ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಓಕುಳಿಯ ಸಂಭ್ರಮದಲ್ಲಿ ಮುಳುಗಿದ ಯುವಜನರು

ರಾಂ ಆ್ಯಂಡ್‌ ಕೋ ಸರ್ಕಲ್‌ನಲ್ಲಿ ಹೋಳಿ ವೈಭವ * ಹುಚ್ಚೆದ್ದು ಕುಣಿದ ಜನರು
Last Updated 20 ಮಾರ್ಚ್ 2022, 6:09 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಮೂಲೆ ಮೂಲೆಗಳಿಂದ ಸಾಗರದಂತೆ ಹರಿದು ಬಂದ ಯುವಜನರು. ಅವರ ಉತ್ಸಾಹ ಇಮ್ಮಡಿಗೊಳಿಸುವಂಥ ಡಿ.ಜೆ. ಹಾಡುಗಳು, ಮೈ ಮರೆತು ಕುಣಿಯುವ ಕ್ಷಣಗಳು, ಅವರ ಮೇಲೆ ಚಿಮ್ಮುವ ನೀರು, ಹರಿವ ಬಣ್ಣ..

ನೋಡಲು ಎರಡು ಕಣ್ಣುಗಳು ಸಾಲವು ಎಂಬಂತ ಜನರಾಶಿ. ಸಡಗರದ ವೈಭವವು ನಗರದ ರಾಂ ಆ್ಯಂಡ್‌ ಕೊ ಸರ್ಕಲ್‌ನಲ್ಲಿ ಶನಿವಾರ ಕಂಡುಬಂತು.

ಬಣ್ಣ ಬಣ್ಣದ ಓಕಳಿಯನ್ನು ಒಬ್ಬರಿಗೊಬ್ಬರು, ಹಚ್ಚುತ್ತಾ, ಎರೆಯುತ್ತಾ ಎಲ್ಲ ರಸ್ತೆಗಳಿಂದ ವಿದ್ಯಾರ್ಥಿಗಳ ಸಮೂಹ, ವಿದ್ಯಾರ್ಥಿನಿಯರ ಸಮುಹ ಬರತೊಡಗುತ್ತಿದ್ದಂತೆ ಸರ್ಕಲ್‌ ಕಳೆಕಟ್ಟಿತ್ತು. ಬಳಿಕ ಮಧ್ಯಾಹ್ನದವರೆಗೆ ಹೋಳಿ ಸಂಭ್ರಮದ ಕುಣಿತದಲ್ಲಿ ಜಗತ್ತನ್ನೇ ಮರೆವ ಸನ್ನಿವೇಶಗಳು ಕಂಡುಬಂದವು.

ಹೋಳಿ ಹುಣ್ಣಿಮೆಯ ದಿನವಾದ ಶುಕ್ರವಾರ ರಾತ್ರಿ ಕಾಮದಹನ ಮಾಡಿದ ಬಳಿಕ ಬಣ್ಣದೋಕುಳಿಯ ಸಂಭ್ರಮಕ್ಕೆ ಚಾಲನೆ ದೊರೆತಿತ್ತು. ಮಕ್ಕಳು, ಯುವಕರು ಬಣ್ಣ ಹಚ್ಚಿಕೊಂಡು ಬೈಕ್‌ಗಳಲ್ಲಿ ಸುತ್ತಾಡುತ್ತಿರುವುದು ಕಂಡುಬಂತು. ತಾವೇನೂ ಕಡಿಮೆ ಇಲ್ಲ ಎಂದು ಯುವತಿಯರೂ ಸಾಥ್‌ ನೀಡಿದ್ದರು. ಪಡ್ಡೆ ಹುಡುಗರು ಶರ್ಟ್‌ ಬಿಚ್ಚಿಹಾಕಿ ಅರೆ ಬೆತ್ತಲಾಗಿ ಕೇಕೆ ಹಾಕುತ್ತ, ಪೀಪಿ ಊದುತ್ತಾ ತಿರುಗಾಡಿದರು. ಬೆಳಿಗ್ಗೆ ಎಲ್ಲ ಸುತ್ತಾಟಗಳನ್ನು ಮುಗಿಸಿಕೊಂಡು ಕೊನೆಗೆ ರಾಂ ಆ್ಯಂಡ್‌ ಕೋ ಸರ್ಕಲ್‌ಗೆ ತಲುಪಿದ್ದರು.

ಮೈಮೇಲಿನ ಬಣ್ಣ ಮೇಲಿಂದ ಬೀಳುತ್ತಿದ್ದ ನೀರಿಗೆ ತೊಳೆದು ಹೋಗುತ್ತಿದ್ದಾಗ ಮತ್ತಷ್ಟು ಬಣ್ಣ ಮೆತ್ತಿಕೊಂಡು ಕುಣಿದರು. ಕೆಲವು ಯುವಕರು ತಮ್ಮ ಗೆಳೆಯರ ಹೆಗಲೇರಿ ಕುಣಿದರೆ, ಯುವತಿಯರು ತಮ್ಮ ಗೆಳತಿಯರ ಹೆಗಲೇರಿದರು. ನೃತ್ಯದ ಅಬ್ಬರ ರಂಗೇರುತ್ತಿದ್ದಂತೆ ಪಡ್ಡೆ ಹುಡುಗರು ಅಂಗಿಯನ್ನು ಹರಿದು ಮೇಲಕ್ಕೆ ಎಸೆಯುತ್ತಿದ್ದರು. ವಿದ್ಯುತ್‌ ತಂತಿಗೆ ಸಿಲುಕಿಕೊಂಡ ನೂರಾರು ಅಂಗಿಗಳು ತೋರಣದಂತೆ ಕಂಡುಬಂದವು.

ಜೆ.ಜೆ.ಎಂ. ವೈದ್ಯಕೀಯ ಕಾಲೇಜ್‌, ಯುಬಿಡಿಟಿ ಕಾಲೇಜು, ಬಿಐಇಟಿ ಕಾಲೇಜು ಸಹಿತ ವಿವಿಧ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಣ್ಣದಾಟದಲ್ಲಿ ಮುಳುಗಿದ್ದರು.

ನಗರದ ಪಿ.ಜೆ. ಬಡಾವಣೆ, ಎಂಸಿಸಿ ‘ಬಿ’ ಬ್ಲಾಕ್‌, ವಿನೋಬನಗರ, ವಿದ್ಯಾನಗರ, ಶಿವಕುಮಾರಸ್ವಾಮಿ ಬಡಾವಣೆ, ಬಿಐಇಟಿ ರಸ್ತೆ, ನಿಜಲಿಂಗಪ್ಪ ಬಡಾವಣೆ, ಬಿಡಿಟಿ ರಸ್ತೆ, ಮೆಡಿಕಲ್‌ ಕಾಲೇಜು ಹಾಸ್ಟೆಲ್‌ ರಸ್ತೆ, ಸಿದ್ದವೀರಪ್ಪ ಬಡಾವಣೆ, ಗಡಿಯಾರ ಕಂಬ, ಹಳೆ ದಾವಣಗೆರೆ, ಆಂಜನೇಯ ಬಡಾವಣೆ, ಪಿಸಾಳೆ ಕಾಂಪೌಂಡ್‌, ಗಾಂಧಿ ವೃತ್ತ, ವಿನೋಬನಗರ, ಕಾಯಿಪೇಟೆ, ನಿಟುವಳ್ಳಿಯಲ್ಲಿ ಹೋಳಿ ಆಚರಣೆ ಜೋರಾಗಿತ್ತು.

ವಿವಿಧ ಬಡಾವಣೆಗಳಲ್ಲಿ ಹಿರಿಯರು, ಮಹಿಳೆಯರು ಎನ್ನದೇ ಎಲ್ಲರೂ ಹೋಳಿ ಆಚರಿಸಿದರು. ತಮ್ಮ ಪರಿಚಯದವರಿಗೂ ಬಣ್ಣ ಹಚ್ಚಿ ಖುಷಿ ಪಟ್ಟರು. ಅವರೆಲ್ಲ ತಮ್ಮ ಪರಿಸರಕ್ಕೆ ಸೀಮಿತರಾಗಿ ಹಬ್ಬ ಆಚರಿಸಿದರು.

ಹೋಳಿ ಆಚರಣೆ ಅಂಗವಾಗಿ ನಗರಾದ್ಯಂತ ಬಿಗಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT