ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ರಂಗಮಂದಿರ ನಿರ್ಮಾಣ ಅತ್ಯಗತ್ಯ: ಸಂಗೀತ ನಿರ್ದೇಶಕ ಹಂಸಲೇಖ

ರಂಗಾಯಣದ ‘ನಾಂದಿ–ಆರಂಭೋತ್ಸವ’ಕ್ಕೆ ಚಾಲನೆ
Published : 15 ಸೆಪ್ಟೆಂಬರ್ 2024, 14:33 IST
Last Updated : 15 ಸೆಪ್ಟೆಂಬರ್ 2024, 14:33 IST
ಫಾಲೋ ಮಾಡಿ
Comments

ದಾವಣಗೆರೆ: ವಿಶ್ವ ರಂಗಭೂಮಿಯ ಗಮನ ಸೆಳೆಯಬಹುದಾದ ಜಾಗತಿಕ ಮಟ್ಟದ ರಂಗಮಂದಿರವೊಂದು ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ನಿರ್ಮಿಸುವ ಅಗತ್ಯವಿದೆ. ರಂಗಭೂಮಿಯತ್ತ ಜನರನ್ನು ಸೆಳೆಯಲು ಇದು ನೆರವಾಗಲಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಅಭಿಪ್ರಾಯಪಟ್ಟರು.

ಇಲ್ಲಿನ ಜೆಜೆಎಂ ವೈದ್ಯಕೀಯ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ವೃತ್ತಿ ರಂಗಭೂಮಿ ರಂಗಾಯಣ ಭಾನುವಾರ ಆಯೋಜಿಸಿದ್ದ ‘ನಾಂಧಿ-ಆರಂಭೋತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಥಾಯ್ಲೆಂಡ್‌ನಲ್ಲಿ ಸಿಯಾಮ್ ನಿರಾಮಿತ್‌ ಎಂಬ ಅದ್ಭುತ ರಂಗಮಂದಿರವಿದೆ. ಎರಡು ಸಾವಿರ ಜನರು ಕುಳಿತು ನಾಟಕ ವೀಕ್ಷಿಸುವ ಅವಕಾಶ ಇಲ್ಲಿದೆ. ಪ್ರೇಕ್ಷಕರಿಗೆ ಮುದ ನೀಡುವ ಈ ರಂಗಮಂದಿರದಲ್ಲಿ 500ಕಲಾವಿದರು ಏಕಕಾಲಕ್ಕೆ ರಂಗತಾಲೀಮು ನಡೆಸಲು ಸಾಧ್ಯವಿದೆ. ವಿದೇಶಿಗರು ನಾಟಕದ ಮೇಲಿನ ಪ್ರೀತಿಯನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಸಂಗೀತ ಮತ್ತು ನಾಟಕ ಅವರ ಸಂಸ್ಕೃತಿಯ ಭಾಗವಾಗಿವೆ’ ಎಂದು ಹೇಳಿದರು.

‘ಕೊಂಡಜ್ಜಿಯಲ್ಲಿ ರಂಗಾಯಣಕ್ಕೆ ಸಿಕ್ಕಿರುವ 10 ಎಕರೆ ಭೂಮಿಯಲ್ಲಿ ಅತ್ಯುತ್ತಮ ರಂಗಭೂಮಿ ಕಟ್ಟಲು ಸಾಧ್ಯವಿದೆ. ನಾಟಕದ ಮೇಲೆ ಅಪಾರ ಪ್ರೀತಿ ಉಳಿಸಿಕೊಂಡಿರುವ ದಾಣಗೆರೆಯ ಜನ ಇದಕ್ಕೆ ಕೈಜೋಡಿಸುವ ವಿಶ್ವಸವಿದೆ. ಸಿ.ಬಸವಲಿಂಗಯ್ಯ ನಿರ್ದೇಶನದ ‘ಮಲೆಗಳಲ್ಲಿ ಮದುಮಗಳು’ ನಾಟಕ ಪ್ರದರ್ಶನದ ಮೂಲಕ ಇದಕ್ಕೆ ಹಣ ಸಂಗ್ರಹಿಸಬಹುದಾಗಿದೆ. ಈ ಕಾರ್ಯಕ್ಕೆ ನಾನೂ ಕೈಜೋಡಿಸುವೆ’ ಎಂದರು.

‘ಸರ್ಕಾರದ ಅನುದಾನ ಸಿಗದು’

ಸರ್ಕಾರ ಇತ್ತೀಚೆಗೆ ರೂಪಿಸಿದ ಯೋಜನೆಗಳಿಗೆ (ಗ್ಯಾರಂಟಿ) ಹಣ ಹೊಂದಿಸಲು ಕಷ್ಟಪಡುತ್ತಿದೆ. ಹೀಗಾಗಿ, ರಂಗಾಯಣಕ್ಕೆ ಈ ಮೊದಲಿನಂತೆ ಅನುದಾನ ಸಿಗುವುದು ಅನುಮಾನ. ಸರ್ಕಾರದ ಮೇಲೆ ಅವಲಂಬನೆಯಾಗುವುದನ್ನು ಬಿಟ್ಟು ಜನರ ಬಳಿಗೆ ಹೋಗುವುದು ಉತ್ತಮ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

‘ರಂಗಭೂಮಿಗೆ ಸರ್ಕಾರದ ಉದಾರ ನೆರವು ಬಯಸುವುದನ್ನು ಕೈಬಿಡಬೇಕು. ರಂಗಚಟುವಟಿಕೆಗಳಿಗೆ ಅಗತ್ಯವಿರುವ ಅನುದಾನವನ್ನು ಜನರಿಂದ ಹೊಂದಿಸಿಕೊಳ್ಳಲು ಪ್ರಯತ್ನಿಸಬೇಕು. ಸಾಣೇಹಳ್ಳಿಯ ಶಿವಸಂಚಾರ ತಂಡ ಈ ನಿಟ್ಟಿನಲ್ಲಿ ಯಶಸ್ಸು ಕಂಡಿದೆ. ಆರು ವರ್ಷಗಳಿಂದ ವೃತ್ತಿ ರಂಗಭೂಮಿ ರಂಗಾಯಣ ಆರು ರೂಪಾಯಿ ಕೆಲಸವನ್ನೂ ಮಾಡಿಲ್ಲ’ ಎಂದು ಹೇಳಿದರು.

‘ದೃಶ್ಯ ಮಾಧ್ಯಮದ ಕಾಲದಲ್ಲಿ ರಂಗಭೂಮಿಯನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಜನರನ್ನು ಸೆಳೆಯಲು ಧ್ವಂದ್ವಾರ್ಥದ ಸಂಭಾಷಣೆ, ಕುಣಿತ ಹಾಗೂ ಹಾಡುಗಳ ಪರಿಣಾಮವಾಗಿ ವೃತ್ತಿ ರಂಗಭೂಮಿ ನಾಟಕಗಳು ಒಂದು ವರ್ಗಕ್ಕೆ ಸೀಮಿತವಾಗುತ್ತಿವೆ. ನಾಟಕಗಳು ಮನೋರಂಜನೆಗೆ ಸೀಮಿತವಾಗದೇ, ಮನೋವಿಕಾಸಗೊಳಿಸಬೇಕು’ ಎಂದು ಕಿವಿಮಾತು ಹೇಳಿದರು.

ಶಾಸಕ ಕೆ.ಎಸ್‌.ಬಸವಂತಪ್ಪ, ‘ಧೂಡಾ’ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ವಿಧಾನಪರಿಷತ್ ಮಾಜಿ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ, ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ವಿಶೇಷಾಧಿಕಾರಿ ರವಿಚಂದ್ರ, ರಂಗಕರ್ಮಿಗಳಾದ ಚಿಂದೋಡಿ ಶ್ರೀಕಂಠೇಶ್, ಶಶಿಧರ್ ಬಾರಿಘಾಟ್‌, ಮಹಾಂತೇಶ್ ಗಜೇಂದ್ರಗಡ ಇದ್ದರು.

‘ಕಲಾಸಕ್ತಿ ಬೆಳೆಸಬೇಕಿದೆ’
ದಾವಣಗೆರೆಯಲ್ಲಿ ಮೂಲಸೌಲಭ್ಯಗಳು ನಿರ್ಮಾಣವಾಗಿವೆ. ಕಲೆ, ಸಂಗೀತ, ನಾಟಕದ ಮೇಲಿನ ಆಸಕ್ತಿಯನ್ನು ಬೆಳೆಸುವ ಕೆಲಸ ಆಗಬೇಕಿದೆ. ಇದಕ್ಕೆ ಪೂರಕವಾಗಿರುವ ಕಾರ್ಯಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ತಿಳಿಸಿದರು. ‘ಎರಡು ವರ್ಷಗಳಿಂದ ಕಲೆ, ರಂಗಭೂಮಿಗೆ ಹೆಚ್ಚು ಆದ್ಯತೆ ಸಿಗುತ್ತಿದೆ. ವೃತ್ತಿ ರಂಗಭೂಮಿಗೆ ಮತ್ತೆ ತವರೂರು ಆಗುವ ವಿಶ್ವಾಸ ಮೂಡಿದೆ. ಮಕ್ಕಳನ್ನು ಮೊಬೈಲ್‌ ಹಾವಳಿಯಿಂದ ರಕ್ಷಿಸಲು ಇಂತಹ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಿದೆ. ಎಲ್ಲ ಪೋಷಕರು ಈ ಬಗ್ಗೆ ಆಲೋಚಿಸಬೇಕು’ ಎಂದು ಸಲಹೆ ನೀಡಿದರು.
ದಾವಣಗೆರೆಯಲ್ಲಿ ರಂಗಶಿಕ್ಷಣ ತರಬೇತಿ ಕೇಂದ್ರ ಶುರು ಮಾಡಬೇಕು. ಆಯ್ದ 25 ಕಲಾವಿದರಿಗೆ ತರಬೇತಿ ನೀಡಿದರೆ ನಾಟಕ ಕಂಪನಿಗಳು ಕೆಲಸ ಕೊಡಲಿವೆ. ಕೈತುಂಬ ಸಂಬಳವನ್ನೂ ನೀಡಲಿವೆ.
ರಾಜು ತಾಳಿಕೋಟೆ, ನಿರ್ದೇಶಕ ಧಾರವಾಡ ರಂಗಾಯಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT