ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಮಳೆಯಿಂದ ಬೇರೆ ರಾಜ್ಯಗಳಿಗೆ ತರಕಾರಿ ರಫ್ತು ಸ್ಥಗಿತ; ದರ ಕುಸಿತ

Published : 3 ಆಗಸ್ಟ್ 2024, 7:19 IST
Last Updated : 3 ಆಗಸ್ಟ್ 2024, 7:19 IST
ಫಾಲೋ ಮಾಡಿ
Comments

ದಾವಣಗೆರೆ: ಮಳೆ ಮುಂದುವರಿದಿದ್ದರಿಂದ ತಮಿಳುನಾಡು, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಗೆ ಈ ಭಾಗದ ರೈತರು ಬೆಳೆಯುವ ತರಕಾರಿ ಪೂರೈಕೆಯು ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿ ಕೆಲ ತರಕಾರಿಗಳ ದರದಲ್ಲಿ ತೀವ್ರ ಇಳಿಕೆ ಕಂಡಿದೆ. ಗ್ರಾಹಕರಿಗೆ ಇದು ಸಂತಸದ ಸಂಗತಿಯಾಗಿದೆ.

ಜಿಲ್ಲೆಯ ಗ್ರಾಮೀಣ ಭಾಗದಿಂದ ಬರುವ ತರಕಾರಿಯನ್ನು ನಗರದ ಮಾರುಕಟ್ಟೆಯಿಂದ ನೆರೆ ರಾಜ್ಯಗಳ ಮುಂಬೈ, ಚೆನ್ನೈ ಸೇರಿದಂತೆ ವಿವಿಧ ನಗರಗಳಿಗೆ ಕಳಿಸಲಾಗುತ್ತದೆ. ಆದರೆ, ತೀವ್ರ ಮಳೆ, ಎಲ್ಲೆಂದರಲ್ಲಿ ಗುಡ್ಡ ಕುಸಿತದಂತಹ ಪ್ರಕರಣಗಳು ಹೆಚ್ಚುತ್ತಿರುವ ಪರಿಣಾಮವಾಗಿ ಅನ್ಯ ರಾಜ್ಯಗಳಿಗೆ ತರಕಾರಿ ಪೂರೈಕೆಯನ್ನು ಕೆಲ ದಿನಗಳಿಂದ ಸ್ಥಗಿತಗೊಳಿಸಲಾಗಿದೆ.

‘ಕೆಲವು ಹಸಿ ತರಕಾರಿಗಳನ್ನು ದೂರದ ನಗರಗಳಿಗೆ ವಾಹನಗಳಲ್ಲಿ ಕಳಿಸಲು 2–3 ದಿನಗಳು ಬೇಕಾಗುತ್ತವೆ. ಹೆಚ್ಚಿನ ತೇವಾಂಶದಿಂದಾಗಿ ತರಕಾರಿಯು ಅಲ್ಲಿಗೆ ಹೋಗುವ ಮೊದಲೇ ಹಾಳಾಗುತ್ತಿದೆ. ಗ್ರಾಮೀಣ ಭಾಗದಿಂದ ಅಧಿಕ ಪ್ರಮಾಣದ ತರಕಾರಿ ಮಾರುಕಟ್ಟೆಗೆ ಬರುತ್ತಿದ್ದು, ಕಡಿಮೆ ದರಕ್ಕೆ ಮಾರುತ್ತಿದ್ದೇವೆ’ ಎಂದು ತರಕಾರಿ ಸಗಟು ವ್ಯಾಪಾರಿ ಶೀಲಾ ಶ್ರೀನಿವಾಸ್‌ ಹೇಳಿದರು.

ಹಸಿ ಮೆಣಸಿನಕಾಯಿ, ಹೊಟ್ಟೆ ಮೆಣಸಿನಕಾಯಿ, ಆಲೂಗಡ್ಡೆ, ಕ್ಯಾರೆಟ್‌, ಈರುಳ್ಳಿ, ಬೆಂಡೆಕಾಯಿ, ಸೌತೆಕಾಯಿ, ಬದನೆಕಾಯಿ, ಚವಳೆಕಾಯಿ, ಬೀಟ್‌ರೂಟ್ ದರದಲ್ಲಿ ಕೊಂಚ ವ್ಯತ್ಯಾಸವಾಗಿದೆ. ಆದರೆ, ಟೊಮೆಟೊ, ಬೀನ್ಸ್‌, ಹಾಗಲಕಾಯಿ ದರದಲ್ಲಿ ತೀವ್ರ ಕುಸಿತ ಕಂಡಿದೆ. 

ಭಾನುವಾರ (ಆ.4ರಂದು) ಆಷಾಢ ಮುಗಿಯಲಿದ್ದು, ಶ್ರಾವಣ ಶುರುವಾಗಲಿದೆ. ಶ್ರಾವಣ ಮಾಸದಲ್ಲಿ ಕೆಲವರು ಮಾಂಸಾಹಾರ ಸೇವನೆ ತ್ಯಜಿಸಲಿದ್ದಾರೆ. ಇದರಿಂದಾಗಿ ತರಕಾರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ. ಆಷಾಢದ ಕಾರಣಕ್ಕೆ ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳನ್ನು ಮುಂದೂಡಿದ್ದ ಜನರು, ಶ್ರಾವಣದಲ್ಲಿ ಶುಭ ಕಾರ್ಯ ನಡೆಸಲಿದ್ದಾರೆ. ಆಗಲೂ ಬೇಡಿಕೆಗೆ ಅನುಗುಣವಾಗಿ ದರದಲ್ಲಿ ವ್ಯತ್ಯಾಸ ಆಗಬಹುದು ಎಂಬುದು ವ್ಯಾಪಾರಿಗಳ ಹೇಳಿಕೆ.

ಸೊಪ್ಪುಗಳ ದರ ಏರಿಕೆ:

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕುಸಿತ ಕಂಡಿದ್ದ ಸೊಪ್ಪುಗಳ ದರದಲ್ಲಿ ಇದೀಗ ಏರಿಕೆ ಕಂಡಿದೆ. ಈ ಹಿಂದೆ ಬಹುತೇಕ ಸೊಪ್ಪುಗಳನ್ನು ₹ 10 ಕ್ಕೆ 2 ಸಿವುಡಿನಂತೆ ಮಾರಾಟ ಮಾಡಲಾಗುತ್ತಿತ್ತು. ಇದೀಗ ಪಾಲಕ್‌, ಸಬ್ಬಸಗಿ, ಮೆಂತ್ಯೆ ಸೇರಿದಂತೆ ಬಹುತೇಕ ಸೊಪ್ಪುಗಳ ದರ ಪ್ರತಿ ಸಿವುಡಿಗೆ ₹ 6ರಿಂದ ₹ 7 ದರ ಇದೆ.

ಬೇರೆ ರಾಜ್ಯಗಳಿಗೆ ತರಕಾರಿಯನ್ನು ಕಳಿಸಲು ಸಾಧ್ಯವಾಗದ ಕಾರಣ ಸ್ಥಳೀಯ ಮಾರುಕಟ್ಟೆಯಲ್ಲೇ ಮಾರಬೇಕಾದ ಅನಿವಾರ್ಯತೆ ಉಂಟಾಗಿರುವುದರಿಂದ ದರ ಇಳಿಕೆ ಕಂಡಿದೆ
ಶೀಲಾ ಶ್ರೀನಿವಾಸ್‌ ತರಕಾರಿ ಸಗಟು ವ್ಯಾಪಾರಿ
ಬೆಳ್ಳುಳ್ಳಿ ಆಲೂಗಡ್ಡೆ ಈರುಳ್ಳಿಯಂತಹ ಒಣ ತರಕಾರಿಗೆ ತೇವಾಂಶದಿಂದ ಹೆಚ್ಚಿನ ಸಮಸ್ಯೆಯಿಲ್ಲ. ಆದರೆ ಹಸಿ ತರಕಾರಿಗಳ ದರ ತೀವ್ರವಾಗಿ ಕುಸಿದಿದೆ
ಎಸ್‌.ಟಿ.ಜಿ. ರುದ್ರೇಶ್‌ ವ್ಯಾಪಾರಿ ಕೆ.ಆರ್‌.ಮಾರುಕಟ್ಟೆ
ಕೆ.ಆರ್‌.ಮಾರುಕಟ್ಟೆ ದಾವಣಗೆರೆ
(ಆಗಸ್ಟ್ 02) ತರಕಾರಿ;ದರ (ಕೆ.ಜಿ.₹ ಗಳಲ್ಲಿ) ಹಸಿಮೆಣಸಿನಕಾಯಿ;30–40 ಹೊಟ್ಟೆಮೆಣಸಿನಕಾಯಿ;80–100 ಆಲೂಗೆಡ್ಡೆ;40–50 ಟೊಮೆಟೊ;10–15 ಕ್ಯಾರೆಟ್‌;40–45 ಈರುಳ್ಳಿ;30–40 ಬೆಂಡೆಕಾಯಿ;40–45 ಸೌತೆಕಾಯಿ;20–30 ಬದನೆಕಾಯಿ;30–35 ಚವಳೆಕಾಯಿ;35–40 ಬೀಟ್‌ರೂಟ್;35–40 ಬೀನ್ಸ್‌;40–45 ಹಾಗಲಕಾಯಿ;35–40 ನವಿಲುಕೋಸು;50–60
ಹಣ್ಣುಗಳ ದರ ಕೊಂಚ ಇಳಿಕೆ 
ಈ ವಾರ ಬಹುತೇಕ ಹಣ್ಣುಗಳ ದರ ಕೆ.ಜಿ.ಗೆ ₹ 20ರಿಂದ ₹ 30ರವರೆಗೆ ಇಳಿಕೆಯಾಗಿದೆ. ಕೆ.ಜಿ.ಗೆ ಸೇಬು ₹ 200 ಕಿತ್ತಾಳೆ ₹ 130 ರಿಂದ ₹ 140 ಮೂಸಂಬಿ ₹ 80 ಡ್ರ್ಯಾಗನ್‌ಫ್ರೂಟ್‌ ₹ 80 ದಾಳಿಂಬೆ ₹ 80 ಏಲಕ್ಕಿ ಬಾಳೆ ₹ 40 ರಂತೆ ಮಾರಾಟ ಆಗುತ್ತಿವೆ. ಚಿಕನ್‌ ದರದಲ್ಲೂ ಕುಸಿತ ಶ್ರಾವಣ ಶುರುವಾಗುವ ಮೊದಲೇ ಚಿಕನ್‌ ದರದಲ್ಲಿ ಇಳಿಕೆ ಕಂಡಿದೆ. ವಿತ್‌ ಸ್ಕಿನ್‌ ಕೆ.ಜಿ.ಗೆ ₹ 200 ಸ್ಕಿನ್‌ಲೆಸ್‌ ₹ 240 ರಿಂದ ₹ 250ಕ್ಕೆ ಮಾರಾಟವಾಗುತ್ತಿದೆ. ಮಟನ್‌ ದರ ₹ 700 ರಿಂದ ₹ 750 ಇದೆ. ಮೊಟ್ಟೆ ದರ ಡಜನ್‌ಗೆ ₹ 70 ರಿಂದ ₹ 75 ಇದೆ. ‘ಶ್ರಾವಣದ ಕಾರಣಕ್ಕೆ ಚಿಕನ್‌ ದರ ಸಹಜವಾಗಿಯೇ ಕುಸಿದಿದೆ. ಶ್ರಾವಣ ಆರಂಭವಾದ ಬಳಿಕ ಬೇಡಿಕೆ ತಗ್ಗುವ ಕಾರಣಕ್ಕೆ ಮತ್ತಷ್ಟು ದರ ಕುಸಿತದ ಸಾಧ್ಯತೆ ಇದೆ’ ಎಂದು ಚಿಕನ್‌ ಅಂಗಡಿ ಮಾಲೀಕ ತೌಸಿಫ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT