ಸೋಮವಾರ, ಆಗಸ್ಟ್ 8, 2022
23 °C
ಅರ್ಧದಷ್ಟು ಭರ್ತಿಯಾದ ಆರ್‌ಟಿಇ ಸೀಟುಗಳು; ಪ್ರವೇಶಕ್ಕೆ ಅಡ್ಡಿಯಾದ ನಿಯಮ

ಧಾರವಾಡ ಜಿಲ್ಲೆಯಲ್ಲಿ 649 ಆರ್‌ಟಿಇ ಸೀಟು ಪೈಕಿ, 230 ಮಂದಿಗಷ್ಟೇ ಪ್ರವೇಶ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಧಾರವಾಡ ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ ಒಟ್ಟು 649 ಸೀಟುಗಳ ಪೈಕಿ, ಕೇವಲ 230 ಸೀಟುಗಳಷ್ಟೇ ಭರ್ತಿಯಾಗಿವೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆರ್‌ಟಿಇ ಸೀಟು ಕೋರಿ ಜಿಲ್ಲೆಯಾದ್ಯಂತ 1,169 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಹುಬ್ಬಳ್ಳಿ ನಗರದಲ್ಲಿ ಮೀಸಲಾಗಿರುವ 254 ಸೀಟುಗಳಿಗೆ ಅತಿ ಹೆಚ್ಚು 871 ಅರ್ಜಿಗಳು ಸಲ್ಲಿಕೆಯಾಗಿದ್ದರೆ, 39 ಸೀಟುಗಳಿರುವ ಕುಂದಗೋಳ ತಾಲ್ಲೂಕಿನಲ್ಲಿ ಕೇವಲ 12 ಅರ್ಜಿಗಳು ಬಂದಿದ್ದವು.

ಅದರಲ್ಲಿ ಹುಬ್ಬಳ್ಳಿ ನಗರ ತಾಲ್ಲೂಕಿನಲ್ಲಿ 92 ವಿದ್ಯಾರ್ಥಿಗಳು, ಹುಬ್ಬಳ್ಳಿ ಗ್ರಾಮೀಣದಲ್ಲಿ 6, ಧಾರವಾಡ ನಗರದಲ್ಲಿ 90, ಧಾರವಾಡ ಗ್ರಾಮೀಣ 29, ನವಲಗುಂದ 7 ಹಾಗೂ ಕುಂದಗೋಳ ತಾಲ್ಲೂಕಿನಲ್ಲಿ 6 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ.

‘ನಿಯಮಗಳ ಅನ್ವಯ ಎರಡು ಹಂತಗಳಲ್ಲಿ ಆರ್‌ಟಿಇ ಸೀಟುಗಳಿಗೆ ಪ್ರವೇಶ ಪ್ರಕ್ರಿಯೆ ನಡೆದಿದೆ. ಅರ್ಜಿಗಳನ್ನು ಪರಿಶೀಲಿಸಿ ನಿಯಮಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಬಯಸಿದ ಶಾಲೆಗಳಲ್ಲಿ ಪ್ರವೇಶ ಸಿಗದಿದ್ದಾಗ, ಪೋಷಕರು ಮಕ್ಕಳನ್ನು ಬೇರೆಡೆ ಸೇರಿಸುತ್ತಾರೆ. ವಾರ್ಡ್/ಗ್ರಾಮದಲ್ಲಿ ಸರ್ಕಾರಿ ಶಾಲೆಗಳಿದ್ದರೆ ಆರ್‌ಟಿಇ ಸೀಟು ಸಿಗಲ್ಲ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆರ್‌ಟಿಇ ಸೀಟುಗಳ ನೋಡಲ್ ಅಧಿಕಾರಿ ಮಾಕಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

ಆಶಯ ಬುಡಮೇಲು

ಕೇಂದ್ರ ಸರ್ಕಾರ 2010ರಲ್ಲಿ ಜಾರಿಗೆ ತಂದ ಆರ್‌ಟಿಇ ಕಾಯ್ದೆಯಡಿ ಸ್ಥಳೀಯ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವಿದ್ಯಾರ್ಥಿಗಳು ನರ್ಸರಿಯಿಂದ ಪ್ರೌಢಶಾಲೆಗಳವರೆಗೆ ಪ್ರವೇಶ ಪಡೆಯಲು ಅವಕಾಶವಿತ್ತು. ಆದರೆ, 2019ರಲ್ಲಿ ಕಾಯ್ದೆಗೆ ತಂದ ತಿದ್ದುಪಡಿಯು ಅದರ ಆಶಯವನ್ನೇ ಬುಡಮೇಲು ಮಾಡಿತು. ಸೀಟುಗಳು ಬಡವರ ಕೈಗೆಟುಕದಂತಾಯಿತು.

ನಿಯಮ ಜಾರಿಯಾದಾಗಿನಿಂದ ಜಿಲ್ಲೆಯ ಕಲಘಟಗಿ ತಾಲ್ಲೂಕು ಆರ್‌ಟಿಇ ಸೀಟುಗಳ ವ್ಯಾಪ್ತಿಯಿಂದ ಹೊರಗುಳಿದಿದೆ. ತಾಲ್ಲೂಕಿನ 14 ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೂರು ವರ್ಷಗಳ ಹಿಂದೆ ಸುಮಾರು 551 ವಿದ್ಯಾರ್ಥಿಗಳು ಗ್ರಾಮ ಅಥವಾ ವಾರ್ಡ್ ವ್ಯಾಪ್ತಿಯ ಹಂಗಿಲ್ಲದೆ ಕಾಯ್ದೆಯಡಿ ಪ್ರವೇಶ ಪಡೆದಿದ್ದರು. ತಿದ್ದುಪಡಿ ಬಳಿಕ ಅದು ಶೂನ್ಯಕ್ಕೆ ಇಳಿದಿದೆ.

‘ತಿದ್ದುಪಡಿ ನಿಯಮದ ಪ್ರಕಾರ, ಒಂದು ಕಿ.ಮೀ ವ್ಯಾಪ್ತಿಯಲ್ಲಿ ಅಥವಾ ಆಯಾ ವಾರ್ಡ್‌/ ಗ್ರಾಮದಲ್ಲಿ ಸರ್ಕಾರಿ ಶಾಲೆಗಳಿಲ್ಲದಿದ್ದರೆ ಮಾತ್ರ, ಖಾಸಗಿ ಅಥವಾ ಅನುದಾನಿತ ಶಾಲೆಗಳಲ್ಲಿ ಆರ್‌ಟಿಇ ಸೀಟಿಗೆ ಅವಕಾಶ ನೀಡಲಾಗಿದೆ. ಇದರಿಂದಾಗಿ, ಬಹುತೇಕ ಸೀಟುಗಳು ಕಡಿತಗೊಂಡಿದ್ದು, ಉತ್ತಮ ಹಾಗೂ ಪ್ರತಿಷ್ಠಿತ ಖಾಸಗಿ ಶಾಲೆಗಳು ಆರ್‌ಟಿಇ ವ್ಯಾಪ್ತಿಯಿಂದ ಹೊರಗುಳಿದಿವೆ’ ಎಂದು ಆರ್. ಭೀಮಣ್ಣವರ ಬೇಸರ ವ್ಯಕ್ತಪಡಿಸಿದರು.

‘ವ್ಯವಸ್ಥಿತ ಹುನ್ನಾರ’

‘ಆರ್‌ಟಿಇ ಕಾಯ್ದೆ ಜಾರಿಗೆ ಬಂದಾಗ, ಗ್ರಾಮೀಣ ಭಾಗಗಳಲ್ಲಿ ನೂರಾರು ಸಂಖ್ಯೆಯ ಸರ್ಕಾರಿ ಶಾಲೆಗಳು ಬಂದ್ ಆದವು. ಯಾವಾಗ ಸೀಟುಗಳಿಗೆ ಬೇಡಿಕೆ ಹೆಚ್ಚಿತೊ, ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ಕಾಯ್ದೆಗೆ ತಿದ್ದುಪಡಿ ತಂದಿತು. ಅದರಿಂದಾಗಿ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಅತ್ತ ಸ್ಥಳೀಯ ಸರ್ಕಾರಿ ಶಾಲೆಯೂ ಇಲ್ಲದಂತಾಯಿತು. ಇತ್ತ ಖಾಸಗಿ ಶಾಲೆಯಲ್ಲೂ ಆರ್‌ಟಿಇ ಸೀಟುಗಳಿಂದಲೂ ವಂಚಿತರಾದರು. ವಿಧಿ ಇಲ್ಲದೆ, ಖಾಸಗಿ ಶಾಲೆಗಳಿಗೆ ಹೆಚ್ಚಿನ ಶುಲ್ಕ ತೆತ್ತು ಸೇರಬೇಕಾಯಿತು. ಇದೊಂದು ವ್ಯವಸ್ಥಿತ ಹುನ್ನಾರ. ಸರ್ಕಾರ ಕೂಡಲೇ ಕಾಯ್ದೆಗೆ ತಂದಿರುವ ನಿಯಮವನ್ನು ರದ್ದುಪಡಿಸಬೇಕು. ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು’ ಎಂದು ಹುಬ್ಬಳ್ಳಿಯ ದಲಿತ ಸಂಘ–ಸಂಸ್ಥೆಗಳ ಮಹಾಮಂಡಳದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು