ಭಾನುವಾರ, ಜೂನ್ 13, 2021
25 °C
ರೈತ ಮುಖಂಡ ಬಾಬಾಗೌಡ ಪಾಟೀಲ ಅವರ ನೆನಪು

ಪಚ್ಚೆ ನಂಜುಂಡಸ್ವಾಮಿ ಬರಹ - ಬಾಬಾಗೌಡರ ನೆನಪು| ಚಳವಳಿಕಾರನಾದ ಐಎಎಸ್ ಆಕಾಂಕ್ಷಿ

ಪಚ್ಚೆ ನಂಜುಂಡಸ್ವಾಮಿ Updated:

ಅಕ್ಷರ ಗಾತ್ರ : | |

ಧಾರವಾಡ: ಐಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸಿನೊಂದಿಗೆ ಅಧ್ಯಯನ ನಡೆಸುತ್ತಿದ್ದ ವ್ಯಕ್ತಿಯೊಳಗಿದ್ದ ಒಬ್ಬ ಚಳವಳಿಕಾರ ಹಾಗೂ ನಾಯಕ ಹೊರಜಗತ್ತಿಗೆ ಪರಿಚಯಗೊಂಡಿದ್ದೇ ರೈತ ಹೋರಾಟದ ಮೂಲಕ. ಅಂಥ ಒಬ್ಬ ಮೇರು ವ್ಯಕ್ತಿ ರೈತನಾಯಕನಾಗಿ, ಶಾಸಕನಾಗಿ, ಕೇಂದ್ರ ಸಚಿವರಗಿ ರೈತಕುಲಕ್ಕಾಗಿ ಮಾಡಿದ ಕೆಲಸ ಅನನ್ಯ. ಆದರೆ ಜನರ ಕಲ್ಯಾಣಕ್ಕಾಗಿ ಅವರ ಜ್ಞಾನವನ್ನು ಬಳಸಿಕೊಳ್ಳಬೇಕಾಗಿದ್ದ ರಾಜಕೀಯ ಪಕ್ಷಗಳು, ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದು ನಿಜಕ್ಕೂ ಬೇಸರ.

ಆ ಅಪ್ರತಿಮ ಹೋರಾಟಗಾರ ಬಾಬಾಗೌಡ ಪಾಟೀಲ ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ ಹಿಂದಕ್ಕೆ ಒಮ್ಮೆ ತಿರುಗಿ ನೋಡಿದರೆ, ನರಗುಂದ ಹಾಗೂ ನವಲಗುಂದ ರೈತ ಬಂಡಾಯದಲ್ಲಿ ಉತ್ತರ ಕರ್ನಾಟಕದಲ್ಲಿ ಹೋರಾಟದ ಕಿಚ್ಚು ಹಚ್ಚಿದ್ದು ಈಗಲೂ ಕಣ್ಣಿಗೆ ಕಟ್ಟುವಂತಿದೆ. ಆಗ ಡಿ.ದೇವರಾಜ ಅರಸು ಅವರೂ ಪಾದಯಾತ್ರೆ ಕೈಗೊಂಡಿದ್ದರೂ, ರೈತ ಸಂಘದ ಹೋರಾಟದ ಮುಂದೆ ಅದು ಎದ್ದುಕಾಣುತ್ತಿರಲಿಲ್ಲ. ಪ್ರೊ. ಎಂ.ಡಿ.ನಂಜುಂಡಸ್ವಾಮಿ, ಎಚ್‌.ಎಸ್.ರುದ್ರಪ್ಪ, ಎನ್‌.ಡಿ.ಸುಂದರೇಶ್ ಅವರ ತಂಡ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ, ಉತ್ತರದಲ್ಲಿ ಚಳವಳಿಯ ಕಾವು ಹೆಚ್ಚಿಸಿದ್ದ ಬಾಬಾಗೌಡ ಪಾಟೀಲರು ಗಮನ ಸೆಳೆದರು. ಇವರಲ್ಲಿನ ಹೋರಾಟದ ಮನೋಭಾವ ಮತ್ತು ರೈತರ ಕುರಿತ ಅಪಾರ ಜ್ಞಾನವನ್ನು ಅರಿತ ‘ಪ್ರೊಫೆಸರ್‌’ ಅವರನ್ನು ರೈತ ಸಂಘದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದರು.


ಬೆಂಗಳೂರಿನ ವಿಧಾನಸೌಧದ ಎದುರು ರೈತ ಚಳವಳಿ ಹೋರಾಟದ ಸಂದರ್ಭದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಎನ್‌.ಡಿ.ಸುಂದರೇಶ ಅವರೊಂದಿಗೆ ಪಾಲ್ಗೊಂಡಿದ್ದ ಬಾಬಾಗೌಡ ಪಾಟೀಲ

ಅದಾದ ನಂತರ ನಾಡಿನ ಉದ್ದಗಲಕ್ಕೂ ಸಂಚರಿಸಿ ರೈತ ಚಳವಳಿ ಕಟ್ಟುವಲ್ಲಿ ಈ ತಂಡ ಯಶಸ್ವಿಯಾಯಿತು. ಬೆಳಗಾವಿ, ಧಾರವಾಡ, ಮಂಡ್ಯ, ಶಿವಮೊಗ್ಗ, ಮೈಸೂರು ಹಾಗೂ ಇನ್ನೂ ಅನೇಕ ಜಿಲ್ಲೆಗಳಲ್ಲಿ ಇವರ ಕರೆ ನೀಡಿದ ಸಭೆಗಳಲ್ಲಿ ಸಾವಿರಾರು ಜನ ಪಾಲ್ಗೊಳ್ಳುತ್ತಿದ್ದುದು ಈ ಹೋರಾಟಗಾರರ ಬದ್ಧತೆ ಮತ್ತು ಅವರ ಮೇಲೆ ಜನರಿಗಿದ್ದ ನಂಬಿಕೆಯನ್ನು ಸಾರಿ ಹೇಳುತ್ತಿದ್ದವು.

1983ರಲ್ಲಿ ಇವರ ಹೋರಾಟದ ಫಲ ಜನತಾ ಪಕ್ಷಕ್ಕೆ ಲಭಿಸಿತು. ಆದರೆ ಆ ಚುನಾವಣೆಯಲ್ಲಿ 40 ಕ್ಷೇತ್ರಗಳಲ್ಲಿ ರೈತ ಸಂಘದ ಅಭ್ಯರ್ಥಿಗಳು ಕೇವಲ ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. 1989ರಲ್ಲಿ ಧಾರವಾಡ ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದ್ದು ಬಾಬಾಗೌಡರ ವರ್ಚಸ್ಸಿಗೆ ಸಾಕ್ಷಿ. 

ನನ್ನ ಭಾಷಣದ ಹಿಂದಿನ ಶಕ್ತಿ ‘ಪ್ರೊಫೆಸರ್‌’ ಎಂದು ಎಷ್ಟೋ ಬಾರಿ ಬಾಬಾಗೌಡ ಪಾಟೀಲ ಅವರೇ ಹೇಳುತ್ತಿದ್ದರು. ಪ್ರೊ. ನಂಜುಂಡಸ್ವಾಮಿ ಅವರು ಇಂಥ ಮಹಾನ್ ಹೋರಾಟಗಾರರನ್ನು ಹುಟ್ಟುಹಾಕಿದ್ದರು. ಆದರೆ ಈ ಜೋಡಿಯನ್ನು ಬೇರ್ಪಡಿಸಿ, ರೈತರ ಹೋರಾಟವನ್ನು ಅಂತ್ಯಗೊಳಿಸಲು ಹೊರಗಿನಿಂದ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದ್ದವು. ಕೆಲವು ಸಂದರ್ಭಗಳೂ ಅದಕ್ಕೆ ಪೂರಕ ವಾತಾವರಣ ಸೃಷ್ಟಿಸಿತ್ತು.

ಬಾಬಾಗೌಡರು ಮತ್ತು ಪ್ರೊಫೆಸರ್ ನಡುವಿನ ಭಿನ್ನಾಭಿಪ್ರಾಯ ಹಂತಹಂತವಾಗಿ ಹೆಚ್ಚುತ್ತಲೇ ಹೋಯಿತು. ಇದರ ಲಾಭವನ್ನು ಪಡೆದ ಬಿಜೆಪಿ, ಅವರಿಗೆ ಕೇಂದ್ರ ಮಂತ್ರಿ ಸ್ಥಾನದ ಆಮಿಷ ಒಡ್ಡಿತು. ಜತೆಗೆ ರೈತ ಸಂಘದ ಇತರ ನಾಯಕರನ್ನು ಸೆಳೆಯುವಲ್ಲೂ ಅದು ಸಫಲವಾಯಿತು.

ಬಿಜೆಪಿ ಸೇರುವ ಹಿಂದಿನ ದಿನ ಬಾಬಾಗೌಡ ಪಾಟೀಲರನ್ನು ಸಂಪರ್ಕಿಸಲು ಪ್ರೊಫೆಸರ್ ಬಹಳ ಪ್ರಯತ್ನಪಟ್ಟರೂ ಅದು ಸಾಧ್ಯವಾಗಲಿಲ್ಲ. ನಂತರ ಅವರು ರೈತಸಂಘಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದರು. ಆ ಸಂರ್ಭದಲ್ಲಿ ಚಳವಳಿಯ ಕ್ಷಮೆ ಕೋರಿ ಬನ್ನಿ ಎಂಬ ಪ್ರೊಫೆಸರ್ ಷರತ್ತು, ಅವರಿಗೆ ಹಿಡಿಸದೆ ಹೊರಗೇ ಉಳಿದರು.

ರಾಜ್ಯದಲ್ಲಿ ಬಿಜೆಪಿ ಖಾತೆ ತೆರೆಯಲು ಬಾಬಾಗೌಡ ಪಾಟೀಲರು ಮತ್ತು ಅಧಿಕಾರ ಪಡೆಯಲು ಎಸ್.ಬಂಗಾರಪ್ಪ ಅವರು ಕಾರಣರಾದರು. ಅಟಲ್‌ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅವರು ಜಾರಿಗೆ ತಂದ ‘ಗ್ರಾಮ್ ಸಡಕ್ ಯೋಜನೆ’ ದೂರದರ್ಶಿತ್ವ ಹೊಂದಿದ್ದ ಯೋಜನೆಯಾಗಿತ್ತು. ಕೃಷಿ ಬೆಲೆ ಕುರಿತಂತೆ ಅವರು ಸಿದ್ಧಪಡಿಸಿದ್ದ ವರದಿ ಕೊನೆಗೂ ಅಂಗೀಕಾರವಾಗಲೇ ಇಲ್ಲ. ಆದರೆ ಇಂಥ ಹೋರಾಟಗಾರರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ರಾಜ್ಯ ಬಿಜೆಪಿಯೂ ಆಸಕ್ತಿ ತೋರಲಿಲ್ಲ.

ಜೆಡಿಎಸ್‌, ಕಾಂಗ್ರೆಸ್‌, ನಂತರ ಸಮಾಜವಾದಿ ಪಕ್ಷದಲ್ಲೂ ಅವರಿಗೆ ಸರಿಯಾಗಲಿಲ್ಲ. ಬಾಬಾಗೌಡರ ದೃಷ್ಟಿಕೋನಕ್ಕೂ ಪಕ್ಷಗಳ ಸಿದ್ಧಾಂತಗಳಿಗೂ ಹೊಂದಾಣಿಕೆಯಾಗದೆ ಪಕ್ಷಗಳನ್ನು ಬದಲಿಸಿದರು. ಹೀಗಾಗಿ ‘ಪಕ್ಷಾಂತರಿ’ ಎಂಬ ಹಣೆಪಟ್ಟಿಯನ್ನೂ ಅವರು ಹೊತ್ತುಕೊಳ್ಳಬೇಕಾಯಿತು. 2013ರಲ್ಲಿ ಅಖಂಡ ರೈತ ಸಂಘಟನೆ ಸ್ಥಾಪನೆಗೆ ಧುಮುಕುವ ಮೂಲಕ ಮತ್ತೆ ರೈತ ಚಳವಳಿ ಕಟ್ಟಲು ಸಂಕಲ್ಪ ಮಾಡಿದರು ಬಾಬಾಗೌಡ ಪಾಟೀಲರು. 

ಕಾಲಚಕ್ರ ಉರುಳಿ ಮತ್ತೆ ಮೊದಲಿನ ಸ್ಥಾನಕ್ಕೇ ಬಂದು ನಿಲ್ಲುವ ಕಾಲಘಟ್ಟದಲ್ಲಿ ಅವರು ಇಲ್ಲವಾಗಿರುವುದು ಇಡೀ ರೈತ ಕುಲದ ದೌರ್ಭಾಗ್ಯ. ಆದರೆ ಬಾಬಾಗೌಡ ಪಾಟೀಲ ಎಂಬ ಅಪ್ರತಿಮ ಹೋರಾಟಗಾರ ಇದ್ದರು ಎಂಬುದು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಬೇಕಾದ್ದು ಬಹಳ ಮುಖ್ಯ.

ನಿರೂಪಣೆ: ಇ.ಎಸ್. ಸುಧೀಂದ್ರ ಪ್ರಸಾದ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು