ್ನು ಮಠದಲ್ಲಿ ಆರಂಭಿಸಿದರು. 1931ರಲ್ಲಿ ಭೀಕರ ಬರಗಾಲ ಎದುರಾದಾಗ ನಿರಂತರ 7 ದಿವಸ ಕಾಲ ಮೌನ ವ್ರತ ಮತ್ತು ಭಜನೆ ನಡೆಸಿ ವರುಣ ದೇವನ ಮುನಿಸನ್ನು ಕರಗುವಂತೆ ಮಾಡಿದ್ದರು. ಅವರೊಬ್ಬ ಪವಾಡ ಪುರುಷರಾಗಿ ಹೊರಹೊಮ್ಮಿದ್ದಾರೆ ಎಂದು ಪೀಠಾಧಿಪತಿ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ವಿವರಿಸಿದರು.

ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಶ್ರೀಗಳು ಸಂಗೀತ ಕಲಾವಿದರಿಗೆ ಆಶ್ರಯ ಕೊಟ್ಟಿದ್ದರು. ಲಿಂಗೈಕ್ಯ ಶ್ರೀಗಳ ಸಮಾಜಮುಖಿ ಕೆಲಸಗಳಿಂದ ದಾಸೋಹ ಮಠವಾಗಿ ಹೆಸರು ಪಡೆಯಿತು. ಹಸಿದವರಿಗೆ ಅನ್ನ ನೀಡಿ ಕಾಪಾಡಿದ್ದಾರೆ. ಮಠವನ್ನು ಮುನ್ನಡೆ
ಸಲು ಬಾಲಕರಾಗಿದ್ದ ಚಂದ್ರಮೌಳೀಶ್ವರ ಸ್ವಾಮೀಜಿ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿದರು. 1947ರಲ್ಲಿ ವೈಶಾಖ ಶುದ್ಧಸಪ್ತಮಿಯಂದು ಲಿಂಗೈಕ್ಯರಾದರು.

ಅವರ ಆದರ್ಶದಲ್ಲಿಯೇ ಮಠ ಮುನ್ನಡೆಯುತ್ತಿದ್ದು, 1969ರಲ್ಲಿ ಟಿ.ಎಂ.ಎ.ಇ. ಶಿಕ್ಷಣ ಸಂಸ್ಥೆ ಸ್ಥಾಪಿಸಿ ನಾಡಿನಾದ್ಯಂತ ಜ್ಞಾನ ದಾಸೋಹದಲ್ಲಿ ತೊಡಗಿಸಿಕೊಂಡು, ಪುತ್ರವರ್ಗ ಮಠ ಪರಂಪರೆಯಲ್ಲಿ ಉತ್ತುಂಗಕ್ಕೇರಿದ ಮಠವಾಗಿ ಬೆಳೆಯುತ್ತಿದೆ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು