ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಾಯಕರಿಗೆ ಅನುಭೂತಿ ತೋರುವವರೇ ವಿಭೂತಿ ಪುರುಷರು: ಮುರುಘಾ ಶರಣರು

ಜಯದೇವಲೀಲೆ ಪ್ರವಚನ ಮಂಗಲ
Last Updated 5 ಅಕ್ಟೋಬರ್ 2021, 6:24 IST
ಅಕ್ಷರ ಗಾತ್ರ

ದಾವಣಗೆರೆ: ಹಣೆಗೆ ವಿಭೂತಿ ಹಚ್ಚಿದರೆ ವಿಭೂತಿ ಪುರುಷರಾಗುವುದಿಲ್ಲ. ಅಸಹಾಯಕರ ಮೇಲೆ, ದುಃಖಿತರ ಮೇಲೆ ಅನುಭೂತಿ ತೋರುವವರು, ಅಂತಃಕರಣ ಹರಿಸುವವರು ನಿಜವಾದ ವಿಭೂತಿ ಪುರುಷರು ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಬಸವಕೇಂದ್ರ ಶಿವಯೋಗಾಶ್ರಮದಲ್ಲಿ ಸೋಮವಾರ ನಡೆದ ಜಯದೇವ ಮುರುಘ ರಾಜೇಂದ್ರ ಸ್ವಾಮೀಜಿಯ 65ನೇ ವರ್ಷದ ಜಯದೇವಲೀಲೆ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣ ವಿಶ್ವ ವಿಭೂತಿ ಪುರುಷರಾದರೆ, ಜಯದೇವ ಶ್ರೀಗಳು ಅಂಥ ವಿಭೂತಿ ಪುರುಷರಾಗಿದ್ದರು. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನಿಸಿದ ಅವರು ಮಾಡಿದ ಎಲ್ಲ ಕಾರ್ಯಗಳೂ ಮಹದಾಶಯಗಳ ಮಹತ್ಕಾರ್ಯಗಳಾದವು. ಹಾಗಾಗಿ ಅವರು ಮ‌ಹಾಸ್ವಾಮೀಜಿಯಾದರು. ಸ್ವಾಮೀಜಿಗಳು ಸಾಕಷ್ಟು ಮಂದಿ ಇದ್ದಾರೆ. ಮಹಾಸ್ವಾಮೀಜಿಗಳು ಬಹಳ ಕಡಿಮೆ. ಎಲ್ಲರೂ ಮಹಾಸ್ವಾಮಿ, ಮಹಾಶಯರು, ಮಹಾಯೋಗಿಗಳು, ಮಹಾಮಾನವರು ಆಗಬೇಕು ಎಂದು ಸಲಹೆ ನೀಡಿದರು.

ಸಂದರ್ಭಗಳೇ ಪಾಠ ಕಲಿಸುತ್ತವೆ. ಅಂಥ ಪಾಠಗಳನ್ನು ಕಲಿಯಲು ನಾವು ತಯಾರಿರಬೇಕು. ಕಲಿಯುತ್ತಾ, ತಿಳಿಯುತ್ತಾ ಬೆಳೆಯುತ್ತಾ ಹೋಗಬೇಕು. ಆ ತರಹ ಬೆಳೆದವರು ಜಯದೇವಶ್ರೀಗಳು ಎಂದು ನೆನಪು ಮಾಡಿಕೊಂಡರು.

ವಿರಕ್ತಮಠದ ಬಸವ ಪ್ರಭು ಸ್ವಾಮೀಜಿ, ‘ಜಗತ್ತಿನಲ್ಲಿ ಮಾನವನ ಸೃಷ್ಟಿಯಾದ ಮೇಲೆ ಇಲ್ಲಿವರೆಗೆ ಕೋಟ್ಯಂತರ ಜನರು ಬಾಳಿ ಬದುಕಿ ಹೋಗಿದ್ದಾರೆ. ಆದರೆ ತಮ್ಮ ಕಾರ್ಯಗಳಿಂದಾಗಿ ಶಾಶ್ವತವಾಗಿ ಹೆಸರು ಬಿಟ್ಟು ಹೋದವರು ಕೆಲವೇ ಮಂದಿ. ಬುದ್ಧ, ಬಸವಣ್ಣ, ಯೇಸು ಅಂಥವರು. ಈ ಸಾಲಿಗೆ ಜಯದೇವಶ್ರೀಗಳು ಸೇರಿದ್ದಾರೆ’ ಎಂದು ಬಣ್ಣಿಸಿದರು.

‘ಈಗ ಸಿದ್ಧಗಂಗಾ ಮಠ ಸಹಿತ ಬಹುತೇಕಮಠಗಳು ಪ್ರಸಾದ ಕೇಂದ್ರಗಳನ್ನು ನಡೆಸುತ್ತಿವೆ. ಇಂಥ ಕಾರ್ಯಕ್ಕೆ ಮೊದಲು ಒಲೆ ಹೊತ್ತಿಸಿದವರೇ ಜಯದೇವಶ್ರೀಗಳು. ಜಗತ್ತಿನಲ್ಲಿ ಯಾರೂ ಈ ಕೆಲಸ ಮಾಡಿರಲಿಲ್ಲ. ಅಂಥ ಸಂದರ್ಭದಲ್ಲಿ ಅವರು ಪ್ರಸಾದ ಕೇಂದ್ರ ತೆರೆದರು’ ಎಂದು ನೆನಪಿಸಿದರು.

ಅಥಣಿ ಗಜ್ಜಿನಮಠ ಶಿವಬಸವ ಸ್ವಾಮೀಜಿ, ಗುರುಮಠಕಲ್‌ ಶಾಂತವೀರ ಸ್ವಾಮೀಜಿ, ಚನ್ನಗಿರಿ ಜಯಬಸವಚಂದ್ರ ಸ್ವಾಮೀಜಿ, ರಾಣೆಬೆನ್ನೂರು ಗುರುಬಸವ ಸ್ವಾಮೀಜಿ, ಹಾವೇರಿ ಬಸವಶಾಂತಲಿಂಗ ಸ್ವಾಮೀಜಿ, ದಾಬಸ್‌ಪೇಟೆ ಬಸವ ರಮಾನಂದ ಸ್ವಾಮೀಜಿ, ಬ್ಯಾಡಗಿ, ಆಳುವಳ್ಳಿ, ಚಳ್ಳಕೆರೆ, ಕುಂಬಾರಪೀಠ ಗುಬ್ಬಿ ಅಮ್ಮ ಹೀಗೆ ಅನೇಕ ಪೀಠಗಳ ಸ್ವಾಮೀಜಿ, ಅಮ್ಮನವರು ಇದ್ದರು. ಓಂಕಾರಪ್ಪ ಸ್ವಾಗತಿಸಿದರು. ಶಿಕ್ಷಕ ಫಾರೂಕುಲ್ಲಾ ಕಾರ್ಯಕ್ರಮ ನಿರೂಪಿಸಿದರು.

ನಾಲ್ಕು ದಿನಗಳ ಕಾಲ ಜಯದೇವಲೀಲೆ ಪ್ರವಚನ ನಡೆಸಿಕೊಟ್ಟ ಚನ್ನಗಿರಿ ಮಹಾಂತಶಾಸ್ತ್ರಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT