ಗುರುವಾರ , ಜೂನ್ 30, 2022
22 °C

ಬಸವಾಪಟ್ಟಣ | ನೆಲಕಚ್ಚಿದ ಟೊಮೆಟೊ ದರ, 30 ಕೆ.ಜಿ. ತೂಕದ ಕ್ರೇಟ್ ₹100ಕ್ಕೆ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಾಪಟ್ಟಣ: ಎರಡು ತಿಂಗಳ ಹಿಂದೆ ಕೆ.ಜಿ. ಒಂದಕ್ಕೆ ₹ 150ಕ್ಕೆ ಮಾರಾಟವಾಗುತ್ತ ಗಗನಕ್ಕೇರಿದ್ದ ಟೊಮೆಟೊ ದರ ಈಗ ಭೂಮಿಗೆ ಕುಸಿದಿದೆ. 30 ಕೆ.ಜಿ. ತೂಗುವ ಟೊಮೆಟೊ ಕ್ರೇಟ್‌ ಕೇವಲ ₹ 100ಕ್ಕೆ ಮಾರಾರಾಟವಾಗುತ್ತಿರುವುದರಿಂದ ಬೆಳೆದ ರೈತರು
ಕಂಗಾಲಾಗಿದ್ದಾರೆ.

‘ನಿರಂತರ ಮಳೆಯಿಂದ ಟೊಮೆಟೊ ಬೆಳೆ ಹಾಳಾಗಿದ್ದರಿಂದ ಪೂರೈಕೆ ಸಂಪೂರ್ಣ ಕಡಿಮೆಯಾಗಿ ಬೆಲೆ ಹೆಚ್ಚಿತ್ತು. ಮಳೆ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ರೈತರು ಮತ್ತೆ ಟೊಮೆಟೊ ಸಸಿಗಳನ್ನು ಯಥೇಚ್ಛವಾಗಿ ನಾಟಿ ಮಾಡಿದರು. ಇದರಿಂದ ಉತ್ಪಾದನೆ ಹೆಚ್ಚಾಗಿದ್ದು, ಪೂರೈಕೆಯೂ ಏರಿಕೆಯಾದ್ದರಿಂದ ದರ ಕುಸಿದಿದೆ’ ಎನ್ನುತ್ತಾರೆ ಇಲ್ಲಿನ ಟೊಮೆಟೊ ವ್ಯಾಪಾರಿ ಮಹೀಬುಲ್ಲಾ.

ಟೊಮೆಟೊವನ್ನು ಬೇರೆ ಬೆಳೆಗಳಂತೆ ಸ್ವಲ್ಪ ದಿನ ಬಳ್ಳಿಗಳಲ್ಲಿಯೇ ಬಿಟ್ಟು ನಂತರ ಕೊಯ್ಲು ಮಾಡಲು ಆಗುವುದಿಲ್ಲ. ಹಾಗೆಯೇ ಬಿಟ್ಟರೆ ಹಣ್ಣುಗಳು ನೆಲಕ್ಕೆ ಉದುರಿ ಹಾಳಾಗುತ್ತವೆ. ದರ ಇಳಿಕೆಯಿಂದ ಕೊಯ್ಲು ಮಾಡಿದ ಕೂಲಿ ಸಹ ಉಳಿಯುತ್ತಿಲ್ಲ. ದಪ್ಪ ಗಾತ್ರದ ಟೊಮೆಟೊ ಕ್ರೇಟ್‌ ಒಂದಕ್ಕೆ ₹ 100ರಂತೆ ಮಾರಾಟವಾಗುತ್ತಿದ್ದರೆ. ಸಣ್ಣ ಗಾತ್ರದ ಮತ್ತು ಬಹಳ ಹಣ್ಣಾದ ಟೊಮೆಟೊ ಕೇವಲ ₹ 80ಕ್ಕೆ ಮಾರಾಟವಾಗುತ್ತಿದೆ’ ಎನ್ನುತ್ತಾರೆ ಬೆಳೆಗಾರರಾದ ಹಾಲೇಶ್‌, ನಸ್ರುಲ್ಲಾ, ಇನಾಯತ್‌ ಮತ್ತು ನಾಗರಾಜ ನಾಯ್ಕ.

‘ರೈತರಿಂದ ನಾವು ಕೊಳ್ಳುವ ಟೊಮೆಟೊವನ್ನು ಕೆ.ಜಿ ಒಂದಕ್ಕೆ ₹ 10ರಂತೆ ಮಾರಾಟ ಮಾಡುತ್ತಿದ್ದೇವೆ. ಈ ರೀತಿ ದರ ಕುಸಿದಾಗ ನಮಗೂ ಏನೂ ಲಾಭವಾಗುವುದಿಲ್ಲ. ಶೇ 20ರಷ್ಟು ಹಣ್ಣುಗಳು ಮಾರಾಟವಾಗುವ ವೇಳೆಗೆ ಕೊಳೆತು ಹಾಳಾಗಿರುವುದರಿಂದ ಗ್ರಾಹಕರು ಕೊಳ್ಳುವುದಿಲ್ಲ. ದರ ಕುಸಿತದಿಂದ ಬೆಳೆದವರು ಮತ್ತು ಮಾರಾಟಗಾರರಿಗಿಂತ ತಿನ್ನುವವರಿಗೇ ಹೆಚ್ಚು ಲಾಭವಾಗುತ್ತಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳಾದ ಸೈಯದ್‌ ಸಖಲೀನ್‌, ಅಮಜದ್‌ ಪಟೇಲ್‌ ಮತ್ತು ಶೌಕತ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು