ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಮ್ಸ್‌ಗೆ ಹೆಚ್ಚು ಅನುದಾನ ತರಲು ಯತ್ನ

₹1.75 ಕೋಟಿ ಮೊತ್ತದ ಚೆಕ್ ವಿತರಣೆ: ಶಾಸಕ ಅಬ್ಬಯ್ಯ ಪ್ರಸಾದ ಭರವಸೆ
Published 14 ಮಾರ್ಚ್ 2024, 14:50 IST
Last Updated 14 ಮಾರ್ಚ್ 2024, 14:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಉತ್ತರ ಕರ್ನಾಟಕಕ್ಕೆ ಕಿಮ್ಸ್ ಸಂಜೀವಿನಿ ಆಗಿದೆ. ಆಸ್ಪತ್ರೆಗೆ ಹೆಚ್ಚಿನ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ವೈಯಕ್ತಿಕವಾಗಿಯೂ ಸಹಕಾರ ನೀಡುತ್ತೇನೆ’ ಎಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಅಬ್ಬಯ್ಯ ಪ್ರಸಾದ ಭರವಸೆ ನೀಡಿದರು.

ನಗರದ ಕಿಮ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್  ವತಿಯಿಂದ ಸಿ.ಎಸ್.ಆರ್. ನಿಧಿಯಡಿ ₹1.75 ಕೋಟಿ ಮೊತ್ತದ ವೈದ್ಯಕೀಯ ಉಪಕರಣ ಖರೀದಿಗೆ ಚೆಕ್ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಖಾಸಗಿ ಆಸ್ಪತ್ರೆಗಿಂತ ಕಿಮ್ಸ್‌ನಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಹಲವಾರು ಗಂಭೀರ ಕಾಯಿಲೆಗಳ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕು. ಚಿಕಿತ್ಸಾ ಪದ್ಧತಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ವೈದ್ಯರು ಮಾನವೀಯತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು’ ಎಂದು ಹೇಳಿದರು. 

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಮಾತನಾಡಿ, ‘ಸಿ.ಎಸ್.ಆರ್. ನಿಧಿ ಸದ್ಬಳಕೆಯಾಗಬೇಕು. ಬಡವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯಬೇಕು’ ಎಂದರು. 

ನ್ಯೂಯೋನಟಲ್ ಇನ್ಕುಬೇಟರ್ಸ್ ಮತ್ತು ಆಪರೇಟಿಂಗ್ ಲ್ಯಾಪ್ರೋಸ್ಕೋಪಿ ಖರೀದಿಗಾಗಿ ಚೆಕ್‌ ವಿತರಿಸಲಾಯಿತು.

ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್.‌ ಕಮ್ಮಾರ, ಡಾ. ರಾಜಶೇಖರ ದ್ಯಾಬೇರಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಐ.ಜಿ. ಸನದಿ, ಎ.ಎಂ. ಕುಲಕರ್ಣಿ, ಬಿ.ಜಿ. ವಸ್ತ್ರದ, ಡಾ. ಸಿ.ಎಸ್. ಪಾಟೀಲ, ಐ.ಎಸ್. ಪಾಟೀಲ, ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಶರಣಪ್ಪ ಕೊಟಗಿ, ಕಿಮ್ಸ್ ಪ್ರಾಂಶುಪಾಲ ಈಶ್ವರ ಹೊಸಮನಿ ಇದ್ದರು.

ಮರಣ ಪ್ರಮಾಣ ತಗ್ಗಿಸಲು ನೆರವು’

‘ಕಿಮ್ಸ್ ಹೆಮ್ಮರವಾಗಿ ಬೆಳೆದಿದೆ. ನಿತ್ಯ 4000ಕ್ಕೂ ಹೆಚ್ಚು ರೋಗಿಗಳು ಗುಣಮಟ್ಟದ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿರಕ್ಕೂ ಅಧಿಕ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ಅಧ್ಯಕ್ಷ ಜಿ.ಎಸ್‌.ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು. ‘ದೇಶದಲ್ಲಿ 1000 ಗರ್ಭಿಣಿಯರಲ್ಲಿ 97 ಮಂದಿ ಹೆರಿಗೆ ಸಮಯದಲ್ಲಿ ಅಸುನೀಗುತ್ತಿದ್ದಾರೆ. 1000 ನವಜಾತ ಶಿಶುಗಳಲ್ಲಿ 24 ಶಿಶುಗಳು ಸಾವಿಗೀಡಾಗುತ್ತಿವೆ. ಮರಣ ಪ್ರಮಾಣ ತಗ್ಗಿಸಲು ಆಧುನಿಕ ಯಂತ್ರೋಪಕರಣಗಳ ಬಳಕೆ ಅವಶ್ಯವಿರುವ ಕಾರಣ ಕಿಮ್ಸ್‌ಗೆ ನೆರವು ನೀಡಲಾಗಿದೆ’ ಎಂದು ವಿವರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT