ಗುರುವಾರ , ಡಿಸೆಂಬರ್ 3, 2020
20 °C
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಶೇ 63.67 ವಿದ್ಯಾರ್ಥಿಗಳು ಪಾಸು; ಜಿಲ್ಲೆ ಸ್ಥಾನ 23ಕ್ಕೆ ಕುಸಿತ

ಧಾರವಾಡ: ಸತತ ಐದು ವರ್ಷಗಳಿಂದ ಕುಸಿಯುತ್ತಿರುವ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯು ಈ ಬಾರಿಯೂ ಕಳಪೆ ಸಾಧನೆ ದಾಖಲಿಸಿ 23ನೇ ಸ್ಥಾನಕ್ಕೆ ಕುಸಿದಿದೆ.

ಕಳೆದ ವರ್ಷದ ಶೇ 63.67ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರು. ಇದರಿಂದ ಜಿಲ್ಲೆ 22ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಪಾಸಾದವರ ಪ್ರಮಾಣ ಶೇ 62.49ಕ್ಕೆ ಕುಸಿದಿದೆ. ಆ ಮೂಲಕ ರಾಜ್ಯ ಮಟ್ಟದಲ್ಲಿ ಜಿಲ್ಲೆಯ ಸ್ಥಾನ 23ಕ್ಕೆ ಕುಸಿತ ಕಂಡಿದೆ. ಜಿಲ್ಲೆಯಲ್ಲಿ ಈ ಬಾರಿ 21,836 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಇವರಲ್ಲಿ 13,646 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಎಂದಿನಂತೆ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 63.77ರಷ್ಟು ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಬಾಲಕರ ತೇರ್ಗಡೆ ಪ್ರಮಾಣ ಶೇ 50.15ರಷ್ಟಿದೆ. ಗ್ರಾಮೀಣ ಭಾಗದಲ್ಲೂ ಶೇ 58.84ರಷ್ಟು ಬಾಲಕಿಯರು ಪಾಸಾಗಿ ಉತ್ತಮ ಸಾಧನೆ ಮಾಡಿದ್ದಾರೆ. ನಗರ ಪ್ರದೇಶದಲ್ಲಿ ಈ ಪ್ರಮಾಣ ಶೇ 64.59ರಷ್ಟಿದೆ.

ವಿಷಯವಾರು ಸಾಧನೆಯಲ್ಲಿ ಕಲಾ ವಿಭಾಗದಲ್ಲಿ ಶೇ 51.29ರಷ್ಟು, ವಾಣಿಜ್ಯ ವಿಭಾಗದಲ್ಲಿ ಶೇ 61.22ರಷ್ಟು ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ 70.33ರಷ್ಟ ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಪಟ್ಟಣ ಪ್ರದೇಶದಲ್ಲಿ ಶೇ 63.26ರಷ್ಟು ವಿದ್ಯಾರ್ಥಿಗಳು ಪಾಸಾದರೆ, ಗ್ರಾಮೀಣ ಭಾಗದಲ್ಲಿ ಶೇ 57.06 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಈ ಬಾರಿ ಮರು ಪರೀಕ್ಷೆಗೆ ಕೂತವರ ಸಂಖ್ಯೆ 3512. ಇವರಲ್ಲಿ 1006 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಖಾಸಗಿಯಾಗಿ 608 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 82 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಹುಬ್ಬಳ್ಳಿಯ ಚೇತನಾ ಕಾಲೇಜಿನ ವಿದ್ಯಾರ್ಥಿನಿ ಅಪರ್ಣಾ ಮುಳಗುಂದ (592) ಹಾಗೂ ಧಾರವಾಡದ ಪ್ರಿಸಂ ಕಾಲೇಜಿನ ರೋಹಿಣಿ ಕಟ್ಟಿ (588) ಮತ್ತು ಧಾರವಾಡದ ಮಹೇಶ ಪಿಯು ಕಾಲೇಜಿನ ಸೃಜನಾ ಕುಲಕರ್ಣಿ (588) ಅಂಕ ಪಡೆದು ರಾಜ್ಯಕ್ಕೆ ಕ್ರಮವಾಗಿ 4 ಮತ್ತು 7ನೇ ರ‍್ಯಾಂಕ್‌ ಪಡೆದಿದ್ದರೆ.

ಜಿಲ್ಲೆಯ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಪದವಿ ಪೂರ್ವ ಶಿಕ್ಷಣ ಮಂಡಳಿ ಜಿಲ್ಲಾ ಉಪನಿರ್ದೇಶಕ ಲಕ್ಷ್ಮಣ ಪಾಟೀಲ, ‘ಕಳೆದ ವರ್ಷಕ್ಕಿಂಥ ಈ ಬಾರಿ ಪಾಸಾದವರ ಸಂಖ್ಯೆ ಮತ್ತು ಜಿಲ್ಲೆಯ ಸ್ಥಾನ ಕುಸಿತ ಕಂಡಿರುವುದು ಬೇಸರದ ಸಂಗತಿ. ಡಿಡಿಪಿಯು ಆಗಿ ನಾನು ಕಳೆದ ಡಿಸೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡೆ. ಫಲಿತಾಂಶ ಉತ್ತಮಪಡಿಸಲು ಸಕಲ ಕ್ರಮಗಳನ್ನು ವಹಿಸಲಾಗಿತ್ತು’ ಎಂದರು.

‘ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದೆ. ಖಾಸಗಿ ಕಾಲೇಜುಗಳಲ್ಲೂ ಅತಿಥಿ ಉಪನ್ಯಾಸಕರಿಂದಲೇ ತರಗತಿಗಳನ್ನು ನಡೆಸಲಾಗುತ್ತಿದೆ. ಫಲಿತಾಂಶ ಉತ್ತಮಪಡಿಸಲು ಈ ಬಾರಿ ಎಲ್ಲಾ ರೀತಿಯ ಕ್ರಮ ವಹಿಸಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು