ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಮುಂಗಾರು ಪೂರ್ವ ಮಳೆಗೆ ಹದವಾದ ನೆಲ; ಚುರುಕುಗೊಂಡ ಕೃಷಿ ಚಟುವಟಿಕೆ

ಕಾರ್ಮಿಕರ ಕೊರತೆ ನಡುವೆಯೇ ಕೆಲಸ
Last Updated 3 ಮೇ 2020, 3:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಗಾಗ್ಗೆ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯ ಬೆನ್ನಲ್ಲೇ, ರೈತರು ನಿಧಾನವಾಗಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ಎದುರಾಗಿದ್ದ ಕೃಷಿ ಕಾರ್ಮಿಕರ ಕೊರತೆ ನಡುವೆಯೂ, ನೆಲ ಹದಗೊಳಿಸುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ.

ತಾಲ್ಲೂಕಿನಲ್ಲಿಹಿಂಗಾರು ಬೆಳೆಗಳ ಕೊಯ್ಲು ಮುಗಿಯು ಹೊತ್ತಿಗೆ, ಕೊರೊನಾದಿಂದಾಗಿ ಲಾಕ್‌ಡೌನ್ ಹೇರಲಾಗಿತ್ತು. ಆರಂಭದಲ್ಲಿ ಕೃಷಿ ಚಟುವಟಿಕೆಗಳಿಗೆ ಇದ್ದ ನಿರ್ಬಂಧ ಇದೀಗ ತೆರವಾಗಿದೆ. ರೈತರು ಹಾಗೂ ಕೃಷಿ ಕಾರ್ಮಿಕರ ಓಡಾಟವೂ ನಿರಾಂತಕವಾಗಿದ್ದು, ಕೃಷಿ ಕೆಲಸಗಳು ಚುರುಕುಗೊಂಡಿವೆ.

ನಗರದ ಹೊರವಲಯ ಸೇರಿದಂತೆಕುಸುಗಲ್, ಶಿರಗುಪ್ಪಿ, ಹೆಬಸೂರು, ಬ್ಯಾಹಟ್ಟಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರೈತರು ಟ್ರಾಕ್ಟರ್ ಮತ್ತು ಎತ್ತುಗಳನ್ನು ಬಳಸಿ ನೆಲವನ್ನು ಉಳುತ್ತಿದ್ದ ದೃಶ್ಯ ಕಂಡುಬಂತು.

ಮುಂಗಾರು ಬೆಳೆಗಳಿಗೆ ಸಜ್ಜು:

‘ಜೂನ್‌ನಲ್ಲಿ ಆರಂಭವಾಗುವ ಮುಂಗಾರು ಮಳೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಮುಂಗಾರಿನ ಬೆಳೆಗಳಿಗೆ ತಯಾರಿ ಮಾಡಿಕೊಳ್ಳುತ್ತೇವೆ. ಕೆಲವೆಡೆ ಹತ್ತಿ ಹೊರತುಪಡಿಸಿ,ಹಿಂಗಾರು ಬೆಳೆಗಳ ಬಹುತೇಕ ಕೊಯ್ಲು ಮುಗಿದಿದೆ. ಲಾಕ್‌ಡೌನ್‌ನಿಂದಾಗಿ ಏಪ್ರಿಲ್‌ನಲ್ಲಿ ಕೃಷಿ ಕೆಲಸಗಳು ಮಂದಗತಿಯಲ್ಲಿ ಸಾಗಿದ್ದವು’ ಎಂದು ಶಿರಗುಪ್ಪಿಯ ಶಂಕರ ಪಾಟೀಲ ಹೇಳಿದರು.

‘ಈಗ ಸುರಿಯುತ್ತಿರುವ ಅಡ್ಡ ಮಳೆ (ಮುಂಗಾರು ಪೂರ್ವ ಮಳೆ) ಭೂಮಿಯನ್ನು ಹದಗೊಳಿಸಲು ಪ್ರಶಸ್ತ ಕಾಲವಾಗಿದೆ.ಶೇಂಗಾ, ಹಲಸಂದಿ, ಮೆಣಸಿನಕಾಯಿ, ಗೋವಿನ ಜೋಳ, ಹತ್ತಿ, ಹೆಸರು, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಗೆ ರೈತರು ಭೂಮಿಯನ್ನು ಸ್ವಚ್ಛಗೊಳಿಸಿ ಉಳುಮೆ ಆರಂಭಿಸಿದ್ದಾರೆ’ ಎಂದರು.

ಹೊಸ ಕಾರ್ಮಿಕರು:

‘ದೂರದ ಊರುಗಳಿಂದ ಕೃಷಿ ಚಟುವಟಿಕೆಗಾಗಿ ಬಂದಿದ್ದ ಬಹುತೇಕ ಕಾರ್ಮಿಕರು, ಲಾಕ್‌ಡೌನ್ ಘೋಷಣೆಯಾಗುತ್ತಲೇ ತಮ್ಮ ಊರುಗಳಿಗೆ ಹೋದರು. ವಾಹನಗಳ ವ್ಯವಸ್ಥೆ ಇಲ್ಲದವರು ಉಳಿದುಕೊಂಡಿದ್ದರು. ಈಗ ಅವರೂ ಸೇರಿದಂತೆ, ಹೊಸ ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ’ ಎಂದು 60 ಎಕರೆ ಕೃಷಿ ಭೂಮಿ ಹೊಂದಿರುವ ಹುಬ್ಬಳ್ಳಿಯ ರೈತ ನಿಂಗಪ್ಪ ಜಕ್ಕಲಿ ತಿಳಿಸಿದರು.

‘ಹುಬ್ಬಳ್ಳಿ, ಧಾರವಾಡ ಸೇರಿದಂತೆ ನಗರ ಪ್ರದೇಶಗಳಲ್ಲಿ ವಿವಿಧ ರೀತಿಯ ಕೆಲಸ ಮಾಡುತ್ತಿದ್ದವರು ಈಗ ಮನೆಯಲ್ಲೇ ಉಳಿದಿದ್ದಾರೆ.ಒಂದು ತಿಂಗಳಿಂದ ದುಡಿಮೆ ಇಲ್ಲದ ಅವರೂ, ಕೃಷಿ ಕೆಲಸಗಳಿಗೆ ಬರುತ್ತಿದ್ದಾರೆ. ವಲಸೆ ಕಾರ್ಮಿಕರ ಜಾಗವನ್ನು ತಾತ್ಕಾಲಿಕವಾಗಿ ಅವರೇ ತುಂಬಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT