ಶುಕ್ರವಾರ, ಆಗಸ್ಟ್ 12, 2022
20 °C
ದಾವಣಗೆರೆ ಜಿಲ್ಲೆಯಲ್ಲಿ ಸಂಜೀವಿನಿ ಯೋಜನೆಯ ಮಹಿಳಾ ಸ್ವಸಹಾಯ ಸಂಘದ 194 ಸದಸ್ಯರು ಆಯ್ಕೆ

ಮಹಿಳೆಯರಿಗೆ ಆದಾಯ ತಂದ ಡಿಜಿಟಲ್‌ ವಹಿವಾಟು

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವಿವಿಧ ಚಟುವಟಿಕೆ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿರುವ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಈಚೆಗೆ ಡಿಜಿಟಲ್‌ ವಹಿವಾಟನ್ನು ಗ್ರಾಮಗಳ ಮನೆಮನೆಗೆ ಒಯ್ಯುವ ಕೆಲಸವನ್ನೂ ಯಶಸ್ವಿಯಾಗಿ ಮಾಡಿದ್ದಾರೆ.

ಜಿಲ್ಲಾ ಪಂಚಾಯಿತಿಯ ಎನ್ಆರ್‌ಎಲ್‌ಎಂ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ)ನ ಸಂಜೀವಿನಿ ಯೋಜನೆಯ ಅಡಿ ಕೆಲಸ ಮಾಡುತ್ತಿರುವ ಮಹಿಳಾ ಸ್ವಸಹಾಯ ಸಂಘದ ಆಯ್ದ ಸದಸ್ಯರ ಮೂಲಕ ಗ್ರಾಮಸ್ಥರು ತಮ್ಮ ಬ್ಯಾಂಕ್‌ ಖಾತೆಯಲ್ಲಿ ಜಮೆಯಾಗಿರುವ ಹಣವನ್ನು ಸುಲಭವಾಗಿ ನಗದೀಕರಿಸಿಕೊಳ್ಳುವ ಅವಕಾಶವನ್ನು ಒದಗಿಸಲಾಗಿದೆ.

ಎಷ್ಟೋ ಗ್ರಾಮಗಳಲ್ಲಿ ಬ್ಯಾಂಕ್ ಮತ್ತು ಎಟಿಎಂ ಕೇಂದ್ರಗಳಿಲ್ಲ. ಆದರೂ, ತುರ್ತಾಗಿ ಹಣ ಬೇಕೆಂದರೆ ಗ್ರಾಮಸ್ಥರು ಸಂಜೀವಿನಿ ಯೋಜನೆಯ ಸ್ವಸಹಾಯ ಸಂಘವು ‘ಮಿಷನ್ ಒನ್ ಜಿ.ಪಿ–ಒನ್ ಬಿ.ಸಿ. ಸಖಿ’ ಯೋಜನೆಯ ಅಡಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಆಯ್ಕೆ ಮಾಡಿರುವ ‘ಸಿಎಸ್‌ಸಿ ಡಿಜಿ ಪೇ ಸಖಿ’ಯರ ಬಳಿ ಬಂದರೆ ಯಾವುದೇ ಬ್ಯಾಂಕ್‌ನಿಂದ ಗರಿಷ್ಠ ₹ 10,000 ದವರೆಗೆ ಹಣವನ್ನು ತಮ್ಮ ಖಾತೆಯಿಂದ ತೆಗೆದುಕೊಳ್ಳಬಹುದು.

ದಾವಣಗೆರೆ ತಾಲ್ಲೂಕಿನ ಆಲೂರು ಗ್ರಾಮ ಪಂಚಾಯಿತಿಯ ಕೋಟೆ ಚೌಡೇಶ್ವರಿ ಒಕ್ಕೂಟದ ಆದಿಲಕ್ಷ್ಮಿ ಸ್ವಸಹಾಯ ಗುಂಪಿನ ಉಮಾ ಎಂ.ಎನ್ ಹಾಗೂ ಮಾಯಕೊಂಡದ ‘ಶ್ರೀ ವಿಜಯದಶಮಿ’ ಗ್ರಾಮ ಪಂಚಾಯಿತಿ ಒಕ್ಕೂಟದ ಅನ್ನಪೂರ್ಣೇಶ್ವರಿ ಸ್ವಸಹಾಯ ಗುಂಪಿನ ಬಿ. ನೇತ್ರಾವತಿ ಅವರು 2021-22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಡಿಜಿಟಲ್ ವಹಿವಾಟನ್ನು ನಡೆಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ರಾಜ್ಯ ಮಟ್ಟದಲ್ಲೂ ಅತಿ ಹೆಚ್ಚು ವಹಿವಾಟು ನಡೆಸಿದ ಮೊದಲ 10 ಮಂದಿಯಲ್ಲಿ ಇವರು ಇದ್ದಾರೆ. ಜಿಲ್ಲೆಯ 194 ಮಹಿಳೆಯರು ‘ಡಿಜಿ ಪೇ ಸಖಿ’ಯರಾಗಿ ಆಯ್ಕೆಯಾಗಿದ್ದಾರೆ.

‘ಡಿಜಿ ಪೇ ಸಖಿ’ ಎಂದು ಆಯ್ಕೆಯಾದವರಿಗೆ ಸರ್ಕಾರದ ಸಾಮಾನ್ಯ ಸೇವಾ ಕೇಂದ್ರದಿಂದ (ಸಿಎಸ್‌ಸಿ) ಐ.ಡಿ ಕ್ರಿಯೇಟ್ ಮಾಡಿ ಕೊಡಲಾಗುತ್ತದೆ. ಅವರು ಮೊಬೈಲ್‌ನಲ್ಲಿ ಡಿಜಿ ಪೇ ಆ್ಯಪ್ ಮೂಲಕ ಗ್ರಾಮಸ್ಥರಿಗೆ ಹಣವನ್ನು ನೀಡಬಹುದು. ಗ್ರಾಮಸ್ಥರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇರುವುದು ಅಗತ್ಯ. ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಹೆಸರು ಹೇಳಿ, ಉಪಕರಣದಲ್ಲಿ ಗ್ರಾಹಕರಿಂದ ಹೆಬ್ಬೆಟ್ಟು ಗುರುತು ಪಡೆದರೆ ಅವರ ಖಾತೆಯಲ್ಲಿರುವ ಮೊತ್ತದಲ್ಲಿ ನಮೂದಿಸಿರುವಷ್ಟು ಹಣ ಸಖಿಯರ ಡಿಜಿ ವ್ಯಾಲೆಟ್‌ಗೆ ವರ್ಗಾವಣೆ ಆಗುತ್ತದೆ. ಆಗ ಸಖಿಯರು ತಮ್ಮ ಕೈಯಲ್ಲಿರುವ ನಗದನ್ನು ಗ್ರಾಮಸ್ಥರಿಗೆ ನೀಡುತ್ತಾರೆ’ ಎಂದು ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ಕೊಟ್ರೇಶ್ ಎಸ್. ವಿವರಿಸಿದರು.

‘ಈಗಲೂ ಹಲವು ಗ್ರಾಮಸ್ಥರು ಗೂಗಲ್ ಪೇ, ಫೋನ್ ಪೇ ಬಳಸಲು ಹಿಂಜರಿಯುತ್ತಾರೆ. ಈ ವಹಿವಾಟಿಗೆ ಸ್ಮಾರ್ಟ್‌ ಫೋನ್‌ ಹೊಂದುವುದೂ ಅಗತ್ಯ. ಇನ್ನೂ ಕೆಲವರಿಗೆ ಸ್ಮಾರ್ಟ್‌ ಫೋನ್ ಬಳಕೆ ರೂಢಿ ಇರುವುದಿಲ್ಲ. ಬಡವರಿಗೆ ದುಬಾರಿ ಸ್ಮಾರ್ಟ್‌ ಫೋನ್‌ ಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಈ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಡಿಜಿ ಪೇ ಸಖಿಯಾಗಿರುವ ಹಲವರು ದಿನಕ್ಕೆ ಸರಾಸರಿ ₹ 1 ಲಕ್ಷದಿಂದ ₹ 2 ಲಕ್ಷದವರೆಗೆ ವಹಿವಾಟು ನಡೆಸುತ್ತಿದ್ದಾರೆ. ಉತ್ತಮ ವಹಿವಾಟು ನಡೆಸುತ್ತಿರುವವರು ತಿಂಗಳಿಗೆ ₹ 8,000 ದಿಂದ ₹ 10,000ದಷ್ಟು ಕಮಿಷನ್ ಪಡೆಯುತ್ತಿದ್ದಾರೆ’ ಎಂದು ಅವರು ತಿಳಿಸಿದರು.

‘ಮಾಯಕೊಂಡದಲ್ಲಿ ಡಿಜಿ ಪೇ ವ್ಯವಸ್ಥೆಗೆ ತುಂಬಾ ಬೇಡಿಕೆಯಿದೆ. ದಿನಕ್ಕೆ ₹ 3.5 ಲಕ್ಷದಿಂದ ₹ 4 ಲಕ್ಷದವರೆಗೂ ವಹಿವಾಟು ನಡೆಸಿದ್ದೇನೆ. ₹ 1 ಲಕ್ಷ ವಹಿವಾಟು ನಡೆಸಿದರೆ ₹ 120 ನಮಗೆ ಲಭಿಸುತ್ತದೆ. ಕಾರ್ಯ ನಿರ್ವಹಿಸಲು ಸೂಕ್ತ ಕಚೇರಿ ಅಥವಾ ಜಾಗದ ವ್ಯವಸ್ಥೆ ಮಾಡಿಕೊಟ್ಟರೆ ಉತ್ತಮ. ಈ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ಮಾಯಕೊಂಡದ ಅನ್ನಪೂರ್ಣೇಶ್ವರಿ ಸ್ವಸಹಾಯ ಗುಂಪಿನ ಬಿ. ನೇತ್ರಾವತಿ ತಿಳಿಸಿದರು.

........

ಗ್ರಾಮೀಣ ಮಹಿಳೆಯರಿಗೆ ಜೀವನೋಪಾಯಕ್ಕೆ ಮಾರ್ಗವಾಗಲೆಂಬ ಉದ್ದೇಶ ಎನ್ಆರ್‌ಎಲ್‌ಎಂ ಯೋಜನೆಯದ್ದು. ಆ ದಿಸೆಯಲ್ಲಿ ‘ಡಿಜಿ ಪೇ ಸಖಿ’ ಮಹಿಳೆಯರಿಗೆ ಆದಾಯ ಒದಗಿಸುವ ಉತ್ತಮ ಯೋಜನೆಯಾಗಿದೆ. -ಭೋಜರಾಜ್, ಎನ್ಆರ್‌ಎಲ್ಎಂ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ

.....

ಬೆಳಿಗ್ಗೆಯಿಂದ ಸಂಜೆಯವರೆಗೂ ಕೆಲಸ

ಎನ್‌ಆರ್‌ಎಲ್‌ಎಂ ಯೋಜನೆಯಿಂದ ‘ಡಿಜಿ ಪೇ ಸಖಿ’ ಎಂದು ಆಯ್ಕೆಯಾಗುವ ಮಹಿಳೆಯರು ತಮ್ಮ ವ್ಯಾಲೆಟ್‌ಗೆ ಬಂದಿರುವಷ್ಟು ಹಣವನ್ನು ತಮ್ಮ ಅಕೌಂಟ್‌ಗೆ ವರ್ಗಾಯಿಸಿ, ಅದನ್ನು ಬ್ಯಾಂಕ್‌ನಿಂದ ನಗದೀಕರಿಸಿಕೊಂಡು ಬೆಳಿಗ್ಗೆಯೇ ನಿಗದಿತ ಗ್ರಾಮಗಳಿಗೆ ತೆರಳುತ್ತಾರೆ. ಅಲ್ಲಿ ಗ್ರಾಮಸ್ಥರ ಥಂಬ್‌ ಇಂಪ್ರೆಶನ್‌ ಹಾಗೂ ಆಧಾರ್‌ ಸಂಖ್ಯೆ ಪಡೆದು ಹಣ ನೀಡುತ್ತಾರೆ. ಹಣ ಖಾಲಿಯಾದರೆ ಅಲ್ಲಿಗೇ ವ್ಯವಹಾರ ಸ್ಥಗಿತಗೊಳಿಸುತ್ತಾರೆ. ಅಥವಾ ಸಾಧ್ಯವಿದ್ದರೆ ಮತ್ತೆ ಬ್ಯಾಂಕ್‌ಗೆ ತೆರಳಿ ಮತ್ತೆ ಹಣ ತಂದು ಪೂರೈಸುತ್ತಾರೆ. ಸಾಮಾನ್ಯವಾಗಿ ಸಂಜೆಯವರೆಗೂ ಅವರ ವಹಿವಾಟು ನಡೆಯುತ್ತದೆ. ಸಂಜೆಯ ನಂತರವೂ ಅಗತ್ಯ ಅರಿತು ಹಣ ನೀಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು